ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ ಮಾತ್ರವೇ ಏಕೆ ಖನಿಜ ಕಣಜ?

ವಿಜ್ಞಾನ ವಿಶೇಷ
Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇಡೀ ವಿಶ್ವದಲ್ಲಿ ನಮ್ಮ ಪೃಥ್ವಿಯ ವೈಶಿಷ್ಟ್ಯಗಳು ಹಲವಾರು–ಹೌದಲ್ಲ? ಅದೇ ಪಟ್ಟಿಯಲ್ಲಿರುವ ಅತ್ಯದ್ಭುತವಾದ ಆದರೆ ಅಜ್ಞಾತವಾದ ವೈಶಿಷ್ಟ್ಯ ಇಲ್ಲಿನ ಖನಿಜ ವೈವಿಧ್ಯ ಮತ್ತು ಸಮೃದ್ಧಿ.

ವಾಸ್ತವ ಏನೆಂದರೆ ಈವರೆಗೆ ತಿಳಿದಿರುವಂತೆ ವಿಶ್ವದಲ್ಲಿ ಬೇರೆಲ್ಲೂ, ಬೇರೆ ಯಾವ ಕಾಯದಲ್ಲೂ ಧರೆಯಲ್ಲಿರುವಷ್ಟು ಖನಿಜ ವಿಧಗಳು ಇಲ್ಲ. ಉದಾಹರಣೆಗೆ ವಿಶ್ವದಲ್ಲಿನ ಆಕಾಶ ಪ್ರದೇಶದಲ್ಲೂ, ಗ್ಯಾಲಕ್ಸಿಗಳಲ್ಲಿ ನಕ್ಷತ್ರಗಳ ನಡುವಣ ಖಾಲಿ ಪ್ರದೇಶಗಳಲ್ಲೂ ಹರಡಿರುವ ಮೂಲ ದ್ರವ್ಯದಲ್ಲೂ (ಚಿತ್ರ 1,2) ಸೂಕ್ಷ್ಮ ಕಣಗಳ ರೂಪದಲ್ಲಿ ಹರಡಿರುವ ಖನಿಜಗಳ ಸಂಖ್ಯೆ ಹತ್ತರಿಂದ ಹದಿನೈದು. ನಮ್ಮ ಸೌರವ್ಯೂಹದಲ್ಲಿನವೇ ಗಟ್ಟಿ ಗ್ರಹಗಳಾದ ಬುಧನಲ್ಲಿ 250, ಶುಕ್ರನಲ್ಲಿ 350, ಮಂಗಳನಲ್ಲಿ 500 ವಿಧ ಖನಿಜಗಳಿವೆ. ಆದರೆ ಭೂಮಿಯಲ್ಲಿ ಈವರೆಗೆ ಪತ್ತೆಯಾಗಿರುವ ಖನಿಜ ವಿಧಗಳು ಸುಮಾರು ನಾಲ್ಕು ಸಾವಿರದ ಐದು ನೂರು! (ಕೆಲ ಭೂ ಖನಿಜಗಳನ್ನು ಚಿತ್ರ 9ರಿಂದ 13ರಲ್ಲಿ ಗಮನಿಸಿ).

ಧರೆಯೊಂದರಲ್ಲಿ ಮಾತ್ರ ಇಷ್ಟೊಂದು ವಿಧ ಖನಿಜಗಳು ಹೇಗೆ?
ಅದು ಪರಮ ವಿಸ್ಮಯದ ಒಂದು ಯೋಗಾಯೋಗ; ಭೂ ಇತಿಹಾಸದಲ್ಲಿ ಸಂಭವಿಸಿದ ಹಲವು ವಿಶಿಷ್ಟ ಅನನ್ಯ ವಿದ್ಯಮಾನಗಳ ಸಂಯೋಗ. ಆ ವಿಸ್ಮಯದ ಕಥಾನಕದ ಸಂಕ್ಷಿಪ್ತ ವಿವರವನ್ನು ನೀವೇ ಇಲ್ಲಿ ಗಮನಿಸಿ:

ವಿಶ್ವದಲ್ಲಿನ ಮೂಲದ್ರವ್ಯದಿಂದ ಈಗ್ಗೆ ಸಮೀಪ ಐನೂರು ಕೋಟಿ ವರ್ಷಗಳ ಹಿಂದೆ ನಮ್ಮ ಸೌರವ್ಯೂಹ ಮೈದಳೆಯಲಾರಂಭಿಸಿತು (ಚಿತ್ರ–3). ಆಗ ಮೊದಲು ಅಸಂಖ್ಯ ಕಣಗ್ರಹಗಳು ರೂಪುಗೊಂಡುವು. ತೀವ್ರ ವೇಗದೊಡನೆ ಚಲನಶೀಲವಾಗಿದ್ದ ಆ ಕಣಗಳು ಒಂದಕ್ಕೊಂದು ಬಡಿದು, ಕರಗಿ, ಬೆಸೆಗೊಂಡು, ಮರುಘನೀಕರಿಸಿ... ಹೀಗೆಲ್ಲ ಮತ್ತೆ ಮತ್ತೆ ಇದೇ ಕ್ರಿಯಾಸರಣಿ ಅಸಂಖ್ಯ ಬಾರಿ ಪುನರಾವರ್ತನೆಗೊಂಡು ಹಲವು ಹತ್ತು–ಕೋಟಿ ವರ್ಷಗಳಲ್ಲಿ ಬುಧ (ಚಿತ್ರ–5), ಶುಕ್ರ, ಭೂಮಿ (ಚಿತ್ರ–4) ಮತ್ತು ಮಂಗಳ (ಚಿತ್ರ–6) ಈ ಗಟ್ಟಿಗ್ರಹಗಳೂ ಕ್ಷುದ್ರಗ್ರಹಗಳೂ ರೂಪುಗೊಂಡುವು. ಮೂಲ ದ್ರವ್ಯದಲ್ಲಿನ 10–15 ವಿಧಗಳ ಖನಿಜಗಳನ್ನು ಧರಿಸಿದ್ದ ಕಣಗ್ರಹಗಳು ಬಡಿದು ಬಡಿದು ಬೆಸೆಗೊಂಡಾಗಲೆಲ್ಲ ಮರು ಸಂಯೋಜನೆಗೊಳ್ಳುತ್ತಿದ್ದ ದ್ರವ್ಯದಿಂದ ಗಟ್ಟಿ ಗ್ರಹಗಳು ಜನ್ಮತಳೆದಾಗ ಅವುಗಳೊಂದೊಂದರಲ್ಲೂ ಸಮೀಪ ಇನ್ನೂರೈವತ್ತು ವಿಧ ಖನಿಜಗಳು ಅಸ್ತಿತ್ವ ಪಡೆದಿದ್ದವು. ಅಲ್ಲಿಂದ ಮುಂದೆ ಧರೆಯ ಬದುಕಿನ ಹಾದಿಯೇ ಬದಲಾಯಿತು. ಅದಕ್ಕೆ ಕಾರಣವಾದ ಘಟನೆಗಳು ಒಂದೊಂದೂ ಪೃಥ್ವಿಯ ಖನಿಜ ವೈವಿಧ್ಯವನ್ನು ವರ್ಧಿಸಿದುವು.

ಅಂಥ ಪ್ರಮುಖ ಪ್ರಥಮ ಘಟನೆ ಈಗ್ಗೆ 450 ಕೋಟಿ ವರ್ಷ ಹಿಂದೆ ಸಂಭವಿಸಿತು. ಆ ಸುಮಾರಿಗೆ ಈಗಿನ ಮಂಗಳ ಗ್ರಹ ಗಾತ್ರದ ಆಗಂತುಕ ಕಾಯವೊಂದು ಮಿಂಚಿನ ವೇಗದಲ್ಲಿ ಬಂದು ಕಲ್ಪನಾತೀತ ಶಕ್ತಿಯೊಡನೆ ಧರೆಗೆ ಅಪ್ಪಳಿಸಿತು (ಚಿತ್ರ–7). ಆ ಹೊಡೆತದ ಪರಿಣಾಮದಿಂದ ಹೊರಚಿಮ್ಮಿದ ದ್ರವ್ಯ ಭೂ ಚಂದ್ರನನ್ನು ರೂಪಿಸಿದ್ದಲ್ಲದೆ ಅದೇ ಘರ್ಷಣೆಯಿಂದಲೇ ಆಗಿನ ಭೂ ನೆಲದ ದ್ರವ್ಯವೆಲ್ಲ ಕರಗಿ, ವಿಭಿನ್ನ ನೂತನ ಸಂಯೋಜನೆಗಳನ್ನು ಗಳಿಸಿ, ತಣಿದು, ಘನರೂಪ ತಳೆದಾಗ ಮತ್ತೆ ಹಲವು ಹತ್ತು ವಿಧಗಳ ಖನಿಜಗಳು ಮೈದಳೆದುವು.

ಪೃಥ್ವಿ ರೂಪಗೊಂಡಾಗ ಅದರ ಆಂತರ್ಯದಲ್ಲಿ ಸಂಗ್ರಹಗೊಂಡ ಅತೀವ ಶಾಖದಿಂದಾಗಿ ಆದಿಭೂಮಿಯಲ್ಲಿ ಜ್ವಾಲಾಮುಖಿ ಚಟುವಟಿಕೆ ವಿಪರೀತ ನಡೆದಿತ್ತು. ಜ್ವಾಲಾಮುಖಿಗಳ ಮೂಲಕ ಭೂ ಅಂತರಾಳದಿಂದ ಹೊರಕ್ಕೆ ಉಕ್ಕಿ ಹರಿದು ಕ್ರಮೇಣ ತಣ್ಣಗಾಗಿ ಘನರೂಪ ತಳೆಯುತ್ತಿದ್ದ ‘ಬಸಾಲ್ಟ್‌’ ಆಗ್ನಿ ಶಿಲಾ ದ್ರವ್ಯ ಭೂ ಆಂತರ್ಯದ ಶಾಖದಿಂದಲೇ ಪುನಃ ಪುನಃ ಕರಗಿ ಕರಗಿ ಮತ್ತೆ ಮತ್ತೆ ಶಿಲಾರೂಪ ತಾಳುತ್ತಿದ್ದ ಕ್ರಿಯೆಯಿಂದಲೂ ಕೋಟ್ಯಂತರ ವರ್ಷಗಳ ಅವಧಿಯಲ್ಲಿ ಹಲವಾರು ನೂರು ಹೊಸ ಬಗೆಗಳ ಖನಿಜಗಳು ರೂಪುಗೊಂಡುವು. ಹಾಗೆಲ್ಲ ಆಗಿ ಈಗ್ಗೆ ಮುನ್ನೂರೈವತ್ತು ಕೋಟಿ ವರ್ಷ ಹಿಂದಿನ ಸುಮಾರಿಗೆ ಭೂಮಿಯಲ್ಲಿ ಒಟ್ಟು ಸುಮಾರು ಒಂದು ಸಾವಿರದ ಐನೂರು ಬಗೆಗಳ ಖನಿಜಗಳು ಶೇಖರಗೊಂಡಿದ್ದುವು.

ಆಶ್ಚರ್ಯ ಏನೆಂದರೆ ಆ ವೇಳೆಗೆ ಭೂಮಿ ಜೀವಿ ವಿಹಿತ ಪರಿಸರವನ್ನು ಪಡೆಯತೊಡಗಿತ್ತು. ಕಡಲುಗಳು ಮೈದಳೆದು ದಟ್ಟ ವಾಯುಮಂಡಲವೂ ಆವರಿಸಲಾರಂಭಿಸಿತು. 350 ಕೋಟಿ ವರ್ಷಗಳ ಹಿಂದಿನ ಆ ಕಾಲದಲ್ಲಿ ದ್ಯುತಿ ಸಂಶ್ಲೇಷಣಾ ಸಾಮರ್ಥ್ಯವನ್ನು ಹೊಂದಿದ್ದ ಪಾಚಿ ಸಸ್ಯಗಳು ಕಡಲಿನಾವಾರದಲ್ಲಿ ದಟ್ಟೈಸಿದುವು. ಅವುಗಳಿಂದಾಗಿ ಭೂ ವಾಯುಮಂಡಲಕ್ಕೆ ಆಮ್ಲಜನಕ ಸೇರ್ಪಡೆಗೊಳ್ಳುತ್ತ ಹೋಗಿ ಈಗ್ಗೆ ಇನ್ನೂರ ಇಪ್ಪತ್ತು ಕೋಟಿ ವರ್ಷ ಹಿಂದಿನ ವೇಳೆಗೆ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಈಗ ಇರುವುದಕ್ಕಿಂತ ಶೇಕಡ ಒಂದಂಶ ಅಧಿಕವಾಗಿ ಎಂದರೆ ಶೇಕಡ ಇಪ್ಪತ್ತೆರಡರಷ್ಟಿತ್ತು. ಈ ಮಟ್ಟದ ಆಮ್ಲಜನಕದಿಂದಾಗಿ ಗಾಳಿಯ ಸಂಪರ್ಕಕ್ಕೆ ಬಂದ ಆಗಿನ ಭೂನೆಲದ ಬಹುಪಾಲು ಎಲ್ಲ ಖನಿಜಗಳು ‘ಆಕ್ಸಿಡೀಕರಣ’ದ ರಾಸಾಯನಿಕ ಕ್ರಿಯೆಗೊಳಗಾದುವು. ತತ್ಪರಿಣಾಮವಾಗಿ ಭೂ ನೆಲದಲ್ಲಿ ಹೊಸ ಬಗೆಗಳ ಸುಮಾರು ಎರಡೂವರೆ ಸಾವಿರ ಖನಿಜಗಳು ಅವತರಿಸಿದುವು. ಧರೆಯಲ್ಲಿನ ಖನಿಜ ವಿಧಗಳ ಸಂಖ್ಯೆ ನಾಲ್ಕು ಸಾವಿರಕ್ಕೇರಿತು. ಭೂ ಇತಿಹಾಸದಲ್ಲಿ ‘ದಿ ಗ್ರೇಟ್‌ ಆಕ್ಸಿಡೇಶನ್‌ ಈವೆಂಟ್‌’ ಎಂದೇ ವಿಖ್ಯಾತವಾಗಿರುವ ಈ ವಿದ್ಯಮಾನ ಧರೆಯೊಂದರಲ್ಲಲ್ಲದೆ ವಿಶ್ವದ ಇನ್ನೆಲ್ಲೂ ನಡೆದಿಲ್ಲ. ಮೂಲತಃ ಜೀವಿಗಳಿಂದ ಸಂಭವಿಸಿದ ಈ ವಿದ್ಯಮಾನ ಸ್ಪಷ್ಟವಾಗಿಯೇ ಭೂ ನೆಲದ ಖನಿಜಗಳ ವೈವಿಧ್ಯ ಮತ್ತು ಪ್ರಮಾಣ ಎರಡನ್ನೂ ಗರಿಷ್ಠ ಸಮೃದ್ಧಗೊಳಿಸಿತು.

ಇದಾದ ಸುಮಾರು ಒಂದು ನೂರು ಕೋಟಿ ವರ್ಷಗಳು ಕಳೆವ ವೇಳೆಗೆ ಆಗಿನ ಭೂ ಪರಿಸರದಲ್ಲಿ ತಲೆದೋರಿದ ತಳಮಳಗಳಿಂದಾಗಿ ಭೂಮಿ ಅತ್ಯಂತ ದೀರ್ಘ ಅವಧಿಯ ‘ಹಿಮಯುಗ’ಕ್ಕೆ ಕಾಲಿಟ್ಟಿತು. ಇಡೀ ಧರೆ ಹಿಮದ ಮುಸುಕು ಧರಿಸಿತ್ತು (ಚಿತ್ರ–8). ಒಂದು ಕೋಟಿ ವರ್ಷ ಉಳಿದಿದ್ದ ಆ ಪರಿಸ್ಥಿತಿಯ ನಂತರ ಬೆಚ್ಚನೆಯ ಯುಗ ಮರಳಿ ಮತ್ತೆ ಹಿಮಯುಗ ಬಂದು... ಹೀಗೆ ಬಿಸಿಯುಗ–ಹಿಮಯುಗಗಳು ಪರ್ಯಾಯವಾಗಿ ಮರುಕಳಿಸಿದ ಪರಿಣಾಮವಾಗಿ ನುಣ್ಣನೆಯ ಕಣಗಳ ‘ಜೇಡಿ ಖನಿಜಗಳು’ ಮೈದಳೆದುವು.

ಜೊತೆಗೇ ಅದೇ ವೇಳೆಗೆ ಸರ್ವವಿಧ ಶಿಥಿಲಕಾರಕಗಳೂ– ಎಂದರೆ ಬೀಸುವ ಗಾಳಿ, ಹರಿವ ನೀರು, ಬಿಸಿಲು–ಚಳಿ–ಹಿಮಪಾತ ಇತ್ಯಾದಿ ಛಿದ್ರಕಾರೀ ಶಕ್ತಿಗಳು– ಕ್ರಿಯಾಶೀಲವಾಗಿದ್ದು ಅವುಗಳಿಂದಲೂ ಖನಿಜಗಳ ಮರು ಸಂಯೋಜನೆಗಳು ನಡೆದು ಒಟ್ಟಾರೆ ಈಗಿರುವ ಸರ್ವವಿಧ ಖನಿಜಗಳೂ ರೂಪುಗೊಂಡು ನಮ್ಮ ಭೂಮಿ ‘ಖನಿಜಗಳ ಭಂಡಾರ’ವಾಯಿತು.
ಪೃಥ್ವಿ ಈ ವಿಶಿಷ್ಟ ಗುಣ ಗಳಿಸಿ ಈವರೆಗೆ ನಾಲ್ಕು ಕೋಟಿ ವರ್ಷಗಳು ಕಳೆದಿವೆ. ಈವರೆಗೆ ವಿವರಿಸಿದ ವಿಶೇಷ ಘಟನಾವಳಿಗಳಿಂದಾಗಿ ಭೂಮಿಯಲ್ಲಿ ಮಾತ್ರ ಇಷ್ಟೆಲ್ಲ ಸಂಖ್ಯೆಯ, ಸಮೃದ್ಧಿಯ ಖನಿಜಗಳು ಸಂಗ್ರಹಗೊಂಡಿವೆ. ಇಂತಹ ಯೋಗಾಯೋಗಗಳು ಮೇಳವಿಸಿಲ್ಲದ ಬೇರಾವ ಗ್ರಹಗಳಲ್ಲೂ ಖನಿಜ ವೈವಿಧ್ಯ ಇಷ್ಟೆಲ್ಲ ಇಲ್ಲ; ಅದೆಲ್ಲ ಸಾಧ್ಯವೂ ಇಲ್ಲ.
ಪೃಥ್ವಿಯ ಈ ವೈಶಿಷ್ಟ್ಯ ಎಂಥ ಅದ್ಭುತ, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT