ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ: ಶೇಖ್

Last Updated 31 ಜುಲೈ 2014, 9:54 IST
ಅಕ್ಷರ ಗಾತ್ರ

ಮೈಸೂರು: ‘ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್‌.ಬಿ. ಶೇಖ್‌ ಮಾಸ್ತರ ಭರವಸೆ ನೀಡಿದರು. ನಗರದ ಜಗನ್ಮೋಹನ ಅರಮನೆಯಲ್ಲಿ ಬುಧವಾರ ಆಯೋಜಿಸಿದ್ದ ಮೂರು ದಿನಗಳ ‘ಪೌರಾಣಿಕ ರಂಗ ಸಂಭ್ರಮ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈಗಿನ ಪೀಳಿಗೆಗೆ ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಪರಿಚಯಿಸುವ ಸಲುವಾಗಿ ರಾಜ್ಯದ ವಿವಿಧೆಡೆ ಪೌರಾಣಿಕ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತೇವೆ. ಜತೆಗೆ, ಪೌರಾಣಿಕ ನಾಟಕಗಳಿಗೆ ಹಿನ್ನೆಲೆಯಲ್ಲಿ ದುಡಿಯುವ, ಅಂದರೆ ವಾದ್ಯಗಾರರು, ಪರದೆ ಎಳೆಯುವವರನ್ನೂ ಪ್ರೋತ್ಸಾಹಿಸು­ತ್ತೇವೆ’ ಎಂದು ತಿಳಿಸಿದರು.

‘ಪೌರಾಣಿಕ ನಾಟಕಗಳು ರಂಗಭೂಮಿಯ ತಾಯಿಬೇರು ಜತೆಗೆ, ಗಟ್ಟಿಬೀಜ. ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡರೆ ಉತ್ತಮ ಕಲಾವಿದರಾಗುತ್ತಾರೆ ಎನ್ನುವುದ­ರಲ್ಲಿ ಅನುಮಾನವಿಲ್ಲ’ ಎಂದು ಅಭಿಪ್ರಾಯಪಟ್ಟರು. ಸಮಾರೋಪ ಭಾಷಣ ಮಾಡಿದ ಸಂಗೀತ ನಿರ್ದೇಶಕ ಹಂಸಲೇಖ ಅವರು, ‘ಇದು ಸಮಾರೋಪ ಸಮಾರಂಭ ಅಲ್ಲ. ಸಮಾರೋಹ ಸಮಾರಂಭ. ಇಲ್ಲಿಯ ಪೌರಾಣಿಕ ನಾಟಕಗಳನ್ನು ನೋಡಲು ಕಿಕ್ಕಿರಿದು ಪ್ರೇಕ್ಷಕರು ಸೇರಿದ್ದರು ಎಂಬುದನ್ನು ಕೇಳಿ ಹಾಲು ಕುಡಿದಷ್ಟು ಸಂತೋಷವಾಯಿತು’ ಎಂದು ಹರ್ಷ ವ್ಯಕ್ತಪಡಿಸಿದರು.

‘ಮಂತ್ರಗಳಿಲ್ಲದ ಅಕ್ಷರಗಳಿಲ್ಲ, ಔಷಧಿಗಳಿಲ್ಲದ ಬೇರುಗಳಿಲ್ಲ. ಉಪಯೋಗಕ್ಕೆ ಬಾರದ ಮನುಷ್ಯರಿಲ್ಲ. ಇದನ್ನು ರಂಗ ಚಾವಡಿಯ ಗೆಳೆಯರಿಗೆ ಹೇಳಬಹುದು. ಅವರಲ್ಲಿ ಬಿ.ಎಂ. ರಾಮಚಂದ್ರ ಅವರು ಆಂಜನೇಯ ರೀತಿ ದುಡಿಯುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಟಿವಿ ಚಾನಲ್‌ಗಳಲ್ಲಿ ಪೌರಾಣಿಕ ನಾಟಕಗಳಿಗೆ ಸ್ಥಾನವಿಲ್ಲ. ಪೌರಾಣಿಕ ಆಧರಿಸಿದ ಸಿನಿಮಾಗಳು ಬರುತ್ತಿಲ್ಲ. ಇದಕ್ಕಾಗಿ ಜನಜೀವನದಲ್ಲಿ ಪೌರಾಣಿಕ ನಾಟಕಗಳು ಬೆಳೆಯಬೇಕು. ಹಳ್ಳಿಗಳಲ್ಲಿ ಪೌರಾಣಿಕ ನಾಟಕಗಳು ಜೀವಂತವಾಗಿ ಉಳಿದರೆ ಕನ್ನಡ ಉಳಿಯುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾದ ಹಿರಿಯ ಸಂಗೀತ ತಜ್ಞ ಆರ್. ಪರಮಶಿವನ್‌ ಮಾತನಾಡಿ, ಮಹಾರಾಜರ ಕಾಲದಲ್ಲಿ ಪೌರಾಣಿಕ ನಾಟಕಗಳಿಗೆ ಪ್ರೋತ್ಸಾಹವಿತ್ತು. ಈಗ ಮತ್ತೆ ಜಗನ್ಮೋಹನ ಅರಮನೆಯ ತುಂಬ ಪ್ರೇಕ್ಷಕರು ತುಂಬಿ ನಾಟಕ ನೋಡಿದ್ದು ಕಂಡು ಖುಷಿಯಾಗಿದೆ. ರಾಮಾಯಣ ಹಾಗೂ ಮಹಾಭಾರತ ಕುರಿತ ನಾಟಕಗಳನ್ನು ಮೈಸೂರು, ಮಂಡ್ಯ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಆಡುತ್ತಾರೆ.

ಕಲಾವಿದರು ಮಾತು ತಪ್ಪಿದರೆ ಹೀಗಲ್ಲ, ಹೀಗೆ ಎಂದು ಸಂಭಾಷಣೆ ನೆನಪಿಸುವಂಥ ಪ್ರೇಕ್ಷಕರಿದ್ದಾರೆ ಎಂದು ಶ್ಲಾಘಿಸಿದರು. ನಂತರ ಅವರು ‘ಬೇಡರ ಕಣ್ಣಪ್ಪ’ ನಾಟಕದ ‘ಎನ್ನ ಸಿರಿಯೆ, ಎನ್ನ ದೊರೆಯೆ’ ಹಾಡು ಹಾಡಿದರು. ರಂಗಕರ್ಮಿ ಮಂಡ್ಯ ರಮೇಶ್‌ ಮಾತನಾಡಿ, ನಟರಿಂದ ಹಾಗೂ ಗಾಯಕರಿಂದ ರಂಗಭೂಮಿ ಉಳಿಯುತ್ತದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ. ರಾಮಚಂದ್ರ, ರಂಗ ಚಾವಡಿಯ ಕಾರ್ಯದರ್ಶಿ ಎ.ಎಸ್‌. ನಾಗರಾಜ್ ಹಾಜರಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಪೌರಾಣಿಕ ರಂಗ ಚಾವಡಿ ಸಹಯೋಗದಲ್ಲಿ ನಾಟಕೋತ್ಸವ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT