ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೀಲ್ಡ್‌ ಮಾರ್ಷಲ್‌ ಮಾಣಿಕ್ ಷಾ

Last Updated 5 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

1971ರ ಡಿಸೆಂಬರ್ ವೇಳೆಯಲ್ಲಿ ಸೇನೆಯ  ಮುಖ್ಯಸ್ಥ ಮಾಣಿಕ್ ಷಾ ಅವರಿಗೆ ಪ್ರಧಾನಿ ಇಂದಿರಾ ಗಾಂಧಿಯಿಂದ ಬುಲಾವ್. ಅವರು ಬಂದೊಡನೆ ಆಕೆ ಕೇಳಿದ ಮೊದಲ ಪ್ರಶ್ನೆ: ‘ಈಗ ಯುದ್ಧ ಮಾಡಲು ಸೈನ್ಯ ಸಿದ್ಧವೇ?’ ಗುಂಡಿನಂತೆ ಬಂದ ಉತ್ತರ: “I am always ready, sweetie.” ಅವರು ಇಂದಿರಾ ಅವರನ್ನು ಮೇಡಂ ಎಂದು ಕರೆಯಲು ಒಪ್ಪುತ್ತಿರಲಿಲ್ಲ. ಹೀಗೆ ನೇರ ನಡೆಯ ಮುಕ್ತ ಮಾತಿನ ವ್ಯಕ್ತಿ ಮಾಣಿಕ್ ಷಾ ಆಗಿದ್ದರು.

ಈ ಸಂಭಾಷಣೆಗೆ ಒಂದು ಕಿರು ಹಿನ್ನೆಲೆ ಇದೆ. ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ದೇಶವಾಗಬೇಕು ಎಂದು ಪೂರ್ವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನದ ವಿರುದ್ಧ ಒಂಬತ್ತು ತಿಂಗಳು ಯುದ್ಧ ಮಾಡಿತು. ಇದು ಇತಿಹಾಸದ ಪುಟಗಳಲ್ಲಿ ‘ಮುಕ್ತಿಯುದ್ಧ’ ಎಂದು ದಾಖಲಾಗಿದೆ.
1971ರ ಮಾರ್ಚ್‌ನಲ್ಲಿ ಷೇಕ್ ಮುಜಿಬುರ್ ರೆಹಮಾನ್  ನೇತೃತ್ವದಲ್ಲಿ ಹೋರಾಟ ಆರಂಭವಾಗಿ ಒಂಬತ್ತು ತಿಂಗಳು ನಡೆಯಿತು. ಬಂಗಾಳದ ನಾಗರಿಕರು, ವಿದ್ಯಾರ್ಥಿಗಳು, ಸೈನಿಕರು ಸೇರಿ ನಡೆಸಿದ ಈ ಹೋರಾಟವನ್ನು ಪಾಕಿಸ್ತಾನದ ಸೈನ್ಯ ದಮನ ಮಾಡಲು ಕ್ರೂರವಾಗಿ ವರ್ತಿಸಿತು. ಅಸಂಖ್ಯ ಮಹಿಳೆಯರ ಮೇಲೆ ಪಾಕಿಸ್ತಾನದ ಸೇನೆ ಮತ್ತು ಕೋಮುವಾದಿ ಸಂಘಟನೆಗಳಿಗೆ ಸೇರಿದವರು ಅತ್ಯಾಚಾರ ಎಸಗಿದರು.

ಮುಕ್ತಿ ಬಯಸಿದ ನಾಗರಿಕರಿಗೆ ಭಾರತ, ಆರ್ಥಿಕ, ರಾಜತಾಂತ್ರಿಕ, ಸೈನಿಕ ಬೆಂಬಲ ನೀಡಿತು. ಮನೆ ಮಠ ಕಳೆದುಕೊಂಡ ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಹರಿದು ಬಂದರು. ಆಗ ಭಾರತ ಸರ್ಕಾರಕ್ಕೆ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸುವುದು ಅನಿವಾರ್ಯವಾಯಿತು. ಇದು ಮಾಣಿಕ್‌ ಷಾ ಎದುರಿಗಿದ್ದ ಸವಾಲು, ವಸ್ತುಸ್ಥಿತಿ.

1971ರ ಏಪ್ರಿಲ್‌ನಲ್ಲಿ ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ನಿರಾಶ್ರಿತರು ಗಡಿ ದಾಟಿ ಭಾರತಕ್ಕೆ ಬಂದಿದ್ದರು. ಪ್ರಧಾನಿ ಇಂದಿರಾ ಆಗಲೇ ಪಾಕಿಸ್ತಾನದ ಮೇಲೆ ಯುದ್ಧ ಹೂಡಲು ಕಾತುರರಾಗಿದ್ದರು. ಆಗ ಸಂಪುಟ ಸಭೆ ನಡೆದಾಗ ಇಂದಿರಾ ಇದೇ ಮಾತನ್ನು ಮುಂದಿಟ್ಟರು.
ಆಗ ಏಪ್ರಿಲ್ ತಿಂಗಳ ಅಂತ್ಯ. ಯುದ್ಧದ ಪ್ರಸ್ತಾವವನ್ನು  ಯಾವುದೇ ಮುಲಾಜಿಲ್ಲದೇ ವಿರೋಧಿಸಿದವರು ಮಾಣಿಕ್‌ ಷಾ.

ಪ್ರವಾಹ ಭೀತಿ: ಮಳೆಗಾಲದಲ್ಲಿ ಯುದ್ಧ ಬೇಡ. ಪೂ. ಪಾಕಿಸ್ತಾನದಲ್ಲಿ ಪ್ರವಾಹ ಹೆಚ್ಚಿರುತ್ತದೆ ಎಂದು ಕಾರಣ ವಿವರಿಸಿದವರು ಮಾಣಿಕ್‌ಷಾ.

ಅಲ್ಲದೆ ಸೈನ್ಯದ ಎರಡು ಕಾಲಾಳು ಪಡೆಗಳು ಬೇರೆ ಕಡೆ ಕಾರ್ಯ ನಿರತವಾಗಿದ್ದವು. ಸೈನ್ಯದ 189 ಟ್ಯಾಂಕ್‌ಗಳ ಪೈಕಿ 11 ಮಾತ್ರ ಯುದ್ಧಕ್ಕೆ ಸಿದ್ಧವಿದ್ದವು. ಮಾಣಿಕ್ ಈ ವಾಸ್ತವಗಳನ್ನು ಪ್ರಧಾನಿಗೆ ವಿವರಿಸಿ, ‘ಹಾಗೆಂದು ಯುದ್ಧ ಬೇಡವೆಂದು ಹೇಳುವುದಿಲ್ಲ, ಕಾದು ಈ ವರ್ಷದ ಕೊನೆಗೆ ಯುದ್ಧ ಮಾಡಲು ಪ್ರಧಾನಿ ಆದೇಶ ನೀಡಿದರೆ ಭಾರತಕ್ಕೆ ಗೆಲುವು ಖಂಡಿತ’ ಎಂದು ಭರವಸೆ ನೀಡಿದರು.

ಇನ್ನು ಯುದ್ಧ ಶುರುವಾಗಲು ಆರೆಂಟು ತಿಂಗಳಿರುವಾಗಲೇ ಭವಿಷ್ಯದ ಫಲಿತಾಂಶ ಭಾರತದ ಪರವಿರುತ್ತದೆ ಎಂದು ನುಡಿದು, ಅಂತೆಯೇ ಅದನ್ನು ಸಾಧಿಸಿ ತೋರಿಸಿದ ವೀರ ನಾಯಕ ಮಾಣಿಕ್ ಷಾ.

ಮಾಣಿಕ್ ಷಾ ಅವರ ಸೇನೆ ನಡೆಸಿದ ಮಿಂಚಿನ ದಾಳಿಗೆ ಢಾಕಾ ವಶವಾಗಿ, ಪಾಕಿಸ್ತಾನದ 93,000 ಸೈನಿಕರು ಯುದ್ಧ ಕೈದಿಗಳಾಗಿ ವಶವಾದರು. ಅಮೆರಿಕ ಮತ್ತು ವಿಶ್ವಸಂಸ್ಥೆಯ ತೀವ್ರ ಮಧ್ಯಪ್ರವೇಶದಿಂದಷ್ಟೆ ಭಾರತ ಕದನ ವಿರಾಮ ಘೋಷಿಸಿತು.
ನೂತನ ಬಾಂಗ್ಲಾ ದೇಶದ ರಾಜಧಾನಿ ಢಾಕಾಗೆ ಹೋಗಿ ಪಾಕ್ ಸೈನಿಕರ ಶರಣಾಗತಿಯನ್ನು ಸ್ವೀಕರಿಸಲು ಮಾಣಿಕ್ ಷಾಗೆ ಭಾರತ ಸರ್ಕಾರ ಸೂಚಿಸಿತು. ಆದರೆ ಈ ಗೌರವ ಪೂರ್ವ ವಲಯದ ಸೇನಾ ಮುಖ್ಯಸ್ಥರಿಗೆ ಸಲ್ಲಬೇಕು ಎಂದು ನಿರಾಕರಿಸಿದ ಪ್ರಾಮಾಣಿಕ ಮಾಣಿಕ ಷಾ.

ಭಾರತ –ಪಾಕ್‌ ಸಮರ ಮತ್ತು ಬಾಂಗ್ಲಾ ಉದಯ ಈ  ಮುಖ್ಯ ಘಟನೆಗಳ ಹಿಂದೆ ಮಾಣಿಕ್‌ ಷಾ ಅವರ ಪ್ರಚಂಡ ಚಾಣಕ್ಯ ತಲೆ ಕೆಲಸ ಮಾಡಿತ್ತು. ಈ ಯುದ್ಧವನ್ನು ಪ್ರಪಂಚದ ಅತಿ ಕ್ಷಿಪ್ರ ಸಮರ ಎಂದು ಪರಿಣತರು ಪರಿಗಣಿಸಿದ್ದಾರೆ. ಈ ಗೆಲುವಿನಿಂದ ಇಂದಿರಾ ಗಾಂಧಿ ವರ್ಚಸ್ಸು ಹೆಚ್ಚಿದ್ದು ಈಗ ಇತಿಹಾಸ.

ಸ್ವಾತಂತ್ರ್ಯ ಪೂರ್ವ ಭಾರತದ ಅಮೃತಸರದಲ್ಲಿ ಪಾರ್ಸಿ ಕುಟುಂಬದಲ್ಲಿ ಏಪ್ರಿಲ್‌ 3, 1914ರಲ್ಲಿ ಜನಿಸಿದವರು ಮಾಣಿಕ್. ಅವರ ತಂದೆ ಹೊರ್ಮುಸ್ಜಿ ಮಾಣಿಕ್‌ ಷಾ ವೃತ್ತಿಯಲ್ಲಿ ವೈದ್ಯರು. ತಾಯಿ ಹೀರಾಬಾಯಿ. ಗುಜರಾತಿನಿಂದ ಪಂಜಾಬಿಗೆ ವಲಸೆ ಬಂದ ಕುಟುಂಬ ಇದು. ಬಾಲ್ಯದಿಂದಲೂ ಯಾರಿಗೂ ಮಣಿಯದ ತನ್ನದೇ ಸರಿ ಎಂಬ ಧೋರಣೆ ಅವರಿಗಿತ್ತು. ನೈನಿತಾಲಿನ ಶೆರ್‌ವುಡ್‌ ಕಾಲೇಜಿನಲ್ಲಿ ಓದಿದ ಮೇಲೆ ವೈದ್ಯಕೀಯ ಓದಲೆಂದು ತನ್ನನ್ನು ಲಂಡನ್‌ಗೆ ಕಳುಹಿಸು ಎಂದು ತಂದೆಯನ್ನು ಮಾಣಿಕ್ ಕೇಳಿದರು. ತಂದೆ ಮಗನ ಕೋರಿಕೆಗೆ ಒಪ್ಪಲಿಲ್ಲ. ಸರಿ, ಈ ವೀರಪುತ್ರ ಮನೆಯಲ್ಲಿ ಯಾರಿಗೂ ಹೇಳದೆ ಸೇನೆ ಸೇರಲು ಇದ್ದಂಥ ಪರೀಕ್ಷೆಗೆ ಬರೆದು ಅದರಲ್ಲಿ ಪಾಸಾದರು. ತಂದೆ ಏನಾದರೂ ಕೂಡಲೇ ಒಪ್ಪಿದ್ದರೆ ದೇಶ ಒಬ್ಬ ಫೀಲ್ಡ್‌ ಮಾರ್ಷಲ್‌ನನ್ನು ಕಳೆದುಕೊಳ್ಳುತ್ತಿತ್ತು!  

1932ರಲ್ಲಿ ಮಾಣಿಕ್ ಷಾ ಸೇನೆ ಸೇರಿದರು. ಆಗ ಭಾರತದಲ್ಲಿದ್ದ ಸೇನೆ ‘ಬ್ರಿಟಿಷ್ ಇಂಡಿಯನ್‌ ಆರ್ಮಿ’ ಆಗಿತ್ತು. ಅದರಲ್ಲಿ ದುಡಿದು ಮುಂದೆ ಭಾರತ ಸ್ವತಂತ್ರವಾದಾಗ ದೊಡ್ಡ ಹುದ್ದೆಗಳನ್ನು ನಿಭಾಯಿಸಿದವರು ಹಲವರಿದ್ದಾರೆ. ಉದಾಹರಣೆಗೆ ಕನ್ನಡಿಗರೇ ಆದ ಜನರಲ್‌ ತಿಮ್ಮಯ್ಯ, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ. ಈ ಪಾವನರ ಸಾಲಿಗೆ ಸೇರಿದವರು ಮಾಣಿಕ್‌ ಷಾ. ಎರಡು ವರ್ಷಗಳ ನಂತರ ವಿವಿಧ ಕಠಿಣ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಮೇಲೆ ಮಾಣಿಕ್‌, ಲೆಫ್ಟಿನೆಂಟ್‌ ಎನಿಸಿಕೊಂಡರು.

ಬ್ರಿಟಿಷ್ ಆಡಳಿತ ಯುಗದಲ್ಲಿ ಅವರು ಬ್ರಿಟಿಷ್ ಬೆಟಾಲಿಯನ್‌ ಆದ ರಾಯಲ್‌ ಸ್ಕಾಟ್ಸ್‌ ಮತ್ತು ನಾಲ್ಕನೇ ಬೆಟಾಲಿಯನ್‌, 12ನೇ ಫ್ರಾಂಟಿಯರ್‌ ಫೋರ್ಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು.

ಎರಡನೇ ಮಹಾಯುದ್ಧದಲ್ಲಿ ಬರ್ಮಾ ಯುದ್ಧದಲ್ಲಿ ಮಾಣಿಕ್‌ ಷಾ ಜಪಾನಿ ಸೈನ್ಯದ ಎದುರು ಹೋರಾಡಿ ಪಗೋಡಾ ಬೆಟ್ಟವನ್ನು ವಶಪಡಿಸಿಕೊಂಡ ಮೇಲೆ ಅವರ ಮೇಲೆ ಜಪಾನಿ ಸೈನಿಕರು ಗುಂಡಿನ ಮಳೆಗರೆದರು. ಅವರ ಎದೆ, ಹೊಟ್ಟೆ, ಯಕೃತ್ತಿಗೆ ಎಲ್‌ಎಂಜಿ ಗುಂಡುಗಳು ತಾಗಿದ್ದವು. ಅವರು ಬದುಕುವುದಿಲ್ಲ, ಆದರೆ ಅವರ ಸೇವೆ ಮರೆತು ಹೋಗಬಾರದು ಎಂದು ಮೇಜರ್‌ ಜನರಲ್‌ ಡಿ.ಟಿ. ಕೋವನ್‌ ತಮ್ಮ ಸ್ವಂತದ ‘ಮಿಲಿಟರಿ ರಿಬ್ಬನ್‌’ ಅನ್ನು ಮಾಣಿಕ್‌ ಅವರ ತೋಳಿಗೆ ಬಿಗಿದು ಗೌರವ ಸೂಚಿಸಿದ್ದರು. ಒಬ್ಬ ಯೋಧನ ಪಾಲಿಗೆ ಇದು ದೊಡ್ಡ ಗೌರವ.

ಸ್ವಾತಂತ್ರ್ಯದ ನಂತರದ ಭಾರತ –ಪಾಕ್ ಸಮರ, ನಿರಾಶ್ರಿತರಿಗೆ ಆಸರೆ ನೀಡುವುದು ಮೊದಲಾದ ಸವಾಲಿನ ಸಂದರ್ಭಗಳಲ್ಲಿ ಅವರು ಗುರುತರ ಕೆಲಸ ಮಾಡಿದರು. ನಾಗಾಲ್ಯಾಂಡ್‌ನಲ್ಲಿ ಅಕ್ರಮ ಒಳನುಸುಳುಕೋರರನ್ನು ಇವರು ಎದುರಿಸಿದ ಸಂದರ್ಭದಲ್ಲಿ ಭಾರತ ಸರ್ಕಾರ ಅವರಿಗೆ 1968ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಿತು. ಅವರಿಗೆ ಪದ್ಮ ವಿಭೂಷಣ ಕೂಡ ಬಯಸದೆ ಬಂತು. ಅವರು ಜೀವನದಲ್ಲಿ ಪಡೆದ ದೊಡ್ಡ ಗೌರವ 1973ರಲ್ಲಿ ಫೀಲ್ಡ್ ಮಾರ್ಷಲ್‌ ಗೌರವ.

ಅಪರೂಪದ ಯೋಧ ಮಾಣಿಕ್‌ ಜೀವನ ಕೂಡ ವಿವಾದಾತೀತವಾಗಿರಲಿಲ್ಲ. ಅವರು ಭಾರತದ ಸೈನಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಹಣಕ್ಕೆ ಮಾರಿದ್ದರು ಎಂದು ಪಾಕಿಸ್ತಾನದ ಫೀಲ್ಡ್ ಮಾರ್ಷಲ್‌ ಆಗಿದ್ದ ಅಯೂಬ್‌ ಖಾನ್ ಅವರ ಮಗ ಗೊಹರ್‌ ಅಯೂಬ್ ಆರೋಪ ಮಾಡಿದ್ದರು, ಆದರೆ ಭಾರತದ ರಕ್ಷಣಾ ಇಲಾಖೆ ಅದನ್ನು ನಿರಾಕರಿಸಿದ್ದು ಸರಿಯಾಗೇ ಇತ್ತು. ಅವರು ತಮ್ಮನ್ನು ಮಾರಿಕೊಂಡಿದ್ದು ಧ್ಯೇಯ ಮತ್ತು ಧೀಮಂತಿಕೆಗೆ ಮಾತ್ರ.

ಬೇಸರದ ಸಂಗತಿ ಎಂದರೆ ಸ್ವಾತಂತ್ರ್ಯಾ ನಂತರದ ಎಲ್ಲ ಪ್ರಮುಖ ಸಮರಗಳ ಮುಂಚೂಣಿಯಲ್ಲಿದ್ದು 94 ವರ್ಷ ಬದುಕಿ ಮೃತರಾದ ಮಾಣಿಕ್‌ ಅವರ ಅಂತ್ಯ ಕ್ರಿಯೆಯಲ್ಲಿ ರಾಷ್ಟ್ರಪತಿ, ಪ್ರಧಾನಿ, ಗೃಹಮಂತ್ರಿ ಯಾರೂ ಭಾಗವಹಿಸಲಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಭ್ರಷ್ಟರೆಂಬ ಆಪಾದನೆಗೆ ಒಳಗಾದ ರಾಜಕಾರಣಿಗಳು ನಿಧನರಾದಾಗ ಕೂಡ ಕೆಳಕ್ಕಿಳಿಯುವ ರಾಷ್ಟ್ರಧ್ವಜ ಅಂದು ಮಾತ್ರ ಅರ್ಧ ಮಟ್ಟದಲ್ಲಿ ಹಾರಾಡಲಿಲ್ಲ. ಮೇರಾ ಭಾರತ್ ಮಹಾನ್! ಸಾಮಾನ್ಯ ಜನರ ಮನಸ್ಸಿನಲ್ಲಿ ಇಂದಿಗೂ ಅವರ ಬಗ್ಗೆ ಗೌರವವಿದೆ. ಅವರ ಜನ್ಮ ಶತಾಬ್ದಿಯ ವೇಳೆಯಲ್ಲಾದರೂ ಫೀಲ್ಡ್ ಮಾರ್ಷಲ್‌ ಮಾಣಿಕ್‌ ಷಾ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಸರ್ಕಾರ ತನ್ನನ್ನು ತಾನು ಗೌರವಿಸಿಕೊಳ್ಳಬೇಕು.
             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT