ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಬೆಂಕಿ ಇದ್ಹಂಗ...

ಪಿಸು ಮಾತು
Last Updated 22 ನವೆಂಬರ್ 2014, 20:22 IST
ಅಕ್ಷರ ಗಾತ್ರ

‘ಭಾಳಷ್ಟು ಮಂದಿ ಗಂಡಸರು, ಹೆಣ್ಮಕ್ಕಳಿಗೆ ಹೊಗಳಿದ್ರಾತು, ಅಸಮಾಧಾನ ದೂರ ಆಗ್ತದ ಅಂತ ತಿಳೀತಾರ. ಆದ್ರ ಮನಸೀಗೆ ನೋವಾದಾಗ ಯಾವ ಹೊಗಳಿಕಿನೂ ಕಿವಿಯಿಂದೊಳಗ ಇಳಿಯೂದಿಲ್ಲ. ಮನಸು ಅರಳಸೂದಿಲ್ಲ.

ಬದಲಿಗೆ, ನನ್ನೊಳಗ ನೋಡಲಾರದ ಮನಷಾ, ಹೊರಗಿನ ಚಂದ ನೋಡಿ ಹೊಗಳಿದ್ರೇನು? ಬಿಟ್ರೇನು ಅಂತ ಮತ್ತಿಷ್ಟು ಮುದುಡಿ ಹೋಗ್ತದ.

ಕೆಲವೊಮ್ಮೆಯಂತೂ ಓಲೈಸುವ ಭರದೊಳಗ ಹೆಣ್ಮಕ್ಕಳ ಎದೀನೇ ಸುಡುವ ಕೆಲಸ ಮಾಡ್ತಾರ.
ಹೆಣ್ಮಕ್ಕಳನ್ನ ಅರ್ಥ ಮಾಡಿಕೊಳ್ಳೂದು ಅಂದ್ರ ಅಷ್ಟೇನಾ? ಹಿಡಿ ಪ್ರೀತಿ ಅಂದ್ರ ಒಂದೀಟು ನಂಬಿಕಿ, ಒಂದೀಟು ಕಾಳಜಿ, ಸುಖಾ–ದುಃಖಾ ಎಲ್ಲಾದ್ರೊಳಗೂ ನಾ ಅದೀನಿ ಅನ್ನುವ ಅಚಲ ಭರವಸಿ. ಅದ್ಯಾವುದೂ ನೀಡದೇ ಬರೇ ನಿನ್ನ ಕಣ್ಣ ಚಂದ, ಬಣ್ಣ ಚಂದ ಅಂದ್ರ ಅದ್ಯಾವುದೂ ಮನಸಿಗೆ ಇಳಿಯೂದೇ ಇಲ್ಲ. ಯಾಕಂದ್ರ ಎರಡೂ ಮಾಸತಾವ. ಮಾಸುವ ಚಂದಕ್ಕಿಂತ ಮಾಗುವ ಅನುಭವಗಳು ಪ್ರೀತಿಗೊಂದು ಹೊಸತನಾ ಕೊಡ್ತಾವ.

ಹೆಣ್ಮಕ್ಕಳು ಮತ್ತ ಗಣ್ಮಕ್ಕಳ ನಡುವಿನ ಕಂದರ ಅತಿ ಹೆಚ್ಚಾಗೂದು ಇದೇ ಕಾರಣಕ್ಕ. ಗಂಡಸರು ಭಾಳ ಭೌತಿಕವಾಗಿ ವಿಚಾರ ಮಾಡ್ತಾರ. ಹೆಂಗಸರು ಭಾಳ ಭಾವನಾತ್ಮಕವಾಗಿ ವಿಚಾರ ಮಾಡ್ತಾರ. ಒಂದು ಹೊರ ಸುಳಿ, ಇನ್ನೊಂದು ಒಳ ಸುಳಿ. ಇಬ್ಬರೂ ಅವವೇ ಸುಳಿಯೊಳಗ ಗಿರಕೀ ಹೊಡೀತಾರ. ಇವು ಸುಳಿ ಆಗಿರೂದ್ರಿಂದ ಒಬ್ಬರು ಇನ್ನೊಬ್ಬರ ಸುಳೀಯೊಳಗ ಬರೂಹಂಗಿಲ್ಲ. ತಮ್ಮ ಸುಳಿಯಿಂದ ಹೊರಗ ಹೋಗೂಹಂಗಿಲ್ಲ.

ಬದುಕು ಮಾತ್ರ ಹಂಗೇ ಸಾಗ್ತದ. ಈ ಸುಳಿಯೊಳಗ ಗಿರಕಿ ಹೊಡ್ಕೊಂತ. ಪಲ್ಟಿ ಹೊಡ್ಕೊಂತ. ನೀರು ಕುಡದು, ಕಣ್ಣೀರು ನುಂಗಕೊಂತ...’
ನಮ್ಮ ಉಮಕ್ಕನ ಮಾತೇ ಹಂಗ. ಹಸೀ ಗೋಡಿಯೊಳಗ ಹಳ್ಳ ನಟ್ಟಂಗ.

ಅದಕ್ಕೇನಾ ಸಂಬಂಧದೊಳಗ ಬಿರುಕು ಬರೂದು? ಯಾವುದೂ ಬ್ಯಾಡಾ ಅಂತ ಕವಲೊಡದು, ಹೋಗೂದು? ಅಕಿನ ಮಾತಿಗೊಂದು ಪ್ರಶ್ನೆ ಎದುರಾಗಿತ್ತು. ಸಾಲಗೆ ಕುತ್ಗೊಂಡ ಅಕ್ಕನ ಹೆಣ್ಮಕ್ಕಳಿಗ್ಗೆ ಉಮಕ್ಕ ಯಾವತ್ತೂ ಚಿಕ್ಕಮ್ಮ ಆಗಲಿಲ್ಲ. ಅಕ್ಕನೇ ಆದ್ಲು. 

‘ಹೆಣ್ಣು ಗಂಡಿನ ಸಂಬಂಧದೊಳಗ ಒಬ್ಬ ಅಪ್ಪ, ಒಬ್ಬ ಅಮ್ಮ ಇರಬೇಕು. ಆಗಷ್ಟೇ ಅವು ಸ್ಥಾಯಿಯಾದ ಮಮಕಾರ ಹಂಚಬಹುದು. ಅಂತಃಕರಣದ ಸೆಲಿಯಿಂದ ಪ್ರೀತಿ ಒಡಮೂಡಬಹುದು.

ಆದ್ರ ಅಲ್ಲಿ ಬರೇ ಗಂಡಸು ಮತ್ತು ಹೆಂಗಸು ಇದ್ದಾಗ ಮೋಹ ಮಾತ್ರ ಇರ್ತದ. ಆ ಮೋಹದ ಆಯಸ್ಸು ಸುದೀರ್ಘ ಅಲ್ಲ.
ಪುರುಷರಿಗೆ ತಮ್ಮನ್ನ ಮೆಚ್ಚೋರು ಬೇಕು. ವಿಮರ್ಶೆ ಮಾಡೋರು ಬ್ಯಾಡ. ಒಂದು ಹೆಣ್ಣಿಗೆ ತನ್ನದಲ್ಲದವರು ಹೊಗಳಿದ್ರ ಎಷ್ಟು ಇರಸುಮುರುಸು ಆಗ್ತದೋ, ಒಬ್ಬ ಗಂಡಸಿಗೆ ಅಷ್ಟೇ ಖುಷಿ ಆಗ್ತದ. ಯಾಕಂದ್ರ ಇಲ್ಲಿ ಗಂಡಸಿಗೆ ಹೊಗಳಿಕೆ ಅನ್ನೂದು ಅವನ ಅಹಂಕಾರವನ್ನು ಪೋಷಿಸುವ ಗುಣ. ಹೆಂಗಸಿಗೆ ಅದು ತನ್ನ ವಲಯವನ್ನು ಇನ್ಯಾರೋ ಪ್ರವೇಶಿಸುವ ಯತ್ನ ಅನ್ನಸ್ತದ.

ಹೆಣ್ಮಕ್ಕಳ ಮನಸಿನೊಳಗ ತನ್ನನ್ನೂ ಕೇಳಲಿ ಅನ್ನುವ ಅದಮ್ಯ ಭಾವ ಇರ್ತದ. ಗಂಡಸಿಗೆ ತಾನು ಹೇಳಿದ್ದನ್ನೇ ಕೇಳಲಿ ಎನ್ನುವ ಅಹಂಭಾವ ಇರ್ತದ. ಇಬ್ಬರೊಳಗೂ ಈ ತಹತಹ ಹೆಚ್ಚಾದಾಗ, ಇಬ್ಬರೂ ಒಬ್ಬರಿಂದೊಬ್ಬರು ದೂರ ಆಗ್ತಾರ. ಆಮ್ಯಾಲೆ ಯಾವ್ದರೆ ಹಳಹಳಕಿ ಇರ್ತದೇನು ಅವರ ನಡುವೆ? ಅದನ್ನ ಮಾತ್ರ ಅವರೇ ಹೇಳಬೇಕು.

ಭಾಳ ಆಪ್ತರು ಆಗಿದ್ರ, ಅದದೇ ತಪ್ಪುಗಳನ್ನು ಮಾಡಿ, ಮತ್ತದದೇ ನೋವು ನೀಡಿ, ‘ನಾವಿರೂದೇ ಹಿಂಗ, ಬೇಕಿದ್ರ ಜೊತಿಗಿರು... ಇಲ್ಲಾಂದ್ರ...’ ಮುಂದ ಮಾತಿರಾಂಗಿಲ್ಲ. ಯಾಕಂದ್ರ ಅವರಿಗದರ ಜರೂರತ್ತೇ ಇರೂದಿಲ್ಲ. ಒಂದ್ವೇಳೆ ಇದ್ರ, ನೋವಾಗ್ತದ ಅನ್ನೂದು ಗೊತ್ತಿದ್ರೂ ಅಂಥ ತಪ್ಪನ್ನು ಮಾಡೂದಿಲ್ಲ. ಅದು ಪ್ರೀತಿ. ಅದೇ ಪ್ರೀತಿ.

ಈ ‘ಜರೂರು’ ಅನ್ನೂ ಪದ ಅದ ಅಲ್ಲ, ಭಾಳ ಶಕ್ತಿ ಇರೂವಂಥ ಪದ. ಬೆಂಕಿ ಇದ್ದಂಗ. ಬೇಕಿದ್ರ ಬೆಸಿಗಿ ಹಾಕ್ತದ. ಇಲ್ಲಾಂದ್ರ ಸುಟ್ಟು ಬೂದಿ ಮಾಡ್ತದ. ಇನ್ನೊಬ್ಬರ ಅಗತ್ಯ ಪೂರೈಸಾಕ ಹೆಣ್ಮಕ್ಕಳು ಬದುಕಿರೂದು ಅನ್ನೂಹಂಗ ನಡಕೊಂಡ್ರ ಅವರೂ ಸುಡ್ತಾರ. ಒಳಗೊಳಗ ಬೂದಿಯಾಕ್ಕೊಂತ ಹೋಗ್ತಾರ. ಇಲ್ಲಿ ಯಾವ ಕಾವೂ ಇರೂದಿಲ್ಲ. ಬೆಚ್ಚಗಂತೂ ಅನಸೂದೇ ಇಲ್ಲ. ಕಪ್ಪಿಟ್ಟ ನೆನಪಿನೊಳಗ ಕರಗೂದು, ಸೊರಗೂದು ಭಾಳ ಸರಳ ಆಗ್ತದ. ಆದ್ರ ಹೆಣ್ಮಕ್ಕಳು ಗಟ್ಟಿ. ಅಂಥವನ್ನೆಲ್ಲ ನುಂಗಿಯೂ ನಗ್ತಾರ. ಗಂಡಸ್ರು ಇನ್ನಾ ಗಟ್ಟಿ. ಅಂಥಾ ಬೆಂಕಿ ಇಟ್ಟು, ಏನೂ ಆಗೇ ಇಲ್ಲ ಅನ್ನೂಹಂಗ ನಡಕೊಂಡು ಹೋಗ್ತಾರ.

ಇದು ಅವರವರ ಸಾಂಗತ್ಯ, ಅಗತ್ಯ ಮತ್ತ ಅನುಕೂಲಗಳ ಸುತ್ತೇ ಗಿರಕಿ ಹಾಕ್ತದ. ಬೇಕಾದಾಗ ಪ್ರೀತಿ ಸುರಿಸಿ, ಬ್ಯಾಡಾದಾಗ ಮಗ್ಗಲಕ ಸರಿಸಿ ಹೋಗೂದು ಅಂಥವರಿಗೆ ಅತಿ ಸಹಜ. ಒಂದು ಸಂಬಂಧದೊಳಗ ಲೆಕ್ಕಾಚಾರ ಬಂತಂದ್ರ ಇಂಥಾ ಈ ಕವಲು ಕಣಿವಿ ಆಗಿ, ಕಣಿವಿ ಕಂದರ ಆಗಿ, ಭೂಮಿ ಆಕಾಶದ ನಡುವಿನ ಅಂತರ ಸೃಷ್ಟಿ ಮಾಡೇ ಬಿಡ್ತದ’

ಉಮಕ್ಕ ಮುಗಲು ನೋಡ್ಕೊಂತ ಸುಮ್ನಾದ್ಲು. ಪ್ರೀತಿ ಸುಳಿಯೊಳಗ ಸಿಕ್ಕ ಮಗಳು ಹೊಟ್ಯಾಗ ಉರಿ ಇಟ್ಟಿದ್ಲು. ವಿಷಾ ಕುಡದು ಸಾವಿಗೆ ಅಪ್ಗೊಂಡಾಗ ಅಕೀಗೆ 18 ವರ್ಷ. ಇಕೀ ಮುಂದ ಒಂದ್ಹತ್ತು ವರ್ಷ ಬದುಕಿದ್ಲು. ಆ ಒಡಲುರಿಯೊಳಗ ಬೇಯ್ಕೊಂತ. ಉಮಕ್ಕನ ಇಡೀ ಬದುಕು ಇಂಥದ್ದೊಂದು ಪ್ರೀತಿಗೆ ಹಪಹಪಿಸಿತ್ತು. ತಾನು ಎಲ್ಲಾರಿಗೂ ತಾಯಿ ಆದ್ಲು. ಆದ್ರ ಯಾವ ಗಂಡಸೂ ತಂದಿಯ ವಾತ್ಸಲ್ಯ ಕೊಡಲಿಲ್ಲ. ಹಿಂಗಾಗಿ ಅಕೀ ಎಲ್ಲಾ ಹೆಣ್ಮಕ್ಕಳಿಗೆ ಒಂದೇ ಮಾತು ಹೇಳ್ತಿದ್ಲು...

‘ಯಾರರೆ ಕಣ್ಣು ಛಂದ, ಬಣ್ಣಾ ಛಂದ ಅಂದ್ರ ಅವರೊಳಗ ಒಂದು ನರಿ ಇರ್ತದ. ನಿಮ್ಮ ತುಟಿಯಂಚನಾಗ ಒಂದು ರೊಟ್ಟಿ ಇರ್ತದ. ಆ ರೊಟ್ಟಿ ಕಸಿಯುವ ಹುನ್ನಾರ ಅದು’ ಅಂತ ಎಚ್ಚರಕಿ ಕೊಡ್ತಿದ್ಲು.

ಮತ್ತ ಹೆಂಗ ಹುಡುಗ್ರನ್ನ ನಂಬೂದು? ಕಣ್ಣಾಂಗೊಂದು ಆತಂಕ ತುಂಬ್ಕೊಂಡೇ ತಂಗಿ ಕೇಳಿದ್ಲು.
ಖರೇ ಪ್ರೀತಿ ಮಾಡ್ತಿದ್ರ, ಕಣ್ಣ ಛಂದ ಅಂತ ಹೇಳಲಿ, ಬಿಡ್ಲಿ.. ಆ ಕಣ್ಣಾಗ ನೀರು ಬರದೇ ಇರೂಹಂಗ ನೋಡ್ಕೋತಾರ. ಬಣ್ಣದ ಬಗ್ಗೆ ಹೇಳಲಿ ಬಿಡಲಿ, ಕಣ್ಣ ಸುತ್ತ ನೋವಿನ ಬಣ್ಣ ಬರದೇ ಇರೂಹಂಗ ನೋಡ್ಕೋತಾರ. ಅದು ಅವರವರ ಅನುಭವಕ್ಕ ಬರ್ತದ. ನೆತ್ತಿಗೆ ಬಿಸಿಯುಸಿರು ತಾಕಿಸಿ, ಮುತ್ತಿಡುವ ಹುಡುಗರು, ಬೆಚ್ಚನೆಯ ತಾವು ಕೊಡ್ತಾರ. ಮಂದೀ ಮರ್ಜಿ ಕಾಯ್ಕೊಂತ, ತನ್ನನ್ನ ನಂಬ್ಕೊಂಡೋರಿಗೆ ನೋವು ಕೊಡೋರು ಎದಿಯೊಳಗ ಬೆಂಕಿ ಇಡ್ತಾರ.’

ಉಮಕ್ಕ ಸುಮ್ನಾಗಿದ್ಲು. ಬೆಂಕಿಗಿಟ್ಟ ಮಗಳು ನೆನಪಾಗಿರಬೇಕು. ‘ಕೂಸಿಗೆತ್ಕೊಂಡಾಗ ಅಗಷ್ಟಕಿ ಬಿಸಿ ಸುಖಾ ಕೊಡ್ತದ. ಅಸ್ಥಿ ಹಿಡ್ಕೊಂಡಾಗ ಚಿತೆಯ ಕಾವು, ಜೀವಾ ಸುಡ್ತದ. ಪ್ರೀತಿನೂ ಹಂಗೆ’ ಅಂತ್ಹೇಳಿ ಸುಮ್ನಾದ್ಲು. ಯಾಕೋ ಎಲ್ಲಾರ ಮನಸೊಳಗಿನ ಅದೇ ಬೆಂಕಿಯ ಕೆನ್ನಾಲಗಿ ಕಣ್ಣಾಗ ಕಂಡಂಗ ಆತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT