ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಸಾಕುವ ಶೋಕಿಯ ‘ಶಾಪ’!

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಕೆಲವರು ಪ್ರೀತಿಯಿಂದ ಪ್ರಾಣಿಗಳನ್ನು ಸಾಕಿದರೆ, ಮತ್ತೆ ಕೆಲವರು ಮುದ್ದಿಗಾಗಿ, ಪ್ರತಿಷ್ಠೆಗಾಗಿ, ಶೋಕಿಗಾಗಿ ಅಥವಾ ಮಕ್ಕಳ ಒತ್ತಾಯಕ್ಕೆ ಮಣಿದು ಪ್ರಾಣಿಗಳನ್ನು ಸಾಕುತ್ತಾರೆ. ಮನೆಗೆ ನಾಯಿ ಅಥವಾ ಬೆಕ್ಕುಗಳನ್ನು ತರುವಾಗ ಹಿಂದೆ ಮುಂದೆ ಯೋಚಿಸದೆ ದೊಡ್ಡದಾಗಿ ಬೆಳೆಯುವ ಹಾಗೂ ವಿಶೇಷ ಆರೈಕೆಯ ಅಗತ್ಯ ಇರುವಂತಹವನ್ನು ತರುತ್ತಾರೆ. ನಂತರ ಅವುಗಳಿಗೆ ವಯಸ್ಸಾಗಿ ಆರೋಗ್ಯ ಹಾಳಾದ ತಕ್ಷಣ ಬೀದಿಗೆ ತಳ್ಳುತ್ತಾರೆ.

ಬೆಂಗಳೂರಿನಲ್ಲಿ ಪ್ರತಿ ತಿಂಗಳು 140ಕ್ಕೂ ಹೆಚ್ಚು ಸಾಕು ಪ್ರಾಣಿಗಳು ಬೀದಿಗೆ ಬೀಳುತ್ತಿವೆ. ಅವುಗಳಲ್ಲಿ 110 ನಾಯಿಗಳು, 30ಕ್ಕೂ ಹೆಚ್ಚು ಬೆಕ್ಕುಗಳು, ಅಲ್ಲಲ್ಲಿ ಗಿನಿಪಿಗ್‌ ಹಾಗೂ ಮೊಲಗಳನ್ನು ಸಹ ಬೀದಿಗೆ ತಳ್ಳಲಾಗುತ್ತಿದೆ. ಇವುಗಳೊಂದಿಗೆ ನಗರದಲ್ಲಿ ಇರುವ ಪ್ರಾಣಿ ದಯಾ ಸಂಘಗಳಿಂದ ದತ್ತು ಪಡೆಯುವ ನಾಯಿಗಳನ್ನೂ ನೋಡಿಕೊಳ್ಳಲಾಗದೆ ಹಲವರು ಬೀದಿಗೆ ಬಿಡುತ್ತಿದ್ದಾರೆ. ಸಾಕು ಪ್ರಾಣಿಗಳಿಗೆ ಊಟ ಹಾಕದೇ ಇರುವುದು ಹಾಗೂ ಅವುಗಳನ್ನು ಇರುವ ಸ್ಥಳಗಳಿಂದ ಬೇರೆ ಕಡೆಗೆ ಬಿಡುವುದು, ಮನೆಗಳಿಂದ ಬೀದಿಗೆ ಬಿಡುವುದು ಕಾನೂನಿನ ಪ್ರಕಾರ ಅಪರಾಧ. ಆದರೂ ದಿನವೊಂದಕ್ಕೆ ಕನಿಷ್ಠ ನಾಲ್ಕು ನಾಯಿಗಳನ್ನು ಬೀದಿಪಾಲು ಮಾಡಲಾಗುತ್ತಿದೆ.

ನಗರದಲ್ಲಿ 10ಕ್ಕೂ ಹೆಚ್ಚು ಪ್ರಾಣಿ ದಯಾ ಸಂಘಗಳಿವೆ. ಇವುಗಳು ನಗರದಲ್ಲಿ ನಾಲ್ಕಕ್ಕಿಂತ ಹೆಚ್ಚು ಅನಾಥವಾಗಿರುವ ಸಾಕುನಾಯಿ ಹಾಗೂ ಬೆಕ್ಕುಗಳನ್ನು ನಿತ್ಯ ರಕ್ಷಿಸುತ್ತಿದ್ದಾರೆ. ಕರುಣ ಪ್ರಾಣಿ ಕಲ್ಯಾಣ ಸಂಘದಲ್ಲಿ ಆಶ್ರಯ ಅರಸಿ  ಪ್ರತಿ ತಿಂಗಳಿಗೆ 40ರಿಂದ 50 ಸಾಕುನಾಯಿಗಳು ಬರುತ್ತವೆ.

ಕೆಲವರು ಜಾತಿ ನಾಯಿಗಳಿಗೆ ಸೋಂಕು ತಗುಲಿದಾಗ ನಿತ್ಯ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಅಷ್ಟು ವ್ಯವಧಾನ ಇಲ್ಲದೆ, ಅವನ್ನು ರಸ್ತೆಗೆ ಬಿಡುತ್ತಾರೆ. ಮತ್ತೆ ಕೆಲವರು ವಿದೇಶಗಳಿಗೆ ಹೋಗುವ ಅವಕಾಶ ಸಿಕ್ಕಾಗ, ಅವುಗಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಹಣ ಖರ್ಚು ಮಾಡಲಾಗದೆ ಅವುಗಳನ್ನು ಅನಾಥ ಸ್ಥಿತಿಗೆ ದೂಡುತ್ತಾರೆ. ಕೆಲವರು ನಾಯಿಗಳಿಗೆ ಅಪಘಾತ, ಸೋಂಕು ಅಥವಾ ವಯಸ್ಸಾದಾಗ ಕರುಣೆಯೇ ಇಲ್ಲದಂತೆ ಮನೆಯಿಂದ ಹೊರಹಾಕುತ್ತಾರೆ ಅಥವಾ ಜನರೇ ಇಲ್ಲದ ಸ್ಥಳಗಳಲ್ಲಿ ಬಿಟ್ಟು ಬರುತ್ತಾರೆ.

ಇನ್ನು ಕೆಲವರು ಪ್ರಾಣಿ ದಯಾ ಸಂಘಗಳಿಗೆ ಹತ್ತಿರದಲ್ಲಿ ಬಿಟ್ಟು ಬರುತ್ತಾರೆ. ಇಂತಹ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಿವೆ.
ಮನೆಗಳಿಂದ ಬೀದಿಗೆ ದೂಡಲಾದ ಪ್ರಾಣಿಗಳು ಹೆಚ್ಚಾಗಿ ಚರ್ಮ ರೋಗ, ಮೂಳೆ ಮುರಿತ, ಸೋಂಕಿಗೆ ಈಡಾಗುತ್ತವೆ. ದೊಡ್ಡ ತಳಿಯ ನಾಯಿಗಳಿಗೆ ಬೇಕಾದಷ್ಟು ಊಟ ಹಾಕಲಾಗದೆ, ಹೆಚ್ಚು ಖರ್ಚಾಗುತ್ತದೆಂದೋ, ಅವುಗಳು ಮಾಡುವ ಗಲೀಜನ್ನು ಶುಚಿಗೊಳಿಸಲು ಸಾಧ್ಯವಿಲ್ಲದೆಯೋ ಅವುಗಳನ್ನು ಬೀದಿಗೆ ಹಾಕುವವರೂ ಇದ್ದಾರೆ.

ಬೀದಿಗೆ ತಳ್ಳಲು ಕಾರಣಗಳು...
‘ಒಂದು ಮನೆಯಿಂದ ಮತ್ತೊಂದು ಬಾಡಿಗೆ ಮನೆಗೆ ಹೋಗುವಾಗ ಮನೆಯ ಮಾಲೀಕರು ಸಾಕುಪ್ರಾಣಿಗಳನ್ನು ಇಟ್ಟುಕೊಳ್ಳಲು ಒಪ್ಪದೇ ಹೋದಾಗ, ವಿದೇಶಗಳಲ್ಲಿ ಕೆಲಸ ಸಿಕ್ಕಾಗ, ಅಪಾರ್ಟ್‌ಮೆಂಟ್‌ಗಳ ಅಸೋಸಿಯೇಷನ್‌ಗಳು ಸಾಕುಪ್ರಾಣಿಗಳ ಪಾಲನೆಗೆ ಅನುಮತಿ ನೀಡದೇ ಹೋದಾಗ ಬೇರೆ ದಾರಿ ಇಲ್ಲದೆ ನಮ್ಮಲ್ಲಿಗೆ ಬಂದು ಅವುಗಳನ್ನು ಬಿಟ್ಟು ಹೋಗುತ್ತಾರೆ. ಇಂತಹ ಪ್ರಕರಣಗಳಲ್ಲಿ ನಾಯಿಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು, ಜೀವನ ಪರ್ಯಂತ ಅವುಗಳ ಆರೈಕೆಗಾಗಿ ಮಾಲೀಕರಿಂದ ದಾನವಾಗಿ ಸ್ವಲ್ಪ ಹಣವನ್ನು ಪಡೆಯುತ್ತೇವೆ.

ನಂತರ ಅವುಗಳನ್ನು ನೋಡಲು ಬಾರದಂತೆ ಹಾಗೂ ಅವುಗಳನ್ನು ಬೇರೆಯವರಿಗೆ ಸಾಕಲು ದತ್ತು ನೀಡುವುದಾಗಿ ಲಿಖಿತ ಒಪ್ಪಿಗೆ. ಇಂತಹ ಪ್ರಕರಣಗಳಲ್ಲಿ ಕೇವಲ ಒಬ್ಬರು ಅಥವಾ ಇಬ್ಬರು ಒಂದು ವಾರದ ನಂತರ ನಾಯಿಗಳನ್ನು ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಕರುಣಾದ ಕಾರ್ಯದರ್ಶಿ ಸುಧೀರ್ ಕುಮಾರ್‌.

ನಾಯಿಗಳ ಆರೈಕೆಗೆ ದಾನ ಕೇಳಿದರೆ, ಹಣ ನೀಡದ ಜನರು ಕರುಣಾದ ಗೇಟ್‌ ಬಳಿ ಅಥವಾ ರಸ್ತೆಗಳಲ್ಲೇ ಅವುಗಳನ್ನು ಬಿಟ್ಟು ಹೊರಟು ಹೋಗುತ್ತಾರೆ. ಎಷ್ಟೋ ಬಾರಿ ಕಾಲುಗಳಿಲ್ಲದ, ಸೋಂಕಿತ ಹಾಗೂ ಸೊಂಟ ಮುರಿದ ನಾಯಿಗಳನ್ನು ಗೇಟ್‌ ಬಳಿ ಬಿಟ್ಟು ಹೋದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಕರುಣಾದ ಸಿಬ್ಬಂದಿ.

ಅರಿವಿಗೆ ಕೌನ್ಸಲಿಂಗ್
ಯಾವುದೇ ಪ್ರಾಣಿ ದಯಾ ಸಂಘಗಳಿಗೆ ಸಾಕು ಪ್ರಾಣಿಗಳನ್ನು ಬಿಡಲು ಯಾರೇ ಹೋದರೂ ಅಲ್ಲಿ, ಅವುಗಳನ್ನು ಅನಾಥ ಸ್ಥಿತಿಗೆ ದೂಡದಂತೆ ಮೊದಲು ಅರ್ಧ ಗಂಟೆ ಕೌನ್ಸಲಿಂಗ್‌ ಮಾಡಲಾಗುತ್ತದೆ. ಅದಕ್ಕೆ ಒಪ್ಪದೇ ಇದ್ದರೆ ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆಯನ್ನೂ ನೀಡಲಾಗುತ್ತದೆ. ಅದಕ್ಕೂ ಮಣಿಯದೇ ಇದ್ದರೆ ಅವರು ಮಾಡುತ್ತಿರುವುದು ಕಾನೂನಿನ ಪ್ರಕಾರ ತಪ್ಪು ಎಂದು ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತದೆ. ಇದರಿಂದ ಕೆಲವರು ತಮ್ಮ ನಿರ್ಧಾರಗಳನ್ನು ಬದಲಿಸಿದರೆ, ಮತ್ತೆ ಕೆಲವರು ಹಳೆಯ ನಿರ್ಧಾರಕ್ಕೆ ಕಟ್ಟು ಬೀಳುತ್ತಾರೆ.

ಕಾನೂನು ಕ್ರಮ
ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವುದು, ಅವುಗಳಿಗೆ ಊಟ ಹಾಕದೆ, ಹಿಂಸೆ ನೀಡಿದರೆ ಪ್ರಿವೆನ್ಷನ್‌ ಆಫ್‌ ಕ್ರೂಯಲ್ಟಿ ಆಫ್‌ ಅನಿಮಲ್‌ ಆಕ್ಟ್–1960 (ಪ್ರಾಣಿಗಳ ವಿರುದ್ಧ ಕ್ರೌರ್ಯ ನಿಷೇಧಿಸುವ ಕಾಯ್ದೆ) ಕಲಂ 11ರ ಪ್ರಕಾರ ದೂರು ನೀಡಹುದು. ಇದರೊಂದಿಗೆ ಯಾರಾದರೂ ಯಾವುದೇ ಪ್ರಾಣಿಗೆ ದೈಹಿಕ ಹಿಂಸೆ ನೀಡಿ, ಗಂಭೀರ ಗಾಯಗಳಾದಲ್ಲಿ ಅಂತಹವರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಬಹುದು ಎನ್ನುತ್ತಾರೆ ಪ್ರಾಣಿಪ್ರಿಯೆ ನವೀನಾ ಕಾಮತ್.

ಕರುಣಾದ ಹುಟ್ಟು...
ಬ್ರಿಟಿಷರ ಆಳ್ವಿಕೆಯಲ್ಲಿ ಅಂದರೆ 1988ರಲ್ಲಿ ಬೆಂಗಳೂರಿನ ಕಂಟೋನ್ಮೆಂಟ್‌ ಪ್ರದೇಶದಲ್ಲಿ ‘ಬೆಂಗಳೂರು ಪ್ರಾಣಿ ಹಿಂಸೆ ನಿವಾರಣಾ ಸಂಘ’ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ, 2001ರಲ್ಲಿ ಕರುಣಾ ಪ್ರಾಣಿ ಕಲ್ಯಾಣ ಸಂಘವಾಗಿ ಬದಲಾಯಿತು. 126 ವರ್ಷಗಳಿಂದ ಇಲ್ಲಿಯವರೆಗೆ ನಿರಂತರವಾಗಿ ಅನಾಥ ಪ್ರಾಣಿಗಳ ಆರೈಕೆ ಮಾಡುತ್ತಿದೆ. ಆರಂಭದಲ್ಲಿ 20ರಿಂದ 30 ಪ್ರಾಣಿಗಳಿಗೆ ಮಾತ್ರ ಆಶ್ರಯ ನೀಡಲು ವ್ಯವಸ್ಥೆ ಇದ್ದ ಕರುಣಾದಲ್ಲಿ ಈಗ 250ರಿಂದ 500 ಜೀವಿಗಳಿಗೆ ಆಶ್ರಯ ನೀಡಲಾಗುತ್ತಿದೆ.

ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಆಂಬ್ಯುಲೆನ್ಸ್‌ ಸೇವೆ ಸಹ ಒದಗಿಸುತ್ತಿದೆ. ನಗರದ ಯಾವ ಭಾಗದಲ್ಲೇ ಅಪಘಾತವಾಗಿದ್ದರೂ  ಅವುಗಳ ಚಿಕಿತ್ಸೆಗೆ ಆಂಬ್ಯುಲೆನ್ಸ್‌ ಸೇವೆ ಒದಗಿಸಲಾಗುತ್ತದೆ. ಆದರೆ ತುರ್ತು ಚಿಕಿತ್ಸೆಗಾಗಿ ರಾತ್ರಿ ಅಗತ್ಯ ಬಿದ್ದಲ್ಲಿ, ಕರುಣಾದಲ್ಲಿ ಚಿಕಿತ್ಸೆ ನೀಡಲು ವೈದ್ಯರ ತಂಡ ಇರುತ್ತದೆ. ಅದು ಸಾಕು ಪ್ರಾಣಿಯಾಗಿರಲಿ ಅಥವಾ ಬೀದಿಯಲ್ಲಿರುವ ಪ್ರಾಣಿಗಳಾಗಲಿ. ಕರುಣಾದಲ್ಲಿ 2013–14ನೇ ಸಾಲಿನಲ್ಲಿ ರೋಗಗ್ರಸ್ತ, ಅಪಘಾತಕ್ಕೀಡಾದ ಹಾಗೂ ಸಾಕಿದವರು ಬೀದಿಗೆ ತಳ್ಳಿದ 1062 ನಾಯಿಗಳನ್ನು ರಕ್ಷಿಸಿ, ಚಿಕಿತ್ಸೆ ನೀಡಲಾಗಿದ್ದು, ಅವುಗಳಲ್ಲಿ 700ಕ್ಕೂ ಹೆಚ್ಚು ನಾಯಿ ಹಾಗೂ ಬೆಕ್ಕುಗಳನ್ನು ದತ್ತು ನೀಡಲಾಗಿದೆ.

ಸಹಾಯವಾಣಿ
ಕರುಣಾ 24 ಗಂಟೆಗಳ ಸಹಾಯವಾಣಿ: 23411181
ಪಶುವೈದ್ಯಕೀಯ ಕಾಲೇಜಿನ ಕ್ಲಿನಿಕ್‌ ಹಾಗೂ ತುರ್ತು ಸೇವೆಯ ರಾತ್ರಿ ಕ್ಲಿನಕ್‌: 23412556
ಕ್ಯೂಪಾ ರಾತ್ರಿ ಸಹಾಯವಾಣಿ: 22947300
ಜೀವಾ ವೆಟ್ ಕ್ಲಿನಿಕ್‌: 22452428

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT