ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯುತ್ತರಕ್ಕೆ ಕಾಲಾವಕಾಶ ಕೋರಿದ ಬಿಬಿಎಂಪಿ

ರಾಜೇಂದ್ರಕುಮಾರ್‌ ಕಠಾರಿಯಾ ವರದಿ: ರಾಜ್ಯ ಸರ್ಕಾರದಿಂದ ಶೋಕಾಸ್‌ ನೋಟಿಸ್
Last Updated 30 ಮಾರ್ಚ್ 2015, 20:12 IST
ಅಕ್ಷರ ಗಾತ್ರ

ಬೆಂಗಳೂರು: ಐಎಎಸ್‌ ಅಧಿಕಾರಿ ರಾಜೇಂದ್ರ ಕುಮಾರ್ ಕಠಾರಿಯಾ ವರದಿಯನ್ನು ಆಧರಿಸಿ ನೀಡಿರುವ ಶೋಕಾಸ್ ನೋಟಿಸ್‌ಗೆ ‘ಪ್ರತ್ಯುತ್ತರ’ ನೀಡಲು ಕಾಲಾವಕಾಶ ಬೇಕೆಂದು ಬಿಬಿಎಂಪಿ ರಾಜ್ಯ ಸರ್ಕಾರವನ್ನು  ಕೋರಿದೆ.

ಬಿಬಿಎಂಪಿಯಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಧರಣಿಯ ನಡುವೆ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು. ವರದಿಯಲ್ಲಿ ಪ್ರತಿಪಾದಿಸಿರುವ ಅಂಶಗಳಿಗೆ ಪೂರಕ ದಾಖಲೆಗಳನ್ನು ಸರ್ಕಾರ ಒದಗಿಸಬೇಕು ಎಂದೂ ವಿನಂತಿಸಲಾಯಿತು.

‘2008ರಿಂದ 2013ರ ವರೆಗಿನ ಸಿಎಜಿ ವರದಿ, ಉಪಲೋಕಾಯುಕ್ತರ ವರದಿ, ಹೈಕೋರ್ಟ್‌ ‍ಪ್ರಕರಣಗಳು, ಪತ್ರಿಕಾ ವರದಿಗಳು, ಸಿಐಡಿ ವರದಿ, ಟಿವಿಸಿಸಿ ವರದಿಗಳ ದಾಖಲೆಗಳ ನೆರವಿನಿಂದ ಕಠಾರಿಯಾ ಅವರು ವರದಿ ಸಿದ್ಧಪಡಿಸಿದ್ದಾರೆ.  ಈ ವರದಿ ಏಕಪಕ್ಷೀಯವಾಗಿದ್ದು, ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳಿಂದ ಹೇಳಿಕೆ ಪಡೆದುಕೊಂಡಿಲ್ಲ. ಹೀಗಾಗಿ ನೋಟಿಸ್‌ಗೆ ಸಮಜಾಯಿಷಿ ನೀಡುವುದು ಕಷ್ಟ’ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಣಕಾಸಿನ ಅಸಮರ್ಪಕ ನಿರ್ವಹಣೆ ಹಾಗೂ ಆರೋಪಗಳಿಗೆ ಪಾಲಿಕೆಯ ಅಧಿಕಾರಿಗಳೇ ಜವಾಬ್ದಾರರು. ಇದಕ್ಕೆ ಪಾಲಿಕೆ ಸದಸ್ಯರು ಹೊಣೆ ಅಲ್ಲ ಎಂದು ತಿಳಿಸಲಾಯಿತು.

ಬಿಜೆಪಿಯ ಇಬ್ಬರು ಸದಸ್ಯರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ತಲಾ ಒಬ್ಬರು ಸದಸ್ಯರು ಮಾತನಾಡಿದ ಬಳಿಕ ನಿರ್ಣಯ ಮಂಡಿಸಲಾಯಿತು. ಉಳಿದ ಸದಸ್ಯರಿಗೂ ಮಾತನಾಡಲು ಅವಕಾಶಕಲ್ಪಿಸಬೇಕು ಎಂದು ಕಾಂಗ್ರೆಸ್‌ನ ಕೆ.ಚಂದ್ರಶೇಖರ್‌ ಮನವಿ ಮಾಡಿಕೊಂಡರು. ಇದಕ್ಕೆ ಮೇಯರ್‌ ಒಪ್ಪಲಿಲ್ಲ. ಇದನ್ನು ಪ್ರತಿಭಟಿಸಿ ಚಂದ್ರಶೇಖರ್‌ ಅವರು ಮೇಯರ್‌ ಪೀಠದ ಎದುರು ಧರಣಿ ಆರಂಭಿಸಿದರು. ಉಳಿದ ಕಾಂಗ್ರೆಸ್‌ ಸದಸ್ಯರೂ ಬೆಂಬಲ ಸೂಚಿಸಿದರು. ‘ಇದು ಹಿಟ್ಲರ್‌ ಆಡಳಿತ’ ಎಂದು ಅವರು ಘೋಷಣೆ ಕೂಗಿದರು. ವಿರೋಧದ ನಡುವೆಯೇ ನಿರ್ಣಯ ಮಂಡಿಸಲಾಯಿತು.

ಇದಕ್ಕೂ ಮುನ್ನ ಮಾತನಾಡಿದ ಆಡಳಿತ ಪಕ್ಷದ ನಾಯಕ ಎನ್‌.ಆರ್‌.ರಮೇಶ್‌, ‘ಪಾಲಿಕೆಯ ಆರ್ಥಿಕ ದುಸ್ಥಿತಿಗೆ 2001–2006ರ ಅವಧಿಯ ಕಾಂಗ್ರೆಸ್‌ ಆಡಳಿತ ಕಾರಣ. ಒಂದೇ ಕುಟುಂಬದ 31 ಮಂದಿ ಸೇರಿದಂತೆ 48 ಮಂದಿಗೆ ಕಾಂಗ್ರೆಸ್ ಆಡಳಿತ ತ್ಯಾಜ್ಯ ವಿಲೇವಾರಿ ಗುತ್ತಿಗೆಯನ್ನು ನೀಡಿತು. ಇದರಿಂದ ಕಸ ವಿಲೇವಾರಿ ಮಾಫಿಯಾ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೌರವಧನ ಮರಳಿಸಿದ ಸದಸ್ಯ

ಬಿಬಿಎಂಪಿಯ ಜೆಡಿಎಸ್‌ ಸದಸ್ಯ ಎ.ಎಂ. ಹನುಮಂತೇಗೌಡ (ಹೇರೋಹಳ್ಳಿ ವಾರ್ಡ್) ಅವರು ಐದು ವರ್ಷಗಳ ಗೌರವಧನವನ್ನು (₨4.8 ಲಕ್ಷ) ಬಿಬಿಎಂಪಿಗೆ ಮರಳಿಸಿದ್ದಾರೆ.

ಬಿಬಿಎಂಪಿಯಲ್ಲಿ ಸೋಮ
ವಾರ ನಡೆದ ವಿಶೇಷ ಸಭೆಯಲ್ಲಿ ಅವರು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಅವರಿಗೆ ಚೆಕ್ ಹಸ್ತಾಂತರಿಸಿದರು.

‘ಬಿಬಿಎಂಪಿ ಆರ್ಥಿಕ ಸಂಕಷ್ಟದಲ್ಲಿದೆ. ಹಾಗೂ ವೈಯಕ್ತಿಕ ಉದ್ದೇಶಗಳಿಗೆ ಸಾರ್ವಜನಿಕ ಹಣ ಬಳಸಬಾರದು ಎಂಬ ಉದ್ದೇಶದಿಂದ ಗೌರವಧನ ಮರಳಿಸಿದ್ದೇನೆ’ ಎಂದು ಅವರು ತಿಳಿಸಿದರು.

ಕಠಾರಿಯಾ ವರದಿ ಪರಿಶೀಲನೆಗೆ ನಮಗೆ ಅವಕಾಶ ನೀಡಿಲ್ಲ. ಹತ್ತೇ ದಿನಗಳಲ್ಲಿ 7 ಸಾವಿರ ಪುಟಗಳನ್ನು ಓದಿ ಈ ವರದಿ ಸಿದ್ಧಪಡಿಸಲಾಗಿದೆ. ಅವರಿಗೆ ವಿಶೇಷ ಶಕ್ತಿ ಇದೆಯಾ ಎಂದು ಅವರು ಪ್ರಶ್ನಿಸಿದರು.

ಈ ವೇಳೆ ಎದ್ದು ನಿಂತ ಕಾಚರಕನಹಳ್ಳಿ ವಾರ್ಡ್ ಸದಸ್ಯ ಪದ್ಮನಾಭ ರೆಡ್ಡಿ, ‘ನಮಗೆಲ್ಲ ಇಂಗ್ಲಿಷ್‌ನಲ್ಲಿ ನೋಟಿಸ್‌ ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ ನೋಟಿಸ್‌ ಪ್ರತಿಯನ್ನು ಹರಿದು ಬಿಸಾಡಿದರು. ‘ಈ ವರದಿ ಅವೈಜ್ಞಾನಿಕ. ಇದು ರಾಜಕೀಯ ಪ್ರೇರಿತ ವರದಿ. ಇದು ಪ್ರಜಾಪ್ರಭುತ್ವದ ಮೇಲಿನ ಅತ್ಯಾಚಾರ’ ಎಂದು ಕಿಡಿಕಾರಿದರು.

ವಿರೋಧ ಪಕ್ಷದ ನಾಯಕ ಬಿ.ಎನ್‌. ಮಂಜುನಾಥ ರೆಡ್ಡಿ ಮಾತನಾಡಿ, ‘ರಮೇಶ್‌ ಅವರು ಒಂದು ವಿಷಯದ ಬಗ್ಗೆ  ಇವತ್ತು ಮಾತನಾಡಿ ನಾಳೆ ಮೌನ ಆಗುತ್ತಾರೆ. ಬಿಜೆಪಿಯ ಅವಧಿಯಲ್ಲಿನ ಅಕ್ರಮಗಳ ಬಗ್ಗೆ ಅವರೇ ಬಿಎಂಟಿಎಫ್‌ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಅವರ ದೂರಿನಲ್ಲಿರುವ ಅಂಶಗಳೇ ಈ ವರದಿಯಲ್ಲಿ ಇವೆ’ ಎಂದು ತಿರುಗೇಟು ನೀಡಿದರು.

‘2001–06ರ ಅವಧಿಯಲ್ಲಿ ಅಕ್ರಮ ನಡೆದಿತ್ತು ಎಂದು ಬಿಜೆಪಿ ಸದಸ್ಯರು ಈಗ ಹೇಳುತ್ತಿದ್ದಾರೆ. ಆಗ ಬಿಜೆಪಿ ಸರ್ಕಾರ ಬಿಬಿಎಂಪಿಗೆ ಯಾಕೆ ನೋಟಿಸ್‌ ನೀಡಿಲ್ಲ’ ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್‌ ನಾಯಕ ಆರ್‌. ‍ಪ್ರಕಾಶ್‌ ಮಾತನಾಡಿ, ನಾವು ಬಿಬಿಎಂಪಿ ಬಿಡುವಾಗ ಕೊಡುಗೆ ರೂಪದಲ್ಲಿ ನೋಟಿಸ್‌ ನೀಡಲಾಗಿದೆ. ಈ ವರದಿಯನ್ನು ಹರಿದು ತಿಪ್ಪೆ ಗುಂಡಿಗೆ ಎಸೆಯಬೇಕು ಎಂದು ಕಿಡಿಕಾರಿದರು.

‘ಚುನಾವಣೆ ಎದುರಿಸಲು ಭಯಪಡುತ್ತಿರುವ ಕಾಂಗ್ರೆಸ್‌ನವರು ಶೋಕಾಸ್‌ ನೋಟಿಸ್‌ ನೀಡಿದ್ದಾರೆ ಹಾಗೂ ಬಿಬಿ
ಎಂಪಿ ವಿಭಜನೆ ಮಾಡಿದ್ದಾರೆ. ಉಸ್ತುವಾರಿ ಸಚಿವರು ಎಲ್ಲ ಸಭೆಗಳಲ್ಲೂ ಬಿಬಿಎಂಪಿ ವಿಭಜಿಸುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಒಂದೇ ದಿನದಲ್ಲಿ ಅವರ ನಿಲುವು ಬದಲಾದುದು ಏಕೆ’ ಎಂದು ಪ್ರಶ್ನಿಸಿದರು.

ನಾಮನಿರ್ದೇಶಿತ ಸದಸ್ಯರ ಧರಣಿ: ಬಿಬಿಎಂಪಿಯ ನಾಮಫಲಕದಲ್ಲಿ ತಮ್ಮ ಹೆಸರು ಹಾಕಿಲ್ಲ ಎಂದು ಆರೋಪಿಸಿ ನಾಮನಿರ್ದೇಶಿತ ಸದಸ್ಯರು ಧರಣಿ ನಡೆಸಿದರು.

ಕಳೆದ ವಾರ ಎಲ್ಲ 198 ಸದಸ್ಯರ ಹೆಸರುಗಳನ್ನು ನಾಮಫಲಕದಲ್ಲಿ ಹಾಕಲಾಗಿತ್ತು. ನಾಮನಿರ್ದೇಶಿತ ಸದಸ್ಯರ ಹೆಸರು ಹಾಕದ ಬಗ್ಗೆ ಬಿಬಿಎಂಪಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಒಂದೆರಡು ದಿನಗಳಲ್ಲಿ ನಾಮನಿರ್ದೇಶಿತ ಸದಸ್ಯರ ಹೆಸರನ್ನೂ ಹಾಕಲಾಗುವುದು’ ಎಂದು ಮೇಯರ್‌ ಭರವಸೆ ನೀಡಿದ್ದರು. ಮೇಯರ್‌ ಅವರು ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿ ಸದಸ್ಯರು ಧರಣಿ ನಡೆಸಿದರು.
ಮೇಯರ್‌ ಮನವೊಲಿಕೆಗೆ ಮೊದಲು ಬಗ್ಗದ ಅವರು ಬಳಿಕ ಮೇಯರ್‌ ಹಾಗೂ ಮಂಜುನಾಥ ರೆಡ್ಡಿ ಮನವಿ ಮಾಡಿದಾಗ ಧರಣಿ ಹಿಂಪಡೆದರು.

* ಬಿಬಿಎಂಪಿಯಲ್ಲಿ ದರೋಡೆ ಆಗಿರುವುದು ನಿಜ. ಅಕ್ರಮ ನಡೆದಿರುವುದು ಸತ್ಯ. ರಮೇಶ್ ಅವರೇ ಎಲ್ಲವನ್ನೂ ಒಪ್ಪಿಕೊಂಡಿದ್ದಾರೆ.
ಬಿ.ಎನ್‌. ಮಂಜುನಾಥ ರೆಡ್ಡಿ, ವಿರೋಧ ಪಕ್ಷ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT