ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮದೆಯರ ಯಕ್ಷ ಹೆಜ್ಜೆ

Last Updated 24 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ತಂದೆಯ ಯಕ್ಷಗಾನ ನೋಡಿ ಪುತ್ರಿಯರೂ ಯಕ್ಷಗಾನ ಕಲಾವಿದರಾದ ಯಶಸ್ವಿಗಾಥೆ ಇದು.ಏಕವ್ಯಕ್ತಿ ಯಕ್ಷಗಾನದಿಂದ ಪ್ರಸಿದ್ಧರಾಗಿರುವ ಮಂಟಪ ಪ್ರಭಾಕರ ಉಪಾಧ್ಯಾಯ ನಿಮಗೆ ಗೊತ್ತು. ಅವರ ಇಬ್ಬರು ಪುತ್ರಿಯರೂ ಯಕ್ಷಗಾನ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.
 
ದಂತ ವೈದ್ಯೆಯಾಗಲು ಎಂಡಿಎಸ್ ಓದುತ್ತಿರುವ ಹಿರಿಯ ಪುತ್ರಿ ಮಾಧುರಿ ಹಾಗೂ ಎಂ.ಟೆಕ್ ಓದಿ ಬೆಂಗಳೂರಿನಲ್ಲಿ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಪ್ರಮದಾ ಒಟ್ಟಿಗೇ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಜೊತೆಗೆ ಪ್ರಭಾಕರ ಅವರ ಯಕ್ಷಗಾನ ಇರುವ ಕಡೆಯಲ್ಲೂ ಪ್ರದರ್ಶನ ಕೊಡುತ್ತಾರೆ.

ಅವರ ಯಕ್ಷಗಾನ ಡಿ.ವಿ.ಡಿಯೂ ಆಗಿದೆ. ಉಡುಪಿ ಯಕ್ಷಗಾನ ಶಿಕ್ಷಣ ಟ್ರಸ್ಟ್ ಹೊರತಂದಿರುವ ಡಿವಿಡಿಯಲ್ಲಿ ಚಪ್ಪರದಮನೆ ಶ್ರೀಧರ ಹೆಗಡೆ ಅವರ `ಮಂಥರೆ~ ಪ್ರಸಂಗದೊಟ್ಟಿಗೆ ಪೂರ್ವರಂಗದಲ್ಲಿ ಮಾಧುರಿ ಹಾಗೂ ಪ್ರಮದಾ ಅಭಿನಯಿಸಿದ ಚಿತ್ರಾಂಗದ ಪ್ರಸಂಗವಿದೆ. ಅರ್ಜುನನಾಗಿ ಮಾಧುರಿ, ಚಿತ್ರಾಂಗದೆಯಾಗಿ ಪ್ರಮದಾ ಗಮನ ಸೆಳೆಯುತ್ತಾರೆ.

`ಎಸ್‌ಎಸ್‌ಎಲ್‌ಸಿ ಓದುವಾಗ ಅಪ್ಪ ಹೇಳುತ್ತಿದ್ದ; ಓದುವುದೇ ಮುಖ್ಯವಾದರೆ ಬೇಗ ಬೋರಾಗುತ್ತದೆ. ಓದಿನೊಂದಿಗೆ ಏನಾದರೂ ಹವ್ಯಾಸ ಬೆಳೆಸಿಕೊಳ್ಳೆಂದು. ಹೀಗಾಗಿ ಐದಾರು ವರ್ಷ ಕರ್ನಾಟಕಿ ಸಂಗೀತ ಕಲಿತೆ. ಆಮೇಲೆ ಮೊದಲಿನಿಂದಲೂ ಆಸಕ್ತಿಯಿದ್ದ ನೃತ್ಯ ಕಲಿಕೆಯನ್ನೇ ಮುಂದುವರಿಸಿದೆ. ಹಾಗಂತ ಅಪ್ಪ ಯಕ್ಷಗಾನ ಕುರಿತು ಏನೂ ಹೇಳಿಕೊಟ್ಟಿಲ್ಲ. ಅವರ ಪ್ರದರ್ಶನ ನೋಡಿ ಕಲಿತೆವು.

ಕೃಷ್ಣಮೂರ್ತಿ ತುಂಗಾ ಎರಡು ವರ್ಷ ಯಕ್ಷಗಾನ ಕಲಿಸಿದರು~ ಎನ್ನುವ ಮಾಧುರಿಗೆ ಯಕ್ಷಗಾನ ಪ್ರದರ್ಶನದಿಂದ ಖುಷಿಯಾಗಿದೆ. ಅದಕ್ಕಿಂತ `ಓದುವ ಒತ್ತಡ ಹಾಗೂ ಕೆಲಸದ ಒತ್ತಡ ನಿಭಾಯಿಸಲು ಸುಲಭವಾಗಿದೆ. ಅಪ್ಪ ದಾರಿ ತೋರಿಸಿದ್ದಾರೆ. ನಾವು ಮುನ್ನಡೆಯಬೇಕಷ್ಟೇ~ ಎನ್ನುವ ಮಾಧುರಿ ಮಾತನ್ನು ಬೆಂಬಲಿಸುವ ಪ್ರಮದಾ, ಕಥಕ್ ನೃತ್ಯಗಾರ್ತಿ ಬೆಂಗಳೂರಿನ ನಿರುಪಮಾ ರಾಜೇಂದ್ರ ಅವರ ಬಳಿ ಕಥಕ್ ಕಲಿಯುತ್ತಿದ್ದಾರೆ.
 
ಜೊತೆಗೆ ಆರು ವರ್ಷಗಳಿಂದ ನಿರುಪಮಾ ಅವರ ಬ್ಯಾಲೆಗಳಲ್ಲಿ ನರ್ತಿಸುತ್ತಿದ್ದಾರೆ. `ಕಥಕ್ ಕಲಿತಿದ್ದರಿಂದ ಯಕ್ಷಗಾನ ಸುಲಭವಾಗಿದೆ. ನಿರುಪಮಾ ಕಲಿಸಿದ ಕೋರಿಯೋಗ್ರಫಿ  ಅನುಕೂಲವಾಗಿದೆ. ನೃತ್ಯ ಕಲಿತ ಪರಿಣಾಮ ಯಕ್ಷಗಾನದಲ್ಲಿ ಆಂಗಿಕ ಅಭಿನಯವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳಲು ಸಾಧ್ಯವಾಗಿದೆ~ ಎಂದು ಖುಷಿಯಾಗಿ ಹೇಳುತ್ತಾರೆ.

ಪ್ರಮದಾಗೆ ಯಕ್ಷಗಾನವೊಂದು ಪ್ಯಾಶನ್. ಆಶು ಸಂಭಾಷಣೆ ಹಾಗೂ ಆಶು ಅಭಿನಯವೇ ಪ್ರಧಾನವಾದ ಯಕ್ಷಗಾನದಲ್ಲಿ ಪ್ರತಿಭಾ ಪ್ರದರ್ಶನವೇ ಮುಖ್ಯ. ಸದ್ಯಕ್ಕೆ ಅವರು ಯಕ್ಷಗಾನ ಪೂರ್ವರಂಗದ ಯಕ್ಷ ದರ್ಪಣದಲ್ಲಿ ಸ್ತ್ರೀವೇಷ, ಚಂದಭಾಮಾ, ರಂಗನ್ಯಾತಕೋ ಬಾರನೇ, ಗೋಪಿಕಾ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಇದರೊಂದಿಗೆ ರುಕ್ಮಿಣಿ ಹಾಗೂ ನಳ-ದಮಯಂತಿ ಪ್ರಸಂಗಗಳ ತಾಲೀಮಿನಲ್ಲಿದ್ದಾರೆ.

ವಿದ್ಯಾರ್ಥಿನಿಯರಿರುವಾಗ ಯಕ್ಷಗಾನದ ಹೆಜ್ಜೆ ಹಾಕುವವರು ಹೆಚ್ಚು. ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವವರು ಕಡಿಮೆ. ಮಾಧುರಿ ಹಾಗೂ ಪ್ರಮದಾ ಇದಕ್ಕೆ ವ್ಯತಿರಿಕ್ತ.                              

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT