ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷ

Last Updated 6 ಮೇ 2016, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇದೇ ಮೊದಲ ಬಾರಿಗೆ ಎರಡು ಕರಿ ಚಿರತೆಗಳು ಪ್ರತ್ಯಕ್ಷವಾಗಿವೆ.

ಅರಣ್ಯ ಇಲಾಖೆಯಿಂದ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ಕರಿ ಚಿರತೆಗಳ ಛಾಯಾಚಿತ್ರ ಸೆರೆಯಾಗಿದೆ. ಬಂಡೀಪುರದಲ್ಲಿ 110 ಹುಲಿಗಳಿವೆ. ಅಪರೂಪದ ಪ್ರಾಣಿ, ಪಕ್ಷಿಗಳಿವೆ. ಉದ್ಯಾನದ ಹೆಡಿಯಾಲ, ನುಗು, ಮೊಳೆಯೂರು ಅರಣ್ಯ ವಲಯದಲ್ಲಿ ಈ ಕರಿ ಚಿರತೆಗಳ 24 ಛಾಯಾಚಿತ್ರಗಳು ಕ್ಯಾಮೆರಾ ಟ್ರ್ಯಾಪಿಂಗ್‌ನಲ್ಲಿ ದಾಖಲಾಗಿವೆ.

ನಾಲ್ಕು ವರ್ಷಗಳ ಹಿಂದೆ ಬಂಡೀಪುರ ಮತ್ತು ಮಧುಮಲೈ ಹುಲಿ ರಕ್ಷಿತಾರಣ್ಯದಲ್ಲಿ ಹಾದುಹೋಗಿರುವ ಹೆದ್ದಾರಿ ಬದಿಯ ಬಂಡೆಯ ಮೇಲೆ ಸಾಮಾನ್ಯ ಚಿರತೆ ಹಾಗೂ ಕರಿ ಚಿರತೆಯ ಜೋಡಿ ಪ್ರತ್ಯಕ್ಷವಾಗಿದ್ದ ಬಗ್ಗೆ ವರದಿಯಾಗಿತ್ತು. ಆ ನಂತರದ ವರ್ಷಗಳಲ್ಲಿ ನೀಲಗಿರಿ ಜೈವಿಕ ವಲಯದಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿರಲಿಲ್ಲ.

ದಾಂಡೇಲಿ ವನ್ಯಜೀವಿಧಾಮದಲ್ಲಿ ಕರಿ ಚಿರತೆಗಳು ಕಂಡುಬರುತ್ತವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಎರಡು ವರ್ಷದ ಹಿಂದೆ ಕರಿ ಚಿರತೆ ಪ್ರತ್ಯಕ್ಷವಾಗಿತ್ತು. ಅಲ್ಲಿನ ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ನಲ್ಲಿ ತಂಗಿದ್ದ ಪ್ರವಾಸಿಗರು ಸಂಜೆ ವೇಳೆ ಸಫಾರಿಗೆ ತೆರಳಿದ್ದ ವೇಳೆ ಅಪರೂಪದ ಕರಿ ಚಿರತೆಯ ದರ್ಶನವಾಗಿತ್ತು.

ಬಣ್ಣ ವ್ಯತ್ಯಾಸ ಏಕೆ?:  ಮೈಬಣ್ಣ ಮತ್ತು ಕೂದಲಿನ ಬಣ್ಣದ ಗಾಢತೆಯು ಮೆಲಾನಿನ್‌ ಅಂಶ ಅವಲಂಬಿಸಿರುತ್ತದೆ. ದೇಹದಲ್ಲಿ ಮೆಲಾನಿನ್‌ ಅಂಶ ಹೆಚ್ಚಾದರೆ ಚಿರತೆಗಳು ಸಾಮಾನ್ಯ ಬಣ್ಣ ಕಳೆದುಕೊಳ್ಳುತ್ತವೆ. ಅವುಗಳ ದೇಹ ಕಪ್ಪುಬಣ್ಣಕ್ಕೆ ತಿರುಗುತ್ತದೆ. ಬಣ್ಣ ಹೊರತುಪಡಿಸಿದರೆ ಉಳಿದ ಎಲ್ಲ ಗುಣಗಳು ಸಾಮಾನ್ಯ ಚಿರತೆಯಂತೆಯೇ ಇರುತ್ತದೆ. ಹತ್ತಿರದಿಂದ ನೋಡಿದರೆ ಕರಿ ಚಿರತೆಗಳಲ್ಲೂ ಕಪ್ಪು ಚುಕ್ಕೆಗಳು ಕಂಡುಬರುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.

‘ಕರಿ ಚಿರತೆಗಳು ಪಶ್ಚಿಮ ಘಟ್ಟ ಪ್ರದೇಶದ ತೀವ್ರ ಆರ್ದ್ರತೆಯಿಂದ ಕೂಡಿದ ಅರಣ್ಯ ಪ್ರದೇಶ ಮತ್ತು ಶೋಲಾ ಕಾಡುಗಳಲ್ಲಿ ಕಂಡುಬರುತ್ತವೆ. ಬಂಡೀಪುರದ ನುಗು ವಲಯದಂತಹ ಕುರುಚಲು ಅರಣ್ಯದಲ್ಲೂ ಇವು ಕಂಡುಬಂದಿರುವುದು ವಿಶೇಷವಾಗಿದೆ’ ಎನ್ನುತ್ತಾರೆ ಖ್ಯಾತ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾದ ಕೃಪಾಕರ ಸೇನಾನಿ.

‘ಉದ್ಯಾನದ ವ್ಯಾಪ್ತಿಯಲ್ಲಿ ಹುಲಿಗಳ ಸಂರಕ್ಷಣೆಗಾಗಿ ಕ್ಯಾಮೆರಾ ಟ್ರ್ಯಾಪಿಂಗ್‌ ಅಳವಡಿಸಲಾಗಿದೆ. ಮೊದಲ ಬಾರಿಗೆ ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಿ ಚಿರತೆಗಳ ಛಾಯಾಚಿತ್ರ ಸೆರೆಯಾಗಿದೆ’ ಎಂದು ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಬಿ.ಬಿ.ಮಲ್ಲೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT