ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ಗೆ ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಮಂದಹಾಸ

Last Updated 15 ಜುಲೈ 2014, 19:30 IST
ಅಕ್ಷರ ಗಾತ್ರ

ಹದಗೆಟ್ಟ ಆರ್ಥಿಕ ವ್ಯವಸ್ಥೆಯ ನಡುವೆ ಭರವಸೆಯ ನೂರು ಕನಸುಗಳನ್ನು ಕಟ್ಟಿಕೊಂಡು ಹೊಸ ಸರ್ಕಾರ ಮತ್ತು ಹಣಕಾಸು ಸಚಿವರತ್ತಲೇ ದೃಷ್ಟಿ ನೆಟ್ಟಿದ್ದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೀಗ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಚೊಚ್ಚಲ ಬಜೆಟ್ ಮಂದಹಾಸ ಮೂಡಿಸಿದೆ.

ಹತ್ತು ಹಲವು ಸಮಸ್ಯೆಗಳ ಸುಳಿಗೆ ಸಿಲುಕಿ, ನಿರೀಕ್ಷೆಯ ಕಂಗಳಿಂದ ಆಶಾದಾಯಕ ಬೆಳವಣಿಗೆಗಳಿಗಾಗಿ ಎದುರು ನೋಡುತ್ತಿದ್ದ ‘ರಿಯಲ್‌ ಎಸ್ಟೇಟ್‌ ಉದ್ಯಮ’ ಕ್ಷೇತ್ರದತ್ತ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಮಯೋಚಿತವಾಗಿ ದೃಷ್ಟಿಹರಿ­ಸಿದ್ದಾರೆ. ಪರಿಣಾಮವಾಗಿ ಬಜೆಟ್ ಭಾಷಣ ಮುಗಿಯುವುದರೊಳಗೆ ರಿಯಲ್ ಎಸ್ಟೇಟ್ ಕಂಪೆನಿಗಳ ಷೇರು ಮೌಲ್ಯದಲ್ಲಿ ಶೇ 9ರಷ್ಟು ವೃದ್ಧಿಯಾಗಿದ್ದು ಗಮನಾರ್ಹ.

ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಕ್ಷೇತ್ರಗಳನ್ನು ಪ್ರೋತ್ಸಾಹಿಸಲು ‘ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್’ (ಆರ್ಇಐಟಿಎಸ್) ಮತ್ತು ಮೂಲ ಸೌಕರ್ಯ ಹೂಡಿಕೆ ಟ್ರಸ್ಟ್ ಸ್ಥಾಪಿಸಲಾಗುವುದು ಎಂಬ ಸರ್ಕಾರದ ಘೋಷಣೆಯೇ ಷೇರು ಮೌಲ್ಯದ ಏಕಾಏಕಿ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂಬುದು ಕ್ಷೇತ್ರ ಪರಿಣಿತರ ವಿಶ್ಲೇಷಣೆ.

‘ನಿಷ್ಕ್ರಿಯಗೊಂಡ ಉದ್ಯಮದಲ್ಲಿ ಚೈತನ್ಯ ಮೂಡಿಸುವಂತೆ ಆರ್ಇಐಟಿಎಸ್ ಪ್ರಸ್ತಾವನೆ ಕೇಳಿಬಂದಿದೆ. ಇದು ಬ್ಯಾಕಿಂಗ್ ವ್ಯವಸ್ಥೆ ಮೇಲಿನ ಅವಲಂಬನೆ ಕಡಿಮೆಗೊಳಿ­ಸುತ್ತದೆ. ಜತೆಗೆ, ವಿದೇಶಿ ಮತ್ತು ದೇಶೀಯ ಹೂಡಿಕೆದಾರರಿಂದ ದೀರ್ಘಾವಧಿ ಹೂಡಿಕೆಯನ್ನು ಆಕರ್ಷಿಸುತ್ತದೆ’ ಎನ್ನುತ್ತಾರೆ ಟಾಟಾ ಹೌಸಿಂಗ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬ್ರೊಟಿನ್ ಬ್ಯಾನರ್ಜಿ.

‘ಮೂಲಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಮೋದಿ ಸರ್ಕಾರವು ವಿಮಾನ ನಿಲ್ದಾಣಗಳ ಅಭಿವೃದ್ಧಿ, ಹೊಸ ಬಂದರುಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಮತ್ತು 100 ಹೊಸ ‘ಸ್ಮಾರ್ಟ್’ ಸಿಟಿ (ಸುಸಜ್ಜಿತ ನಗರ) ನಿರ್ಮಿಸಲಾಗುವುದು ಎಂದು ಹೇಳಿದೆ. ಇವು ಕೂಡ ಉದ್ಯಮದ ಪುನಶ್ಚೇತನಕ್ಕೆ ಪರೋಕ್ಷವಾಗಿ ನೆರವಾಗಲಿದ್ದು, ದೀರ್ಘಾವಧಿಯಲ್ಲಿ ಮನೆಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ’ ಎನ್ನುತ್ತಾರೆ ಬ್ಯಾನರ್ಜಿ.

ಗ್ರಾಮೀಣ ಭಾಗಗಳಿಂದ ನಗರಗಳತ್ತ ವಲಸೆ ಬರುತ್ತಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಗಾತ್ರದ ಪಟ್ಟಣ, ನಗರಗಳನ್ನು ₨ 7,060 ಕೋಟಿ ವೆಚ್ಚದಲ್ಲಿ ಆಧುನೀಕರಣಗೊಳಿಸಿ ಸ್ಮಾರ್ಟ್ ನಗರಗಳಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇಂತಹ ನಗರ ಅಭಿವೃದ್ದಿಗೆ ಉತ್ತೇಜನ ನೀಡುವುದಕ್ಕಾಗಿಯೇ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮ­ಗಳನ್ನು ಕೂಡ ಸಡಿಲಿಸುವ ನಿರ್ಧಾರ ಅದು ಕೈಗೊಂಡಿದೆ. ಇದು ಉದ್ಯಮದ ಪಾಲಿಗೆ ವರದಾನದಂತಿದೆ.

ವಿವಿಧ ಕ್ಷೇತ್ರಗಳಲ್ಲಿ ಘೋಷಿಸಲಾಗಿ­ರುವ ಬಹುತೇಕ ಅಭಿವೃದ್ಧಿ ಯೋಜನೆಗಳು ಸರ್ಕಾರಿ-–ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಇನ್ನು, ವಸತಿ ರಹಿತರಿಗೆ 2022ರೊಳಗೆ ಮನೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಸರ್ಕಾರ ಹಾಕಿಕೊಂಡಿದೆ. ಮನೆ ಹೊಂದಲು ಜನರಿಗೆ ಅದರಲ್ಲೂ ವಿಶೇಷವಾಗಿ ಯುವಜನತೆಗೆ ಪ್ರೇರಣೆ ನೀಡುವುದಕ್ಕಾಗಿ ಗೃಹ ಸಾಲದ ಮೇಲಿನ ಹೆಚ್ಚುವರಿ ತೆರಿಗೆ ಪ್ರೋತ್ಸಾಹ ಧನವನ್ನು ವಿಸ್ತರಿಸಲಾಗಿದೆ.

ಇದಕ್ಕಾಗಿಯೇ, ‘ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್’ (ಎನ್ಎಚ್‌ಬಿ) ಅಡಿಯಲ್ಲಿ ಕಡಿಮೆ ವೆಚ್ಚದ ಮನೆ ನಿರ್ಮಾಣ ಸಂಸ್ಥೆ ಸ್ಥಾಪಿಸಲಾಗುವುದಾಗಿ ಹೇಳಿದೆ. ಜತೆಗೆ, ನಗರದ ಬಡ ಜನರು ಕಡಿಮೆ ಆದಾಯದ ವರ್ಗ ಮತ್ತಿತರ ದುರ್ಬಲ ವರ್ಗಗಳಿಗೆ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಸಾಲ ದೊರೆಯುವಂತಾಗಲು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಎನ್ಎಚ್‌ಬಿಗೆ ₨4000 ಕೋಟಿ ಒದಗಿಸುವುದಾಗಿ ಸರ್ಕಾರ ಘೋಷಿಸಿದೆ.

‘ಬಜೆಟ್‌ನಲ್ಲಿ ಕೇಳಿಬಂದಿರುವ ಆರ್ ಇಐಟಿಎಸ್, 100 ಹೊಸ ‘ಸ್ಮಾರ್ಟ್’ ನಗರಗಳು ಮತ್ತು ಕಡಿಮೆ ವೆಚ್ಚದ ಮನೆ ನಿರ್ಮಾಣದಂತಹ ಘೋಷಣೆಗಳು ಉದ್ಯಮದಲ್ಲಿ ಮಧ್ಯಮಾವಧಿಯಲ್ಲಿ ಶೇ 10-–15ರಷ್ಟು ಬೇಡಿಕೆ ಹೆಚ್ಚಲು ಕಾರಣವಾಗುತ್ತವೆ’ ಎಂದು ಹೇಳುತ್ತಾರೆ ಆರ್ ಎಕೆ ಸಿರಾಮಿಕ್ಸ್ ನ ಸಿಇಒ ಸಂತೋಷ್ ನೆಮಾ.

ಮನೆಗಳ ಕೊರತೆಯನ್ನು ನೀಗುವ ನಿಟ್ಟಿನಲ್ಲಿ ಎನ್ಎಚ್‌ಬಿಗೆ ಧನ ಸಹಾಯ ನೀಡಲು ಮುಂದಾಗಿರುವ ಸರ್ಕಾರದ ಕ್ರಮವು ಒಂದು ಉತ್ತಮ ಪ್ರಯತ್ನ ಎಂದು ಹೇಳುವ ಪುರಾಣಿಕ್ ಬಿಲ್ಡರ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಪುರಾಣಿಕ್ ಅವರು ‘ಯೋಜನೆಗಳ ನಿರ್ಮಾಣ ಪ್ರದೇಶದ ಮಿತಿಯನ್ನು 50 ಸಾವಿರ ಚದರ ಅಡಿಯಿಂದ 20 ಸಾವಿರ ಚದರ ಅಡಿಗೆ ಇಳಿಕೆ ಮಾಡಲಾಗಿದೆ. ಜತೆಗೆ, ಬಂಡವಾಳ ಮಿತಿಯನ್ನು 100 ಕೋಟಿ ಡಾಲರ್‌ನಿಂದ 50 ಕೋಟಿ ಡಾಲರ್‌ಗೆ ತಗ್ಗಿಸಲಾಗಿದೆ. ಉದ್ಯಮದ ಹಿತದೃಷ್ಟಿಯಿಂದ ಇದೊಂದು ಸಕಾರಾತ್ಮಕ ನಡೆಯಾಗಿದೆ’ ಎನ್ನುತ್ತಾರೆ.

‘ಹೊಸ ನಗರಗಳ ಅಭಿವೃದ್ಧಿ, ರಾಷ್ಟ್ರೀಯ ವಸತಿ ಯೋಜನೆ ಮತ್ತು  ಎನ್ಎಚ್‌ಬಿ ಮೂಲಕ ಕಡಿಮೆ ವೆಚ್ಚದ ಮನೆ ನಿರ್ಮಾಣದಂತಹ ಯೋಜನೆಗಳು ದೇಶದಾದ್ಯಂತ ಅಪಾರ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಿವೆ. ಗೃಹಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿರುವುದು ಆಶಾದಾಯಕ ಬೆಳವಣಿಗೆ’ ಎನ್ನುತ್ತಾರೆ ನಿಹಾರ್ ಉದ್ಯಮ ಸಮೂಹದ ಉಪಾಧ್ಯಕ್ಷ ಮಂಜು ಯಾಗ್ನಿಕ್. ‘ದೀರ್ಘಕಾಲದ ತರುವಾಯ ಉದ್ಯಮಕ್ಕೆ ಹಲವು ಪ್ರಯೋಜನಗಳಾಗಿವೆ.

ಸರ್ಕಾರ ಪಿಪಿಪಿಗೆ ಪ್ರಾಮುಖ್ಯತೆ ನೀಡುವ ಮೂಲಕ ಸರ್ವಾಂಗೀಣ ಅಭಿವೃದ್ಧಿಯೆಡೆಗೆ ಬದ್ಧತೆ ತೋರಿದೆ’ ಎನ್ನುವ ಪಾಶ್ವನಾಥ್ ಡೆವಲಪರ್ಸ್ ನಿರ್ದೇಶಕ ಪ್ರದೀಪ ಜೈನ್ ‘ ದ್ವಂದ್ವಕಾರಿ ನಿಯಮಗಳಿಂದ ದೇಶದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದ ವಿದೇಶಿ ಹೂಡಿಕೆದಾರರಿಗೆ ನಿಯಮಗಳನ್ನು ಸಡಿಲಿಸಿರುವುದು ಹೊಸ ನಗರಗಳ ನಿರ್ಮಾಣ ಕಾರ್ಯದಲ್ಲಿ ಹೂಡಿಕೆ ಮಾಡಲು ಉತ್ತೇಜಿಸುವಂತಿದೆ.

ಜತೆಗೆ, ಇಂತಹ ಯೋಜನೆಗಳು ಮಧ್ಯಮ ವರ್ಗದ ಜನರಿಗೆ ಮನೆ ಖರೀದಿಸಲು ಪ್ರೋತ್ಸಾಹಿಸುತ್ತವೆ’ ಎಂದು ಹೇಳುತ್ತಾರೆ.
‘2022ರೊಳಗೆ ಪ್ರತಿಯೊಬ್ಬರಿಗೂ  ವಸತಿ ಒದಗಿಸುವ ಯೋಜನೆಯು ಈ ಕ್ಷೇತ್ರದ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವ ಜತೆಗೆ ದೀರ್ಘಾವ­ಧಿಯಲ್ಲಿಉತ್ತೇಜನ ನೀಡುವಂತಿದೆ’ ಎನ್ನುತ್ತಾರೆ ಶ್ರೀರಾಮ್ ಪ್ರಾಪರ್ಟಿಸ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಮುರುಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT