ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸ್ಪರ್ಧೆ: ಕಥೆಗಾರ್ತಿಯರ ಮೇಲುಗೈ

Last Updated 24 ಅಕ್ಟೋಬರ್ 2015, 11:04 IST
ಅಕ್ಷರ ಗಾತ್ರ

ಬೆಂಗಳೂರು: ಚೆನ್ನೈ ಕನ್ನಡತಿ ಶಾಂತಿ ಕೆ.ಎ. (‘ಬಾಹುಗಳು’), ಧಾರವಾಡದ ಪ್ರಜ್ಞಾ ಮತ್ತೀಹಳ್ಳಿ (‘ತುದಿಬೆಟ್ಟದ ನೀರಹಾಡು’) ಹಾಗೂ ತುಮಕೂರಿನ ಗೀತಾ ವಸಂತ (‘ಅಲ್ಲಾ ಹರಸಿ ಕಳಿಸಿದ ಪಾರಿವಾಳಗಳು’) ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ 2015’ರ ಮೊದಲ ಮೂರು ಬಹುಮಾನಗಳಿಗೆ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಥಾಸ್ಪರ್ಧೆಯ ಮೂರೂ ಬಹುಮಾನಗಳನ್ನು ಕಥೆಗಾರ್ತಿಯರೇ ಪಡೆದಂತಾಗಿದೆ. ವಿದ್ಯಾರ್ಥಿ ವಿಭಾಗದ ಬಹುಮಾನ ಕೂಡ ಕಥೆಗಾರ್ತಿಗೆ ದೊರೆತಿದ್ದು, ನಂಜನಗೂಡು ಅನ್ನಪೂರ್ಣ ಅವರ ‘ಅವನೂ ಅವಳೂ...’ ಕಥೆ ಬಹುಮಾನ ಪಡೆದಿದೆ.

ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿರುವ ಪ್ರಜ್ಞಾ ಮತ್ತೀಹಳ್ಳಿ ಕವನ ಸ್ಪರ್ಧೆಯಲ್ಲೂ ಬಹುಮಾನ ಪಡೆದಿದ್ದಾರೆ. ಅವರ ‘ರಂಗೋಲಿ ಕವಿತೆ ಮೊದಲ ಬಹುಮಾನ ಪಡೆದಿದ್ದರೆ, ಎಚ್.ಆರ್‌. ರಮೇಶ ಅವರ ‘ಇದ್ದ’ ಹಾಗೂ ವಾಸುದೇವ ನಾಡಿಗ್‌ರ ‘ಅಕ್ಕಿ ಆರಿಸುವಾಗ’ ಕವಿತೆಗಳು ಎರಡು ಮತ್ತು ಮೂರನೇ ಬಹುಮಾನ ಪಡೆದಿವೆ.

ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಮೊದಲ ಮೂರು ಕಥೆಗಳಿಗೆ ₹ 20000, ₹15000 ಹಾಗೂ ₹10000 ಬಹುಮಾನ ದೊರೆಯಲಿದೆ. ವಿದ್ಯಾರ್ಥಿ ವಿಭಾಗದ ಕಥೆ ₹5000 ಬಹುಮಾನ ಪಡೆಯಲಿದೆ. ಕವನಸ್ಪರ್ಧೆ ವಿಭಾಗದಲ್ಲಿ ಮೊದಲ ಮೂರು ಕವಿತೆಗಳಿಗೆ ₹5000, ₹3000 ಹಾಗೂ ₹2500 ಬಹುಮಾನ ದೊರೆಯಲಿದ್ದು, ವಿದ್ಯಾರ್ಥಿ ವಿಭಾಗದ ಕವಿತೆ ₹2000 ರೂಪಾಯಿ ಬಹುಮಾನ ಪಡೆಯಲಿದೆ.

ರಾಜು ಹೆಗಡೆ (‘ಪಾರಿಜಾತದ ಗೀರು’), ಚಿದಾನಂದ ಸಾಲಿ (‘ನೆರಳು’), ರಾಜೀವ ನಾರಾಯಣ ನಾಯಕ (‘ಚಕ್ಕಾ ಬನಾದೇ ಇಂಡಿಯಾ!’), ಟಿ.ಕೆ. ದಯಾನಂದ (‘ದುಕೂನ’) ಹಾಗೂ ಚೀಮನಹಳ್ಳಿ ರಮೇಶ್‌ಬಾಬು ಅವರ ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಕವನ ಸ್ಪರ್ಧೆಯಲ್ಲಿ ಜಿ. ಮಂಜುನಾಥ್‌ (‘ನನಗೆ ಫೋಟೊಗಳೆಂದರೆ ಇಷ್ಟ’), ಪ್ರಸನ್ನ (‘ಸಂತೆಯೊಳಗೊಂದು ಪ್ರೀತಿಯ ಮಾಡಿ’), ಆಶಾ ಜಗದೀಶ್‌ (‘ಅಮ್ಮ ಬೆಳೆದಿದ್ದಾಳೆ!’), ನಾಗಣ್ಣ ಕಿಲಾರಿ (‘ದೇಹಕ್ಕೆ ಬಿದ್ದ ಬೆಂಕಿ’) ಹಾಗೂ ಆರ್‌. ವಿಜಯರಾಘವನ್‌ (‘ಇರುಕುಗಳ ನಡುವೆ’) ಅವರ ರಚನೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಮಹಾಂತೇಶ ಪಾಟೀಲ ಅವರ ‘ಜೀರೊ ಸೈಜಿನಲ್ಲಿ ಸಿಕ್ಕ ಜೀವ’ ಕವಿತೆ ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನಕ್ಕೆ ಪಾತ್ರವಾಗಿದೆ.

ತೀರ್ಪುಗಾರರು: ಖ್ಯಾತ ವಿಮರ್ಶಕ ರಹಮತ್‌ ತರೀಕೆರೆ ಹಾಗೂ ಕಥೆಗಾರ ಶ್ರೀಧರ ಬಳಗಾರ ಕಥಾಸ್ಪರ್ಧೆಯ ತೀರ್ಪುಗಾರ­ರಾಗಿ, ಕವಿಗಳಾದ ಕೆ. ಫಣಿರಾಜ್‌ ಹಾಗೂ ಡಿ.ವಿ. ಪ್ರಹ್ಲಾದ್‌ ಕವನಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

ಮಕ್ಕಳ ವರ್ಣಚಿತ್ರ ಸ್ಪರ್ಧೆ:  ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ ಪವಿತ್ರ ಎನ್‌.ಸಿ. (ನೆಲಮಂಗಲ), ಶ್ರೀಪ್ರಿಯಾ (ಬೆಳ್ತಂಗಡಿ), ನಭಾ ಒಕ್ಕುಂದ (ಧಾರವಾಡ), ಪ್ರತೀಕ್ಷಾ ಮರಕಿಣಿ (ಬೆಂಗಳೂರು), ಸಾಯಿಗಣೇಶ ವೀರಣ್ಣ ಸೋನಾರ (ಬಾಗಲಕೋಟೆ), ಯಶ್ವಿ ಜೆ. ರೈ (ಶಿವಮೊಗ್ಗ), ವಿನೋದ್‌ ಎಸ್‌. ಬೆಂಟೋರ್‌  (ಕೊಪ್ಪಳ) ಹಾಗೂ ಸುನೇತ್ರ ಪ್ರಮೋದ ಭಾಗ್ವತ (ಬೆಂಗಳೂರು) ಬಹುಮಾನ ಪಡೆದಿದ್ದಾರೆ.  ಖ್ಯಾತ ಕಲಾವಿದೆ ಸುರೇಖ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ತೀರ್ಪುಗಾರರ ಅನಿಸಿಕೆ
ಹೊಸ ಪ್ರತಿಭಾವಂತರ ಶೋಧ ಮತ್ತು ಅವರನ್ನು ಕಥನ ಪರಂಪರೆಗೆ ಸೇರ್ಪಡೆ ಮಾಡುವ ನಿರಂತರವಾದ ಹಿರಿ–ಕಿರಿಯ ಕಥೆಗಾರರ ನಂಟಿನ ಕೊಂಡಿಯಾಗಿ ಪತ್ರಿಕೆಯ ಪಾತ್ರ ಅದೆಷ್ಟು ಮಹತ್ವದ್ದೆಂಬುದಕ್ಕೆ ಈ ಕಥಾಸ್ಪರ್ಧೆ ಅತ್ಯುತ್ತಮ ಮಾದರಿಯಾಗಿದೆ. –ಶ್ರೀಧರ ಬಳಗಾರ

ಬೇರೆಬೇರೆ ಪಂಥಗಳಿಗೆ ಅಥವಾ ತಲೆಮಾರುಗಳಿಗೆ ಸೇರಿದ ಪ್ರತಿಭಾವಂತ ಕಥೆಗಾರರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ;  ಈಗಲೂ ಈ ಕಥಾಸ್ಪರ್ಧೆ ಒಂದು ಬಗೆಯ ಸಂಚಲನ ಉಂಟುಮಾಡುವ ಶಕ್ತಿಯನ್ನು ಉಳಿಸಿಕೊಂಡಿದೆ. –ರಹಮತ್ ತರೀಕೆರೆ

ಈ ಪ್ರತಿಷ್ಠಿತ ಸ್ಪರ್ಧೆಗೆ ಬಂದಿರುವ ಆಯ್ದ ಪದ್ಯಗಳನ್ನು ಓದಿದಾಗ, ಪತ್ರಿಕೆಗಳ ಸಾಪ್ತಾಹಿಕ ಪುರವಣಿಗಳಲ್ಲಿ ಪ್ರಕಟವಾಗುತ್ತಿರುವ ಪದ್ಯಗಳಿಗಿಂತ ವಿಶಿಷ್ಟವಾದದ್ದೇನೂ ನನಗೆ ಕಾಣಲಿಲ್ಲ. –ಕೆ. ಫಣಿರಾಜ್

ಇವತ್ತಿನ ಕಾವ್ಯ ವ್ಯಕ್ತಿನಿಷ್ಠವೂ ಸಮಾಜಮುಖಿಯೂ ಆಗಿದೆ. –ಡಿ.ವಿ. ಪ್ರಹ್ಲಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT