ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಿ ವ್ಯವಸ್ಥೆಗೆ ಮುಂದಾದ ಶಿಕ್ಷಣ ಇಲಾಖೆ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಒಂದು ತಿಂಗಳಿನಿಂದ ಮುಷ್ಕರ ನಡೆಸುತ್ತಿದ್ದು, ಪದವಿ  ಪರೀಕ್ಷೆಗಳು ಸಮೀಪಿಸುತ್ತಿರುವ ಕಾರಣ ಆಯ್ಕೆಗೆ ಬಾಕಿ ಇರುವ ಅತಿಥಿ ಉಪನ್ಯಾಸಕರ ಪಟ್ಟಿಗೆ ಚಾಲನೆ ನೀಡುವ ಮೂಲಕ ಬದಲಿ ವ್ಯವಸ್ಥೆಗೆ ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಂಡು  ಫೆ.15ರ ಒಳಗೆ ವರದಿ ನೀಡುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಎಸ್‌.ವಿ. ಗಿರಿಯಪ್ಪ ಅವರು ಬೆಂಗಳೂರು, ಮೈಸೂರು, ಕಲಬುರ್ಗಿ, ಮಂಗಳೂರು, ಶಿವಮೊಗ್ಗ, ಧಾರವಾಡ ವಿಭಾಗಗಳ ಕಾಲೇಜು ಶಿಕ್ಷಣ ಇಲಾಖಾ ಜಂಟಿ ನಿರ್ದೇಶಕರಿಗೆ  ಸುತ್ತೋಲೆ ಹೊರಡಿಸಿದ್ದಾರೆ.

‘ಸರ್ಕಾರಿ ಪದವಿ ಕಾಲೇಜುಗಳಲ್ಲಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡ,  ಆಯ್ಕೆಗೆ ಬಾಕಿ ಇರುವ  ಅತಿಥಿ ಉಪನ್ಯಾಸಕರ ಪಟ್ಟಿಗೆ ಚಾಲನೆ ನೀಡಬೇಕು. ಕಾಲೇಜಿನಲ್ಲಿ ನೋಂದಾಯಿತ ಅತಿಥಿ ಉಪನ್ಯಾಸಕರ ಪಟ್ಟಿ ಇಲ್ಲದಿದ್ದಲ್ಲಿ ಪಕ್ಕದ ಸರ್ಕಾರಿ ಕಾಲೇಜುಗಳಿಂದ ತರಿಸಿಕೊಂಡು ತಕ್ಷಣ ಚಾಲನೆ ನೀಡಬೇಕು. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ  ಸ್ಥಳೀಯವಾಗಿ ನಿಗದಿತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ತಮ್ಮ ಹಂತದಲ್ಲಿಯೇ  ಆಯ್ಕೆ ಮಾಡಿಕೊಂಡು ಇಲಾಖೆಗೆ ವರದಿ ನೀಡಬೇಕು’ ಎಂದು ಅವರು ಆದೇಶಿಸಿದ್ದಾರೆ.

ಬೆದರಿಕೆಗೆ ಬಗ್ಗುವುದಿಲ್ಲ: ‘ಅತಿಥಿ ಉಪನ್ಯಾಸಕರ ಸಂಘ ಫೆ.17ರಂದು ಶಾಲಾ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳ ಶೈಕ್ಷಣಿಕ ಬಂದ್‌  ಕರೆ ನೀಡಿದ ನಂತರ ಹೋರಾಟ ತೀವ್ರಗೊಳ್ಳುತ್ತಿದೆ ಎಂದು ಬೆದರಿದ ಶಿಕ್ಷಣ ಇಲಾಖೆ, ಇದನ್ನು ತಡೆಯಲು ಬದಲಿ ವ್ಯವಸ್ಥೆಗೆ ಅದೇಶ ಹೊರಡಿಸಿದೆ. ಇಂತಹ ಗೊಡ್ಡು ಬೆದರಿಕೆಗೆ ಅತಿಥಿ ಉಪನ್ಯಾಸಕರು ಬಗ್ಗುವುದಿಲ್ಲ’ ಎಂದು ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷ  ಬಿ. ರಾಜಶೇಖರ ಮೂರ್ತಿ ತಿಳಿಸಿದ್ದಾರೆ.

‘ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿತ್ತು. ಈಗಲಾದರೂ ಅತಿಥಿ ಉಪನ್ಯಾಸಕ ಸಂಘದ  ಮುಖಂಡರನ್ನು ಮಾತುಕತೆಗೆ ಕರೆದು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT