ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಗೆಲ್ಲಲು ಸಜ್ಜಾಗಿದೆ ಬುಲ್ಸ್‌

ಪ್ರೊ ಕಬಡ್ಡಿ ಟೂರ್ನಿಯ ಎರಡನೇ ಆವೃತ್ತಿ
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ನ ಪ್ರಸಕ್ತ ಎರಡನೇ ಋತುವಿನ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ ಪ್ರಬಲ ತಂಡವಾಗಿ ಸಜ್ಜುಗೊಂಡಿದೆ ಎಂದು ಈ ಫ್ರಾಂಚೈಸ್‌ನ ಮಾಲೀಕ ಉದಯ ಸಿನಾ ವಾಲಾ ಹೇಳಿದ್ದಾರೆ. ಗುರುವಾರ ತಂಡದ ಆಟಗಾರರ ಸಮವಸ್ತ್ರ ಅನಾವರಣದ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

‘ಈ ಸಲ ನಮ್ಮ ತಂಡದಲ್ಲಿ 23 ಆಟಗಾರರಿದ್ದು, ಇವರಲ್ಲಿ ಮೂವರು ವಿದೇಶಿಯರು. ಈಗಾಗಲೇ ಮೂರು ತರಬೇತಿ ಶಿಬಿರಗಳಲ್ಲಿ ಆಟಗಾರರು ಸಾಕಷ್ಟು ಅಭ್ಯಾಸ ನಡೆಸಿದ್ದಾರೆ’ ಎಂದೂ   ಅವರು ಹೇಳಿದರು.

‘ಬೆಂಗಳೂರಿನಲ್ಲಿ ನಮ್ಮ ತಂಡವನ್ನು ಕಬಡ್ಡಿ ಶಕ್ತಿಯಾಗಿ ರೂಪಿಸುತ್ತಿದ್ದೇವೆ, ನಿಜ. ಆದರೆ ಈ ಪ್ರದೇಶದಲ್ಲಿ ನೂರಾರು ಎಳೆಯರಿಗೆ ಉತ್ಕೃಷ್ಟ ಮಟ್ಟದ ತರಬೇತಿ ನೀಡುವ ಕಾರ್ಯಕ್ರಮವನ್ನೂ ನಾವು ಹಮ್ಮಿಕೊಂಡಿದ್ದೇವೆ. ಇಲ್ಲಿನ  ರಮೇಶ್‌ ಕಬಡ್ಡಿ ಅಕಾಡೆಮಿಯು ಶಾಲಾ ಕಾಲೇಜು ಗಳಲ್ಲಿರುವ ಪ್ರತಿಭಾವಂತರನ್ನು ಆಯ್ಕೆ ಮಾಡಿ, ಅಕಾಡೆಮಿಯ ಅಡಿಯಲ್ಲಿಯೇ ತರಬೇತಿ ಪ್ರಕ್ರಿಯೆ ನಡೆಸುತ್ತದೆ.

ಇದಕ್ಕೆ ನಮ್ಮ ಫ್ರಾಂಚೈಸ್‌ನ ಪ್ರಾಯೋಜಕತ್ವ ಇದೆ.  ಮುಂದೊಂದು ದಿನ ಕರ್ನಾಟಕವು ದೇಶದ ಪ್ರಬಲ ಕಬಡ್ಡಿ ಶಕ್ತಿಯಾಗಿ ಬೆಳೆಯಬೇಕೆಂಬುದೇ ಬೆಂಗಳೂರು ಬುಲ್ಸ್‌ ಆಶಯ’ ಎಂದೂ ಅವರು ನುಡಿದರು. ‘ಆಟಗಾರರ ಹರಾಜು ಪ್ರಕ್ರಿಯೆ ಕೇವಲ 45 ದಿನಗಳ ಹಿಂದಷ್ಟೇ ಮುಗಿ ದಿರುವುದರಿಂದ, ವಿದೇಶಿ ಆಟಗಾರ ರನ್ನು ಇಲ್ಲಿಗೆ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವೀಸಾ ಪಡೆಯುವ ಸಮಸ್ಯೆ ಕಾಡತೊಡಗಿದೆ. ವಿದೇಶಾಂಗ ಸಚಿವಾಲಯವು ನಮ್ಮ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸಕಾರಾತ್ಮಕವಾಗಿ ಸ್ಪಂದಿಸಬಹುದೆಂಬ ನಿರೀಕ್ಷೆಯಲ್ಲಿದ್ದೇನೆ’ ಎಂದೂ ಅವರು ಹೇಳಿದರು.

‘ಬೆಂಗಳೂರು ಬುಲ್ಸ್‌ನ ಫ್ರಾಂಚೈಸ್‌ ಹೊಂದಿರುವ ಕಾಸ್ಮಿಕ್‌ ಗ್ಲೋಬಲ್‌ ಮೀಡಿಯಾ ಸಂಸ್ಥೆಯು ಈ ದೇಶದಲ್ಲಿ ಕಬಡ್ಡಿಯಲ್ಲಿ ವೃತ್ತಿಪರತೆಗೆ ಹೆಚ್ಚು ಉತ್ತೇಜನ ನೀಡುವ ಮಹದಾಸೆ ಹೊಂದಿದೆ’ ಎಂದೂ ಉದಯ ಸಿನಾ ಹೇಳಿದರು. ಸ್ಟಾರ್‌ ಸ್ಪೋರ್ಟ್ಸ್‌ನ ಪ್ರೊ ಕಬಡ್ಡಿ ಲೀಗ್‌ ಜುಲೈ 18ರಿಂದ ಆರಂಭವಾಗ ಲಿದೆ. ಬೆಂಗಳೂರು, ಮುಂಬೈ, ಕೋಲ್ಕತ್ತ, ಜೈಪುರ, ಹೈದರಾಬಾದ್‌, ಪಟ್ನಾ, ಪುಣೆ , ದೆಹಲಿ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಘಟಾನುಘಟಿಗಳ ದಂಡು...
ಬೆಂಗಳೂರು: ಬೆಂಗಳೂರು ಬುಲ್ಸ್‌ ತಂಡದಲ್ಲಿ ದೇಶದ ಪ್ರಬಲ ಆಟಗಾರರು ಸ್ಥಾನ ಪಡೆದಿದ್ದಾರೆ. ಅಜಯ್‌ ಠಾಕೂರ್‌, ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ 2014ರಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ಕಬಡ್ಡಿ ತಂಡದಲ್ಲಿದ್ದರು. 14 ವರ್ಷಗಳಿಂದ ರಾಷ್ಟ್ರೀಯ ಕೂಟಗಳಲ್ಲಿ ಆಡುತ್ತಿದ್ದಾರೆ. ದೇಶದ ಅತ್ಯುತ್ತಮ ರೈಡರ್‌ಗಳಲ್ಲಿ ಒಬ್ಬರು. ಪ್ರೊ ಕಬಡ್ಡಿಯ ಮೊದಲ ಋತುವಿನಲ್ಲಿ ಬೆಂಗಳೂರು ಬುಲ್ಸ್‌ ಪರ ಆಡಿದ್ದರು.

ಏಷ್ಯನ್‌ ಗೇಮ್‌ನಲ್ಲಿ ಹಿಂದೆ ಎರಡು ಸಲ ಚಿನ್ನ ಗೆದ್ದಿದ್ದ ತಂಡದಲ್ಲಿದ್ದ ಮಂಜಿತ್‌ ಚಿಲಾರ್‌ ಈ ತಂಡದ ರಕ್ಷಣಾ ತಂತ್ರದ ಶಕ್ತಿಯಾಗಿದ್ದಾರೆ. ಈ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕ ರಾಜ್ಯದ ಏಕೈಕ ಆಟಗಾರ ಸುನಿಲ್‌ ಹನುಮಂತಪ್ಪ. ಇವರು ಬೆಂಗಳೂರಿನ ವಿಜಯನಗರ ದವರು.

ರೈಡಿಂಗ್‌ನಲ್ಲಿ ನುರಿತಿರುವ ಇವರು ಪ್ರಸಕ್ತ ವಿಜಯಾ ಬ್ಯಾಂಕ್‌ ಉದ್ಯೋಗಿ. 2010ರ ರಾಷ್ಟ್ರೀಯ ಜೂನಿಯರ್‌ ಚಾಂಪಿಯನರ್‌ಷಿಪ್‌ನಲ್ಲಿ ಇವರು ಆಡಿದ್ದರು. ಕರ್ನಾಟಕ ರಾಜ್ಯ ತಂಡದಲ್ಲಿಯೂ ಇವರು ಸ್ಥಾನ ಪಡೆದಿದ್ದಾರೆ. ಆರು ಅಡಿ ಎತ್ತರದ ಇವರು ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಮಹದಾಸೆ ಇರಿಸಿಕೊಂಡಿದ್ದಾರೆ. ಪೋಲೆಂಡ್‌ನ ಮೈಕೆಲ್‌ ಸ್ಪಜ್ಕೊ, ಇಂಡೋನೇಷ್ಯಾದ ಕೆತುತ್‌ ಅರಿಯಾನ, ಶ್ರೀಲಂಕಾದ ಸಿನೋತರನ್‌ ಅವರೂ ತಂಡದಲ್ಲಿರುವ ವಿದೇಶಿಯರು.
*
ವಾರಿಯರ್ಸ್‌ಗೆ  ರಮೇಶ್‌ ಕೋಚ್‌
ಬೆಂಗಳೂರು:
ಕರ್ನಾಟಕದ ಬಿ.ಸಿ. ರಮೇಶ್‌ ಅವರು ಕೋಲ್ಕತ್ತಾದ ಬೆಂಗಾಲ್‌ ವಾರಿಯರ್ಸ್‌ ತಂಡದ ಸಹಾಯಕ ಕೋಚ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಹಿಂದೆ ಭಾರತ ತಂಡದ ನಾಯಕರಾಗಿದ್ದರು.

ಹಿಂದೆ ಭಾರತ ತಂಡದ ನಾಯಕರಾಗಿದ್ದ ದಿನೇಶ್‌ ಕುಮಾರ್‌ ಅವರು ಬೆಂಗಾಲ್‌ ತಂಡದ ನೇತೃತ್ವ ವಹಿಸಿದ್ದಾರೆ. ಬೆಂಗಳೂರು ಬುಲ್ಸ್‌ ತಂಡ ತನ್ನ ಮೊದಲ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡದ ವಿರುದ್ಧ ಆಡಲಿದೆ. ಬಿ.ಸಿ.ರಮೇಶ್‌ ಅವರ ಸೋದರ, ಮಾಜಿ ಅಂತರರಾಷ್ಟ್ರೀಯ ಆಟಗಾರ ಬಿ.ಸಿ.ಸುರೇಶ್‌ ಬೆಂಗಳೂರು ಬುಲ್ಸ್‌ ತಂಡದ ಸಹಾಯಕ ಕೋಚ್‌ ಆಗಿದ್ದಾರೆ.
*
‘ನಮ್ಮ ತಂಡಕ್ಕೆ ಬೆಂಗಳೂರು ನಗರದಲ್ಲಷ್ಟೇ ಅಭಿಮಾನಿಗಳಿರುವುದಲ್ಲ, ಕರ್ನಾಟಕದ ಯಾವುದೇ ಊರುಗಳಿಗೆ ಹೋದರೂ ಜನ ಹೆಮ್ಮೆಯಿಂದ ನಮ್ಮತ್ತ ನೋಡುತ್ತಾರೆ. ನಮಗೆ ಇದಕ್ಕಿಂತ ಗೌರವ  ಇನ್ನೇನು ಬೇಕು’
– ಉದಯ ಸಿನಾ ವಾಲಾ,
ಬೆಂಗಳೂರು ಬುಲ್ಸ್‌ ಮಾಲೀಕರು.
*

‘ಈ ಸಲ ಲೀಗ್‌ನಲ್ಲಿ ಆಡುತ್ತಿರುವ ಎಂಟೂ ತಂಡಗಳು ಒಂದಕ್ಕಿಂತ ಒಂದು ಬಲಿಷ್ಠವಾಗಿವೆ. ಹೀಗಾಗಿ ಕಬಡ್ಡಿ ಪ್ರಿಯರಿಗೆ ಹೋದ ವರ್ಷಕ್ಕಿಂತ ಹೆಚ್ಚಿನ ರೋಮಾಂಚನ ಸಿಗಲಿರುವುದಂತೂ ನಿಜ. ಇವೆಲ್ಲದರ ನಡುವೆ ಬೆಂಗಳೂರು ಬುಲ್ಸ್‌ ಒಂದು ಹೆಜ್ಜೆ ಮುಂದೆಯೇ ಇದೆ’
–ಬಿ.ಸಿ.ಸುರೇಶ್‌, ಸಹಾಯಕ ಕೋಚ್‌, 
ಬೆಂಗಳೂರು ಬುಲ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT