ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ದಾಖಲಿಸಿದ ಎಸ್‌ಐಗೆ ಕಪಾಳಮೋಕ್ಷ

ಪಾನಮತ್ತ ಆರ್‌ಟಿಒ ಸಿಬ್ಬಂದಿಯಿಂದ ಹಲ್ಲೆ
Last Updated 1 ಫೆಬ್ರುವರಿ 2015, 20:11 IST
ಅಕ್ಷರ ಗಾತ್ರ

ಬೆಂಗಳೂರು: ಪಾನಮತ್ತ ಚಾಲನೆ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಎಸ್‌ಐ ಶಿವಾನಂದ ಬೇವೂರ್ ಅವರಿಗೆ ಕಪಾಳಮೋಕ್ಷ ಮಾಡಿದ  ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ಪ್ರಥಮ ದರ್ಜೆ ಸಹಾಯಕ ವೆಂಕಟಾಚಲ ಹಾಗೂ ಅವರ ಅಳಿಯ ಗಿರೀಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ವಾರಾಂತ್ಯದ ಕಾರಣದಿಂದ ಪಾನಮತ್ತ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ನಗರದಲ್ಲೆಡೆ ಶನಿವಾರ ರಾತ್ರಿ 9 ಗಂಟೆಯಿಂದ 12 ಗಂಟೆವರೆಗೆ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯ ಎಸ್‌ಐಗಳಾದ ಶಿವಾನಂದ್, ಪುಟ್ಟರಾಜು ಹಾಗೂ ಮಂಜುನಾಥ್ ಅವರು ತಮ್ಮ ವ್ಯಾಪ್ತಿಯ ಮಾಳಗಾಳ ಸೇತುವೆ ಬಳಿ ಚಾಲಕರನ್ನು ತಪಾಸಣೆ ಮಾಡುತ್ತಿದ್ದರು’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

‘ರಾತ್ರಿ 10ರ ಸುಮನಹಳ್ಳಿ ಕಡೆಯಿಂದ ಬಂದ ಗಿರೀಶ್ ಕಾರನ್ನು ತಡೆದ ಸಿಬ್ಬಂದಿ, ಆಲ್ಕೋಮೀಟರ್‌ ಮೂಲಕ ತಪಾಸಣೆ ನಡೆಸಿದಾಗ ಅವರು ಪಾನ­ಮತ್ತರಾಗಿರುವುದು ಗೊತ್ತಾಯಿತು. ಹೀಗಾಗಿ  ಪುಟ್ಟ­ರಾಜು ಪ್ರಕರಣ ದಾಖ­ಲಿ­ಸಿದರು. ಇದರಿಂದ ಕೋಪಗೊಂಡ ಗಿರೀಶ್, ‘ನಾನು ಆರ್‌ಟಿಒ ಅಧಿ­ಕಾರಿ­ಯೊಬ್ಬರ ಅಳಿಯ. ಕಾರನ್ನು ಬಿಟ್ಟು ಕಳುಹಿಸದಿದ್ದರೆ  ಪರಿಣಾಮ ನೆಟ್ಟ­ಗಿರುವುದಿಲ್ಲ’ ಎಂದು ಧಮಕಿ ಹಾಕಿದರು. ವಾಹನ ಬಿಡಲು ಒಪ್ಪದಿದ್ದಾಗ ಮಾವ ವೆಂಕಟಾಚಲ ಅವರಿಗೆ ಕರೆ ಮಾಡಿದರು’ ಎಂದರು.

‘ವಿಷಯ ತಿಳಿದ 15 ನಿಮಿಷಗಳಲ್ಲೇ ಸ್ಥಳಕ್ಕೆ ಬಂದ ವೆಂಕಟಾಚಲ, ತಮ್ಮನ್ನು ಆರ್‌ಟಿಒ ಅಧಿಕಾರಿ ಎಂದು ಪರಿಚಯಿಸಿಕೊಂಡರು. ಹೀಗಾಗಿ ತಮ್ಮ ಗುರುತಿನ ಚೀಟಿ, ವಾಹನದ ಅಸಲಿ ದಾಖಲೆಗಳನ್ನು ತೋರಿಸಿ, ಕಾರನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದೆವು. ದಾಖ­ಲೆ­ಗಳನ್ನು ತರುವುದಾಗಿ ಹೋದ ವೆಂಕಟಾಚಲ, ಸ್ವಲ್ಪ ಸಮಯದಲ್ಲೇ ಪಾನಮತ್ತ­ರಾಗಿ ಮತ್ತೆ ಸ್ಥಳಕ್ಕೆ ಬಂದರು’ ಎಂದು ಸ್ಥಳದಲ್ಲಿದ್ದ ಎಸ್‌ಐ ಮಂಜುನಾಥ್ ಘಟನೆಯನ್ನು ವಿವರಿಸಿದರು.

‘ಕುಡಿದ ಮತ್ತಿನಲ್ಲಿ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಇದರಿಂದಾಗಿ ಸಿಬ್ಬಂದಿ ಸಹ ಅವರ ಜತೆ ವಾಗ್ವಾದಕ್ಕೆ ಇಳಿ­ದರು. ಈ ಹಂತದಲ್ಲಿ ಶಿವಾನಂದ್ ಅವರ ಕೆನ್ನೆಗೆ ಹೊಡೆದ ವೆಂಕಟಾಚಲ, ಬ್ಲಾಕ್‌ ಬೆರಿ ಉಪಕರಣವನ್ನು ಕಿತ್ತೆಸೆದರು’ ಎಂದು ಹೇಳಿದರು.

‘ಹಲ್ಲೆಯಿಂದ ಶಿವಾನಂದ ಕೆಳಗೆ ಬಿದ್ದಾಗ ಕನ್ನಡಕ ಚೂರಾಯಿತು.  ಅವರ ಈ ವರ್ತನೆಯನ್ನು ಪ್ರಶ್ನಿಸಲು ಮುಂದಾದ ಪುಟ್ಟರಾಜು ಮೇಲೂ ಹಲ್ಲೆಗೆ ಯತ್ನಿಸಿದ ವೆಂಕಟಾಚಲ, ವಾಕಿ–ಟಾಕಿ ಕಸಿದುಕೊಂಡು ನೆಲಕ್ಕೆ ಎಸೆದರು’ ಎಂದರು.

‘ನಂತರ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ ವಿಷಯ ತಿಳಿಸಿದೆವು. ಅವರು ಸ್ಥಳಕ್ಕೆ ಬರುವಷ್ಟರಲ್ಲೇ ಗಿರೀಶ್ ಮತ್ತು ವೆಂಕಟಾಚಲ, ಕಾರು ಬಿಟ್ಟು ಪರಾರಿಯಾಗಿದ್ದರು. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಲ್ಲಿ ದೂರು ದಾಖಲಿಸಿದೆವು’ ಎಂದರು.

‘ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ  (ಐಪಿಸಿ 332 ಮತ್ತು 353) ಹಾಗೂ ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ (ಐಪಿಸಿ 427) ಆರೋಪದಡಿ ಗಿರೀಶ್ ಮತ್ತು ವೆಂಕಟಾಚಲ ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಅನ್ನಪೂರ್ಣೇಶ್ವರಿನಗರ ನಿವಾಸಿಗಳು. ವೆಂಕಟಾಚಲ ಅವರು ರಾಜಾಜಿನಗರದ ಆರ್‌ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ. ಗಿರೀಶ್, ಲೈನ್‌ಮನ್‌ ಆಗಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT