ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾರಿನಲ್ಲಿ ಬಿಕರಿಗಿಡುವ ಸಂಗತಿಯಲ್ಲ

ಮಾಂಸ ನಿಷೇಧದ ಸುತ್ತ...
Last Updated 18 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮನದೊಳಗೇ ನನ್ನ ಎದುರು ಕೂತ ಆ ಹಿರಿಯರ ಜೊತೆ ಹೀಗೆ ಮಥಿಸಿ ಮಾತನಾಡುತ್ತಿದ್ದೆ.
* ‘ನೀವು ಮಾಂಸವನ್ನು ತಿನ್ನುವಿರಾ?’
* ‘ಇಲ್ಲ; ಹಾಲನ್ನು ಮಾತ್ರ ಕುಡಿಯುತ್ತೇವೆ’.
* ‘ಹಾಲು ಎಲ್ಲಿಂದ ಬರುತ್ತೆ?’
* ‘ಹಸುವಿನ ಕೆಚ್ಚಲಿನಿಂದ’.
* ‘ಹಾಲು ಹೇಗೆ ಉತ್ಪತ್ತಿಯಾಗುತ್ತದೆ?’
* ‘... ಅದು ದೇವರ ಸೃಷ್ಟಿ’
* ‘ಹಾಗಾದರೆ ಹಸುವಿನ ಮಾಂಸವೂ ದೇವರ ಸೃಷ್ಟಿಯೇ ತಾನೆ?’
* ‘ಅದು ಹಾಗಲ್ಲ... ಗೋವು ಪವಿತ್ರ; ಗೋವಿನ ಮಾಂಸ ಅಪವಿತ್ರ...’

* ‘ದೇವರ ಸೃಷ್ಟಿಯನ್ನು ನೀವು ವಿಂಗಡಿಸಬಹುದೆ? ಪವಿತ್ರ ಅಪವಿತ್ರ ಎಂದು ಹೇಗೆ ಹೇಳುವಿರಿ? ಅದರ ಗಂಜಳ, ಸೆಗಣಿ ಪವಿತ್ರ ಎನ್ನುವಿರಾದರೆ ಅದರ ಮಾಂಸ ಯಾಕೆ ಅಪವಿತ್ರವಾಗುತ್ತದೆ? ಮುಕ್ಕೋಟಿ ದೇವತೆಗಳೇ ಹಸುವಿನ ದೇಹದಲ್ಲಿವೆ ಎಂದಾದಾಗ ಅಪವಿತ್ರದ ಪ್ರಶ್ನೆಯೇ ಅಪ್ರಸ್ತುತ ಅಲ್ಲವೆ? ಹಸುವಿನ ರಕ್ತದಿಂದಲೇ ತಾನೆ ಹಾಲು ಉತ್ಪತ್ತಿಯಾಗುವುದು? ಹಾಲು, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಇವೆಲ್ಲವೂ ರಕ್ತದ ರೂಪಾಂತರಗಳಲ್ಲವೆ? ಕೊಬ್ಬಿನ ರೂಪ ಹಾಲಾಗುವುದು ನಿಸರ್ಗದ ಕ್ರಿಯೆ. ಅದು ಆಹಾರವಾಗುವ ಒಂದು ಉನ್ನತ ಪ್ರಕ್ರಿಯೆ. ಜಗತ್ತಿನ ಬಹುಪಾಲು ಸಮಾಜಗಳು ಹಸುವಿನ ಮಾಂಸದಿಂದಲೇ ತಾನೆ ಆಹಾರ ಸಂಸ್ಕೃತಿಯನ್ನು ರೂಢಿಸಿಕೊಂಡಿರುವುದು?’

* ‘ನಮ್ಮ ಆಚಾರ ವಿಚಾರಗಳಿಗೆ ಧಕ್ಕೆ ತರುವ ಆಹಾರ ಪದ್ಧತಿಯನ್ನು ವಿರೋಧಿಸುವುದರಲ್ಲಿ ತಪ್ಪೇನಿದೆ? ನಮ್ಮ ಪವಿತ್ರ ಭಾವನೆಯ ಹಸುವನ್ನು ಹೀಗೆ ಕೊಂದು ತಿನ್ನುವುದು ನಮ್ಮ ನಂಬಿಕೆಗೆ ಮಾಡುವ ಹಿಂಸೆಯಲ್ಲವೆ? ದ್ರೋಹವಲ್ಲವೆ? ಅನ್ಯಾಯ ಅಲ್ಲವೆ? ಅಧರ್ಮ ಅಲ್ಲವೆ?’

* ‘ಈ ಪವಿತ್ರ ಗೋವು ನಿಮ್ಮ ಒಬ್ಬರದು ಮಾತ್ರ ಅಲ್ಲವಲ್ಲ? ಈ ನಿಸರ್ಗ ಹಸುವನ್ನು ನಿಮಗೆ ಮಾತ್ರ ಸೃಷ್ಟಿ ಮಾಡಿದೆಯಾ?ಅವರವರ ಧರ್ಮಕ್ಕೆ ಒಗ್ಗಿದ ಆಹಾರ ಅವರವರು ಬಳಸುವುದರಲ್ಲಿ ಯಾವ ತಪ್ಪೂ ಇಲ್ಲವಲ್ಲ?’

* ‘ಪ್ರಾಣಿವಧೆ ಹಿಂಸೆಯಲ್ಲವೆ? ಕೊಂದು ತಿನ್ನುವುದು ಅಪರಾಧ ಅಲ್ಲವೆ? ನಿಮ್ಮ ಮಾಂಸಾಹಾರದಿಂದ ನಿಮಗೇನು ಜ್ಞಾನ ಸಿಕ್ಕಿ ಬಿಟ್ಟಿದೆ? ಆಹಾರದ ಆದಿಮ ಬೇಟೆಯ ಬರ್ಬರತೆಯಿಂದ ನೀವು ಮುಕ್ತರಾಗಿಯೇ ಇಲ್ಲ. ಮನುಷ್ಯತ್ವದ ಸಾಕ್ಷಾತ್ಕಾರಕ್ಕೆ ಅಹಿಂಸೆ ಮುಖ್ಯ. ಗೋವು ಒಂದು ಧರ್ಮ ಸಂಕೇತ. ಅದಕ್ಕೆ ನಿರಂತರ ಅಪಚಾರವಾಗುತ್ತಿದೆ...’

* ‘ಸ್ವಾಮಿ, ಮನುಷ್ಯತ್ವ ಯಾರಿಗೆ ಇದೆ ಎಂಬುದನ್ನು ನೀವೇ ಪ್ರಶ್ನಿಸಿಕೊಳ್ಳಿ. ಅಸ್ಪೃಶ್ಯರನ್ನು ಪ್ರಾಣಿಗಳಿಗಿಂತ ಕೀಳು ಎಂದು ವಿಂಗಡಿಸಿ ಮಲಮೂತ್ರ ಎತ್ತಲು ನೇಮಿಸಿದ್ದು ಈ ನಿಮ್ಮ ಧರ್ಮವೇ... ಕ್ರೂರವಾಗಿ ಧರ್ಮದ ಹೆಸರಲ್ಲಿ ಹೆಂಗಸರನ್ನು ಅಪವಿತ್ರರು ಎಂದು ನಿರಾಕರಿಸಿದ್ದು ನಿಮ್ಮ ಧರ್ಮ ಗ್ರಂಥಗಳೇ... ಧರ್ಮ ಸೂಕ್ಷ್ಮವನ್ನು ನೀವು ಮಾಂಸಾಹಾರದ ಜೊತೆ ಬೆಸೆಯುವುದೇ ಮೇಲು-ಕೀಳು, ಪಾಪ-ಪುಣ್ಯ, ಸ್ವರ್ಗ-ನರಕದ ರೀತಿಯ ಭೇದಗಳಿಗೆ ದಾರಿ ಮಾಡುತ್ತದೆ. ಜಾತಿ ವ್ಯವಸ್ಥೆಯನ್ನು ರೂಢಿಸುವಲ್ಲಿ ನೀವು ಮಾಂಸಾಹಾರವನ್ನು ಒಂದು ಮಾನದಂಡವಾಗಿಸಿರುವ ರೀತಿಯೇ ಅಮಾನವೀಯವಾದದ್ದು’.

* ‘ಒಂದು ಧರ್ಮದ ಆಚಾರ-ವಿಚಾರಗಳ ಆಚರಣೆ ಸಂದರ್ಭದಲ್ಲಾದರೂ ಸಾಂಕೇತಿಕವಾಗಿ ಸಹಬಾಳ್ವೆ, ಸೌಹಾರ್ದದ ಕಾರಣವಾಗಿ ನೀವು ಮಾಂಸಾಹಾರವನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಿ ನಮ್ಮ ಜೊತೆ ಸಹಕರಿಸದೆ ಮಾಂಸದ ಹಟ ಹಿಡಿಯುವುದು ಸಭ್ಯತೆಯೆ?’

* ‘ಅದು ಸರಿಯೇ... ಇದನ್ನು ವೈಯಕ್ತಿಕವಾದ ಅವರವರ ಸಂಬಂಧಗಳ ಮಟ್ಟದಲ್ಲಿ ಪಾಲಿಸುವಂತಿರಬೇಕೇ ವಿನಾ ಮಾಂಸಾಹಾರದ ನಿಷೇಧವನ್ನು ಕಾನೂನು ರೀತಿಯಲ್ಲಿ ತಡೆಯುವುದು ಅಕ್ರಮ ಹಾಗೂ ಅಸಹನೆ. ಮಾಂಸಾಹಾರಿಗಳೇ ಸ್ವಯಂ ನಿರ್ಧಾರದಲ್ಲಿ ಕೆಲವು ವಿಶೇಷ ದಿನಗಳಲ್ಲಿ ಮಾಂಸಾಹಾರವನ್ನು ಸ್ವಯಂ ನಿಷೇಧಿಸಿಕೊಳ್ಳುವುದಿದೆ. ಆದರೆ ಕಾನೂನು ಹೇರಿಕೆಯಿಂದ ಅದನ್ನು ತಡೆದರೆ ಅಧರ್ಮವಾಗುತ್ತದೆ’.

‘ಯಾವುದೇ ಆಹಾರವೂ ಮೇಲಲ್ಲ, ಕೀಳಲ್ಲ. ಆಹಾರವು ನಿಸರ್ಗದ ವೈವಿಧ್ಯ ಕ್ರಮ. ಅದನ್ನು ಅವರವರು ಅವರವರ ಬಗೆಯಲ್ಲಿ ರೂಢಿಸಿಕೊಂಡು ಬಂದಿದ್ದಾರೆ. ಆಹಾರವು ಧರ್ಮದ ವಿಚಾರ ಅಲ್ಲವೇ ಅಲ್ಲ. ಅದು ಮಾನವ ಕುಲದ ವಿಕಾಸದ ಒಂದು ಅಸ್ತಿತ್ವದ ನಿಸರ್ಗದ ಜೊತೆಗಿನ ಕೊಂಡಿ. ಆಹಾರದ ಅವರವರ ಕೊಂಡಿಯು ಅವರವರ ಸಂಸ್ಕೃತಿಯಾಗಿ, ಧರ್ಮವಾಗಿ ಬೆಳೆದುಬಂದಿದೆ.

ಹಾಗಾಗಿಯೇ ಮಾಂಸಾಹಾರ ಕೂಡ ಜೀವವಿಕಾಸದ ಅಸ್ತಿತ್ವದಲ್ಲಿ ಜಗತ್ತಿನ ಅನೇಕ ಸಮುದಾಯಗಳಿಗೆ ದೊಡ್ಡ ಶಕ್ತಿ ತಂದುಕೊಟ್ಟಿರುವುದು. ಇದೇ ನಿಜವಾದ ಶ್ರೇಷ್ಠ ಆಹಾರ ಎಂದು ಯಾವ ನ್ಯಾಯಾಲಯವೂ ತೀರ್ಪು ನೀಡಲು ಸಾಧ್ಯವಿಲ್ಲ. ಬರಿದೇ ಸಸ್ಯಾಹಾರವನ್ನು ಇಷ್ಟು ಕೋಟಿ ಮನುಷ್ಯರು ತಿಂದು ಬದುಕುವ ಅನಿವಾರ್ಯ ಬಂದಿದ್ದರೆ; ಇಷ್ಟು ಹೊತ್ತಿಗೆ ಹಸಿರು ಪರಿಸರ ನಾಶವಾಗಿ ಭೂಮಿ ಮರುಭೂಮಿ ಆಗಿರುತ್ತಿತ್ತು.

ಇದು ಅತಿ ಎನಿಸಬಹುದು. ಆದರೆ ಆಹಾರ ಸರಪಳಿಯ ಸಮತೋಲನಕ್ಕೆ ಮಾಂಸಾಹಾರ ಒಂದು ಜೈವಿಕ ನಿಯಮ. ಧರ್ಮದ ಆಚೆಗಿನ ಅಸ್ತಿತ್ವದ ಸಂಗತಿಯಾಗಿ ಮಾಂಸಾಹಾರವು ಲೀನವಾಗಿದೆ. ಅದನ್ನು ಯಾವ ಧಾರ್ಮಿಕ ಕಟ್ಟಳೆಗಳೂ ತಡೆಯಲಾರವು. ಧಾರ್ಮಿಕ ಕಟ್ಟಳೆಗಳ ಕಾರಣವಾಗಿ ಇವತ್ತು ಇವರು ಮಾಂಸ ಸೇವಿಸಬಾರದು ಎಂದರೆ; ನಾಳೆ ಇನ್ನೊಬ್ಬರು ಇವತ್ತು ನಮ್ಮ ಪವಿತ್ರ ದಿನ ಅವರು ಆ ಒಂದು ಊಟ ಮಾಡಬಾರದು ಎಂದು ನಿಷೇಧ ಹೇರಿದರೆ ಅದು ಸಭ್ಯ ನಾಗರಿಕ ಸಮಾಜದ ಲಕ್ಷಣವಲ್ಲ. ಆಹಾರದ ಮೇಲಿನ ನಿಷೇಧವು ಸರ್ವಾಧಿಕಾರಿ ಧೋರಣೆಯದು.

ಸಂವಿಧಾನವು ಆಹಾರವು ಒಂದು ಮೂಲಭೂತ ಹಕ್ಕು ಎಂಬಂತೆ ಪ್ರತಿಪಾದಿಸಿದೆ. ಜೈನ ಧರ್ಮದ ಅಹಿಂಸೆಯ ಅತಿಯಾದ ಆಚರಣೆ ಕಠಿಣವಾದ ವ್ರತದಂತಿದೆ. ಹಾಗೆ ಬದುಕುವುದಕ್ಕೆ ದೊಡ್ಡ ಶಕ್ತಿ ಬೇಕು. ಅದು ಅವರವರ ಪಾಲಿನ ಧಾರ್ಮಿಕ ರೀತಿ. ಅದರ ಬಗ್ಗೆ ನಮಗೆ ತಕರಾರುಗಳಿಲ್ಲ. ಆದರೆ  ಒಂದು ಧರ್ಮಕ್ಕೆ ಮತ್ತೊಂದು ಧರ್ಮದ ಆಹಾರ ನೈತಿಕತೆಯನ್ನು ಪ್ರಶ್ನಿಸುವ ಅಧಿಕಾರ ಇಲ್ಲ’.

‘ಹಿಂದೂ ಧರ್ಮವು ಗೋಮಾತೆಯನ್ನು ಪವಿತ್ರವಾಗಿ ಕಾಣುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಗೋಮಾಂಸ ತಿನ್ನುವವರ ಬಗ್ಗೆ ಅದು ಕೀಳಾಗಿ ನೋಡುವುದು ಅಧರ್ಮ, ಅನ್ಯಾಯವೇ ಹೊರತು ನ್ಯಾಯವಲ್ಲ. ಜ್ಞಾನೋದಯವಾಗಿದ್ದ ಬುದ್ಧ ತನ್ನ ಕೊನೆಗಾಲದಲ್ಲಿ ಭಕ್ತರೊಬ್ಬರು ಪ್ರೀತಿಯಿಂದ ನೀಡಿದ್ದ ಮಾಂಸಾಹಾರವನ್ನೇ ಪವಿತ್ರ ಎಂದು ಸ್ವೀಕರಿಸಿದ್ದರು’.

‘ಇಂತಹ ಮಾಂಸಾಹಾರದ ವಿಷಯದಲ್ಲಿ ಯಾವ ಸರ್ಕಾರಗಳೂ ತಲೆ ಹಾಕಬಾರದು. ಬಹುಜನರ ಆಹಾರಕ್ಕೆ ಕಲ್ಲು ಹಾಕುವ ಯಾವ ಸರ್ಕಾರವೂ ಜನರ ವಿಶ್ವಾಸ ಕಳೆದುಕೊಳ್ಳುವುದು. ಆಹಾರವು ಧರ್ಮ, ಜಾತಿಗಿಂತಲೂ ಅತಿ ಸೂಕ್ಷ್ಮವಾದ ವಿಷಯ. ಅದರ ಜೊತೆ ಯಾವ ರಾಜಕೀಯವನ್ನು ಯಾರೂ ಮಾಡಬಾರದು. ಮಾಂಸಾಹಾರವು ಒಂದು ಹಕ್ಕು. ಅದನ್ನು ಯಾರೂ ಕಸಿಯಬಾರದು.

ಮಾಂಸಾಹಾರವು ಮತೀಯವಾದಿ ಸಂಗತಿ ಅಲ್ಲ; ಅದೊಂದು ಮಾನವ ಸಂಬಂಧಗಳ ವಿಚಾರ. ಸಸ್ಯಾಹಾರದ ಬಗ್ಗೆ ಈತನಕ ಯಾರೂ ಎಲ್ಲೂ ಆಕ್ಷೇಪ ಎತ್ತಿಲ್ಲ. ಸಸ್ಯಾಹಾರವನ್ನು ಎಲ್ಲರೂ ಅಪಾರವಾಗಿ ಗೌರವಿಸಿದ್ದಾರೆ. ಅಂಥದ್ದರಲ್ಲಿ ಮಾಂಸಾಹಾರದ ಬಗ್ಗೆ ಅಗೌರವದ ನಡವಳಿಕೆಯನ್ನು ಯಾರೂ ಮಾಡಬಾರದು. ಇದು ಸಂವಿಧಾನ ಬಾಹಿರ ಚಟುವಟಿಕೆ. ದೇಶದ ಉದ್ದಗಲಕ್ಕೂ ಗೋಮಾಂಸದ ಬಗ್ಗೆ ಕೆಲ ಹಿಂದೂಗಳಿಗೆ ಅಸಹನೆ ಇದೆ. ಇದು ಅನ್ಯಧರ್ಮೀಯರನ್ನು ವಿರೋಧಿಸುವ ನೆಲೆಯಿಂದಲೂ ವ್ಯಕ್ತವಾಗುತ್ತಿದೆ.

ಒಂದು ದೇಶದ ಶಾಂತಿ, ಸಹಬಾಳ್ವೆ, ಸಹೋದರತ್ವ ಆಹಾರದ ತಟಸ್ಥ ನೀತಿಯಲ್ಲಿ ಹೆಚ್ಚಿನ ಅರ್ಥ ಪಡೆದುಕೊಳ್ಳುತ್ತವೆ. ಆಹಾರ ನಿರಪೇಕ್ಷತೆ ನಾಗರಿಕತೆಯ ಲಕ್ಷಣ. ಧರ್ಮದ ಆಚಾರ ವಿಚಾರಗಳು ನಿತ್ಯ ಸಮಾಚಾರಗಳು. ಅವುಗಳ ಒಂದು ದಿನದ ಕಾರಣ ಹಿಡಿದು ಮಾಂಸ ಮಾರಾಟ ನಿಷೇಧಿಸಿದರೆ; ಅದಕ್ಕೆ ಮುಂದೆ ಕೊನೆ ಮೊದಲಿಲ್ಲ. ನಿತ್ಯವೂ ಮಾಂಸ ಮಾರಾಟಕ್ಕೆ ನಿಷೇಧ ಹೇರಲು ಸಾವಿರಾರು ಹಿಂದೂ ಕಾರಣಗಳು ಸುಲಭವಾಗಿ ಸಿಗುತ್ತವೆ.

ಆಹಾರದ ಮಾರುಕಟ್ಟೆಯ ವಿಚಾರಕ್ಕೆ ಧರ್ಮ ಸೂಕ್ಷ್ಮಗಳನ್ನು ತಂದು ಜೋಡಿಸುವ ಮಟ್ಟಕ್ಕೆ ಯಾವ ಧರ್ಮಾಧಿಕಾರಿಯೂ ಮುಂದಾಗಬಾರದು. ಮಾಂಸದ ಬಜಾರಿಗೂ, ಕಸಾಯಿಖಾನೆಗೂ ಧರ್ಮದ ಆಚಾರಗಳನ್ನು ತಂದು ರಾಜಕೀಯ ಮಾಡಿದರೆ; ಅದು ಅಷ್ಟರಮಟ್ಟಿಗೆ ಧರ್ಮದ ಪವಿತ್ರ ಆಚರಣೆಗಳನ್ನು ಮಲಿನಗೊಳಿಸಿದಂತೆ. ಇವನ್ನೆಲ್ಲ ಬಜಾರಿನಲ್ಲಿ ಬಿಕರಿಗೆ ಇಟ್ಟರೆ ಅಹಿಂಸೆಯ ಬದಲಿಗೆ ಹಿಂಸೆಗೆ ಪ್ರಚೋದನೆಯನ್ನು ನೀಡಿದಂತಾಗುತ್ತದೆ’.

* ‘ಸಾಕು ಸಾಕು ನಿಲ್ಲಿಸಿ ನಿಮ್ಮ ಪ್ರವಚನವನ್ನು. ಗೋವಿನ ಅಯ್ಯೋ ಎಂಬ ಆರ್ತ ಕರೆಯ ಜೀವ ದಯೆಯ ಬೇಡಿಕೆ ನಿಮ್ಮ ಕರುಳಿಗೆ ತಟ್ಟುವುದೇ ಇಲ್ಲವೇನೊ... ಅದರ ಗುಂಡಿಗೆಯ ಬಿಸಿ ರಕುತವೇ ನಿಮಗೆ ರುಚಿಯೇ... ಅದರ ಮಾಂಸ ಖಂಡಗಳೇ ನಿಮಗೆ ಆನಂದವೇ... ಜೀವ ದಯೆ, ಪ್ರಾಣಿ ದಯೆಯ ಮಹತ್ವವೇ ನಿಮ್ಮಲ್ಲಿ ಇಲ್ಲವಲ್ಲಾ... ಅಯ್ಯೋ ದೇವರೇ...’

* ‘ನಾನು ಒತ್ತಿ ಒತ್ತಿ ಹೇಳುತ್ತಿರುವುದು ಮಾಂಸ ತಿನ್ನುವವರು ಜೀವ ತಿನ್ನುವವರು ಎಂದು ತಪ್ಪಾಗಿ ಅರ್ಥೈಸುವುದರಲ್ಲಿ ದೇವರ ಕೈವಾಡದ ಬದಲು ಕೆಲವೇ ಕೆಲವು ಮತಭೇದಗಳ ಮತೀಯ ಮನುಷ್ಯರ ಕೈವಾಡ ಮಾತ್ರ ಇದೆ ಎಂದು. ನಾವು ನಮ್ಮ ದೇವರುಗಳಿಗೆ ಭಕ್ತಿಯಿಂದ ಮಾಂಸದ ಅಡುಗೆಯನ್ನೇ ಎಡೆ ಇಟ್ಟು ಅದನ್ನೇ ನೈವೇದ್ಯ ಮಾಡಿ ಇದನ್ನೆಲ್ಲ ನೀನೇ ನಮಗೆ ಕೊಟ್ಟದ್ದು ಎಂದು ಭಕ್ತಿಯಿಂದ ಊಟ ಮಾಡುತ್ತೇವೆ. ಆ ಆಹಾರದಲ್ಲೇ ನಾವು ದೇವರನ್ನೂ, ಧರ್ಮವನ್ನೂ, ನಿಸರ್ಗವನ್ನೂ ಲೀನವಾಗಿಸಿಕೊಳ್ಳುತ್ತೇವೆ.

ಅಷ್ಟರಮಟ್ಟಿಗೆ ನಮ್ಮ ಮಾಂಸದ ಆಹಾರವು ದಿವ್ಯವಾದುದು. ಧರ್ಮಿಷ್ಠರು ಮಾಂಸದ ಸಾಲು ಸಾಲು ಅಂಗಡಿಗಳತ್ತ ಚಿತ್ತಹರಿಸಲಾರರು. ಅವರ ಧ್ಯಾನವು ಅವರ ಮುಕ್ತಿಯತ್ತಲೇ ಇರಲಿ. ದನದ ಮಾಂಸದ ಕಾರಣಕ್ಕೇ ದಲಿತರನ್ನು ಕಲ್ಲಿನಿಂದ ಜಜ್ಜಿ ಜಜ್ಜಿ ಕೊಂದವರ ಮನಸ್ಸಿನಲ್ಲಿ ಯಾವ ಧರ್ಮ ಇದೆ ಎಂದು ಕೇಳಿಕೊಳ್ಳಬೇಕು. ಸುಪ್ರೀಂಕೋರ್ಟ್‌ ಆಹಾರದ ಸಾರ್ವಭೌಮತ್ವ ಎತ್ತಿಹಿಡಿಯಬೇಕು; ಹಾಗೆಯೇ ಯಾವುದೇ ಸರ್ಕಾರವು ಆಹಾರದ ಅವರವರ ಹಕ್ಕನ್ನು ರಕ್ಷಿಸಬೇಕು. ಅಲ್ಲದೆ ಹಿಂದೂ ಧರ್ಮವನ್ನು ಆಹಾರದ ಮೇಲು-ಕೀಳಿನಿಂದ ಬಿಡಿಸಿ ಪ್ರಜಾಪ್ರಭುತ್ವದ ನೀತಿಯನ್ನು ಸಾಕಾರಗೊಳಿಸಬೇಕು’.

ನಾನು ಈ ಮೇಲಿನಂತೆ ನನ್ನೊಳಗೆ ನಾನೇ ಕನಸಿನಲ್ಲಿ ವಿಚಾರ ಮಾಡುತ್ತಿದ್ದೆ. ಮರುದಿನ ಎದ್ದವನೇ ಬ್ರಾಹ್ಮಣ ಮಿತ್ರನಿಗೆ ದನದ ಮಾಂಸ ತಿನ್ನಲು ಆಹ್ವಾನಿಸಿದೆ. ಆತ ತನ್ನ ಇತರ ಗೆಳೆಯರನ್ನೂ ಕರೆತಂದಿದ್ದ. ನಾವೆಲ್ಲ ಒಟ್ಟಾಗಿ ಒಂದು ಯಾಗವೊ, ಯಜ್ಞವೊ ಏನೋ ಒಂದನ್ನು ಮಾಡುವಂತೆ ಗೋಮಾಂಸವನ್ನು ಭಕ್ತಿಯಿಂದ ತಿಂದು; ದೇವಾನುದೇವತೆಗಳನ್ನೇ ಮೈದುಂಬಿದಂತೆ ಚೈತನ್ಯಪೂರ್ಣರಾದೆವು. ಮಾಂಸಾಹಾರವು ಪ್ರಜಾಪ್ರಭುತ್ವದ ಭಾಗವಾಗಿರುವ ಸಂಗತಿ. ಸಮಾಜದ ಎಲ್ಲರೂ ಇದನ್ನು ಗೌರವಿಸಿ; ಸಹಕರಿಸಿ ಸಹಬಾಳ್ವೆ ಮಾಡಬೇಕು.

***
ಚರ್ಚಿಸುವುದೇ  ತಪ್ಪು
ಆಹಾರ ಸೇವನೆ ಅವರವರ ಸ್ವಾತಂತ್ರ್ಯ. ಅದನ್ನು ಪ್ರಶ್ನಿಸುವ, ನಿಯಂತ್ರಿಸುವ ಕೆಲಸವನ್ನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರೂ ಮಾಡಬಾರದು. ಈಚಿನ ದಿನಗಳ ಬೆಳವಣಿಗೆಗಳನ್ನು ಗಮನಿಸಿದರೆ ದಲಿತರನ್ನೂ ಅಲ್ಪಸಂಖ್ಯಾತರನ್ನೂ ದಮನ ಮಾಡುವ ವ್ಯವಸ್ಥಿತ ಹುನ್ನಾರ ದೇಶದಲ್ಲಿ ನಡೆಯುತ್ತಿದೆ ಎನಿಸುತ್ತಿದೆ.

ಶಿಲಾಯುಗದಲ್ಲಿ ಮಾನವ ಮಾಂಸವನ್ನೇ ತಿನ್ನುತ್ತಿದ್ದದ್ದು. ನಾಗರಿಕತೆ ಬೆಳೆದಂತೆ ಕಸುಬಿನ ಆಧಾರದ ಮೇಲೆ ಜಾತಿ, ಧರ್ಮಗಳು ಬೆಳೆದು, ಆ ನಂತರ ಆಹಾರದ ಮಡಿವಂತಿಕೆಯೂ ಹುಟ್ಟಿಕೊಂಡಿದೆ. ದೇವರು, ಧರ್ಮದ ಹೆಸರನ್ನೇ ಇಟ್ಟುಕೊಂಡು ಮಾಂಸ ಸೇವನೆಯ ಮೇಲೆ ನಿಷೇಧ ಹೇರಲು ಹೊರಡುವುದು ಸರಿಯಲ್ಲ.

ಅದರಲ್ಲೂ ವಾರಗಟ್ಟಲೆ ನಿಷೇಧ ಹೇರುವ ಅಗತ್ಯವಾದರೂ ಏನಿದೆ? ಅವರವರ ಜಾತಿ, ಧರ್ಮಗಳಲ್ಲಿ ಆಯಾ ದಿನ ತಿನ್ನಬಾರದು ಎಂದಿದ್ದರೆ ಸೇವನೆ ಮಾಡದೇ ಇರುವುದು ಅವರಿಚ್ಛೆ. ಜಾತ್ಯತೀತ ರಾಷ್ಟ್ರ ಎಂದು ಕರೆದ ಮೇಲೆ ಬೇರೆ ಧರ್ಮದವರ ಆಹಾರ ಪದ್ಧತಿಯನ್ನು ನಿಯಂತ್ರಿಸಬಾರದು. ಈಗಾಗಲೇ ಕೆಲವು ಹಬ್ಬದ ದಿನಗಳಲ್ಲಿ ಮಾಂಸ ನಿಷೇಧ ಇದೆ. ಅದನ್ನು ನಾಲ್ಕೈದು ದಿನಗಳಿಗೆ ವಿಸ್ತರಿಸಬೇಕಾದ ಅಗತ್ಯವಿಲ್ಲ.

ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೋಮುವಾದಿ ನಿಲುವುಗಳನ್ನು ಹೊಂದಿದೆ ಎನ್ನುವುದಕ್ಕೆ ಇಂತಹ ಕ್ರಮಗಳೇ ಸಾಕ್ಷಿ.
ಈಗ ಮಹಾರಾಷ್ಟ್ರದಲ್ಲಿ ಆರಂಭವಾದದ್ದು ನಾಳೆ ಭಾರತದ ಎಲ್ಲೆಡೆಯೂ ಆಗಬಹುದು. ಸಂವಿಧಾನದಲ್ಲಿ ಇಲ್ಲದ್ದನ್ನು ಜಾರಿಗೆ ತರುವ, ಜನರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಉದ್ದೇಶ ಇದರ ಹಿಂದೆ ಇರುವುದು ಸ್ಪಷ್ಟವಾಗುತ್ತದೆ. ಸಾರ್ವಜನಿಕ ಚರ್ಚೆಯನ್ನು ಮಾಡದೆ, ಸದನದಲ್ಲೂ ಚರ್ಚಿಸದೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳಬಾರದು. ಅದಕ್ಕಿಂತ ಹೆಚ್ಚಾಗಿ, ಆಹಾರದ ಬಗ್ಗೆ ಚರ್ಚೆ ಮಾಡುವುದೇ ತಪ್ಪು. ಅದು ಖಾಸಗಿ ವಿಚಾರ.
-ಮೀರಾ ನಾಯಕ,
ಸಂಚಾಲಕಿ, ಸಮತಾ ವೇದಿಕೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT