ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕ ಪ್ರಯತ್ನದಲ್ಲಿ...

Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಸ್ಮೃತಿ
ಒಡಹುಟ್ಟಿದವರು ಇದ್ದರೂ ಅವರೊಂದಿಗೆ ಮಾತನಾಡಲಾಗದ ಅಸಹಾಯಕತೆ, ಎಲ್ಲಾ ಮಕ್ಕಳಂತೆ ಅವರೊಂದಿಗೆ ಮಾತನಾಡುವ, ಚೇಷ್ಟೆ ಮಾಡುವ ತವಕವಿದ್ದರೂ ಅಸಾಧ್ಯವಾಗಿತ್ತು. ಇದರಿಂದ ಸ್ಮೃತಿ ಬೇಸರಗೊಂಡಿದ್ದರು. ಈ ಬೇಸರ ಬಹಳ ದಿನ ಉಳಿಯಲಿಲ್ಲ. ಸ್ವತಃ ಸಂಕೇತ ಭಾಷೆ ಕಲಿತು ಸಹೋದರರ ಜೊತೆ ಮಾತನಾಡತೊಡಗಿದರು. ನಂತರ  ಎಲ್ಲಾ ಮಕ್ಕಳಂತೆ ಒಡಹುಟ್ಟಿದವರೊಂದಿಗೆ ಬಾಲ್ಯ ಕಳೆದರು. ಸಹೋದರರಿಗೆ ಮಾತು ಕಲಿಸಬೇಕು ಎಂಬ ಹಂಬಲ ಸ್ಮೃತಿಯನ್ನು ಬದಲಾಯಿಸಿತು. ಇದು ದೆಹಲಿಯ 23ರ ಹರೆಯದ ಸ್ಮೃತಿ ಅವರ ಕಥೆ.

ಸ್ಮೃತಿಗೆ ಇಬ್ಬರು ಸಹೋದರರು. ಅವರು ಕಿವುಡು ಮತ್ತು ಮೂಕರಾಗಿದ್ದರು. ಒಬ್ಬ ಸಹೋದರ ಚಿತ್ರ ಕಲಾವಿದನಾಗಿದ್ದ. ಆತನ ವರ್ಣಚಿತ್ರ ಮತ್ತು ಕಲಾಕೃತಿಗಳು ವಿದೇಶಕ್ಕೆ ಮಾರಾಟವಾಗುತ್ತಿದ್ದವು. ಮಧ್ಯವರ್ತಿಗಳ ಹಾವಳಿಯಿಂದ ಪೇಂಟಿಂಗ್‌ಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿರಲಿಲ್ಲ. ಇದನ್ನು ಅರಿತ ಸ್ಮೃತಿ ದುರ್ಬಲ ವ್ಯಕ್ತಿಗಳ ಕಲಾಕೃತಿಗಳಿಗೆ ನೈಜ ಬೆಲೆ ಸಿಗಬೇಕು ಎನ್ನುವ ಕಾಳಜಿಯಿಂದ ‘ಅತುಲ್ಯಾಕಲಾ’ (atulyakala) ಎಂಬ  ಸರ್ಕಾರೇತರ ಸಂಸ್ಥೆ ಸ್ಥಾಪಿಸಿದರು.

ಈ ಸಂಸ್ಥೆಯಲ್ಲಿ ಅಂಗವಿಕಲರು ರಚಿಸುವ ಪೇಂಟಿಂಗ್‌ಗಳಿಗೆ ಮಾತ್ರ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಅವರ ಕಲಾಕೃತಿಗಳಿಗೆ ಉತ್ತಮ ಬೆಲೆ ಸಿಗುತ್ತಿದೆ ಎನ್ನುತ್ತಾರೆ ಸ್ಮೃತಿ. ಸಂಕೇತ ಭಾಷೆಯ ಕೈಪಿಡಿಯನ್ನು ಪ್ರಕಟಿಸಿರುವ ಸ್ಮೃತಿ, ಇವರಿಗಾಗಿಯೇ ಒಂದು ಸುದ್ದಿವಾಹಿನಿ ಆರಂಭಿಸುವ ಗುರಿ ಹೊಂದಿದ್ದಾರೆ. ಮೊದಲು ಕನಸು ಕಾಣಬೇಕು, ನಂತರ ಕಂಡ ಕನಸನ್ನು ನನಸಾಗಿಸಲು ಯತ್ನಿಸಬೇಕು. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಯಶಸ್ಸು ಶತಸಿದ್ಧ ಎಂದು ಯುವಕರಿಗೆ ಸ್ಮೃತಿ ಕಿವಿ ಮಾತು ಹೇಳುತ್ತಾರೆ.

ಸಂದೀಪ್‌ ಮೆಹ್ತೊ

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ‘ಭಾರತ್‌ ಕಾಲಿಂಗ್‌’ ಎಂಬ ಅಭಿಯಾನ ನಡೆಸುತ್ತಿರುವ ಸಂದೀಪ್‌ ಮೆಹ್ತೊ ಅವರ ಯಶಸ್ವಿ ಕಥೆ ಇದು. ಮಧ್ಯಪ್ರದೇಶದ ಅತಿ ಹಿಂದುಳಿದ ಜಿಲ್ಲೆ ಸೋತಾಪುರ್‌ನ ಕುಗ್ರಾಮದಲ್ಲಿ ಹುಟ್ಟಿದ ಸಂದೀಪ್‌ ಸಾಧನೆ ಅಸಮಾನ್ಯವಾದುದು.

ಸಂದೀಪ್‌ ತಂದೆ ಬಡ ಕೂಲಿ ಕಾರ್ಮಿಕ. ಜೀವನ ನಿರ್ವಹಣೆಯೇ ಕಷ್ಟವಾಗಿರುವ ಸಂದರ್ಭದಲ್ಲಿ ಮಗನನ್ನು ಓದಿಸುವ ಹಂಬಲ ಅವರದ್ದು. ಕಷ್ಟುಪಟ್ಟು ಹತ್ತನೇ ತರಗತಿವರೆಗೆ ಓದಿಸಿದರು. ಮುಂದೆ ವಿದ್ಯಾರ್ಥಿ ವೇತನದ ಸೌಲಭ್ಯ ಪಡೆದು ಸಂದೀಪ್‌ ಕಾಲೇಜಿಗೆ ಸೇರಿದರು. ಸೌಕರ್ಯಗಳ ಕೊರೆತೆಯಿಂದಾಗಿ ಸಾಧಾರಣ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಈ ನಡುವೆ ತಂದೆಯ ಅಕಾಲಿಕ ಮರಣ ಉನ್ನತ ವ್ಯಾಸಂಗವನ್ನು ಮೊಟಕುಗೊಳಿಸಿತು. ದೂರಶಿಕ್ಷಣದಲ್ಲಿ ಕಲಾ ಪದವಿಯನ್ನು ಮುಂದುವರೆಸಿದರು. ಈ ಹಂತದಲ್ಲಿ ಸಂದೀಪ್‌ಗೆ ಅರಿವಾಗಿದ್ದು ಉನ್ನತ ಶಿಕ್ಷಣಕ್ಕೂ ಸೌಲಭ್ಯಗಳು ಬೇಕು ಎಂಬುದು. ಸ್ಥಿತಿವಂತರ ಮಕ್ಕಳು ಎಲ್ಲಾ ಸೌಕರ್ಯಗಳನ್ನು ಪಡೆದು ಉನ್ನತ ವ್ಯಾಸಂಗ ಪಡೆಯುತ್ತಾರೆ. ಆದರೆ ಬಡ ಮಕ್ಕಳಿಗೆ ಇದು ಅಸಾಧ್ಯ ಎಂಬುದು ಮನವರಿಕೆಯಾಯಿತು.

ಈ ನಿಟ್ಟಿನಲ್ಲಿ 2009ರಲ್ಲಿ ಗೆಳೆಯರೊಂದಿಗೆ ಸೇರಿಕೊಂಡು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಭಾರತ್‌ ಕಾಲಿಂಗ್‌ ಅಭಿಯಾನಕ್ಕೆ ಚಾಲನೆ ನೀಡಿದರು. ಚಿಕ್ಕದಾಗಿ ಆರಂಭವಾದ ಈ ಅಭಿಯಾನ ಇಂದು ಬೃಹತ್ತಾಗಿ ಬೆಳೆದಿದೆ. ಭಾರತ್‌ ಕಾಲಿಂಗ್‌ ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತದೆ. ಸ್ಕಾಲರ್‌ಶಿಪ್‌, ಪಠ್ಯ, ಬಟ್ಟೆ ಸೇರಿದಂತೆ ಶಿಕ್ಷಣ ತರಬೇತಿಯನ್ನು ನೀಡಲಾಗುತ್ತದೆ.

ಇಲ್ಲಿಯವರೆಗೂ ಸುಮಾರು 2000 ಬೇಸಿಗೆ ಶಿಬಿರಗಳನ್ನು ಆಯೋಜಿಸಿರುವ ಸಂದೀಪ್‌ ಉನ್ನತ ವ್ಯಾಸಂಗಕ್ಕಿರುವ ಸರ್ಕಾರಿ  ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾರೆ. ತಮ್ಮ ಅಭಿಯಾನದ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿ ಅದನ್ನು ಬಡ ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ದೇಶದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ವ್ಯಂಗ್ಯದಂತೆ ಕಾಣುತ್ತಿದ್ದು, ಈ ಅಸಮತೋಲನವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಈ ಅಂದೋಲನ ಆರಂಭಿಸಿದ್ದೇನೆ ಎನ್ನುತ್ತಾರೆ ಸಂದೀಪ್‌. ಭಾರತ್‌ ಕಾಲಿಂಗ್‌ ಅಭಿಯಾನಕ್ಕೆ ಹಲವಾರು ಸ್ವಯಂಸೇವಾ ಸಂಸ್ಥೆಗಳು ಸಹ ನೆರವು ನೀಡುತ್ತಿದ್ದು ಇದರಲ್ಲಿ ವಿದೇಶಿ ಸಂಸ್ಥೆಗಳು ಸೇರಿವೆ.

ಅದ್ವೈತ್‌ ಕುಮಾರ್‌

ಇದು ಕಾನ್ಪುರ ಹುಡುಗನ ಸಾಧನೆಯ ಕಥೆ. ಗಂಗಾ ನದಿಯ ತಟದಲ್ಲಿ ಹಾಗೂ ಕಾನ್ಪುರದ ಸುತ್ತಮುತ್ತಲಿನ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿರುವ ಭಗೀರಥ ಎಂದೇ ಅದ್ವೈತ್‌ ಜನಪ್ರಿಯ. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ಥಳೀಯ ಸರ್ಕಾರದ ಸಹಾಯಧನದಲ್ಲಿ ಶುದ್ಧ ಕುಡಿಯುವ ನೀರಿನ ‘ಸುಜಲ’ ಯೋಜನೆಯನ್ನು ಪರಿಚಯಿಸುವ ಮೂಲಕ ಅದ್ವೈತ್‌ ದೇಶದ ಗಮನ ಸೆಳೆದಿದ್ದಾರೆ.

ಅದ್ವೈತ್‌ ಪೆನ್ನೆ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಈ ಸುಜಲದ ಪರಿಕಲ್ಪನೆ ಹುಟ್ಟಿದ್ದು ಪತ್ರಿಕೆಯೊಂದರ ವರದಿಯಿಂದ. ಭಾರತದಲ್ಲಿ ಶೇ 21ರಷ್ಟು ಜನರು ಕಲುಷಿತ ನೀರನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂಬ ವರದಿ ಅದ್ವೈತ್‌ನನ್ನು ಬಹುವಾಗಿ ಕಾಡಿತು. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ನೀರು ಶುದ್ಧೀಕರಣ ಘಟಕವನ್ನು ದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಯಾಕೆ ಸ್ಥಾಪಿಸಬಾರದು ಎಂಬ ಆಲೋಚನೆ ಹೊಳೆಯಿತು. ಈ ಬಗ್ಗೆ ತಾಯಿ ಮತ್ತು ಗೆಳೆಯರೊಂದಿಗೆ ಚರ್ಚಿಸಿದರು. ಇದು ನೈರ್ಮಲ್ಯ ಮತ್ತು ಸಾಮಾಜಿಕ ಕೆಲಸವಾದ್ದರಿಂದ ಈ ಯೋಜನೆಯಲ್ಲಿ ತಾವು ತೊಡಗಿಕೊಳ್ಳುವ ಅಭಯ ನೀಡಿದರು.

ಕೂಡಲೇ ಕಾರ್ಯಪ್ರವೃತ್ತನಾದ ಅದ್ವೈತ್‌ ಯೋಜನೆಯನ್ನು ಸಿದ್ಧಪಡಿಸಿದರು. ಸುಮಾರು ಎರಡು ಸಾವಿರ ಜನರು ವಾಸಿಸುವ ಗ್ರಾಮದಲ್ಲಿ ಸ್ವಂತ ಖರ್ಚಿನಲ್ಲಿ ಸೌರಶಕ್ತಿ ಮತ್ತು ವಿದ್ಯುತ್‌ ಚಾಲಿತ ನೀರು ಶುದ್ಧೀಕರಣ ಘಟಕವನ್ನು ಆರಂಭಿಸಿದರು. ಜನರಿಗೆ ಒಂದು ರೂಪಾಯಿಗೆ ಒಂದು ಲೀಟರ್‌ ನೀರು ಕೊಡಲು ಆರಂಭಿಸಿದರು. ಆರು ತಿಂಗಳ ಬಳಿಕ ಆ ಗ್ರಾಮದಲ್ಲಿ ಕಲುಷಿತ ನೀರನ್ನು ಸೇವಿಸಿ ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿರುವವರ ಸಂಖ್ಯೆಯು ಕ್ಷೀಣಿಸಿತು.

ಈ ಪರಿಕಲ್ಪನೆಯನ್ನು ಕೆಲ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ಥಳೀಯ ಸರ್ಕಾರದ ಮುಂದಿಟ್ಟರು. ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ತಗಲುವ ವೆಚ್ಚವು ಕಡಿಮೆ ಇದ್ದುದರಿಂದ ಸಂಸ್ಥೆಗಳು ಮತ್ತು ಸರ್ಕಾರ ಈ ಘಟಕಗಳನ್ನು ಸ್ಥಾಪಿಸಲು ಆಸಕ್ತಿವಹಿಸಿದವು. ಹೀಗೆ ಆರಂಭವಾದ ಅದ್ವೈತ್‌ನ ಭಗೀರಥ ಯತ್ನದಿಂದಾಗಿ ಇಂದು ಆಗ್ರಾ ಮತ್ತು ಕಾನ್ಪುರ ಭಾಗದಲ್ಲಿ 30,000 ಘಟಕಗಳನ್ನು ತೆರೆಯಲಾಗಿದೆ. ಈ ಭಾಗದ ಜನರು ಶುದ್ಧ ನೀರನ್ನು ಕುಡಿಯುತ್ತಿದ್ದಾರೆ. ಈ ಯೋಜನೆಯನ್ನು ದೇಶದಾದ್ಯಂತ ಪರಿಚಯಿಸುವ ಕನಸು ಅದ್ವೈತ್‌ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT