ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ ಪಾಠಕ್ಕೆ ಸುನಿಲ್‌ ಸಿದ್ಧ

Last Updated 29 ಮೇ 2016, 19:30 IST
ಅಕ್ಷರ ಗಾತ್ರ

ಎಣ್ಣೆ ಹಚ್ಚಿ ಒಪ್ಪ ಒರಣವಾಗಿ ಬಾಚಿದ ತಲೆಗೂದಲು, ವಾತಾವರಣ ತಂಪಿದ್ದರೂ ಅಭಿಮಾನಿಗಳ ಮುತ್ತಿಗೆ– ಕ್ಯಾಮೆರಾಗಳ ಪ್ಲಾಷ್‌ ಎದುರಿಸಲು ಕಣ್ಣಿಗೆ ತಂಪು ಕನ್ನಡಕ, ಆಗಾಗ ಪೊದೆ ಮೀಸೆ–ಗಡ್ಡದೊಳಗೆ ಕೈಯಾಡಿಸುತ್ತಲೇ ಮೌನವಾಗಿ ಎಲ್ಲವನ್ನೂ ಆಲಿಸುತ್ತಿದ್ದ ‘ಧಡ್ಕನ್‌’ ಹುಡುಗ ಎದ್ದುನಿಂತು ‘ಗುಡ್‌ ಮಾರ್ನಿಂಗ್‌’ ಎಂದಾಗ ನೆರೆದಿದ್ದವರಲ್ಲಿ ಮಿಂಚಿನ ಸಂಚಾರ.

ಇದು ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಭಾನುವಾರ ನಗರದಲ್ಲಿ ‘ಗಾಲಾ ಸ್ಕ್ವೇರ್’ ಉದ್ಘಾಟನೆಗೆ ಬಂದಿದ್ದಾಗ ಕಂಡು ಬಂದ ದೃಶ್ಯ. ತೆರೆಯ ಮೇಲಷ್ಟೇ ಅಲ್ಲ, ನಿಜಜೀವನದಲ್ಲಿಯೂ ‘ಫಿಟ್‌ ಆ್ಯಂಡ್‌ ಫೈನ್’ ಎಂದು ಸುನಿಲ್‌ ಶೆಟ್ಟಿ ಅವರ ಮೈಕಟ್ಟು ಸಾರಿ ಹೇಳುತ್ತಿತ್ತು. ಹೀರೊಗೆ ಈಗ 54ರ ಹರೆಯ ಎಂದರೆ ನಂಬಲು ಅಲ್ಲಿದ್ದವರಾರೂ ತಯಾರಿರಲಿಲ್ಲ. ಅವರ ಆರೋಗ್ಯದ ಗುಟ್ಟಿನೊಂದಿಗೇ ಆರಂಭವಾದ ‘ಮೆಟ್ರೊ’ ಮಾತುಕತೆ ನಿಧಾನವಾಗಿ ಸಿನಿಮಾ, ಮಕ್ಕಳು, ಆಹಾರ, ಕರ್ನಾಟಕವನ್ನು ಸುತ್ತು ಹಾಕಿತು.

* 50ರ ನಂತರವೂ ಇಷ್ಟೊಂದು ಫಿಟ್‌ ಆಗಿದ್ದೀರಿ. ನಿಮ್ಮ ಫಿಟ್‌ನೆಸ್ ಗುಟ್ಟೇನು?
ಮೊದಲಿನಿಂದಲೂ ನಾನು ದೇಹವನ್ನು ಫಿಟ್‌ ಆಗಿಯೇ ಇಟ್ಟುಕೊಂಡಿದ್ದೇನೆ. ಆದರೆ, ಜನರು ಈಗ 50 ದಾಟಿದವರನ್ನು ನನ್ನ ಜತೆ ಹೋಲಿಸಿ ನೋಡುತ್ತಾರೆ. ಆಗಷ್ಟೇ ಅವರಿಗೆ ಆಶ್ಚರ್ಯ ಆಗುತ್ತೆ. ಸದಾ ಶಾಂತವಾಗಿರುವುದೇ ನನ್ನ ಆರೋಗ್ಯದ ಗುಟ್ಟು. ನಾನು ಎಲ್ಲರಿಗೂ ಯಶಸ್ಸು ದೊರೆಯಲಿ ಎಂದು ಬಯಸುವವನು.

ಅದರ ಜತೆಗೆ ನನಗೂ ಯಶಸ್ಸು ದೊರೆಯಲಿ ಎನ್ನುವ  ಮನಸ್ಥಿತಿ ನನ್ನದು. ನನ್ನ ಯಶಸ್ಸನ್ನು ನೋಡಿ ಅದರಲ್ಲಿ ಏನಾದರೂ ನ್ಯೂನತೆಗಳಿದ್ದಲ್ಲಿ ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ. ನಮ್ಮ ಮನೆಯಲ್ಲಿ ಮೂರು ತಲೆಮಾರು ಇದೆ. ಕುಟುಂಬದ ಪ್ರೀತಿಯೇ ನನ್ನನ್ನು ಕಾಪಾಡುತ್ತಿದೆ.

* ನೀವು ಹಲವೆಡೆ ಹೆಣ್ಣುಮಕ್ಕಳ ವಿಚಾರ ಪ್ರಸ್ತಾಪಿಸಿದ್ದೀರಿ. ನಿಮಗೆ ಹೆಣ್ಣುಮಕ್ಕಳು ಎಂದರೆ ಅಷ್ಟು ಇಷ್ಟವೇ?
ಸಾಮಾನ್ಯವಾಗಿ ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಮತ್ತು ಅದು ಅವನ ಹೆಂಡತಿಯೇ ಆಗಿರುತ್ತಾಳೆ ಎಂಬ ಪ್ರತೀತಿ ನಮ್ಮಲ್ಲಿದೆ. ಆದರೆ, ಅದನ್ನು ನಾನು ಒಪ್ಪುವುದಿಲ್ಲ. ನನ್ನ ಪಾಲಿಗೆ ಅಮ್ಮನೇ ಮೊದಲು, ನಂತರ ಹೆಂಡತಿ, ಮಗಳು. ನಾನು ಚಿಕ್ಕವನಾಗಿದ್ದಾಗಿನಿಂದ ನನ್ನಮ್ಮ ಕೈ ಹಿಡಿದು ನಡೆಸಿದಳು.

ನನ್ನ ಇಂದಿನ ಯಶಸ್ಸಿಗೆ ಅವಳೇ ಕಾರಣ ಅನ್ನೋದು ನನ್ನ ನಂಬಿಕೆ. ಕಷ್ಟದ ದಿನಗಳಲ್ಲಿ ಹೆಂಡತಿ ನನಗೆ ಸಾಥ್ ನೀಡಿದ್ದಾಳೆ. ಮತ್ತೀಗ ಮಗಳು... ನನ್ನ ಆಶಯ ಎನಿಸಿದ್ದಾಳೆ. ನೂರಕ್ಕೆ ಶೇ 99ರಷ್ಟು ಜನರನ್ನು ಮುಪ್ಪಿನಲ್ಲಿ  ನೋಡಿಕೊಳ್ಳುವವರು ಹೆಣ್ಣುಮಕ್ಕಳೇ. ಈ ಬಗ್ಗೆ ನನಗಂತೂ ಸಂಶಯವೇ ಇಲ್ಲ.

* ಬೆಂಗಳೂರಿನ ಬಗ್ಗೆ ಏನನ್ನಿಸುತ್ತೆ....
ಐ ಲವ್ ಬೆಂಗಳೂರು. ಇದು ಸುಂದರ ನಗರ. ಇದು ನನ್ನ ಹೋಂ ಟೌನ್‌ ಥರ.  ಐ ಲವ್ ಸೌತ್ ಇಂಡಿಯಾ. ನಾನು ಮೂಲತಃ ಮಂಗಳೂರಿನ ಮೂಲ್ಕಿಯವನು. ಅದೊಂದು ಸಣ್ಣ ಹಳ್ಳಿ. ದುರ್ಗಾ ಮಾತೆಯ ಭೂಮಿಯದು. ನಾನು ವರ್ಷದಲ್ಲಿ ಹತ್ತಿಪ್ಪತ್ತು ಬಾರಿ ಕರ್ನಾಟಕಕ್ಕೆ ಬಂದು ಹೋಗ್ತಾ ಇರ್ತೀನಿ. ದುರ್ಗಾಪೂಜೆ, ನಾಗಪೂಜೆ ತಪ್ಪಿಸುವುದಿಲ್ಲ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ  ಹೀಗೆ... ಅನೇಕ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತೇನೆ. ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್‌, ದರ್ಶನ್‌... ಹೀಗೆ ಎಲ್ಲರ ಜತೆ ಸಂಬಂಧ ಬೆಳೆದಿದೆ. ನಾವೆಲ್ಲ ಒಂದೇ ಕುಟುಂಬದವರಂತೆ ಆಗಿದ್ದೇವೆ. ಒಟ್ಟಿಗೆ ಆಡುತ್ತೇವೆ. ಸಂತೋಷದಿಂದ ಇದ್ದೇವೆ.

* ತುಳು ಚಿತ್ರರಂಗದ ಒಡನಾಟದ ಬಗ್ಗೆ ಹೇಳಿ...
ತುಳು ಚಿತ್ರರಂಗದ ಜತೆ ಮೊದಲಿನಿಂದಲೂ ಸಂಬಂಧವಿದೆ. ‘ಕೋಟಿ ಚೆನ್ನಯ್ಯ’ ನಾನು ತುಳುವಿನಲ್ಲಿ ನೋಡಿದ ಮೊದಲ ಚಿತ್ರ ಅದು.ಅದರ ಹಾಡುಗಳು ನನಗಿನ್ನೂ ನೆನಪಿನಲ್ಲಿದೆ. ತುಳು ಸಿನಿಮಾಗಳು ರಾಜ್ಯಮಟ್ಟದಲ್ಲಷ್ಟೇ ಅಲ್ಲ, ಜಿಲ್ಲಾಮಟ್ಟದಲ್ಲೂ ತಯಾರಾಗುತ್ತಿವೆ. ಇದು ನಿಜಕ್ಕೂ ಖುಷಿಯ ಸಂಗತಿ. ತುಳು ಮತ್ತು ಕನ್ನಡ ಚಿತ್ರರಂಗದ ಈಗಿನ ಅಭಿವೃದ್ಧಿ ನೋಡಿ ತುಂಬಾ ಸಂತೋಷವಾಗುತ್ತದೆ.

* ನೀವು ಕನ್ನಡ ಚಿತ್ರದಲ್ಲಿ ನಟಿಸುವುದಿಲ್ಲವೇ?
ಕನ್ನಡ ಚಿತ್ರರಂಗದಿಂದ ನನಗೆ ಹಿಂದೆಯೂ ಆಫರ್ ಬಂದಿತ್ತು. ಪ್ರತಿವರ್ಷವೂ ಬರುತ್ತಲೇ ಇದೆ. ಆದರೆ, ನನಗೆ ಹಿಂದಿ ಸಿನಿಮಾ ರಂಗದೊಂದಿಗೆ ಹೆಚ್ಚು ನಿಕಟ ಸಂಪರ್ಕವಿದೆ. ಅಲ್ಲಿ 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ.

* ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿ...
ಈ ವರ್ಷಾಂತ್ಯದೊಳಗೆ ನಾಲ್ಕು ಸಿನಿಮಾಗಳು ಬರಲಿವೆ. ‘ಹೇರಾಫೇರಿ’ ಸರಣಿ ಮತ್ತೆ ಮುಂದುವರಿಯಲಿದೆ. ‘ಹೇರಾಫೇರಿ–3’ ಬರಲಿದೆ.  ಇದರಲ್ಲೂ ಅಕ್ಷಯ್‌ಕುಮಾರ್, ಪರೇಶ್ ರಾವಲ್‌ ಜತೆಯಾಗಿದ್ದಾರೆ. ಇನ್ನು ಜೆ.ಪಿ. ದತ್ತ ಅವರ ‘ಬಾರ್ಡರ್–2’ಗೆ ಸಹಿ ಹಾಕಿದ್ದೇನೆ. ಇದು ನನ್ನ ಇಷ್ಟದ ಸೇನೆಗೆ ಸಂಬಂಧಿಸಿದ ಸಿನಿಮಾ. ಮತ್ತೊಂದು ಆಕ್ಷನ್ ಸಿನಿಮಾ. ಅದರ ಬಗ್ಗೆ ಶೀಘ್ರದಲ್ಲೇ ಮಾಹಿತಿ ದೊರೆಯಲಿದೆ. ವಯಸ್ಸಾದ ಮೇಲೂ ಆ್ಯಕ್ಷನ್‌ ಚಿತ್ರಗಳಲ್ಲಿ ನಟಿಸುವುದು ತುಸು ಕಷ್ಟ.

* ನಿಮ್ಮ ಪ್ರೊಡಕ್ಷನ್‌ ಹೌಸ್‌ನಿಂದ ಸಿನಿಮಾ ಮಾಡೋಲ್ವಾ?
‘ಪಾಪ್‌ಕಾರ್ನ್‌’ ನಮ್ಮ ಪ್ರೊಡಕ್ಷನ್‌ ಹೌಸ್‌. ಸದ್ಯಕ್ಕೆ ನಾವು ಯಾವುದೇ ಸಿನಿಮಾ ನಿರ್ಮಿಸುತ್ತಿಲ್ಲ. ಆದರೆ, ಬೇರೆ ಬೇರೆ ಯೋಜನೆಗಳನ್ನು ಮಾಡುತ್ತಿದ್ದೇವೆ. ಟಾಟಾ ಸ್ಕೈ ಜತೆ ಫಿಟ್‌ನೆಸ್‌ ಷೋಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿರುವೆ.

* ಹೆಲ್ತ್ ಅಂಡ್‌ ಫಿಟ್‌ನೆಸ್‌ ಬಗ್ಗೆ ಪುಸ್ತಕ ಬರೆಯುತ್ತಿದ್ದೀರಂತೆ...
ಪುಸ್ತಕ ಬರೆಯಲು ಯೋಚಿಸುತ್ತಿರುವೆ. ಜಗತ್ತಿಗೆ ಮಾರ್ಷಲ್‌ ಆರ್ಟ್‌ನಂಥ ಕಲೆ ಶುರುವಾಗಿದ್ದು ಕೇರಳದಿಂದ ಎಂಬುದನ್ನು ಮನಗಾಣಿಸಬೇಕು ಅಂತಿದ್ದೇನೆ. ಯೋಗ, ಫಿಟ್‌ನೆಸ್‌, ಮಾರ್ಷಲ್ ಆರ್ಟ್‌ ಹೀಗೆ ಅನೇಕ ವಿಷಯಗಳ ಬಗ್ಗೆ ವಿವರವಾಗಿ ಬರೆಯಬೇಕೆಂದಿರುವೆ. ಮುಖ್ಯವಾಗಿ ಆಹಾರದ ಬಗ್ಗೆ.

* ನಿಮ್ಮ ಆಹಾರ ಪದ್ಧತಿಯ ಬಗ್ಗೆ ಹೇಳಿ..
ನಾನು ಆಹಾರದ ಬಗ್ಗೆ ಜಾಗ್ರತೆ ವಹಿಸುವೆ. ಹೀಗಾಗಿ ಆರೋಗ್ಯ ಚೆನ್ನಾಗಿದೆ. ನಾನು ಈವರೆಗೆ ನನ್ನ ಜೀವನದಲ್ಲಿ ಯಾವುದೇ ‘ಪೌಡರ್’ ಸೇವಿಸಿಲ್ಲ. ತಾಯಿಯ ಕೈ ಅಡುಗೆ ಉಂಡು ಬೆಳೆದವನು ನಾನು. ಹಾಗಾಗಿ, ನನ್ನ ದೇಹ ಸಹಜವಾಗಿ ಸದೃಢವಾಗಿದೆ. ನಮ್ಮ ಆಹಾರ ಮೊದಲಿನಿಂದಲೂ ಸಾವಯವವೇ ಅಗಿದೆ. ಊಟದ ಆಯ್ಕೆ ಮತ್ತು ಸರಿಯಾದ ಸಮಯಕ್ಕೆ ಆಹಾರ ಸೇವನೆ ಫಿಟ್‌ನೆಸ್‌ನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಜನರಿಗೆ ಯಾವ ರೀತಿಯ ಆಹಾರ ಸೇವಿಸಬೇಕೆಂಬ ತಿಳಿವಳಿಕೆ ನೀಡುವ ಅಗತ್ಯವಿದೆ. ಈ ಬಗ್ಗೆ ಮಾರ್ಗದರ್ಶನವೂ ಬೇಕು. 54 ವರ್ಷಗಳಲ್ಲಿ ನನ್ನ ಎದೆಯಳತೆ  ಮತ್ತು ಸೊಂಟದ ಸುತ್ತಳತೆ ಬದಲಾಗಿಲ್ಲ. ಅದಕ್ಕೆ ಕಾರಣ ಮನೆ ಅಡುಗೆ. ನಮ್ಮ ದೇಶದ ಪ್ರತಿ ರಾಜ್ಯದಲ್ಲಿಯೂ ಪ್ರತ್ಯೇಕ ಆಹಾರ ಸಂಸ್ಕೃತಿ ಇದೆ. ಅಂಥ ದೇಸಿ– ಸಾವಯವ ಆಹಾರದ ಬಗ್ಗೆ ಮಕ್ಕಳಿಗೆ ಪುಸ್ತಕದ ಮೂಲಕ ತಿಳಿವಳಿಕೆ ಕೊಡುವ ಉದ್ದೇಶ ನನ್ನದು.

* ನಿಮ್ಮ ಮಕ್ಕಳಾದ ಅತಿಯಾ, ಅಹಾನ್‌ ಸಿನಿಮಾ ಪ್ರವೇಶದ ಬಗ್ಗೆ ಹೇಳಿ...
ಅತಿಯಾ ಪದಾರ್ಪಣೆ ಮಾಡಿದ ‘ಹೀರೊ’ ಈಗಾಗಲೇ ತೆರೆ ಕಂಡಿದೆ. ಅದರಲ್ಲಿ ಚೆನ್ನಾಗಿ ಅಭಿನಯಿಸಿದ್ದಾಳೆ. ಅವಳು ತುಂಬಾ ಚೂಸಿ. ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳಲ್ಲಿ ಅಭಿನಯಿಸುವ ಇರಾದೆ ಅವಳದು. ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾಳೆ. ಒಳ್ಳೆಯ ಸ್ಕ್ರಿಪ್ಟ್‌ ಕಡೆ ಗಮನ ಹರಿಸು ಎಂಬುದಷ್ಟೇ ಅವಳಿಗೆ ನಾನು ಹೇಳಿರುವ ಕಿವಿಮಾತು.

ಇನ್ನು ಅಹಾನ್‌ ಇನ್ನೂ ಚಿಕ್ಕ ಹುಡುಗ. ಈಗಷ್ಟೇ ಅವನಿಗೆ ಇಪ್ಪತ್ತೊಂದು. ಮುಂದಿನ ವರ್ಷ ಅವನು ಚಿತ್ರರಂಗ ಪ್ರವೇಶಿಸಬಹುದು. ಸದ್ಯಕ್ಕೆ ಅವನು ತರಬೇತಿ ಪಡೆಯುತ್ತಿದ್ದಾನೆ. ಅಹಾನ್‌ ಚಿತ್ರರಂಗ ಪ್ರವೇಶಿಸುವ ಕುರಿತು ಸಲ್ಮಾನ್‌ ಭಾಯಿ ಜತೆ ಮಾತನಾಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT