ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಮಂತ್ರಿಯವರ ಖಾದಿ ಒಲವು

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕೈಮಗ್ಗದ ವಸ್ತ್ರದಲ್ಲಿ ಎರಡು ವಿಧ. ಮಗ್ಗಕ್ಕೆ ಬಳಸುವ ನೂಲು ಕೈಯಿಂದಲೇ ಸಿದ್ಧ­ವಾ­ದರೆ ಅದನ್ನು ಖಾದಿವಸ್ತ್ರ ಎನ್ನುತ್ತಾರೆ. ನೂಲು ಸ್ವಯಂಚಾಲಿತ ಯಂತ್ರದಿಂದ, ಅರ್ಥಾತ್ ಸ್ಪಿನ್ನಿಂಗ್ ಮಿಲ್ಲುಗಳಿಂದ ಬಂದರೆ ಅಂತಹ ವಸ್ತ್ರ­ವನ್ನು ಕೈಮಗ್ಗವಸ್ತ್ರ ಎನ್ನುತ್ತಾರೆ. ಸಹಜ­ವಾಗಿಯೇ ಕೈಮಗ್ಗದ ವಸ್ತ್ರಗಳಲ್ಲಿ ಖಾದಿವಸ್ತ್ರ ಶ್ರೇಷ್ಠವಾದದ್ದು.

ಕಳೆದ ಕೆಲವು ದಿನಗಳಿಂದ ಖಾದಿವಸ್ತ್ರವು ಮತ್ತೊಮ್ಮೆ ಪ್ರಾಧಾನ್ಯ ಪಡೆದಿದೆ. ದೇಶದ ಪ್ರಧಾನಿ­ಯವರು, ಕಾಂಗ್ರೆಸ್ಸಿಗರಲ್ಲದ ಪ್ರಧಾನಿ­ಯವರು, ಗಾಂಧೀಜಿಯವರ ಕಡುವಿರೋಧಿ­ಯಾಗಿದ್ದ ಆರ್ಎಸ್‌ಎಸ್‌ನಿಂದ ಬಂದ ಪ್ರಧಾನಿ­ಯ­ವರು, ದೇಶದ ಜನರಿಗೆ ‘ಗಾಂಧಿ ವಸ್ತ್ರ ತೊಡಿರಿ’ ಎಂದು ತಾಕೀತು ಮಾಡತೊಡಗಿದ್ದಾರೆ. ದೇಶದ ಪ್ರಧಾನಿಯೊಬ್ಬರು ‘ಖಾದಿ ತೊಡಿರಿ’ ಎಂದು ತಾಕೀತು ಮಾಡಿದರೆ, ಅವರು ಯಾವುದೇ ಪಕ್ಷಕ್ಕೆ ಸೇರಿರಲಿ, ನಾನದನ್ನು ಸ್ವಾಗತಿಸ­ಬಯಸು­ತ್ತೇನೆ. ಮಾತ್ರವಲ್ಲ, ತಮ್ಮ ಮಾತನ್ನು ‘ಕಾರ್ಯ­ರೂಪಕ್ಕೆ ತನ್ನಿ’ ಅಂತ ಪ್ರಧಾನಿಯವರನ್ನು ಆಗ್ರಹಿಸಲು ಬಯಸುತ್ತೇನೆ.

ಏಕೆಂದರೆ ವಸ್ತುಸ್ಥಿತಿ ಸರಳವಿಲ್ಲ. ದೇಶದ ಜನರೆಲ್ಲ ತೊಡುವುದಿರಲಿ, ದೇಶದ ಅರ್ಧಪ್ರತಿಶತ ಭಾರತೀಯರು ತೊಡಲು ಪ್ರತಿಜ್ಞೆ ಮಾಡಿದರೂ ಅವರಿಗೆ ಒದಗಿಸಲಿಕ್ಕೆ ಖಾದಿ ವಸ್ತ್ರ ನಮ್ಮಲ್ಲಿಲ್ಲ. ಖಾದಿಯಂತೆ ಕಾಣುವ ವಸ್ತ್ರವಿದೆ, ಖಾದಿ ಇಲ್ಲ. ದೇಶದ ಪ್ರಧಾನಿಯವರಿಗೆ ಪರಿಸ್ಥಿತಿಯ ಅರಿವಿ­ಲ್ಲವೇ? ಖಾದಿಬಟ್ಟೆಯ ಉತ್ಪಾದನೆಯ ಜವಾ­ಬ್ದಾರಿ ಹೊತ್ತ ಒಂದು ಸಮಗ್ರ ಇಲಾಖೆಯೇ ಅವರ ಅಧೀನದಲ್ಲಿದೆ.
ಖಾದಿ ಉಳಿಯಬೇಕೆಂದರೆ ಮೊದಲನೆ­ಯ­ದಾಗಿ, ಖಾದಿಯಂತೆ ಕಾಣುವ ಕಳ್ಳವಸ್ತ್ರದ ಉತ್ಪಾದನೆಯನ್ನು ಅವರು ಪ್ರತಿಬಂಧಿಸಬೇಕು. ಎರಡನೆಯದಾಗಿ, ಈ ದೇಶದ ಉದ್ದಗಲಕ್ಕೆ ಹರಡಿರುವ ಲಕ್ಷಾಂತರ ಗ್ರಾಮಗಳ ಕೋಟ್ಯಂತರ ಬಡಮಹಿಳೆಯರು (ಹಾಗೂ ಪುರುಷರು) ತಮ್ಮ ಬಿಡುವಿನ ವೇಳೆಯಲ್ಲಿ ಹತ್ತಿನೂಲು ನೂಲುವಂತೆ ಅವರು ಉತ್ತೇಜಿಸಬೇಕು. ಅರ್ಥಾತ್ ನೂಲುವ ರಾಷ್ಟ್ರೀಯ ಆಂದೋಲನವೊಂದಕ್ಕೆ ಚಾಲನೆ ನೀಡಬೇಕು. ಗ್ರಾಮೀಣಾಭಿವೃದ್ಧಿಯ ಅಂತಹ ವಾತಾ­ವರಣವಾಗಲೀ, ಅಥವಾ ವಾತಾವರಣ ನಿರ್ಮಾಣ ಮಾಡುವ ರಾಜಕೀಯ ಇಚ್ಛಾಶಕ್ತಿ­ಯಾಗಲೀ ನಮ್ಮಲ್ಲಿ ಕಾಣಿಸುತ್ತಿಲ್ಲ. ಹಾಗೆಂದೇ ಅನೇಕರಿಗೆ ಪ್ರಧಾನಮಂತ್ರಿಗಳ ಹೇಳಿಕೆಯು ಕೇವಲ ರಾಜಕೀಯ ದಿಂಡುರುಳಿಕೆಯಾಗಿ ಕಾಣಿಸುತ್ತಿರುವುದು.

ಏನಿದು ರಾಜಕೀಯ? ಗಾಂಧೀಜಿ ಹಾಗೂ ಖಾದಿ­ವಸ್ತ್ರ ಈವರೆಗೆ ಕಾಂಗ್ರೆಸ್ಸಿನ ಸ್ವತ್ತಾಗಿತ್ತು. ಕಾಂಗ್ರೆಸ್ ಮೂರ್ಖತನ ಮಾಡಿತು. ​

ಜವಾಹರ­ಲಾಲ್‌ ನೆಹರೂ ಯುಗದಲ್ಲಿ ಅರ್ಧಭಾಗ ಹಾಗೂ ಪಿ.ವಿ. ನರಸಿಂಹರಾಯರ ನಂತರದ ಯುಗ­ದಲ್ಲಿ ಉಳಿದರ್ಧಭಾಗ, ಗಾಂಧಿ ಲಾಂಛನ­ವನ್ನು ಕೈಚೆಲ್ಲಿ ಹಾಕಿತು. ಕಾಂಗ್ರೆಸ್ ಪ್ರಧಾನ­ಮಂತ್ರಿ ಅಥವಾ ಕಾಂಗ್ರೆಸ್ ಪಕ್ಷಾಧ್ಯಕ್ಷರಿಗೆ ಗಾಂಧಿ ಎಂಬ ಹೆಸರು ಅಂಟಿಕೊಂಡಿದ್ದರೆ ಸಾಕು ಗಾಂಧೀ­ಗಿರಿ ತಮ್ಮೊಡನೆ ಉಳಿದುಬಿಡುತ್ತದೆ ಎಂಬ ಹುಂಬ­ಧೈರ್ಯ ತಾಳಿತು ಕಾಂಗ್ರೆಸ್ ಪಕ್ಷ. ಹಾಗಾಗಲಿಲ್ಲ. ಈಗ, ಚಾಣಾಕ್ಷ ನರೇಂದ್ರ ಮೋದಿಯವರು ಕಾಂಗ್ರೆ­ಸ್ಸಿನಿಂದ ಗಾಂಧಿಲಾಂಛನವನ್ನು ಕಿತ್ತು­ಕೊಳ್ಳಲು ಹೊರಟಿದ್ದಾರೆ. ಮೋದಿಯವರು ಸಂಕೇತಕ್ಕೆ ಮಾತ್ರವೇ ಕೈ ಹಚ್ಚಿದ್ದಾರೆಯೇ ಅಥವಾ ಗ್ರಾಮೀಣಾಭಿವೃದ್ಧಿಯ ಮಹಾನ್‌ವ್ರತ ಕೈಗೊಂಡಿ­ದ್ದಾರೆಯೇ ಎಂಬ ಸಂಗತಿಯನ್ನು ಸಮಯವೇ ನಿರ್ಧರಿಸಬೇಕು. ನಾವು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ದಿಂಡುರುಳಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ನೂಲುವ ಹೆಂಗಸರ ದಾರುಣ ಪರಿಸ್ಥಿತಿಯತ್ತ ಗಮನ ಹರಿಸುವುದು ಒಳ್ಳೆಯದು.

ಯಾರಿವರು ನೂಲುವ ಹೆಂಗಸರು? ಎಲ್ಲಿ­ದ್ದಾರೆ ಇವರು? ಯಾರು ಕಂಡಿದ್ದಾರೆ ಇವರನ್ನು? ಕರ್ನಾಟಕದಲ್ಲಿ ಹತ್ತಿ ನೂಲುವಿಕೆ ಈಗಲೂ ಜೀವಂತವಿದೆಯೆ? ಇದೆ, ಆದರೆ, ‘ದಿ ಗ್ರೇಟ್ ಇಂಡಿ­ಯನ್ ಬಸ್ಟರ್’ ಎಂಬ ಹೆಸರಿನ ಅಳಿವಿ­ನಂಚಿಗೆ ಸರಿದ ಪ್ರಖ್ಯಾತ ಹಕ್ಕಿಯಂತೆ ಅದು ಬದು­ಕುಳಿದಿದೆ. ದಿ ಗ್ರೇಟ್ ಇಂಡಿಯನ್ ಬಸ್ಟರ್ ಹಕ್ಕಿಗೆ ಅಭಯಾರಣ್ಯವಾದರೂ ಸಿಕ್ಕಿದೆ, ನೂಲುವ ಹೆಂಗ­ಸರಿಗೆ ಅಭಯವೂ ಇಲ್ಲ ಅರಣ್ಯವೂ ಇಲ್ಲ. ಅವರಿ­ಗಿರುವುದೇನಿದ್ದರೂ ಅರಣ್ಯರೋದನ ಮಾತ್ರ.

ಹತ್ತಿನೂಲುವಿಕೆ ನಡೆದಿರುವ ಕರ್ನಾಟಕದ ಹಲಕೆಲವು ಕೇಂದ್ರಗಳಲ್ಲಿ, ಎರಡು ಕೇಂದ್ರಗಳನ್ನು ಇಲ್ಲಿ ಉದಾಹರಣೆಯಾಗಿ ಕೈಗೆತ್ತಿಕೊಳ್ಳಲು ಬಯ­­ಸು­ತ್ತೇನೆ. ಮೈಸೂರು ಜಿಲ್ಲೆಯ ಬದನ­ವಾಳು ಗ್ರಾಮದ ಖಾದಿ ಕೇಂದ್ರ ಹಾಗೂ ವಿಜಾ­ಪುರ (ಈಗ ವಿಜಯಪುರ) ಜಿಲ್ಲೆಯ ಕಳಕಾಪುರ ಗ್ರಾಮದ ಖಾದಿ ಕೇಂದ್ರಗಳನ್ನಷ್ಟೆ ಮುಂದಿಟ್ಟು­ಕೊಂಡು ಚರ್ಚಿಸಲು ಬಯಸುತ್ತೇನೆ. ಬದನವಾ­ಳಿನ ಖಾದಿ ಕೇಂದ್ರವನ್ನು ಸ್ಥಾಪಿಸಿದವರು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ತಗಡೂರು ರಾಮ­ಚಂದ್ರರಾಯರು. ಇದನ್ನವರು ಕಳೆದ ಶತ­ಮಾ­ನದ ಆರಂಭದಲ್ಲಿಯೇ ಮಾಡಿದರು. ೧೯೨೧­ರಲ್ಲಿ ಗಾಂಧೀಜಿ ಈ ಆಶ್ರಮಕ್ಕೆ ಭೇಟಿ ನೀಡಿ ಕೆಲ­ಕಾಲ ನಿಂತು ಕಾರ್ಯಕರ್ತರನ್ನು ಹುರಿ­ದುಂಬಿಸಿ ಹೋಗಿದ್ದರು.

ಹಿಂದೊಮ್ಮೆ ಬದನವಾಳಿನ ಖಾದಿವಸ್ತ್ರ ಹಳೆ­ಮೈಸೂರು ಪ್ರದೇಶದಲ್ಲಿ ಹೆಸರಾಂತ ವಸ್ತ್ರವಾ­ಗಿತ್ತು. ದಿವಂಗತ ಕಿ.ರಂ. ನಾಗರಾಜ್ ಅವರು ನನಗೊಮ್ಮೆ ಒಂದು ಸ್ವಾರಸ್ಯಕರ ಕತೆ ಹೇಳಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗ ‘ಎಂಡ್ಕುಡ್ಕ್ ರತ್ನ’ ಖ್ಯಾತಿಯ ಹಿರಿಯ ವಿದ್ವಾಂಸ ಜಿ.ಪಿ. ರಾಜರತ್ನಂ ಅವರ ಗುರುಗಳಂತೆ. ರಾಜರತ್ನಂ ಅವರು ದಿನವೂ ಕ್ಲಾಸಿಗೆ ತುಂಬ ಸುಂದರವಾದ ಬಟ್ಟೆ ತೊಟ್ಟು ಬರುತ್ತಿದ್ದರಂತೆ. ಧೀರಗಂಭೀರ ನಿಲು­ವಿನ ರಾಜರತ್ನಂ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದ ದಪ್ಪದಡಿಯಂತಹ ವಸ್ತ್ರ­ದಿಂದ ಮಾಡಿದ ಜುಬ್ಬಾ ಹಾಗೂ ಪಂಚೆಗಳ ಸೌಂದರ್ಯಕ್ಕೆ ಮಣಿದ ಕಿರಂ, ಒಮ್ಮೆ ಧೈರ್ಯ­ಮಾಡಿ ಗುರುಗಳನ್ನು ಕೇಳಿದ್ದರಂತೆ, ‘ಗುರುಗಳೇ ನಿಮ್ಮೀ ಬಟ್ಟೆ ಎಲ್ಲಿಯದು’ ಎಂದು. ರಾಜರತ್ನಂ ಅರೆಹಾಸ್ಯ ಬೆರೆತ ದನಿಯಲ್ಲಿ ಶಿಷ್ಯನನ್ನು ಗದರಿಸಿ, ‘ಏನಯ್ಯ! ಇಷ್ಟೂ ತಿಳಿಯದೆ ನಿನಗೆ. ಇದು ಬದನವಾಳಿನ ಖಾದಿ ಕಣಯ್ಯ!’ ಅಂದಿದ್ದರಂತೆ.

ಅಂತಹ ಪ್ರಖ್ಯಾತ ಖಾದಿವಸ್ತ್ರದ ನೇಯ್ಗೆಗೆ ಕಾರಣವಾದ ನೂಲುಸುತ್ತುವ ಹೆಂಗಸರು ಇಂದು ತೀವ್ರ ಸಂಕಷ್ಟದಲ್ಲಿದ್ದಾರೆ. ಹೆಚ್ಚಿನವರು
ನೂಲು­ವಿಕೆ ತೊರೆದಿದ್ದಾರೆ. ಕೆಲವರು ಉಳಿದಿ­-ದ್ದಾರೆ. ಮುದುಕಿಯರಾಗಿದ್ದಾರೆ, ಹಲವು ಏರಿಳಿತ­ಗಳನ್ನು ಕಂಡಿದ್ದಾರೆ. ಆದರೂ ಉಳಿದಿದ್ದಾರೆ. ಕೆಲವರ್ಷ­ಗಳ ಹಿಂದೆ ಬದನವಾಳಿನಲ್ಲಿ ನಡೆದ ದಲಿತರ ಭೀಕರ ಹತ್ಯಾಕಾಂಡ ಕಂಡಿದ್ದಾರೆ ಅವರು. ಹತ್ಯಾ­ಕಾಂಡದ ನಂತರ ಜೈಲಿಗೆ ತೆರಳಿದ ತಪ್ಪಿತಸ್ಥರ ಮನೆಯ ಹೆಂಗಸರ ದುಃಖವನ್ನೂ ಕಂಡಿದ್ದಾರೆ. ಖಾದಿ ಕೇಂದ್ರದಲ್ಲಿ ದಲಿತರೂ ಇದ್ದಾರೆ, ಮೇಲ್ಜಾ­ತಿಗಳವರೂ ಇದ್ದಾರೆ. ಎಲ್ಲರೂ ಬಡವರೇ. ನೂಲುವುದರಿಂದ ಅವರಿಗೆ ಬರುವ ದೈನಂದಿನ ಸರಾಸರಿ ದುಡಿಮೆ ಐವತ್ತರಿಂದ ಅರವತ್ತು ರೂಪಾಯಿ ಇದ್ದದ್ದು, ಇತ್ತೀಚೆಗೆ ಜಾರಿಯಾದ ಪರಿಷ್ಕೃತ ದರದ ಪರಿಣಾಮವಾಗಿ, ನೂರು ನೂರಾ ಇಪ್ಪತ್ತಕ್ಕೆ ಏರಿದೆ. ಅವರು ಹೇಳುವುದಿಷ್ಟೆ, ‘ಸ್ವಾಮಿ! ನಮಗೆ ವಯಸ್ಸಾ­ಯಿತು. ಮತ್ತ್ಯಾವುದೇ ಹೊಸ ವೃತ್ತಿ ಕಲಿಯ­ಲಾರೆವು ನಾವು. ಸರಿಯಾದ ಸಮಯಕ್ಕೆ ಹಂಜಿ ಸಿಕ್ಕುವಂತೆ ಏರ್ಪಾಡು ಮಾಡಿ ಸಾಕು’ ಎಂದು. ಪ್ರಧಾನಮಂತ್ರಿಗಳು ಮಾಡ­ಬೇಕಾದ ಕೆಲಸವಿದು. ಸರಿಯಾದ ಸಮಯಕ್ಕೆ ಹಂಜಿಯ ವ್ಯವಸ್ಥೆ ಮಾಡಿ, ಸೂಕ್ತ ದರ ನಿಗದಿ ಮಾಡಿದರೆ, ದೇಶದ ಬಡವರೆಲ್ಲ ನೂಲು ಸುತ್ತುವ ಕಾಯಕಕ್ಕೆ ಮರಳಿ­ಯಾರು. ನೂಲು ಸುತ್ತುವ ಕಾಯಕ ಮನೆಯ ಕಾಯಕ, ಕೃಷಿಗೆ ಪೂರಕವಾಗ­ಬಲ್ಲ ಉಪವೃತ್ತಿ, ಹೆಂಗಸರಿಗೆ ಹೇಳಿ ಮಾಡಿಸಿದ ಕಾಯಕ.

ಬದನವಾಳು ಖಾದಿ ಕೇಂದ್ರ ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ರೈಲುಮಾರ್ಗ­ದಲ್ಲಿ ನರಸಾಂಬುಧಿ ನಿಲ್ದಾಣದ ಬದಿಯಲ್ಲಿದೆ. ಪಾಳು ಬಿದ್ದಿದೆ. ಆದರೆ ಸುಂದರವಾಗಿದೆ, ಪವಿತ್ರ­ವಾಗಿದೆ. ನೀವಲ್ಲಿಗೆ ಹೋದರೆ, ಕಳ್ಳ ಸನ್ಯಾಸಿಗಳ ಭವ್ಯಆಶ್ರಮಗಳಲ್ಲಿ ಸಿಕ್ಕಲಾರದ ಮನಶಾಂತಿ ಅಲ್ಲಿ ನಿಮಗೆ ಸಿಕ್ಕೀತು. ಯಾರಿಗಾದರೂ ನಮಸ್ಕರಿಸ­ಬೇಕು, ಅಹಂಕಾರ ಕಳೆದುಕೊಳ್ಳಬೇಕು ಎಂದು ನಿಮ­­ಗನ್ನಿಸಿದರೆ, ನೂಲು ಸುತ್ತುವ ಈ ಬಡ­ಹೆಂಗ­ಸರಿಗೆ ನಮಸ್ಕರಿಸಿ ಬನ್ನಿ. ನಿಮಗೆ ಒಳ್ಳೆಯ­ದಾ­ದೀತು.

ಕಂಕಣಕೊಪ್ಪ ಬಾಗಲಕೋಟೆ ಜಿಲ್ಲೆಯಲ್ಲಿ, ಬಾಗಲಕೋಟೆ ಊರಿನಿಂದ ಕೇವಲ ಹತ್ತಿಪ್ಪತ್ತು ಕಿಲೋಮೀಟರುಗಳ ಅಂತರದಲ್ಲಿದೆ. ಇಲ್ಲಿಯೂ ಬಡಮಹಿಳೆಯರು ಖಾದಿ ನೂಲು ಸುತ್ತುತ್ತಾರೆ. ವಿಜಯಪುರ ಜಿಲ್ಲೆಯ ಖಾದಿ ಗ್ರಾಮೋದ್ಯೋಗ ಸಂಘ ಈ ಕೇಂದ್ರವನ್ನು ನಡೆಸುತ್ತಿದೆ. ಕಂಕಣ­ಕೊಪ್ಪದ ಹೆಂಗಸರ ಪರಿಸ್ಥಿತಿ ಮತ್ತಷ್ಟು ಶೋಚ­ನೀಯ­ವಾಗಿದೆ. ಇಲ್ಲಿ ಆಶ್ರಮವಿಲ್ಲ, ಸ್ವಚ್ಛ­ ವಾತಾ­ವರಣವಿಲ್ಲ. ಕಂಕಣಕೊಪ್ಪ ಒಂದು ಕುಗ್ರಾಮ. ಈ ಮಹಿಳೆಯರು ಸುತ್ತುವುದು ಕೊಂಚ ದಪ್ಪನೆಯ ನೂಲು. ಈ ನೂಲಿನಿಂದ ಜಮಖಾನೆ ನೇಯಲಾ­ಗುತ್ತದೆ. ಕಂಕಣಕೊಪ್ಪ ಹಾಗೂ ಬದನವಾಳು, ಈ ದೇಶದ ಗ್ರಾಮೀಣ ಪರಿಸ್ಥಿತಿಯ ಪ್ರಾತಿನಿಧಿಕ ಉದಾಹರಣೆಗಳು ಎಂದೇ ನಾನು ತಿಳಿಯುತ್ತೇನೆ. ಗ್ರಾಮೀಣ ಪ್ರದೇಶದ ಕೋಟ್ಯಂತರ ದುಡಿಯುವ ಕೈಗಳು, ಕೃಷಿಗೆ ಪೂರಕವಾಗಬಲ್ಲ ಗೃಹ­ಕೈಗಾರಿಕೆ­ಯೊಂದಕ್ಕಾಗಿ ಹಾತೊರೆದು ಕುಳಿತಿವೆ. ವರ್ಷ­ದಲ್ಲಿ ಕೇವಲ ಆರು ತಿಂಗಳ ಆದಾಯ ತರುವ ಕೃಷಿಯು ಬಡವರ ಹಸಿವನ್ನು ಸಂಪೂರ್ಣವಾಗಿ ಇಂಗಿಸಲಾರದು. ಹಾಗಂತ ಅವರು ಕಾರ್ಖಾನೆ­ಗಳಲ್ಲಿ ಕೆಲಸಕ್ಕೆ ಹೋಗಲಾರರು. ಆದರೆ ನಾವು ಬಲವಂತದ ಕೈಗಾರಿಕೀಕರಣ ನಡೆಸಿದ್ದೇವೆ. ಬಡವರನ್ನು ಗುಳೆ ಎಬ್ಬಿಸ ಹೊರಟಿದ್ದೇವೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿವಿಧ ಸರ್ಕಾರಗಳು ಗ್ರಾಮೀಣಾಭಿವೃದ್ಧಿಯ ಕೆಲಸವನ್ನು ಮಾಡಿಯೇ ಇಲ್ಲ ಎಂದು ಹೇಳಿದರೆ ಅಪ್ರಾಮಾ­ಣಿಕ ಹೇಳಿಕೆಯಾದೀತು. ಎಲ್ಲ ಸರ್ಕಾರಗಳೂ ಗ್ರಾಮೀಣಾಭಿವೃದ್ಧಿಗೆಂದು ಸಾವಿರಾರು ಕೋಟಿ ರೂಪಾಯಿಗಳನ್ನು ಪ್ರತಿವರ್ಷ ಸುರಿಯುತ್ತ ಬಂದಿವೆ. ಸಾಕಷ್ಟು ಶ್ರಮವನ್ನೂ ಹಾಕಿವೆ. ಆದರೆ ಸೋತಿವೆ. ಕೊಂಚ ಹೆಚ್ಚು, ಕೊಂಚ ಕಡಿಮೆ, ಆದರೆ ಸೋತಿವೆ. ಗ್ರಾಮೀಣಾಭಿವೃದ್ಧಿ ಕಾರ್ಯ­ಕ್ರಮದ ಸೋಲಿಗೆ ಏನು ಕಾರಣವಿದ್ದೀತು?

ಗ್ರಾಮೀಣಾಭಿವೃದ್ಧಿಯಲ್ಲಿ ಎರಡು ಪ್ರಮುಖ ಮಾದರಿಗಳಿವೆ. ಅವುಗಳನ್ನು ನಾನು, ಗಾಂಧಿ ಮಾದರಿ, ಮಾವೊತ್ಸೆತುಂಗನ ಮಾದರಿ ಎಂದು ಕರೆಯಲಿಚ್ಛಿಸುತ್ತೇನೆ. ಇತರೆ ಮಾದರಿಗಳೂ ಇವೆ. ಜಪಾನಿನ ಸಹಜ ಕೃಷಿಯ ಹರಿಕಾರ ಫುಕೊ­ವೋಕಾನ ಮಾದರಿ, ಕ್ಯೂಬಾ ದೇಶದ ಇತ್ತೀಚಿನ ಪ್ರಯೋಗಗಳು... ಇತ್ಯಾದಿ. ಆದರೆ ಮೇಲೆ ಹೇಳಿ­ದವು ಪ್ರಮುಖ ಮಾದರಿಗಳು. ಗಾಂಧಿ­ಮಾದರಿ ಪಾರಂಪರಿಕ ಗ್ರಾಮೀಣ ಉದ್ದಿಮೆಗಳನ್ನು ಒಪ್ಪಿ­ಕೊಂಡ ಮಾದರಿ. ಪಾರಂಪರಿಕ ಉದ್ದಿಮೆ ಹಾಗೂ ವೈಚಾರಿಕತೆಯನ್ನು ಬೆರೆಸಿ ಬದಲಾವಣೆ ತರಲು ಹೊರಟಿತು ಗಾಂಧಿ ಮಾದರಿ. ಮಾವೊತ್ಸೆ­ತುಂಗನ ಮಾದರಿ ಪಾರಂಪರಿಕ ಉದ್ದಿಮೆಗಳನ್ನು ತಿರಸ್ಕರಿಸಿತು. ಕುಶಲಕಲೆಗಳು, ಕೈಮಗ್ಗ, ಪಾರಂಪ­ರಿಕ ಕೃಷಿ, ಪಾರಂಪರಿಕ ಹೈನುಗಾರಿಕೆ... ಇವು­ಗಳನ್ನು ತಿರಸ್ಕರಿಸಿತು. ಮಾವೊ ಮಾದರಿಯು ವಿಚಾರಕ್ರಾಂತಿ ಹಾಗೂ ಕೈಗಾರಿಕಾಕ್ರಾಂತಿ ಎರ­ಡನ್ನೂ ಒಟ್ಟಾಗಿ ಗ್ರಾಮೀಣ ಪ್ರದೇಶದೊಳಗೆ ತರುವ ಪ್ರಯತ್ನ ಮಾಡಿತು.

ಮಾವೊತ್ಸೆತುಂಗನ ಮಹತ್ವವಿರುವುದು ಕೈಗಾ­ರಿಕೀಕರಣವೆಂಬ ಪರಿಕಲ್ಪನೆಯನ್ನು ಗ್ರಾಮೀಣ ಪರಿಸರಕ್ಕೆ ಬಗ್ಗಿಸಿದ ರೀತಿಯಲ್ಲಿ. ಆತ ಬೃಹತ್‌ ಕೈಗಾರಿಕೆಗಳನ್ನು ಸಣ್ಣಸಣ್ಣ ಘಟಕಗಳನ್ನಾಗಿ ಒಡೆದು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ದ, ಕೊಂಚ ಬಲವಂತದಿಂದಲೇ ಕೊಂಡೊಯ್ದ. ಗ್ರಾಮೀಣ ಬಡವರ ಕೌಶಲವನ್ನು ರೂಪಾಂತರಿಸಿ, ಮಡಕೆ ಮಾಡುವ ಕೈಗಳಿಗೆ ಸಿಎಫ್‌ಎಲ್ ಬಲ್ಬು­ಗಳನ್ನು ಜೋಡಿಸುವ ತಂತ್ರ ಕಲಿಸಿದ,  ಮಗ್ಗ ನೇಯುವ ಕೈಗಳಿಗೆ ವಿದ್ಯುತ್‌ ಮಗ್ಗ ನಡೆಸುವ ಕೆಲಸ ಕಲಿಸಿದ. ಹೀಗೆ ಮಾಡಿ ಚೀನಾ ದೇಶವು ಅಮೆರಿಕ, ಯೂರೋಪುಗಳು ಸಾಧಿಸಲಾಗದ ಆರ್ಥಿಕ ಪ್ರಗತಿಯನ್ನು ಸಾಧಿಸಿ ತೋರಿಸಿತು. ಕೇವಲ ಆರ್ಥಿಕ ಮಾನದಂಡದಿಂದ ನೋಡುವು­ದಾ­ದರೆ ಮಾವೊತ್ಸೆತುಂಗನ ಮಾದರಿ ಯಶಸ್ವಿ­ಮಾದರಿ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಕೇವಲ ಆರ್ಥಿಕ ಮಾನದಂಡ ಸಮರ್ಥ ಮಾನ­ದಂಡವಲ್ಲ. ಮಾವೊತ್ಸೆತುಂಗನ ಮಾದರಿ ಅಂತಿ­ಮವಾಗಿ ಮನುಕುಲಕ್ಕೆ ದುಬಾರಿಯಾಗಬಲ್ಲ ಮಾದರಿ.

ನನಗೆ ಮಾವೊತ್ಸೆತುಂಗನ ಬಗ್ಗೆ ಗೌರವವಿದೆ. ಆದರೆ ಆತನ ಮಾದರಿಯನ್ನು ನಾನು ಒಪ್ಪಲಾರೆ. ಮನುಕುಲಕ್ಕೆ ಮಿಕ್ಕ ಜೀವಗಳಿಗೆ, ಸಸ್ಯಪ್ರಭೇದಗಳಿಗೆ ದುಬಾರಿಯಾಗಬಲ್ಲ ಮಾದರಿ ಚೀನಾ ಮಾದರಿ. ಮನುಷ್ಯ ಪರಸ್ಪರಾವಲಂಬಿ. ಆತನ ನೆಮ್ಮದಿಯು ಪರಿಸರದ ನೆಮ್ಮದಿಯೊಟ್ಟಿಗೆ ಬೆರೆತುಕೊಂಡಿದೆ. ಮನುಷ್ಯ ಸಹಕರಿಸಬೇಕೇ ಹೊರತು ಸಂಘರ್ಷ­ಕ್ಕಿಳಿಯಬಾರದು.

ನಾವು ಭಾರತೀಯರು, ಇತ್ತ ಗಾಂಧಿ­ಮಾದ­ರಿ­ಯನ್ನೂ ಜಾರಿಗೆ ತರಲಿಲ್ಲ, ಅತ್ತ ಮಾವೊತ್ಸೆ­ತುಂಗನ ಮಾದರಿಯನ್ನೂ ಜಾರಿಗೆ ತರಲಿಲ್ಲ. ಎರಡರ ನಡುವೆ ಬಿದ್ದು ಒದ್ದಾಡುತ್ತಿದ್ದೇವೆ ನಾವು. ನಮ್ಮ ಗ್ರಾಮಗಳು ಅರೆಬರೆ ಕೈಗಾರಿಕೀ­ಕರಣ, ಅರೆಬರೆ ಶ್ರೀಮಂತಿಕೆ, ಅರೆಬರೆ ಬಡತನ, ರೋಗರುಜಿನೆ, ಜಾತಿಪದ್ಧತಿ, ದೂಳು ದುಮ್ಮಾನ­ಗಳಿಂದ ತುಂಬಿ ನರಳುತ್ತಿವೆ. ವಿಚಾರಕ್ರಾಂತಿ ನಮ್ಮ ಗ್ರಾಮಗಳನ್ನು ತಲುಪಲೇ ಇಲ್ಲ. ‘ನಿರಂಕುಶ­ಮತಿಗಳಾಗಿ’ ಎಂದು ಭಾರತೀಯರಿಗೆ ಕರೆ ನೀಡಿದ ಕುವೆಂಪು, ಸಾವಿನಲ್ಲಿಯೂ ಸಹ ನೋವಿನಿಂದ ಮುಲುಕಾಡುತ್ತಿರಬಹುದೇ ಎಂದು ನನಗೆ ಅನು­ಮಾನವಿದೆ. ನಾವು ಜಾತಿವಾದಿಗಳಾದೆವು, ಲಾಭ­ಬಡುಕರಾದೆವು, ಕ್ರೂರಿಗಳಾದೆವು, ನಿರಂಕುಶ­ಮತಿಗಳಾಗಲಿಲ್ಲ.

ಪ್ರಧಾನಿ ಮೋದಿಯವರು ಗ್ರಾಮೀಣ ಉದ್ಯಮ­ಶೀಲತೆಯನ್ನು ಪ್ರೇರೇಪಿಸಿಯಾರೆ? ಗ್ರಾಮೀಣ ಬಡವರನ್ನು ಭಿಕ್ಷುಕರನ್ನಾಗಿಸುವ ಬದಲು ಧೀರಗಂಭೀರ ನಾಗರಿಕರನ್ನಾಗಿಸಬಲ್ಲರೆ ಅವರು? ಸ್ವದೇಶಿ ಎಂದರೆ ಕೇವಲ ಹಿಂದುತ್ವವಲ್ಲ. ಖಾದಿಯೆಂಬುದು ಕೇವಲ ಉಡುಗೆಯಲ್ಲ. ನೂಲುಸುತ್ತುವ ಮಹಿಳೆಯರನ್ನು ರಾಷ್ಟ್ರೀಯ ಸ್ತರ­ದಲ್ಲಿ ಜಾಗೃತಗೊಳಿಸಿಯಾರೆ ಅವರು? ದೇಶ­ವೆಂಬುದೇ ಒಂದು ಅರಿವೆಯಿದ್ದಂತೆ. ದೇಶವೆಂಬ ಅರಿವೆಯಲ್ಲಿ ಲಕ್ಷಾಂತರ ನೂಲುಗಳು ಹಾಸು-­ಹೊಕ್ಕಾಗಿ ಹೆಣೆದುಕೊಂಡಿರುತ್ತವೆ. ನೂಲು ತುಂಡಾ­ಗಬಾರದು, ದ್ವೇಷಕ್ಕೆ ಅವಕಾಶ­ವಾಗ­ಬಾರದು. ಪ್ರೀತಿ ಹಾಗೂ ತಾಳ್ಮೆಯಿಂದ ದೇಶ ಕಟ್ಟಬೇಕು. ಹೌದು! ದೇಶ ಕಟ್ಟುವುದು ನೇಯ್ಗೆಯಷ್ಟೇ ಸೂಕ್ಷ್ಮ ಕೆಲಸ. ಪ್ರಧಾನಮಂತ್ರಿಗಳ ಮಾತನ್ನು ನಂಬಲು ಬಯಸುತ್ತೇನೆ ನಾನು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT