ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾವಣೆ ಪ್ರಕ್ರಿಯೆ ಬದಲಾಗದೇ?

ರಾಜ್ಯಪಾಲರ ಹುದ್ದೆ ಪ್ರಸ್ತುತತೆ
Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ರಾಜ್ಯಗಳೊಂದಿಗೆ ಉತ್ತಮ ಸಂಬಂಧ ಹೊಂದುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು. ಇದರಿಂದಾಗಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಸುಧಾರಿಸುವ ಆಸೆ ಚಿಗುರಿತ್ತು. ಆದರೆ ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳನ್ನು ವಜಾ ಮಾಡಿದ  ಕ್ರಮ ಈ ಆಸೆಯನ್ನು ಕಮರಿಸಿದೆ. ಒಕ್ಕೂಟ ವ್ಯವಸ್ಥೆ ಬಲಗೊಳ್ಳುವ ಬಗ್ಗೆ ಪುನಃ ಅನುಮಾನ ತಲೆದೋರಿದೆ.

ಚುನಾವಣಾ ಪ್ರಚಾರ ಭಾಷಣಗಳಲ್ಲಿ ಮೋದಿ ಅವರು, ಕೇಂದ್ರ– ರಾಜ್ಯ ನಡುವಿನ ಸಂಬಂಧ ಕುರಿತು ಬಹಳಷ್ಟು ಮಾತನಾಡಿದ್ದರು.  ಅದೇ ಕಾರಣಕ್ಕೆ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳೂ ಪ್ರಧಾನ ಮಂತ್ರಿಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ದೇಶದ ಇತಿಹಾಸದಲ್ಲಿ ಹೊಸ ಸಹಕಾರ–ಸಂಬಂಧದ ಅಧ್ಯಾಯವೊಂದು ಆರಂಭವಾಗಬಹುದು ಎಂದು ಕಾದಿದ್ದರು. ಆದರೆ, ಎನ್‌ಡಿಎ ಸರ್ಕಾರ ರಾಜಕೀಯ ಉದ್ದೇಶದಿಂದ ರಾಜ್ಯ ಸರ್ಕಾರಗಳನ್ನು ವಜಾ ಮಾಡುವ ಕಾಂಗ್ರೆಸ್‌ ಚಾಳಿಯನ್ನೇ ಮುಂದುವರಿಸಿದೆ.

ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಮಾಡಿದ ಮೊದಲ ಕೆಲಸ  ರಾಜ್ಯಪಾಲರನ್ನು ಸಾರಾಸಗಟಾಗಿ ಬದಲಾಯಿಸಿದ್ದು. 2014ರ ಮೇ 26ರಂದು ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ, ಒಂದೇ ವರ್ಷದಲ್ಲಿ ಬಹುತೇಕ ರಾಜ್ಯಪಾಲರನ್ನು ಮನೆಗೆ ಕಳುಹಿಸಿದ್ದಾರೆ. ‘ಕೇಂದ್ರದಲ್ಲಿ ಸರ್ಕಾರ ಬದಲಾದ ತಕ್ಷಣ ಏಕಪಕ್ಷೀಯವಾಗಿ ರಾಜ್ಯಪಾಲರನ್ನು ಬದಲಾವಣೆ ಮಾಡುವುದು ಸರಿಯಲ್ಲ’ ಎಂದು 2010ರಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಮೋದಿ ಪಾಲಿಸಬಹುದು ಎನ್ನುವ ಸಣ್ಣದೊಂದು ಆಶಾವಾದ ಕುರ್ಚಿ ತ್ಯಜಿಸಿರುವ ರಾಜ್ಯಪಾಲರಿಗಿತ್ತು.

ಆದರೆ, ಹಾಗಾಗಲಿಲ್ಲ. ಅನೇಕರು ಕೇಳಿದ ತಕ್ಷಣ ರಾಜೀನಾಮೆ ಕೊಟ್ಟು ಒಲ್ಲದ ಮನಸ್ಸಿನಿಂದ ಜಾಗ ಖಾಲಿ ಮಾಡಿದ್ದಾರೆ. ಅಧಿಕಾರ ತ್ಯಜಿಸಲು ಒಪ್ಪದವರನ್ನು ದೂರದ ರಾಜ್ಯಗಳಿಗೆ ವರ್ಗಾವಣೆ ಮಾಡಿ, ಕೆಟ್ಟದಾಗಿ ನಡೆಸಿಕೊಂಡು ಅನಿವಾರ್ಯವಾಗಿ ರಾಜೀನಾಮೆ ಕೊಡಬೇಕಾದ ಸ್ಥಿತಿ ಸೃಷ್ಟಿಸಲಾಯಿತು. ಆದರೆ, ಕೇಂದ್ರದ ಈ ಕ್ರಮವನ್ನು  ಉತ್ತರಾಖಂಡದ ರಾಜ್ಯಪಾಲರಾಗಿದ್ದ ಅಜೀಜ್‌ ಖುರೇಶಿ ಮತ್ತಿತರರು ಸುಪ್ರೀಂ ಕೋರ್ಟ್‌ನಲ್ಲಿ  ಪ್ರಶ್ನಿಸಿರುವುದು ಗಮನಾರ್ಹ.

‘ಹೊಸದಾಗಿ ಅಧಿಕಾರಕ್ಕೆ ಬಂದಿರುವ ಪಕ್ಷದ ಸಿದ್ಧಾಂತಕ್ಕೆ ಹೊಂದಿಕೊಳ್ಳಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ರಾಜ್ಯಪಾಲರನ್ನು ಬದಲಾವಣೆ ಮಾಡುವುದು ಸರಿಯಲ್ಲ. ಬಲವಾದ ಕಾರಣಗಳಿದ್ದರೆ ಮಾತ್ರ ಅವರನ್ನು ಬದಲಾಯಿಸಲು ಅಡ್ಡಿಯಿಲ್ಲ’ ಎಂದು ಈ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್‌  ಹೇಳಿದೆ. ನ್ಯಾಯಾಲಯದ ತೀರ್ಪಿನ ಬಳಿಕವೂ ರಾಜ್ಯಪಾಲರ ಬದಲಾವಣೆ ಪ್ರಕ್ರಿಯೆ ಮುಂದುವರಿದಿದೆ. ಮೋದಿ, ಕಣ್ಣೊರೆಸುವ ತಂತ್ರ ಎನ್ನುವಂತೆ ಕೆಲವು ರಾಜ್ಯಪಾಲರನ್ನು ಬದಲಾವಣೆ ಮಾಡದೆ ಉಳಿಸಿಕೊಂಡಿದ್ದಾರೆ. 

ಕೇಂದ್ರದಲ್ಲಿ  ಸರ್ಕಾರ ಬದಲಾದಾಗ ರಾಜ್ಯಪಾಲರೂ ಬದಲಾಗುವುದು ಹೊಸ ಸಂಪ್ರದಾಯವೇವಲ್ಲ. ಎಲ್ಲ ಕಾಲಕ್ಕೂ, ಎಲ್ಲ ಸರ್ಕಾರದಲ್ಲೂ ರಾಜ್ಯಪಾಲರ ಬದಲಾವಣೆ ಆಗಿದೆ. ಇದಕ್ಕೆ ಯಾವ ಪಕ್ಷವೂ ಹೊರತಾಗಿ ಉಳಿದಿಲ್ಲ.

ರಾಜ್ಯಪಾಲರನ್ನು ಪದೇ ಪದೇ ಬದಲಾಯಿಸುವುದು ಎಷ್ಟು ಸರಿ? ರಾಜ್ಯಪಾಲರ ಹುದ್ದೆ ಇರಬೇಕೇ, ರದ್ದಾಗಬೇಕೇ? ಅದು ಇದ್ದ ಪಕ್ಷದಲ್ಲಿ ಯಾರನ್ನು ರಾಜ್ಯಪಾಲರಾಗಿ ನೇಮಕ ಮಾಡಬೇಕು? ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ವರ್ತಿಸುವುದನ್ನು ತಡೆಯುವುದು ಹೇಗೆ? ರಾಜಭವನ ತಟಸ್ಥವಾಗಿ ಉಳಿಯುವಂತೆ ಮಾಡುವುದು ಹೇಗೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ. ಅರುಣಾಚಲ ಪ್ರದೇಶದಲ್ಲಿ  ಕಾಂಗ್ರೆಸ್‌ ಸರ್ಕಾರ ಮರುಸ್ಥಾಪನೆಯಾದ ಬಳಿಕವಂತೂ ಈ ಪ್ರಶ್ನೆಗಳಿಗೆ ಇನ್ನೂ ಹೆಚ್ಚಿನ ಬಲ ಬಂದಿದೆ. ರಾಜ್ಯಪಾಲರ ಹುದ್ದೆಯನ್ನೇ ರದ್ದುಪಡಿಸುವಂತೆ ಒತ್ತಾಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಉಳಿದ ಪಕ್ಷಗಳ ಬೆಂಬಲ ಸಿಗುವುದು ಅನುಮಾನ. ಕಾನೂನು ತಜ್ಞರೂ ಅವರ ವಾದವನ್ನು ಒಪ್ಪುವುದಿಲ್ಲ.

ಸಂವಿಧಾನ ರಚನೆಯ ಸಮಯದಲ್ಲೇ ರಾಜ್ಯಪಾಲರ ಹುದ್ದೆ ಕುರಿತು ತಜ್ಞರ ಸಮಿತಿ ಗಂಭೀರ ಚರ್ಚೆ ಮಾಡಿದೆ. ಯಾರನ್ನು ರಾಜ್ಯಪಾಲರನ್ನಾಗಿ ನೇಮಿಸಬೇಕು. ಆಯ್ಕೆ ಯಾವ ರೀತಿ ಇರಬೇಕು? ಅವರ ಜವಾಬ್ದಾರಿಗಳು ಏನು? ರಾಜಭವನ ರಾಜಕೀಯ ಚಟುವಟಿಕೆಯ ಕೇಂದ್ರ ಆಗುವುದನ್ನು ತಪ್ಪಿಸುವುದು ಹೇಗೆ ಎಂದು ವ್ಯಾಪಕ ವಾದ– ವಿವಾದಗಳು ನಡೆದಿವೆ.

‘ಏಳು ದಶಕಗಳ ಹಿಂದೆಯೇ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಬಹುದು ಎಂದು ನಮ್ಮ ಹಿರಿಯರು ಅಂದಾಜಿಸಿದ್ದರು. ಅದೇ ಉದ್ದೇಶಕ್ಕೆ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರೂ, ರಾಜಕೀಯ ಸೋಂಕಿಲ್ಲದ ಗಣ್ಯರನ್ನು ಈ ಹುದ್ದೆಗಳಿಗೆ ನೇಮಕ ಮಾಡಲು ಒಲವು ತೋರಿದ್ದರು. ರಾಜಕಾರಣದಲ್ಲಿ ಸಕ್ರಿಯವಲ್ಲದ, ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿದವರನ್ನು ನೇಮಿಸುವ ಅಪೇಕ್ಷೆ ಅವರಿಗಿತ್ತು.

ಒಂದು ಹಂತದಲ್ಲಿ ರಾಜ್ಯಪಾಲರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂಬ ಪ್ರಸ್ತಾವ ಇತ್ತು.  ಶಾಸನಸಭೆಗಳು ಅವರನ್ನು ಆಯ್ಕೆ ಮಾಡಬೇಕು ಎಂಬುದು ಕೆಲವರ ನಿಲುವಾಗಿತ್ತು. ಸರ್ದಾರ್‌ ವಲ್ಲಭಭಾಯ್‌ ಪಟೇಲ್, ರಾಜ್ಯಪಾಲರು ಜನರಿಂದ ನೇರ ಆಯ್ಕೆಯಾಗಲಿ ಎಂದು ಶಿಫಾರಸು ಮಾಡಿದ್ದರು.

ರಾಜ್ಯಪಾಲರು ನೇರವಾಗಿ ಜನರಿಂದ ಆಯ್ಕೆಯಾಗಲಿ ಎನ್ನುವ ತೀರ್ಮಾನಕ್ಕೆ ಸಂವಿಧಾನ ಸಮಿತಿ ಬರುವ ಹೊತ್ತಿಗೆ ದೇಶ ವಿಭಜನೆ ಆಗಿ, ಮತೀಯ ಗಲಭೆಗಳು ನಡೆದವು. ಮಹಾತ್ಮ ಗಾಂಧಿ ಅವರ ಹತ್ಯೆಯಾಯಿತು. ಆ ಹಂತದಲ್ಲಿ ಕೇಂದ್ರ ಸರ್ಕಾರ ಸದೃಢವಾಗದೆ ಹೋದರೆ ದೇಶ ಉಳಿಯುವುದಿಲ್ಲ ಎಂಬ ದಿಗಿಲು ನೆಹರೂ ಮತ್ತು ಅವರ ಸಂಗಡಿಗರಿಗಿತ್ತು. 

ಜನರಿಂದ ಆಯ್ಕೆ ಆಗುವ ರಾಜ್ಯಪಾಲರು ಸಹಜವಾಗಿಯೇ ಮುಖ್ಯಮಂತ್ರಿಗಳ ಜತೆ ಸಂಘರ್ಷಕ್ಕೆ ಇಳಿಯಬಹುದು ಅಥವಾ ಮುಖ್ಯಮಂತ್ರಿ ಜತೆಗೂಡಿ ಕೇಂದ್ರ ಸರ್ಕಾರದ ವಿರುದ್ಧವೂ ಪಿತೂರಿ ಮಾಡಬಹುದು. ಇದರಿಂದಾಗಿ ರಾಜ್ಯಪಾಲರನ್ನು ಚುನಾಯಿಸುವುದು ಬೇಡ ಎಂಬ ಖಚಿತವಾದ ಅಭಿಪ್ರಾಯವನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ವ್ಯಕ್ತಪಡಿಸಿದ್ದರು. ರಾಷ್ಟ್ರಪತಿಯೇ ರಾಜ್ಯಪಾಲರನ್ನು  ನೇಮಿಸಬೇಕು ಎಂದೂ ಶಿಫಾರಸು ಮಾಡಿದ್ದರು. ಕೊನೆಗೆ ಅದನ್ನೇ ಸಮಿತಿ ಒಪ್ಪಿಕೊಂಡಿತು.

ಯಾವ ಉದ್ದೇಶದಿಂದ ರಾಜ್ಯಪಾಲರ  ಹುದ್ದೆ ಸೃಷ್ಟಿಸಲಾಯಿತೊ ಆ ಉದ್ದೇಶ ಈಡೇರಿದಂತೆ ಕಾಣುವುದಿಲ್ಲ. ಯಾವ ಸಂಸ್ಥೆಗೆ ರಾಜಕೀಯ ಸೋಂಕು ತಗುಲಬಾರದು ಎಂದು ಅಂಬೇಡ್ಕರ್‌, ನೆಹರೂ ಅವರು ಭಾವಿಸಿದ್ದರೊ ಆ ಸಂಸ್ಥೆ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ನಿಜವಾದ ಅರ್ಥದಲ್ಲಿ ರಾಜಭವನ ರಾಜಕೀಯ ಪುನರ್ವಸತಿ  ಕೇಂದ್ರವಾಗಿದೆ. ಮಂತ್ರಿ ಸ್ಥಾನ ಸಿಗದೆ ವಂಚಿತರಾಗುವ ರಾಜಕೀಯ ನಾಯಕರನ್ನು ರಾಜ್ಯಪಾಲರ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ.  ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ರಾಜ್ಯಪಾಲರು ತಮ್ಮ ಹುದ್ದೆಯ ಘನತೆ ಮರೆತು ದೆಹಲಿಯಿಂದ ಬರುವಆದೇಶಕ್ಕೆ ಅನುಗುಣವಾಗಿ ಕುಣಿಯುತ್ತಿದ್ದಾರೆ. ಕೇಂದ್ರ ಸರ್ಕಾರ ಕೇಳಿದಂತೆ ವರದಿ ಕಳುಹಿಸಿ, ಏಕಪಕ್ಷೀಯವಾಗಿ ನಡೆಯುತ್ತಿದ್ದಾರೆ.

ರಾಜ್ಯಪಾಲರನ್ನು ನೇಮಕ ಮಾಡುವ ಮುನ್ನ ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಜತೆ ಸಮಾಲೋಚನೆ ನಡೆಸಬೇಕು ಎನ್ನುವುದು ನೆಹರೂ ಅವರ ಆಶಯವಾಗಿತ್ತು.  ಅಚ್ಚರಿ ಎಂದರೆ, ಈಗ ಮತ್ತೆ ಮುಖ್ಯಮಂತ್ರಿಗಳ ಜತೆ ಚರ್ಚಿಸದೆ ರಾಜ್ಯಪಾಲರನ್ನು ನೇಮಿಸುವುದು ಬೇಡ  ಎನ್ನುವ ಕೂಗೆದ್ದಿದೆ. ಸುಪ್ರೀಂ ಕೋರ್ಟ್‌  ಅನೇಕ ಸಂದರ್ಭಗಳಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಇನ್ನೂ ಇದು ನಮ್ಮ ರಾಜಕೀಯ ನೇತಾರರಿಗೆ ಅರ್ಥ ಆದಂತೆ ಕಾಣುವುದಿಲ್ಲ. 

‘ರಾಜ್ಯಪಾಲರದ್ದು ಸಾಂವಿಧಾನಿಕ ಹುದ್ದೆ. ಅದನ್ನು ರದ್ದುಪಡಿಸುವುದು ಸರಿಯಲ್ಲ.   ಮುಖ್ಯಮಂತ್ರಿ ಜತೆ ರಾಜ್ಯಪಾಲರು ಸೌಹಾರ್ದವಾಗಿ ಕೆಲಸ ಮಾಡುವ ವಾತಾವರಣ ನಿರ್ಮಿಸಲಿ. ಅದನ್ನು ಬಿಟ್ಟು ಈ ಹುದ್ದೆಯನ್ನೇ ರದ್ದು ಮಾಡಬೇಕು ಎನ್ನುವುದು ಸರಿಯಲ್ಲ’ ಎಂದು ವಕೀಲ ಕೆ.ವಿ.ಧನಂಜಯ ಅಭಿಪ್ರಾಯಪಡುತ್ತಾರೆ.

‘ರಾಜ್ಯಪಾಲರು ಸಂವಿಧಾನದ ಚೌಕಟ್ಟುಗಳನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಅವರ ಹದ್ದು ಮೀರಿದ ನಡೆಗೆ ಅಂಕುಶ ಹಾಕಬೇಕು’ ಎನ್ನುವುದು ಅವರ ನಿಲುವು.

1967ರವರೆಗೆ ಎಲ್ಲವೂ ಸರಿಯಾಗೇ ಇತ್ತು. ರಾಜಭವನಕ್ಕೆ ಕಳಂಕ ಹತ್ತಿದ್ದು ಆನಂತರ.  ಅಲ್ಲಿಯವರೆಗೂ ರಾಜ್ಯಪಾಲರು ಘನತೆಯಿಂದ ನಡೆದುಕೊಂಡಿದ್ದರು. ಬಹುಶಃ ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿತ್ತು. ಹೀಗಾಗಿ ರಾಜ್ಯಪಾಲರು ಸರ್ಕಾರ ವಜಾಕ್ಕೆ ಶಿಫಾರಸು ಮಾಡುವ ಪರಿಸ್ಥಿತಿ ಒದಗಿ ಬಂದಿರಲಿಲ್ಲ. 1967ರ ನಂತರ ಆದ ರಾಜಕೀಯ ಪರಿವರ್ತನೆಗಳಿಂದಾಗಿ  ರಾಜಭವನಗಳ ದುರ್ಬಳಕೆ ಹೆಚ್ಚಾಯಿತು. ಅದರಲ್ಲೂ ಇಂದಿರಾ ಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ಅತೀ ಹೆಚ್ಚು ರಾಜ್ಯ ಸರ್ಕಾರಗಳನ್ನು ವಜಾ ಮಾಡಿದರು. ರಾಜ್ಯಪಾಲರೂ ಅವರ ಆದೇಶದಂತೆ ನಡೆದುಕೊಂಡರು.

ಕರ್ನಾಟಕದಲ್ಲಿ ಎಸ್‌.ಆರ್‌. ಬೊಮ್ಮಾಯಿ ನೇತೃತ್ವದ ಸರ್ಕಾರ ವಜಾ ಆಗುವವರೆಗೂ,  ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದ ಸರ್ಕಾರಗಳು ರಾಜ್ಯ ಸರ್ಕಾರಗಳನ್ನು ಮನಸೋ ಇಚ್ಛೆ ವಜಾ ಮಾಡಿದವು. ಆದರೆ, ಎಸ್‌.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಬಂದ ತೀರ್ಪು ಕೇಂದ್ರ ಸರ್ಕಾರದ ಕೈ ಕಟ್ಟಿಹಾಕಿತು.

ಸರ್ಕಾರದ ಬಲಾಬಲ ಪರೀಕ್ಷೆ ನಡೆಸದೆ ರಾಜ್ಯ ಸರ್ಕಾರವನ್ನು ವಜಾ ಮಾಡಬಾರದು. ಬಲಾಬಲ ಪರೀಕ್ಷೆ ವಿಧಾನಸಭೆಯೊಳಗೇ ನಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿತು. ಇದೊಂದು ಐತಿಹಾಸಿಕ ತೀರ್ಪಾಯಿತು. ಈ ತೀರ್ಪು ಬಂದ ಬಳಿಕ ರಾಜ್ಯ ಸರ್ಕಾರಗಳನ್ನು ವಜಾ ಮಾಡಲು ದೆಹಲಿಯಲ್ಲಿ ಅಧಿಕಾರದಲ್ಲಿದ್ದ ನಾಯಕರು ಹೆದರಿದರು.

ಇದಕ್ಕೂ ಹಿಂದೆ ನ್ಯಾಯಾಲಯಗಳು ಒಳ್ಳೆಯ ತೀರ್ಪು ನೀಡಿಲ್ಲವೆಂದಲ್ಲ. ಬೇಕಾದಷ್ಟು ತೀರ್ಪುಗಳು ಬಂದಿವೆ. ಆದರೆ, ಅವು ಜನರ ಗಮನಕ್ಕೆ ಬಾರದೆ ಉಳಿದಿವೆ.

ಒಡಿಶಾ ನ್ಯಾಯಾಲಯ 1973ರಲ್ಲೇ ಅದ್ಭುತವಾದ ತೀರ್ಪು ಕೊಟ್ಟಿದೆ. ಆ ರಾಜ್ಯದಲ್ಲಿ ನಂದಿನಿ ಸತ್ಪತಿ ಅವರ ನೇತೃತ್ವದ ಸರ್ಕಾರ ರಾಜೀನಾಮೆ ಕೊಟ್ಟಾಗ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದರು. ಈ ಕ್ರಮವನ್ನು ವಿರೋಧ ಪಕ್ಷದ ನಾಯಕರಾಗಿದ್ದ ಬಿಜು ಪಟ್ನಾಯಕ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆ ಸಂದರ್ಭದಲ್ಲಿ ಕೋರ್ಟ್‌, ರಾಜ್ಯಪಾಲರು ಸರ್ಕಾರ ರಚಿಸಲು ಪಟ್ನಾಯಕ್‌ ಅವರನ್ನು ಕರೆಯಬೇಕಿತ್ತು ಎಂದು ಹೇಳಿತು.

ಪಟ್ನಾಯಕ್‌ ಅವರ ಪಕ್ಷಕ್ಕೆ ಬಹುಮತವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು  ವಿಧಾನಸಭೆ ಅಧಿವೇಶನ ಕರೆಯಲು ಸಲಹೆ ಮಾಡಬಹುದಿತ್ತು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತ್ತು.

ರಾಜ್ಯಪಾಲರ ಕರ್ತವ್ಯಗಳೇನು, ಅವರ ಇತಿಮಿತಿಗಳೇನು ಎಂದು ಸ್ಪಷ್ಟವಾಗಿ ತಿಳಿಸುವ  ಹತ್ತಾರು ತೀರ್ಪುಗಳು ಹೊರಬಂದಿವೆ.
‘ಇಷ್ಟಾದರೂ ನಮ್ಮ ಸರ್ಕಾರ ಪಾಠ ಕಲಿತಂತೆ ಕಾಣುವುದಿಲ್ಲ. ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿದೆ. ರಾಜ್ಯಪಾಲರೂ ಪಕ್ಷಪಾತಿಯಾಗಿ ನಡೆಯುತ್ತಿದ್ದಾರೆ’ ಎಂದು ಹಿರಿಯ ವಕೀಲ ಎಸ್‌.ಪಿ. ಶಂಕರ್‌ ವ್ಯಾಖ್ಯಾನಿಸುತ್ತಾರೆ.

‘ರಾಜ್ಯಪಾಲರು ಶಾಸನಸಭೆ– ಸಂಸತ್‌, ಕಾನೂನು– ಸಂವಿಧಾನ, ಕೇಂದ್ರ ಹಾಗೂ ರಾಜ್ಯದ ನಡುವೆ ಕೊಂಡಿಯಾಗಿ ನಿಲ್ಲಬೇಕು. ಸಂವಿಧಾನದಲ್ಲಿ ಉಲ್ಲೇಖಿಸಿರುವ ಕರ್ತವ್ಯಗಳನ್ನು ಮಾತ್ರ ಅವರು ನಿರ್ವಹಿಸಬೇಕು. ಇತಿಮಿತಿ ಮೀರಿ ವರ್ತಿಸಬಾರದು’ ಎಂಬುದು ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ಅವರ ಅಭಿಮತ.

ಚಂದ್ರೇಗೌಡ ಅವರಂಥವರ ಸಲಹೆಯನ್ನು ರಾಜ್ಯಪಾಲರು ಕೇಳುವರೇ? ಸಂವಿಧಾನ ಮೌಲ್ಯಗಳನ್ನು ಇನ್ನಾದರೂ ಎತ್ತಿ ಹಿಡಿಯುವರೇ ಎಂಬುದನ್ನು ಕಾಲವೇ ನಿರ್ಧರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT