ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗೊಂದು ಪತ್ರ

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2016-ಮೊದಲನೇ ಬಹುಮಾನ
Last Updated 11 ಫೆಬ್ರುವರಿ 2016, 6:10 IST
ಅಕ್ಷರ ಗಾತ್ರ

ನನ್ನೊಲವೇ...

ನಿತ್ಯ ನಿರಂತರ ಅಂದಿನಿಂದ ಇಂದಿನವರೆಗೂ ಮೌನದಲ್ಲೂ, ಮಾತಿನಲ್ಲೂ, ನಗುವಿನಲ್ಲೂ, ನನ್ನ ಕನಸಿನಲ್ಲೂ ಪ್ರತಿ ಕ್ಷಣವೂ ಬಿಡದೆ ನನ್ನೊಡನಿದ್ದ ನಿನಗೆ ಈ ಪ್ರೇಮಾಲಾಪನೆಯ ಸವಿಯೋಲೆ...

ಹೃದಯ ಜೊತೆ ಬೇಡಿದಾಗ, ಮನಸ್ಸು ಆಸರೆ ಬಯಸಿದಾಗ, ಮಧು ಮಧುರವಾಗಿ ಎನ್ನೊಳು ಮಿಡಿದ ಪ್ರೀತಿ ಮೌನ ವೀಣೆ ನುಡಿಸಿದಾಗ, ಭಾವ ತಂತಿಯನು ಮೀಟಿದವ ನೀನಲ್ಲವೇ... ಅಂದು ಸಂಜೆ ಹೊತ್ತಿನಲಿ ದಿನಕರನ ಕೆಂಪು ಛಾಯೆಯಲಿ ಬೆಟ್ಟವೇರಿ ಬಂಡೆಗಲ್ಲು ಹತ್ತಿ ಭಾವದೂರಿನಲಿ ಅಲೆದಾಡಿದಾಗ ಕೈಯಾಡಿಸಿ ಬಳಿ ಕರೆದವನು ನೀನಲ್ಲವೇ... ಮಾತಾಡದೆಯೇ ಮನ ಸೆಳೆದವನು ನೀನಲ್ಲವೇ... ನನ್ನೊಳು ಕವಿದ ಮೌನದಲಿ ಮೂಡುವ ತೆರೆಗಳಿಗೆ ನೀ ಕಲ್ಪನಾ ರಸಮೈತ್ರಿಯಾದೆ. ಚಿತ್ತದೊಳು ಅಮರ ದೀಪ ಬೆಳಗಿದೆ. ನಿನ್ನ ಸಖ್ಯ ಚಿನ್ನವಾಗತೊಡಗಿತು. ಜೀವನಾಡಿಯಲಿ ಹಾಡಿನ ದನಿ ಕತ್ತಲೆ ಬರಹಕ್ಕೆ ಬೆರಳಾಯಿತು.

ಅಂದಿನಿಂದ ನನ್ನೊಳು ಪ್ರೇಮ ಕಾವ್ಯ ರಸಧಾರೆ ಹರಿಸಿದವನೂ ನೀನೇ. ನಿನ್ನ ನೆನಪಾದಾಗ, ಮನಸ್ಸು ಕರೆದಾಗ, ಹೃದಯ ತೆರೆದಾಗ, ನನ್ನ ಕಣ್ಣೆದುರು

ನಿನ್ನ ಬರುವು ಅಂದಾಜಿಗೆ ಸಿಗದಷ್ಟು ಮಧುರ... ನಿನ್ನನ್ನು ನೋಡಬೇಕೆನಿಸಿದಾಗಲೆಲ್ಲಾ ನನ್ನಿರುವು ಹೂವಿನ ಬಳಿ... ಯಾಕೆ ಗೊತ್ತಾ? ಸುಮದೆಸಳ ಮೇಲಿನ ಹನಿಬಿಂದುವಿನಲ್ಲಿ ನಿನ್ನ ಮೊಗವನ್ನು ನೋಡುವುದೆಂದರೆ ನನಗೆ ಸಂಭ್ರಮ. ಅಲ್ಲೇ ಕಣ್‌ ಸನ್ನೆಯಲ್ಲೇ... ‘ನಗು’ ಎನುವೆ, ‘ಯಾಕೆ’ ಎಂದಾಗಲೆಲ್ಲಾ ನಿನ್ನದೊಂದೇ ಉತ್ತರ ‘ನಾಳಿನ ಮೊಗ್ಗುಗಳ ಅನುಕರಣೆಗೆ ನಿನ್ನ ಮುಖವಿರಲಿ’ ಮೈಮನ ಪುಳಕಿತಗೊಳಿಸಿ, ಭಾವಪರವಶಳನ್ನಾಗಿಸಿ, ಎನ್ನೊಳು ಪ್ರೇಮರಾಗ ನುಡಿಸಿ ಮತ್ತೆ ಮರೆಯಾಗುವೆ.

ನಿನ್ನ ಪ್ರೇಮಾಲಾಪದ ಪದಪುಂಜವನು ನಾ ಹೇಗೆ ಚಿತ್ರಿಸಲಿ?... ನಮ್ಮೀ ಮುಗಿಯದ ಒಲವಿನ ಓಲೆಯ ಬರೆಯ ಹೊರಟ ಲೇಖನಿಗೂ ಸುಸ್ತಾದೀತು. ಮುತ್ತಿನ ಹರಳಿನಂದದಿ ಅನಾವರಣಗೊಳ್ಳುವ ಪದಸಂಕುಲವನು ಕಂಡ ಬಿಳಿಹಾಳೆ ಬೆಕ್ಕಸ ಬೆರಗಾದೀತು... ನೀನಿರುವುದೇ ಹಾಗೆ ಕಣೋ. ನನ್ನೊಳು ಪ್ರೇಮಕಾವ್ಯ ಸ್ಫುರಿಸಿದ, ನರನಾಡಿಗಳಲ್ಲಿ ಸಂಚರಿಸಿದ ನಿನ್ನನ್ನು ಮೆದು ಹೃದಯದ ಹೂದೋಟದಲ್ಲಿ ಅಲೆಯಬಿಟ್ಟಿದ್ದೇನೆ. ನಿನ್ನ ಪ್ರೀತಿ... ನನ್ನೊಳಿರುವ ರೀತಿ... ಹೇಗಿದೆಯೆಂದರೆ ಮಡಿಸಿಟ್ಟ ರೇಷ್ಮೆ ನುಣುಪಿನಂದದಿ ನಲಿಯುತ್ತಾ ಕಾಲೂರಿ ಸಾಗುವ ಅಲೆಗಳಂತೆ, ಜೀವಗಳ ನಡುವೆ ಮೈಲುಗಳ ಅಂತರವಿದ್ದರೂ ಭಾವಗಳು ಸೇರಿದಂತೆ, ನಿತ್ಯ ನಿರ್ಮಲ ಹರಿವ ತೊರೆಯಂತೆ, ನಿನ್ನ ನೆನಪಿನ ಕಚಗುಳಿಗೆ ಹಿತವಾಗಿ, ಕಂಡ ಕನಸಿಗೆ ಹಸಿರು ವನವಾಗಿ, ತಿಂಗಳ ಅಂಗಳದ ನೆನಪಾಗಿ, ಕಾಡುವ ಭಾವನೆಗಳಿಗೆ ಉಂಗುರವಾಗಿ ಎನ್ನೊಳು ಕೊರಗನುಳಿಸದಂತೆ ಅಳಿಸುತ್ತಿರುವೆ.

ನನ್ನದೆನುವ ನೀನಾಡದ ಮಾತು, ನಿನ್ನಿಂದಾಗಿಯೆ ನನ್ನೀ ಮೌನ... ನಮ್ಮೊಳು ಕದನವಿಲ್ಲ, ಮುನಿಸಿಲ್ಲ. ಅಂಟು ಬಿಡದ ವಾದಗಳಿಲ್ಲ, ನಾ ಕಂಡ ಕನಸಲೆಲ್ಲಾ ಇಟ್ಟ ಹೆಜ್ಜೆ ನಿನ್ನವರೆಗೆ... ಅಲ್ಲಿ ಬೆರೆತ ಜೀವದುಸಿರು ನನ್ನವರೆಗೆ... ಆಹಾ ಎಷ್ಟು ಶುಭ್ರ ವರ್ಣ ನಿಮ್ಮ ಮೃದು ನಿಲಯ... ನಾನಲ್ಲಿ ಬಯಕೆಯ ಬಳ್ಳಿಯಾಗಿರುವೆ. ಜುಮ್ಮೆನಿಸುವ ಆಲೋಚನೆಗಳ ಅದುಮಿಟ್ಟು ಹಸಿಯಾರದ ಅಕ್ಷರಗಳ ಕೂಡಿಸಿ ಕವಿತೆ ಬರೆಯಹೊರಟರೆ, ಅಲ್ಲೂ ನಿನ್ನ ಸ್ವರ, ಭಾವಗಳ ಅದಲು ಬದಲು ಮಾಡುವ ಮಾತಿರದ ಮೌನದಲ್ಲಿ ಬರೆದ ಹಾಡಲ್ಲೆಲ್ಲಾ ನೀನೇ ಕಣೋ.

ನಿನ್ನ ನಿಷ್ಕಲ್ಮಶ ಪ್ರೀತಿಗಾಗಿ, ಕಾಡುತ್ತಾ ಮುದ್ದಿಸುವ ಭಾವಕ್ಕಾಗಿ, ಬೇಡುವ ಬಯಕೆಗಾಗಿ, ಈ ಪ್ರೇಮಪತ್ರ ಬರೆಯೊ ಆಸೆ ಚಿಗುರಿದ್ದು ನಿಜ. ಬರೆಯ ಹೊರಟಾಗ ಕಾಡಿದ ಪ್ರಶ್ನೆ... ಎಲ್ಲಿ ಬರೆಯಲಿ ಪ್ರೇಮಪತ್ರ...? ಬಿಳಿ ಹಾಳೆಯಲ್ಲಿ...? ಇಲ್ಲ...! ಅಲ್ಲಿ ಬರೆದರೆ ಅವರಾರದೋ ದೃಷ್ಟಿ ಸೋಕಿ ಮೈಲಿಗೆಯಾಗಬಹುದು. ಹತ್ತು ನೂರು ಮನಸ್ಸುಗಳನ್ನು ರಾಡಿಗೊಳಿಸಬಹುದು. ತರಾವಳಿಯ ಮಾತುಗಳಿಂದ ಚಿತ್ತ ಚಂಚಲವಾಗಬಹುದು. ಒಲ್ಲೆ...! ನಮ್ಮ ಪ್ರೇಮ ನಿವೇದನೆಗೆ ಅಕ್ಷರದ ರೂಪ ಬೇಡ, ಬಿಳಿ ಹಾಳೆಗಳ ಹಂಗಿನ ಆಸರೆಯೂ ಬೇಡ, ಕರಿ ಶಾಯಿಯ ನೆರಳು ಬೇಡ, ಬಿರುಸಿನ ಕೈಗಳಿಗೆ ಸಿಕ್ಕಿ ಚೂರಾಗುವುದೂ ಬೇಡ. ನನ್ನ... ನಿನ್ನ... ಒಲವಿನ ಮಧುರ ಸಂದೇಶವನ್ನು ಹೊತ್ತ... ಪ್ರೇಮಪತ್ರ, ನನ್ನ ಹೃದಯದ ಹೊತ್ತಗೆಯಲ್ಲಿ ಪಡಿಮೂಡಿಸಿರುವೆ.

ಅಲ್ಲಿ ಯಾರ ಭಯವೂ ಇಲ್ಲ. ನಾನು... ನೀನಷ್ಟೇ. ನಮ್ಮದೇ ಲೋಕ, ಅಲ್ಲಿ ನಾವು ಸರ್ವ ಸ್ವತಂತ್ರರು. ನಾವಿಬ್ಬರು, ಒಬ್ಬರಿಗೊಬ್ಬರು ಅಲ್ಲೇ ಸೇರೋಣ. ನಿನ್ನ ಮಡಿಲಲ್ಲಿ ನಾನೊಮ್ಮೆ... ನನ್ನ ಮಡಿಲಲ್ಲಿ ನೀನೊಮ್ಮೆ... ಹಾಯಾಗಿ ತಲೆಯಿಟ್ಟು ಮಲಗಿ ಕಣ್ಣ ನೋಟದ ಸೇರಿಸಿ ಕನಸು ಕಾಣೋಣ. ನೋವನ್ನು ಮರೆಯೋಣ...

ನೋಡು ನೋಡು... ಎಷ್ಟೊಂದು ಪ್ರೀತಿಸ್ತಾ ಇದ್ದೀನಿ ನಾನು ನಿನ್ನ... ಈಗಲಾದರೂ ಅರ್ಥವಾಗಿರ್ಬೇಕಲ್ವಾ ನಿನಗೆ...? ಬಿಡು... ನೀನು ತಿಳಿದುಕೊಳ್ಳುವುದಾದರೂ ಹೇಗೆ ಹೇಳು...? ಈವರೆಗೂ ಸಿಗದವನಿಗಾಗಿ... ನೋಟಕ್ಕೂ ನಿಲುಕದವನಿಗಾಗಿ... ಬರೀ ಕಲ್ಪನೆಯಲ್ಲೇ ನಿನ್ನ ರೂಪದ ಶಿಲ್ಪವನ್ನು ಕಡೆದು... ಭಾವನೆಗಳ ಪ್ರಪಂಚದೊಳಗೇ ಪ್ರೀತಿಸುತ್ತಾ ಬಂದಿರುವ ನನ್ನ ಪ್ರೇಮದ ಸರದಾರ ಇನ್ನೂ ಬಳಿ ಬಂದಿಲ್ಲವೆಂದರೆ ಯಾರು ತಾನೆ ನಂಬಿಯಾರು...? ನನ್ನ ಪ್ರೀತಿ ಈತರನೇ ಇರಬೇಕೆಂಬ ಹಟದಿಂದಲೋ... ಅಥವಾ ನನ್ನ ಅತಿಯಾದ ನಿರೀಕ್ಷೆಯಿಂದಲೋ... ಅಥವಾ ನಿನ್ನ ಹುಡುಕುವ ಪ್ರಯತ್ನವೇ ನಾನು ಮಾಡಿಲ್ಲವೋ... ಏನೋ ಗೊತ್ತಿಲ್ಲ.

ನನ್ನೊಳಿರುವ ಪ್ರೇಮಕೆ ರೂಪು ಕೊಟ್ಟವ ಇನ್ನೂ ಬಳಿ ಬಂದಿಲ್ಲ... ಇರಬಹುದು ಎಲ್ಲಾದರೂ... ಜೊತೆಯಿದ್ದರೆ ಮಾತ್ರ ಪ್ರೀತಿನಾ...? ಇಲ್ಲ...! ವಾಸ್ತವದಲ್ಲಿ ಹತ್ತಿರವಿದ್ದಷ್ಟು ಪ್ರೀತಿ, ಸ್ವಾರ್ಥಕ್ಕೆ ಬದಲಾಗಬಹುದು... ವಿರಸಗಳ ಸುನಾಮಿಯೇಳಬಹುದು... ದಾರ ಕಡಿದ ಗಾಳಿಪಟವಾಗಬಹುದು. ಬೇಡ ಹಾಗಾಗದಿರಲಿ... ನಮ್ಮ ಪ್ರೀತಿ ನಿತ್ಯ ನಿರಂತರವಾಗಿರಲಿ... ಭಾವನೆಗಳೊಳಗೆ ಪಲ್ಲವಿಸುತ್ತಿರಲಿ... ಇಂತಹ ಹಲವಾರು ಪ್ರೇಮ ಸಂದೇಶಗಳು ನನ್ನ ಹೃದಯ ಮಂದಿರ ಸೇರಿ, ಅದುವೇ ನನ್ನ ಕವಿತೆಯ... ಭಾವದ... ಜೀವದ... ಒಲವಿನ... ಬದುಕಿಗೆ ಸ್ಫೂರ್ತಿಯಾಗಿರಲಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT