ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತಾವ ಬಂತು, ಅಧ್ಯಕ್ಷರು ಬರಲಿಲ್ಲ!

ಕೆಪಿಎಸ್‌ಸಿ: 14ರಲ್ಲಿ 8 ಸದಸ್ಯರ ಹುದ್ದೆಗಳು ಖಾಲಿ
Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: 452 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ  ಸಂಬಂಧಿಸಿದ ರಾಜ್ಯ ಸರ್ಕಾರದ ಪ್ರಸ್ತಾವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ತಲುಪಿದೆ. ಆದರೆ ನೇಮ­ಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿರುವ ಆಯೋಗದ ಅಧ್ಯಕ್ಷರ ಹುದ್ದೆ 18 ತಿಂಗಳಿನಿಂದ ಖಾಲಿ ಇದೆ. ಜತೆಗೆ ಎಂಟು ಸದಸ್ಯರ ಹುದ್ದೆಗಳೂ ಖಾಲಿ ಇವೆ.

ಆಯೋಗದ ಅಧ್ಯಕ್ಷರಾಗಿದ್ದ ಗೋನಾಳ ಭೀಮಪ್ಪ 2013ರ ಮೇ 10ರಂದು ನಿವೃತ್ತ­ರಾ­ಗಿದ್ದಾರೆ. ನಂತರ ಕೃಷ್ಣಪ್ರಸಾದ್‌ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು. ಅವರ ನಿವೃತ್ತಿಯ ನಂತರ ಬಿ.ಪಿ. ಕನಿರಾಂ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಕನಿರಾಂ ಅವರೂ ನಿವೃತ್ತರಾಗಿ ಒಂದು ವರ್ಷ ಕಳೆದಿದೆ. ಆ ನಂತರ ರಾಜ್ಯ ಸರ್ಕಾರ ಯಾರನ್ನೂ ಹಂಗಾಮಿ ಅಧ್ಯಕ್ಷರಾಗಿಯೂ ನೇಮಿಸಿಲ್ಲ.

ಅವಕಾಶ ಇದೆ: ಕೆಪಿಎಸ್‌ಸಿ ನಿಯಮದ ಪ್ರಕಾರ ಅಧ್ಯಕ್ಷರು ಇಲ್ಲದೆಯೂ ನೇಮಕಾತಿ ಪ್ರಕ್ರಿಯೆ ನಡೆಸಬಹುದು. ಅಧ್ಯಕ್ಷರು ಇಲ್ಲದೇ ಇದ್ದಾಗ ಆಯೋಗದ ಅತ್ಯಂತ ಹಿರಿಯ ಸದಸ್ಯರೇ ನೇಮಕಾತಿ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಅವರು ನೇಮಕಾತಿ ಪ್ರಕ್ರಿಯೆ ನಡೆಸುತ್ತಾರೆ ಎಂದು ಆಯೋಗದ ಮೂಲಗಳು ಹೇಳುತ್ತವೆ.

ಕಳೆದ ಒಂದು ವರ್ಷದಿಂದ ಆಯೋಗದಲ್ಲಿ ಹಂಗಾಮಿ ಅಧ್ಯಕ್ಷರೂ ಇಲ್ಲ. ಆದರೂ ಅಬ್ಕಾರಿ ಗಾರ್ಡ್, ಇನ್‌ಸ್ಪೆಕ್ಟರ್‌, ಪಿಡಿಒ ಮುಂತಾದ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಪಿ.ಸಿ.ಹೋಟಾ ಸಮಿತಿ ಶಿಫಾರಸಿನಂತೆ ಆಯೋಗದಲ್ಲಿ ಈಗಾಗಲೇ ಪರೀಕ್ಷಾ ನಿಯಂತ್ರಕರ ಹುದ್ದೆಯನ್ನೂ ಸೃಷ್ಟಿಸಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರ ನೇಮಕವಾದರೆ ನೇಮಕಾತಿಗೆ ಅನುಕೂಲ­ವಾಗಲಿದೆ ಎಂದೂ ಆಯೋಗದ ಮೂಲಗಳು ಹೇಳುತ್ತವೆ.

ತಿಂಗಳೊಳಗೆ ನೇಮಕ ಸಾಧ್ಯತೆ
ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಜವಾಬ್ದಾರಿಯನ್ನು ಸೆ. 26ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇ ವಹಿಸಲಾಗಿತ್ತು. ಇದಾಗಿ ಮೂರು ತಿಂಗಳು ಕಳೆದರೂ ಇನ್ನೂ ನೇಮಕಾತಿಗಳೇ ಆಗಿಲ್ಲ.

ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೆಪಿಎಸ್‌ಸಿ ಸದಸ್ಯರ ಸಂಖ್ಯೆ­ಯನ್ನು 14ಕ್ಕೆ ಏರಿಸಿದೆ. ಆದರೆ ಸದ್ಯಕ್ಕೆ ಆಯೋಗದಲ್ಲಿ ಆರು ಸದಸ್ಯರಷ್ಟೇ ಇದ್ದಾರೆ. ಅವರ ಪೈಕಿ ಡಾ.ಮಂಗಳಾ ಶ್ರೀಧರ್‌  ಅಮಾನತ್ತಿನಲ್ಲಿದ್ದಾರೆ.

ರಾಜ್ಯ ಸರ್ಕಾರ ಈಗ ಆಯೋಗದ ಅಧ್ಯಕ್ಷರೂ ಸೇರಿ ಎಂಟು ಮಂದಿಯನ್ನು ನೇಮಕ ಮಾಡಬೇಕು. ಅಧ್ಯಕ್ಷ ಸ್ಥಾನಕ್ಕೆ ಹಲವಾರು ಮಂದಿ ಪೈಪೋಟಿ ನಡೆಸಿದ್ದು ಮಾಸಾಂತ್ಯದ ವೇಳೆಗೆ ಅಧ್ಯಕ್ಷರ ನೇಮಕವಾಗ­ಬ­ಹುದು ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
ಆಯೋಗದಲ್ಲಿ ಈಗ ಎಸ್‌.ಆರ್‌. ರಂಗಮೂರ್ತಿ, ಡಾ.ಎಂ.ಮಹದೇವ, ಡಾ.ಎಚ್‌.ವಿ.ಪಾರ್ಶ್ವನಾಥ, ಎಸ್‌. ದಯಾಶಂಕರ್‌, ಡಾ.ಎಚ್‌. ಡಿ.ಪಾಟೀಲ್‌ ಸದಸ್ಯರಾಗಿದ್ದಾರೆ. ಈ ಸದಸ್ಯರೆಲ್ಲರೂ 2011ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ವ್ಯಾಪಕ ಭ್ರಷ್ಟಾಚಾರದ ಆರೋಪದ ಕಾರಣ 2011ನೇ ಪಟ್ಟಿ ರದ್ದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದನ್ನು ಸಿಐಡಿ ತನಿಖೆ ದೃಢ ಪಡಿಸಿದೆ. ಆಯೋಗದ ಎಲ್ಲ ಸದಸ್ಯರ ವಿರುದ್ಧ ಕೂಡ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಬೇಕು ಎಂದು ಸಿಐಡಿ ಪೊಲೀಸರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೆ ಇನ್ನೂ ಅವಕಾಶ ಸಿಕ್ಕಿಲ್ಲ.

ಆಯೋಗಕ್ಕೆ ಅಧ್ಯಕ್ಷರಿಲ್ಲ. ಇರುವ ಎಲ್ಲ ಸದಸ್ಯರ ವಿರುದ್ಧ ಆರೋಪಗಳಿವೆ. ಇಂತಹ ಪರಿಸ್ಥಿತಿಯಲ್ಲಿ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಪ್ರಶ್ನೆ ಅಭ್ಯರ್ಥಿಗಳನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT