ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಂಡವೀ ಟ್ರಕ್ ರೇಸಿಂಗ್

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಟ್ರಕ್ ರೇಸಿಂಗ್ ಕಲ್ಪನೆ ಭಾರತೀಯರಿಗೆ ಹೊಸತು. ಭಾರತಕ್ಕೆ ಟ್ರಕ್ ರೇಸ್‌ ಅನ್ನು ಪರಿಚಯಿಸಿದ ಹೆಗ್ಗಳಿಕೆ ಟಾಟಾ ಮೋಟಾರ್ಸ್‌ಗೆ ಸಲ್ಲುತ್ತದೆ.

240 ಚಾಲಕರ ಪಟ್ಟಿ?
​2016ರ ಸಾಲಿನ ಟ್ರಕ್‍ ರೇಸಿಂಗ್‌ನಲ್ಲಿ ಭಾರತೀಯ ಚಾಲಕರನ್ನು ಒಳಗೊಳ್ಳಲು ಟಾಟಾ ಸಿದ್ಧತೆ ನಡೆಸಿದೆ. ಈ ಕುರಿತು ಮಾನದಂಡ ಗಳನ್ನು ರೂಪಿಸುತ್ತಿದೆ. ಅರ್ಹತಾ ಸುತ್ತಿಗೆ 240 ಚಾಲಕರನ್ನು ಆಯ್ಕೆ ಮಾಡಿಕೊಳ್ಳಲಿರುವ ಟಾಟಾ, ಹಲವು ಸುತ್ತಿನ ಅರ್ಹತಾ ಪರೀಕ್ಷೆಗಳ ನಂತರ 16 ಮಂದಿ ಚಾಲಕರನ್ನು ಅಂತಿಮ ಪಟ್ಟಿಗೆ ಆಯ್ಕೆ ಮಾಡಿಕೊಳ್ಳಲಿದೆ.

2014ರ ಮಾರ್ಚ್‌ನಲ್ಲಿ ಗ್ರೇಟರ್‌ ನೋಯ್ಡಾದಲ್ಲಿರುವ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ  ಟ್ರಕ್ ರೇಸ್ ನಡೆದಿತ್ತು. ಭರ್ತಿ ಒಂದು ವರ್ಷದ ನಂತರ ಟಾಟಾ ಮತ್ತೆ ಟ್ರಕ್ ರೇಸ್‌ನ ಎರಡನೇ ಆವೃತಿಯ ದಿನಾಂಕ ಮತ್ತು ವಿವರಗಳನ್ನು ಬಿಡುಗಡೆ ಮಾಡಿದೆ.
ಟ್ರಕ್‌ರೇಸ್ ಇತರ ರೇಸ್‌ಗಳಿಗಿಂತ ಸಂಪೂರ್ಣ ಭಿನ್ನ. ಭಾರತದಲ್ಲಿ ಹೆಸರುವಾಸಿಯಾಗಿರುವ ಡೆಸರ್ಟ್ ಸ್ಟಾರ್ಮ್, ರೈಡ್‌ ದಿ ಹಿಮಾಲಯ, ದಕ್ಷಿಣ್ ಡೇರ್ ಮೊದಲಾದ ಮೋಟೊಕ್ರಾಸ್‌ ಇವೆಂಟ್‌­ಗಳು ಮತ್ತು ಕಾಫಿ ಡೇ ರ್‌್ಯಾಲಿಗಳು, ಎಫ್‌1 ರೇಸ್‌ಗಳಿಗಿಂತ ಈ ಟ್ರಕ್ ರೇಸಿಂಗ್ ಸಂಪೂರ್ಣ ಭಿನ್ನ.

ಮೂರ್ನಾಲ್ಕು ಟನ್ ಭಾರದ, ಪ್ರಚಂಡ ಶಕ್ತಿಯ, 10–12 ಅಡಿ ಎತ್ತರದ ಟ್ರಕ್‌ಗಳನ್ನು 100 ಕಿ.ಮೀ­ಗಿಂತಲೂ ಹೆಚ್ಚಿನ ವೇಗದಲ್ಲಿ ಓಡಿಸು­ವುದು ಸೆಡಾನ್ ಅಥವಾ ಎಸ್‌ಯುವಿಯೊಂದರ ಎಕ್ಸಿಲೇಟರ್ ತುಳಿದಂತಲ್ಲ. ತಿರುವುಗಳಲ್ಲಿ ವೇಗವಾಗಿ ತಿರುಗಿಸಿ­ದಂತೆಲ್ಲಾ ಒಂದು ಬದಿಯ ಚಕ್ರಗಳೆಲ್ಲಾ ಗಾಳಿ­ಯಲ್ಲಿ ತೇಲುವ ರೋಚಕ ಅನುಭವ ಟ್ರಕ್‌ ರೇಸಿಂಗ್‌ನಲ್ಲಿ ಮಾತ್ರ ಲಭ್ಯ.

ಟ್ರಕ್‌ ರೇಸಿಂಗ್‌ ಅನ್ನು ಭಾರತಕ್ಕೆ ಪರಿಚಯಿಸುವ ಮತ್ತು ತನ್ನ ಪ್ರಿಮಾ ಟ್ರಕ್‌ಗಳಿಗೆ ಜನಪ್ರಿಯತೆ ಒದಗಿಸುವ ಸಲುವಾಗಿ 2014ರಲ್ಲಿ ಟಾಟಾ ಮೊದಲ ಟ್ರಕ್ ರೇಸ್ ಆಯೋಜಿಸಿತ್ತು. ಮೊದಲ ಆವೃತ್ತಿಯಲ್ಲಿ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ 12 ಮಂದಿ ರೇಸಿಂಗ್ ಟ್ರಕ್ ಚಾಲಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆ ಆವೃತ್ತಿಯ ಸ್ಪರ್ಧೆಯಲ್ಲಿ ದಾಖಲಾದ ಗರಿಷ್ಠ ವೇಗ ಗಂಟೆಗೆ 116 ಕಿ.ಮೀ ಮಾತ್ರ.
ಈಗ ಎರಡನೇ ಆವೃತ್ತಿಯ ರೇಸಿಂಗ್ ಘೋಷಣೆಯಾಗಿದೆ. ಈ ಬಾರಿ ಆರು ತಂಡಗಳ 12 ಚಾಲಕರು ತಮ್ಮ  ಚಾಲನಾ ಕೌಶಲವನ್ನು ನಿಕಷಕ್ಕೆ ಒಡ್ಡಲಿದ್ದಾರೆ. ಆರು ತಂಡಗಳ ಪರವಾಗಿ 12 ಟ್ರಕ್‌ಗಳು ಈ ರೇಸ್‌ನಲ್ಲಿ ಭಾಗವಹಿಸಲಿವೆ.

ಅಂತರರಾಷ್ಟ್ರೀಯ ಆಟೊಮೊಬೈಲ್ ಫೆಡರೇಷನ್ ಮತ್ತು ಭಾರತೀಯ ಮೋಟಾರ್‌ ಸ್ಪೋರ್ಟ್ಸ್ ಫೆಡರೇಷನ್ ಈ ರೇಸಿಂಗ್ ಆಯೋಜನೆಯ ಹೊಣೆ ಹೊತ್ತಿವೆ.

ಪ್ರಚಂಡ ಟ್ರಕ್‌ಗಳು
ಟಿ1 ರೇಸಿಂಗ್‌ಗಾಗಿಯೇ ಟಾಟಾ ಪ್ರಿಮಾ ಟ್ರಕ್‌ಗಳ ಎಂಜಿನ್‍ ಟ್ಯೂನಿಂಗ್‌ನಲ್ಲಿ ಮಾರ್ಪಾಡು ಮಾಡಿದೆ. ಸಾಮಾನ್ಯ ಪ್ರಿಮಾ ಟ್ರಕ್‌ಗಳು 2100 ಆರ್‌ಪಿಎಂನಲ್ಲಿ 100 ಬಿಎಚ್‌ಪಿ ಶಕ್ತಿ ಉತ್ಪಾದಿಸಿದರೆ, ಟಿ1 ಟ್ರಕ್‌ಗಳು 2100 ಆರ್‌ಪಿಎಂನಲ್ಲಿ  370 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತವೆ. 1200-1400 ಆರ್‌ಪಿಎಂನಲ್ಲಿ  1550 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. 6.5 ಲೀಟರ್‍ ಅರ್ಥಾತ್ 6500 ಸಿ.ಸಿ ಸಾಮರ್ಥ್ಯದ 6 ಸಿಲಿಂಡರ್‌ಗಳ ಎಂಜಿನ್, 9 ಗಿಯರ್‌ಗಳ ಟ್ರಾನ್ಸ್‌ಮಿಷನ್ ಈ ಟ್ರಕ್‌ನಲ್ಲಿದೆ. 8 ಫಾರ್ವಾರ್ಡ್ ಸ್ಪೀಡ್ ಗಿಯರ್‌ಗಳು, 1 ಕ್ರಾವ್ಲರ್ ಗಿಯರ್ ಮತ್ತು 1 ರಿವರ್ಸ್ ಗಿಯರ್ ಈ ಟ್ರಾನ್ಸ್‌ಮಿಷನ್‌ನಲ್ಲಿದೆ.

ಹೀಗಿದ್ದೂ ಈ ಟ್ರಕ್‌ಗಳ ಗರಿಷ್ಠ ವೇಗ 160 ಕಿ.ಮೀ/ಗಂಟೆಗೆ ದಾಟಲಾರದು. ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಈಗ ನಡೆಯುತ್ತಿರುವ ಟೆಸ್ಟ್ ಡ್ರೈವ್‌ನಲ್ಲಿ ದಾಖಲಾದ ಗರಿಷ್ಠ ವೇಗ ಗಂಟೆಗೆ 146. ಕಿ.ಮೀ. ಈ ವೇಗದಲ್ಲಿ ಪ್ರಿಮಾ ಚಾಲನೆ ಮಾಡಿದ ಚಾಲಕ ರೇಸಿಂಗ್ ಸ್ಪೆಷಲಿಸ್ಟ್ ಅಲ್ಲ. ಮುಂಬೈನ ಬೆಸ್ಟ್ ಬಸ್‍ ಸರ್ವೀಸ್‌ನ ಒಬ್ಬ ಚಾಲಕ. ಎರಡನೇ ಆವೃತ್ತಿಯ ರೇಸ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಟ್ರಕ್ ರೇಸಿಂಗ್ ಚಾಲಕರು ಈ ದಾಖಲೆ ಮುರಿಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.

ಇಂತಿಪ್ಪ ಮೂರ್ನಾಲ್ಕು ಟನ್ ತೂಕದ ಪ್ರಿಮಾಗಳನ್ನು ನಿಯಂತ್ರಿಸಲು ಪ್ರಚಂಡ ಬ್ರೇಕಿಂಗ್ ವ್ಯವಸ್ಥೆ ಬೇಕೇಬೇಕು. ದೊಡ್ಡ ವಾಹನಗಳಿಗೆ ಡಿಸ್ಕ್ ಬ್ರೇಕ್ ಅಳವಡಿಸಲು ಸಾಧ್ಯವಿಲ್ಲ. ಹೀಗಾಗಿ ಸಾಮಾನ್ಯ ಟ್ರಕ್‌ಗಳಲ್ಲಿರುವಂತೆಯೇ ಈ ಟ್ರಕ್‌ಗಳಲ್ಲೂ ಡ್ರಮ್ ಬ್ರೇಕ್‌ಗಳೇ ಇವೆ. ಅತಿ ವೇಗದಲ್ಲಿ ಇವು ಹೆಚ್ಚು ಬಿಸಿಯಾಗಿ ಬ್ರೇಕ್ ವಿಫಲವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಬ್ರೇಕ್ ಅಪ್ಲೈ ಮಾಡಿದಾಗಲೆಲ್ಲಾ ಬ್ರೇಕ್ ಡ್ರಮ್‌ಗಳ ಮೇಲೆ ನೀರು ಸಿಂಪಡಿಸುವ ವ್ಯವಸ್ಥೆ ಈ ರೇಸಿಂಗ್ ಟ್ರಕ್‌ಗಳಲ್ಲಿವೆ.

ರೇಸಿಂಗ್‌ನಲ್ಲಿ ಅಪಘಾತ ಸಂಭವಿಸಿದಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳದಿರಲೆಂದು ಟ್ರಕ್‌ನ ಕ್ಯಾಬಿನ್‌ನಲ್ಲಿರುವ ಎಲ್ಲಾ ಫೈಬರ್ ಮತ್ತು ಪ್ಲಾಸ್ಟಿಕ್ ಕಾಸ್ಮೆಟಿಕ್‌ಗಳನ್ನು ತೆಗೆಯಲಾಗಿದೆ. ರೇಸಿಂಗ್ ಸೀಟ್, ಗಾಜಿನ ಬದಲಿಗೆ ಕಿಟಕಿಗಳಿಗೆ ರೇಸಿಂಗ್ ಮೆಷ್ ಅಳವಡಿಸಲಾಗಿದೆ. ಸಾಮಾನ್ಯವಾಗಿ ಟ್ರಕ್‌ನ ಛಾಸಿಯ ಬಲಬದಿಯಲ್ಲಿರುವ ಫ್ಯುಯೆಲ್ ಟ್ಯಾಂಕ್‍ ಅನ್ನು ತೆಗೆದು, ಹಿಂಬದಿಯಲ್ಲಿ ಕೇವಲ 20 ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ.

ಚಿಕ್ಕ ಲ್ಯಾಪ್‍
ಟ್ರಕ್ ರೇಸಿಂಗ್‌ಗಾಗಿ ಲ್ಯಾಪ್‌ನ ಉದ್ದವನ್ನು ಕಡಿತಗೊಳಿಸಲಾಗಿದೆ. ಅರ್ಹತಾ ಮಟ್ಟದ ಟೈಮ್‍ಟ್ರಯಲ್ ಮತ್ತು ಫೈನಲ್ ಲ್ಯಾಪ್‌ನ ಉದ್ದ ಕೇವಲ 2.1 ಕಿ.ಮೀ ಮಾತ್ರ. ಅಂತಿಮ ಸುತ್ತಿನಲ್ಲಿ ಒಟ್ಟು 15 ಲ್ಯಾಪ್‌ಗಳಿರುತ್ತವೆ.

ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಹೆಚ್ಚು ಶಾರ್ಪ್ ತಿರುವುಗಳಿರುವುದರಿಂದ ಅತಿವೇಗದಲ್ಲಿ ಟ್ರಕ್‌ಗಳು ಮಗುಚಿಕೊಳ್ಳುವ ಅಪಾಯವಿರುತ್ತದೆ. ಹೀಗಾಗಿ ಕಠಿಣ ತಿರುವಿರದ 2.1 ಕಿ.ಮೀ ಉದ್ದದ ಟ್ರಾಕ್‍ ಅನ್ನು ಮಾತ್ರ ಟ್ರಕ್‍ ರೇಸಿಂಗ್‌ಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಟ್ರಾಕ್‌ನಲ್ಲಿರುವ ತಿರುವುಗಳಲ್ಲಿ ಸುರಕ್ಷಿತ ವೇಗ ಗಂಟೆಗೆ ಗರಿಷ್ಠ 80.ಕಿ.ಮೀ ದಾಟಲಾರದು. ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುವ ಟ್ರಕ್‌ಗಳ ಒಂದು ಬದಿಯ ಚಕ್ರಗಳು ಗಾಳಿಯಲ್ಲಿ ತೇಲುತ್ತಿರುತ್ತವೆ. ಟ್ರಕ್‍ ರೇಸಿಂಗ್‌ನ ರೋಚಕತೆಯೂ ಅದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT