ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್ಸಿಲ್‌ ಕತೆ

ಅರಿವು ಹರಿವು
Last Updated 17 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪೆನ್ಸಿಲ್‌ ಆವಿಷ್ಕಾರ ಆಗಿದ್ದು ತೀರಾ ಇತ್ತೀಚೆಗೆ. ಅಂದರೆ 16ನೇ ಶತಮಾನದಲ್ಲಿ. ಅದಕ್ಕಿಂತಲೂ ಮೊದಲು ನಮ್ಮ ಜಗತ್ತಿನಲ್ಲಿ ‘ಬರವಣಿಗೆ’ ಇತ್ತು. ‘ಬರವಣಿಗೆ’ಗೆ ಹಲವು ಸಹಸ್ರಮಾನಗಳಷ್ಟು ಐತಿಹ್ಯ ಇದೆ. 25–30 ಸಾವಿರ ವರ್ಷಗಳ ಹಿಂದೆಯೇ ಮಾನವ ತಾನು ವಾಸಿಸುತ್ತಿದ್ದ ಗುಹೆಗಳ ಗೋಡೆಗಳಲ್ಲಿ ತನ್ನ ಕಲ್ಪನೆಗಳನ್ನು ಚಿತ್ರ ಬಿಡಿಸುವುದರ ಮೂಲಕ ಜಗತ್ತಿಗೆ ತಿಳಿ ಹೇಳಲು ಆರಂಭಿಸಿದ್ದ. ಆದರೆ, ‘ಬರವಣಿಗೆ’ಯ ಸುಧಾರಿತ ರೂಪ ಅಭಿವೃದ್ಧಿಯಾಗಲು ಸಾವಿರಾರು ವರ್ಷಗಳು ಹಿಡಿದವು.

ದಾಖಲಾತಿಯ (ಪ್ರಾಣಿಗಳ ಸಂಖ್ಯೆ, ಆಹಾರ ಧಾನ್ಯಗಳ ಅಳತೆ, ಭೂಮಿಯ ಮಾಲೀಕತ್ವ) ಉದ್ದೇಶಕ್ಕಾಗಿ ಕ್ರಿ.ಪೂ 4 ಸಾವಿರ ವರ್ಷಗಳ ಹಿಂದೆ ಸುಧಾರಿತ ಬರವಣಿಗೆಯ ವಿಧಾನ ಚಾಲ್ತಿಗೆ ಬಂತು ಎಂದು ಹೇಳುತ್ತದೆ ಇತಿಹಾಸ. ಆವೆ ಮಣ್ಣಿನಲ್ಲಿ ಚಿಹ್ನೆಗಳನ್ನು ಅಚ್ಚೊತ್ತುವುದರ ಮೂಲಕ ಪುರಾತನ ನಾಗರಿಕತೆಗಳ ಜನರು ಮಾಹಿತಿಗಳನ್ನು ದಾಖಲು ಮಾಡುತ್ತಿದ್ದರು. ಇದಕ್ಕೆ ಪೂರಕವಾದ ಪುರಾವೆಗಳು ಮೆಸಪೊಟೋಮಿ­ಯಾದ ಉರುಕ್‌ನಲ್ಲಿ ನಡೆದ ಉತ್ಖನನ ಸಂದರ್ಭದಲ್ಲಿ ದೊರೆತಿವೆ.

ಇದೇ ಅವಧಿಯಲ್ಲಿ ಈಜಿಪ್ಟ್‌ ಮತ್ತು ದಕ್ಷಿಣ ಸುಡಾನಿನಲ್ಲಿ ಪ್ಯಾಪಿರಸ್‌ ಕಾಗದ (ಪ್ಯಾಪಿರಸ್ ಗಿಡದ ತಿರುಳಿನಿಂದ ಮಾಡಿದ ಕಾಗದ) ತಯಾರಾಯಿತು. ಆಧುನಿಕ ‘ಬರವಣಿಗೆ’ ವಿಧಾನಕ್ಕೆ ಸ್ಪಷ್ಟ ರೂಪ ಸಿಕ್ಕಿದ್ದು ಪ್ಯಾಪಿರಸ್‌ನ ಆವಿಷ್ಕಾರ ದಿಂದ. ಈ ಕಾಗದದಲ್ಲಿ ಬರೆಯಲು ತುದಿ ಚೂಪಾಗಿದ್ದ ಸಾಧನಗಳನ್ನು (ಲೋಹ­ದಿಂದ ಮಾಡಿದ ಸ್ಟೈಲಸ್‌ ಎಂಬ ಸಾಧನ ಅವುಗಳಲ್ಲಿ ಒಂದು) ಅಂದಿನ ಜನ ಬಳಸುತ್ತಿದ್ದರು. ಪಕ್ಷಿಗಳ ಗರಿಗಳನ್ನೂ ಬರ­ವಣಿಗೆಗೆ ಬಳಸಿಕೊಂಡಿದ್ದರು.

ಇರಲಿ. ಪೆನ್ಸಿಲ್‌ ವಿಷಯಕ್ಕೆ ಬರೋಣ. ‘ಪೆನ್ಸಿಲ್‌’ ಎಂಬ ಹೆಸರು ಬಂದಿದ್ದು ಫ್ರೆಂಚ್‌ ಭಾಷೆಯ ‘ಪೆನ್ಸೆಲ್‌’ ಹಾಗೂ ಲ್ಯಾಟಿನ್‌ನ ‘ಪೆನಿಸಲಸ್‌’ ಎಂಬ ಪದಗಳಿಂದ ಎಂದು ಹೇಳುತ್ತಾರೆ ತಜ್ಞರು. ಈ ಎರಡೂ ಪದಗಳ ಅರ್ಥ ಒಂದೇ. ‘ಚಿಕ್ಕ ಬಾಲ’. ಫ್ರಾನ್ಸ್‌ನಲ್ಲಿ ಕಲಾವಿದರು ಚಿತ್ರ ಬಿಡಿಸುವ ಬ್ರಷ್‌ ಅನ್ನು ‘ಪೆನ್ಸೆಲ್‌’ ಎಂದು ಕರೆಯುತ್ತಿದ್ದರು. ಒಂಟೆಯ ಬಾಲದ ರೋಮದಿಂದ ಮಾಡಿದ ಬ್ರಷ್‌ಗೆ ‘ಪೆನಿಸಲಸ್‌’ ಎಂದು ಲ್ಯಾಟಿನ್‌ನಲ್ಲಿ ಹೇಳುತ್ತಿದ್ದರು. ‘ಗ್ರಾಫೈಟ್‌’ ಎಂಬ ಇಂಗಾಲದ ಭಿನ್ನರೂಪವು ಭೂಮಿಯಲ್ಲಿ ಕಂಡು ಬರುವವರೆಗೆ ಪೆನ್ಸಿಲ್‌ನ ಪರಿಚಯ ಜಗತ್ತಿಗೆ ಆಗಿರಲಿಲ್ಲ.

ರಸಾಯನ ವಿಜ್ಞಾನ ಕ್ಷೇತ್ರ ಆಗಷ್ಟೇ ಕಣ್ಣು ಬಿಡುತ್ತಿದ್ದ ಸಮಯ ಅದು. ಕ್ರಿ.ಶ 1565ರಲ್ಲಿ ಇಂಗ್ಲೆಂಡ್‌ನ ಕಂಬ್ರಿಯಾ ಕೌಂಟಿಯ ಸದ್‌ವೈಟ್‌ ಎಂಬ ಹಳ್ಳಿಯಲ್ಲಿ ಗ್ರಾಫೈಟ್‌ನ ಭಾರಿ ನಿಕ್ಷೇಪ ಪತ್ತೆಯಾಗಿತ್ತು. ಈ ಗ್ರಾಫೈಟ್‌ ಪರಿಶುದ್ಧವಾಗಿದ್ದುದು ಮಾತ್ರವಲ್ಲದೆ ಘನ ಸ್ಥಿತಿಯಲ್ಲಿತ್ತು. ಸುಲಭವಾಗಿ ಅದನ್ನು ಕಡ್ಡಿಗಳ ರೂಪದಲ್ಲಿ ಕತ್ತರಿಸಬಹುದಿತ್ತು. ಆದರೆ, ಅಂದಿನ ಜನರು ಇದನ್ನು ಸೀಸದ ಅದಿರು ಎಂದು ತಪ್ಪಾಗಿ ಭಾವಿಸಿದ್ದರು. (ಈಗಲೂ ಪೆನ್ಸಿಲ್‌ ಅನ್ನು ಸೀಸದಿಂದ ಗುರುತಿಸಲಾಗುತ್ತದೆ. ಉದಾಹರಣೆಗೆ ಲೆಡ್‌ ಪೆನ್ಸಿಲ್‌).

ಕ್ರಮೇಣ ಗ್ರಾಫೈಟ್‌ನ ಪ್ರಾಮುಖ್ಯ ಜನರಿಗೆ ಅರಿವಾಗತೊಡಗಿತ್ತು. ಅದರಿಂದ ಏನೇನು ಉಪಯೋಗವಿದೆ ಎಂಬುದು ತಿಳಿದ ತಕ್ಷಣ ಇಂಗ್ಲೆಂಡ್‌ನ ರಾಜಾಡಳಿತ ಗ್ರಾಫೈಟ್‌ನ ಅದಿರನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತು. ಕಳ್ಳತನ ತಡೆಯುವುದಕ್ಕಾಗಿ ಆಡಳಿತವು ನಿಕ್ಷೇಪದ ಸುತ್ತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿತ್ತಂತೆ!

ಮೊದಲ ಬಾರಿಗೆ ಜಗತ್ತಿನಲ್ಲಿ ಪೆನ್ಸಿಲ್‌­ಗಳು ಕಾಣಿಸಿಕೊಂಡಿದ್ದು ಇಲ್ಲಿಯೇ. ಮೂಲತಃ ಮೃದುತ್ವ ಗುಣ ಹೊಂದಿರುವ ಗ್ರಾಫೈಟ್‌, ಸುಲಭವಾಗಿ ತುಂಡಾಗುತ್ತಿದ್ದು­ದರಿಂದ ಅದನ್ನು ಸ್ಥಿರವಾಗಿ ನಿಲ್ಲಿಸುವು­ದಕ್ಕಾಗಿ ಅದರ  ಸುತ್ತ ದಾರವನ್ನು ಇಲ್ಲವೇ ಕುರಿಯ ಚರ್ಮವನ್ನು ಅಲ್ಲಿನ ಜನರು ಸುತ್ತುತ್ತಿ­ದ್ದರು. ಗ್ರಾಫೈಟ್‌ನ ಪ್ರಯೋಜನದ ಬಗ್ಗೆ ತಿಳಿವಳಿಕೆ ಬರುತ್ತಿದ್ದಂತೆ ಜಗತ್ತಿನ ಚಿತ್ರ ಕಲಾವಿದರೆಲ್ಲರೂ ಇದರತ್ತ ಆಕರ್ಷಿತ­ರಾದರು. ನೈಸರ್ಗಿಕವಾಗಿ ಸಿಗುತ್ತಿದ್ದ ಗ್ರಾಫೈಟ್‌ನಿಂದ ಮಾಡಿದ ಚೌಕಾಕಾರದ ಪೆನ್ಸಿಲ್‌ಗಳು ಜನಪ್ರಿಯಗೊಂಡವು.

ಇಟಲಿಯ ದಂಪತಿ ಸಿಮೊನಿವೊ ಮತ್ತು ಲಿಂಡಿಯಾನಾ ಬೆರ್ನಾಕೊಟ್ಟಿ ಅವರು 1560ರಲ್ಲಿ ಮರದ ಪೆನ್ಸಿಲ್‌ ರೂಪಿಸುವ ಪ್ರಯತ್ನವನ್ನು ಮಾಡಿದರು. ಚಪ್ಪಟೆಯಾಗಿದ್ದ, ಅಂಡಾಕಾರದ ಈ ಪೆನ್ಸಿಲ್‌ ಹೆಚ್ಚು ದೃಢವಾಗಿತ್ತು. ಜುನಿಪರ್‌ ಮರದ ಕಡ್ಡಿಗೆ ತೂತು ಕೊರೆದು ನಂತರ ಗ್ರಾಫೈಟ್‌ ಕಡ್ಡಿಯನ್ನು ಅದರಲ್ಲಿ ಅಳವಡಿಸಲಾಗಿತ್ತು.

ನಂತರ, ಮತ್ತೊಂದು ಸುಧಾರಿತ ವಿಧಾನವನ್ನು ಆವಿಷ್ಕರಿಸಲಾಯಿತು. ಎರಡು ಕಡ್ಡಿಯನ್ನು ಅಡ್ಡವಾಗಿ ತುಂಡ ರಿಸಿ, ಅದನ್ನು ಅಳತೆಗೆ ತಕ್ಕಂತೆ ಕೊರೆದು ಅದರಲ್ಲಿ ಗ್ರಾಫೈಟ್‌ ಕಡ್ಡಿ ಅಳವಡಿಸಿದ ಬಳಿಕ ಸೀಳಿದ್ದ ಎರಡು ತುಂಡುಗಳನ್ನು ಗೋಂದಿನ ಮೂಲಕ ಅಂಟಿಸಲಾಗಿತ್ತು. ಈ ವಿಧಾನ ಈಗಲೂ ಬಳಕೆಯಲ್ಲಿದೆ. ಗ್ರಾಫೈಟ್‌ನ ಪುಡಿಯಿಂದಲೂ ಕಡ್ಡಿ ತಯಾರಿಸುವ ವಿಧಾನ ಬೆಳಕಿಗೆ ಬರುವವರೆಗೆ ಪೆನ್ಸಿಲ್‌ ತಯಾರಿಕೆಯಲ್ಲಿ ಇಂಗ್ಲೆಂಡ್‌ ಪಾರಮ್ಯ ಸಾಧಿಸಿತ್ತು. ಗ್ರಾಫೈಟ್‌ ಪುಡಿಯಿಂದ ಪೆನ್ಸಿಲ್‌ ತಯಾರಿಸುವ ಪ್ರಥಮ ಪ್ರಯತ್ನ 1662ರಲ್ಲಿ ಜರ್ಮನಿಯ ನುರೆಂಬರ್ಗ್‌­ನಲ್ಲಿ ನಡೆಯಿತು. ಗ್ರಾಫೈಟ್‌ ಪುಡಿ­ಯೊಂದಿಗೆ ಗಂಧಕ ಮತ್ತು ಆಂಟಿಮೊನಿ ಎಂಬ ಧಾತುವನ್ನು ಬೆರೆಸಿ ಪೆನ್ಸಿಲ್‌ ತಯಾರಿಸಲಾಗಿತ್ತು.

1795ರಲ್ಲಿ ನಿಕೊಲಸ್‌ ಜಾಕಸ್‌ ಕೊಂಟೆ ಎಂಬುವವರು ಗ್ರಾಫೈಟ್‌ ಪುಡಿಗೆ ಮಣ್ಣನ್ನು ಬೆರೆಸಿ, ಅದರಿಂದ ಕಡ್ಡಿ ತಯಾರಿಸಿ, ಬೆಂಕಿಗೆ ಹಿಡಿದು ಒಣಗಿಸುವ ಕಲೆಯನ್ನು ಕರಗತ ಮಾಡಿಕೊಂಡರು. ಗ್ರಾಫೈಟ್‌ ಪುಡಿ ಮತ್ತು ಮಣ್ಣಿನ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡುವುದರಿಂದ ಗ್ರಾಫೈಟ್‌ ಕಡ್ಡಿಯ ಗಡಸುತನದಲ್ಲಿ ಏರಿಳಿತ ತರಬಹುದು ಎಂಬುದನ್ನು ಅವರು ಪರಿಚಯಿಸಿದರು.

ಅಮೆರಿಕದ ಹೇಮನ್‌ ಲಿಪ್‌ಮನ್‌ ಎಂಬುವವರು 1858ರಲ್ಲಿ ಪೆನ್ಸಿಲ್‌ನ ತುದಿಗೆ ರಬ್ಬರ್‌ (ಇರೇಸರ್‌) ಅಳವಡಿಸಿ, ಪೇಟೆಂಟ್‌ ಪಡೆದರು. ಪೆನ್ಸಿಲ್‌ಗಳ ಮೊನೆಯನ್ನು ಚಾಕು, ಬ್ಲೇಡ್‌ ಸೇರಿದಂತೆ ಇತರ ಹರಿತ ಸಾಧನಗಳಿಂದಲೇ ಚೂಪು ಮಾಡಬೇಕಾಗಿ­ದ್ದುದರಿಂದ ಸಾಕಷ್ಟು ಪೆನ್ಸಿಲ್‌ಗಳು ಬೇಗ ಮುಗಿಯುತ್ತಿತ್ತು. ಇದನ್ನು ತಪ್ಪಿಸಲು ಎರಡನೇ ವಿಶ್ವ ಮಹಾ ಸಮರದ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ಶಾರ್ಪ­ನರ್‌­­ಗಳನ್ನು (ಮೊನೆ ಚೂಪು ಮಾಡುವ ಸಾಧನ) ಆವಿಷ್ಕರಿಸ­ಲಾಯಿತು. ಕಾಲಕ್ರಮೇಣ ಪೆನ್ಸಿಲ್‌ಗಳ ತಯಾರಿಕೆ­­­­ಯಲ್ಲಿ ಸಾಕಷ್ಟು ಬದಲಾವಣೆ­ಗಳಾದವು. ವಿವಿಧ ಉದ್ದೇಶಗಳಿಗಾಗಿ ಬಳಸುವ ಥರಾವರಿ ಪೆನ್ಸಿಲ್‌ಗಳು ಮಾರುಕಟ್ಟೆಗೆ ಬಂದವು.

1977ರಲ್ಲಿ ಬಣ್ಣದ ಪೆನ್ಸಿಲ್‌­­ಗಳು ರೂಪುಗೊಂಡವು. 36 ಬಣ್ಣಗಳಲ್ಲಿ ಪೆನ್ಸಿಲ್‌ಗಳು ಗ್ರಾಹಕರ ಕೈಯನ್ನು ಅಲಂಕರಿಸಿ ದವು. 1994ರಲ್ಲಿ ಕಲ್ಲಿದ್ದಲಿನಿಂದ ಮಾಡಿದ ಪೆನ್ಸಿಲ್‌ಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟವು. 1999ರಲ್ಲಿ ಜಗತ್ತಿನ ಮೊದಲ ಲೋಹದ ಪೆನ್ಸಿಲ್‌ ತಯಾರಾಯಿತು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಡಿಜಿಟಲ್‌ ಪೆನ್ಸಿಲ್‌ಗಳೂ ನಮ್ಮ ಕಣ್ಣಮುಂದಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT