ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ಣಗೊಳ್ಳದ ಮಣ್ಣು ಸ್ಥಳಾಂತರ ಕಾರ್ಯ

ಸಬ್‌ ಏರ್‌ ಸೌಲಭ್ಯ: ಬಿಬಿಎಂಪಿ ಪರವಾನಗಿ ಪಡೆಯದ ಕಾರಣಕ್ಕಾಗಿ ಕಾಮಗಾರಿ ಸ್ಥಗಿತ
Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಮೈದಾನದಲ್ಲಿ ಸಬ್‌ ಏರ್‌ ಸೌಲಭ್ಯ ಅಳವಡಿಸಲು ನಡೆಯುತ್ತಿರುವ ಕಾಮಗಾರಿಗೆ ವಿಘ್ನ ಎದುರಾಗಿದೆ. ಮಣ್ಣು ಸಾಗಿಸಲು ಬಿಬಿಎಂಪಿಯ ಪರವಾನಗಿ ಪಡೆಯದ ಕಾರಣಕ್ಕಾಗಿ ಎರಡು ದಿನಗಳಿಂದ ಕಾರ್ಯ ಸ್ಥಗಿತಗೊಂಡಿದೆ.

ಅದಲ್ಲದೇ ನಗರದಲ್ಲಿ ಪದೇ ಪದೇ ಮಳೆ ಬೀಳುತ್ತಿರುವುದರಿಂದ ಮೈದಾನ ದಿಂದ ಮಣ್ಣು ಹೊರಹಾಕಲು ಅಡ್ಡಿಯಾಗುತ್ತಿದೆ. ಮೈದಾನ ಅಗೆದಿರುವುದರಿಂದ ಅಂದಾಜು 3000ರಿಂದ 3500 ಘನ ಮೀಟರ್ಸ್‌ ಮಣ್ಣು ಸಂಗ್ರಹವಾಗಿದೆ.

ಈಗಾಗಲೇ ಇದರಲ್ಲಿ ಶೇ 75ರಷ್ಟು ಮಣ್ಣನ್ನು ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದ ಬಳಿ ಸಾಗಿಸಲಾಗಿದೆ. ಮಳೆ ನಿಂತರೆ ಮೂರ್ನಾಲ್ಕು ದಿನಗಳಲ್ಲಿ ಮಣ್ಣು ಹೊರಹಾಕುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕೆಎಸ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಯೋಜನೆಯ ಪ್ರಕಾರ ಇದೇ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯಬೇಕಿದೆ. ಆದರೆ ಮಳೆ ಅಡ್ಡಿಪಡಿಸಿರುವ ಕಾರಣ ಹಗಲಿರುಳು ಕೆಲಸ ಮಾಡಿಸಲು ಕೆಎಸ್‌ಸಿಎ ಮುಂದಾಗಿದೆ.

‘ಮೈದಾನದಿಂದ ಮಣ್ಣನ್ನು ಹೊರಸಾಗಿಸಲು ಅನುಮತಿ ಪಡೆಯಬೇಕು ಎಂದು ಬಿಬಿಎಂಪಿ ಹೇಳಿದೆ. ಆದ್ದರಿಂದ ಎರಡು ದಿನಗಳಿಂದ ಕೆಲಸ ನಿಂತಿದೆ. ಜೊತೆಗೆ ಮಳೆಯಿಂದಲೂ ಕಾಮಗಾರಿ ನಿಧಾನವಾಗುತ್ತಿದೆ. ಧರ್ಮಶಾಲಾದಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಜೇಶ್‌ ಪಟೇಲ್‌ ಅವರು ಹೋಗಿದ್ದರಿಂದ ಅನುಮತಿ ಪಡೆಯಲು ಸಾಧ್ಯವಾಗಿಲ್ಲ.

ಮಳೆ ಬಿಡುವು ನೀಡಿದರೆ ಮೂರ್ನಾಲ್ಕು ದಿನಗಳಲ್ಲಿ ಮಣ್ಣು ಹೊರಹಾಕುವ ಕೆಲಸ ಪೂರ್ಣಗೊಳ್ಳಲಿದೆ’ ಎಂದು ಕೆಎಸ್‌ಸಿಎ ಪಿಚ್‌ ಕ್ಯೂರೇಟರ್‌ ಶ್ರೀರಾಮ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. ಸಬ್‌ ಏರ್‌ ಸೌಲಭ್ಯ ಅಳವಡಿಕೆಗಾಗಿ ಮೈದಾನದಲ್ಲಿ ಒಂದೂವರೆ ಅಡಿ ಭೂಮಿಯನ್ನು ಅಗೆಯಲಾಗಿದೆ. ಬೌಂಡರಿ ಲೈನ್‌ ಸುತ್ತಲೂ ಮಳೆ ನೀರು ನಿಂತಿರುವುದು ಕಾಮಗಾರಿಗೆ ತೊಡಕಾಗುತ್ತಿದೆ.

‘ಮೈದಾನದಲ್ಲಿ ನೀರು ನಿಂತಿರುವ ಕಾರಣ ಮಣ್ಣು ಸಾಗಿಸಲು ಇರುವ ಟಿಪ್ಪರ್‌ಗಳು ಒಳಗೆ ಬರುವುದೇ ಕಷ್ಟವಾಗಿದೆ. ಮಣ್ಣು ಹೊರಹಾಕುವ ಕಾರ್ಯ ಪೂರ್ಣಗೊಂಡ ಮೂರ್ನಾಲ್ಕು ದಿನಗಳಲ್ಲಿಯೇ ಕೊಳವೆ ಅಳವಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ’ ಎಂದು ಕಾಮಗಾರಿ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿರುವ ಶ್ರೀರಾಮ್‌ ಹೇಳಿದ್ದಾರೆ.

ಹುಬ್ಬಳ್ಳಿ, ಮೈಸೂರಿನಲ್ಲಿ ಹೆಚ್ಚು ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಈ ಬಾರಿಯ ರಣಜಿ ಪಂದ್ಯಗಳು ಇಲ್ಲಿನ ಮೈದಾನದಲ್ಲಿ ನಡೆಯುವ ಸಾಧ್ಯತೆ ಕಡಿಮೆ. ಆದ್ದರಿಂದ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಹೆಚ್ಚು ಪಂದ್ಯಗಳು ಆಯೋಜನೆಯಾಗುವ ಸಾಧ್ಯತೆಯಿದೆ.

‘ರಾಜಧಾನಿಯಿಂದ ಹೊರಗಡೆ ರಣಜಿ ಪಂದ್ಯಗಳನ್ನು ಆಯೋಜಿಸಿದರೆ ಹೆಚ್ಚು ಜನ ನೋಡಲು ಬರುತ್ತಾರೆ. ಈ ಬಾರಿಯ ರಣಜಿ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಬೇಕೆಂದು ಬಿಸಿಸಿಐ ಹೇಳಿರುವ ಕಾರಣ ಯಾವ ಪಂದ್ಯಕ್ಕೆ ಆತಿಥ್ಯ ವಹಿಸಲು ಅವಕಾಶ ಸಿಗುತ್ತದೆ ಎಂಬುದು ಗೊತ್ತಾಗಿಲ್ಲ. ಜೊತೆಗೆ ಅಂತರರಾಷ್ಟ್ರೀಯ ಪಂದ್ಯಕ್ಕೆ ಚಿನ್ನಸ್ವಾಮಿ ಅಂಗಳವನ್ನು ಸಜ್ಜು ಮಾಡಬೇಕಿದೆ. ಇದಕ್ಕಾಗಿ ವೇಗವಾಗಿ ಕೆಲಸವೂ ನಡೆಯುತ್ತಿದೆ’ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ರಣಜಿ ಟೂರ್ನಿಯ ಮೊದಲಿನ ನಿಯಮದ ಪ್ರಕಾರ ತವರಿನ ತಂಡ ನಾಲ್ಕು ಪಂದ್ಯಗಳನ್ನು ಹೊರಗಡೆ ಆಡಬೇಕಿತ್ತು. ಉಳಿದ ಪಂದ್ಯಗಳು ತವರಿನಲ್ಲಿಯೇ ಆಯೋಜನೆಯಾಗುತ್ತಿದ್ದವು. ಈಗ ಬಿಸಿಸಿಐ ರಣಜಿಗೆ ತಟಸ್ಥ ಸ್ಥಳ ನಿಗದಿ ಮಾಡಲು ನಿರ್ಧರಿಸಿದೆ. ಈ ಕುರಿತು ಮಂಡಳಿ ಕಾರ್ಯಕಾರಿ ಸಮಿತಿ ಶುಕ್ರವಾರ ನಿರ್ಧಾರ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT