ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಪುನರ್ವಸತಿ ಕಲ್ಪಿಸಿ

ನಾಗರಿಕ ರಂಗದಿಂದ ದುಂಡು ಮೇಜಿನ ಸಭೆ
Last Updated 27 ಮೇ 2015, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸುವ ಜತೆಗೆ ವಂಚನೆಗೊಳಗಾಗಿ ಮನೆ ಕಳೆದುಕೊಂಡ ಬಡವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ  ಹೇಳಿದರು.

‘ನಾಗರಿಕ ರಂಗ’ ಶಾಸಕರ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಕೆರೆ ಒತ್ತುವರಿ ತೆರವು: ಮಾನವೀಯ ಪ್ರಶ್ನೆಗಳು’ ಎಂಬ ವಿಷಯ ಕುರಿತ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

‘ಕೆರೆ, ಹುಲ್ಲುಗಾವಲು, ಸ್ಮಶಾನದಂತಹ ಸರ್ಕಾರಿ ಜಾಗಗಳನ್ನು ಯಾರೇ ಅತಿಕ್ರಮಿಸಿಕೊಂಡರೂ ತಪ್ಪೆ. ಅಂತಹ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲೇ ಬೇಕು. ತೆರವು ಕಾರ್ಯಾಚರಣೆಗೆ ಯಾರೂ ಅಡ್ಡಿಪಡಿಸಬಾರದು. ಸರ್ಕಾರ ವಿಶೇಷ ನ್ಯಾಯಾಲಯವನ್ನು ಮಿನಾಮೇಷ ಎಣಿಸದೆ ಕೂಡಲೇ ಆರಂಭಿಸಬೇಕು’ ಎಂದು ಆಗ್ರಹಿಸಿದರು.

‘ಯುವ ಜನತೆ ಪಟ್ಟಣ ಸೇರುತ್ತ, ಹಳ್ಳಿಗಳು ವೃದ್ಧಾಶ್ರಮವಾಗುತ್ತಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ತಿನ್ನುವ ಆಹಾರಕ್ಕೆ ಕಂಟಕ ಬರುತ್ತದೆ. ಆಹಾರ ಉತ್ಪಾದಿಸುವವರು ಬಡವರೇ ವಿನಾ ಶ್ರೀಮಂತರಲ್ಲ. ಆದ್ದರಿಂದ, ಭೂಹೀನ ಬಡವರಿಗೆ ಸರ್ಕಾರ ಕನಿಷ್ಠ 5 ಎಕರೆ ಜಮೀನು ನೀಡಬೇಕು’ ಎಂದು ಹೇಳಿದರು.

ಸಿಐಎಂ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ ಮಾತನಾಡಿ, ‘ಭೂಗಳ್ಳತನದಲ್ಲಿ ಈವರೆಗಿನ ಎಲ್ಲ ಸರ್ಕಾರಗಳು, ರಾಜಕೀಯ ಪಕ್ಷಗಳು ಮತ್ತು ಬಹುತೇಕ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಭೂಗಳ್ಳರನ್ನು ಹಿಡಿದು ಶಿಕ್ಷಿಸುವುದಕ್ಕಾಗಿ 2007 ರಲ್ಲಿಯೇ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಅದಾಗಿ 8 ವರ್ಷ ಕಳೆದರೂ ಈವರೆಗೆ  ಒಬ್ಬ ಕಳ್ಳನನ್ನೂ ಜೈಲಿಗೆ ಕಳುಹಿಸಿಲ್ಲ’ ಎಂದು ವಿಷಾದಿಸಿದರು.

‘ಸರ್ಕಾರದ ಇಲಾಖೆಗಳೇ ಭೂಮಿ ಕದ್ದು ವಂಚನೆ ಮಾಡಿದರೆ ಹೇಗೆ? ನಿಜವಾದ ಭೂಗಳ್ಳರು, ಅಧಿಕಾರಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ವಂಚನೆಗೆ ಒಳಗಾಗಿರುವ ಮುಗ್ದ ಜನರನ್ನು ಭೂಗಳ್ಳರಂತೆ ಬಿಂಬಿಸಲಾಗುತ್ತಿದೆ. ಸರ್ಕಾರ ಈ ಅಮಾನವೀಯ ರಾಜಕೀಯ ಬದಿಗಿಟ್ಟು, ತೆರವು ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರ ನೆರವಿಗೆ ಧಾವಿಸಬೇಕು’ ಎಂದು ಒತ್ತಾಯಿಸಿದರು. 

ಸಿಐಎಂ(ಎಂ) ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್‌ ಮಾತನಾಡಿ, ‘ಮೂಲ ಒತ್ತುವರಿದಾರರು ಮತ್ತು ಅವರಿಗೆ ಸಹಕರಿಸಿದ ಅಧಿಕಾರಿಗಳನ್ನು ಗುರುತಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಒತ್ತುವರಿಯಾದ ಭೂಮಿ ಬೆಲೆಯನ್ನು ವಸೂಲಿ ಮಾಡಬೇಕು. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಹೇಳಿದರು.

ಸಿಪಿಐ, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) (ಎಸ್‌ಯುಸಿಐ (ಸಿ)), ಆಲ್‌ ಇಂಡಿಯಾ ಫಾರ್ವಡ್‌ ಬ್ಲಾಕ್‌ (ಎಐಎಫ್‌ಬಿ)ದಲಿತ ಸಂಘರ್ಷ ಸಮಿತಿ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ (ಟಿಯುಎಫ್) ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT