ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಹಟ್ಟಿ: ಸಂಭ್ರಮದ ಕಾಡಸಿದ್ಧೇಶ್ವರ ಜಾತ್ರೆ

Last Updated 7 ಅಕ್ಟೋಬರ್ 2015, 7:04 IST
ಅಕ್ಷರ ಗಾತ್ರ

ಬನಹಟ್ಟಿ: ಕಿವಿಗಡಚಿಕ್ಕುವ ಸಂಬಾಳ ವಾದನ, ಪಟಾಕಿಗಳ ಅಬ್ಬರದ ನಡುವೆ ಸಾವಿರಾರು ಭಕ್ತರಿಂದ ‘ಕಾಡಸಿದ್ಧೇಶ್ವರ ಮಹಾರಾಜ ಕೀ... ಜೈ’ ಎಂಬ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಮಂಗಳವಾರ ಇಲ್ಲಿ ನಡೆದ ಕಾಡಸಿದ್ಧೇಶ್ವರ ರಥೋತ್ಸವ ಸಾವಿರಾರು ಭಕ್ತರ ಭಕ್ತಿ ಪರಾಕಾಷ್ಠೆಗೆ ಸಾಕ್ಷಿ ಯಾಯಿತು. ರಾತ್ರಿ ನಡೆದ ಜಾತ್ರೆಯಲ್ಲಿ ಸುತ್ತಲಿನ ಅನೇಕ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವರಿಗೆ ಭಕ್ತಿ ಅರ್ಪಿಸಿ ಸಂಭ್ರಮಿಸಿದರು.

ಅಲಂಕೃತ ರಥದಲ್ಲಿ ಕಾಡಸಿದ್ಧೇಶ್ವರ ಬೆಳ್ಳಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ನಗರದ ಹಿರಿಯರು ದೇವರಿಗೆ ಮಂಗ ಳಾರತಿ ಬೆಳಗಿದರು. ಬಳಿಕ ಭಕ್ತರು ಕಾಡ ಸಿದ್ಧೇಶ್ವರ ದೇವರಿಗೆ ಜಯಘೋಷ ಕೂಗುತ್ತ ರಥವನ್ನು ಎಳೆದರು. ಸಂಬಾಳ ವಾದನ, ಕರಡಿ, ಹಲಗೆ ಮತ್ತು ಝಾಂಜ್‌ ರಥೋತ್ಸವಕ್ಕೆ ಮೆರಗು ನೀಡಿದವು. ಮಂಗಳವಾರ ಪೇಟೆಯ ರಸ್ತೆ ಎರಡು ಕಡೆಗೆ ಸಾವಿರಾರು ಭಕ್ತರು ನಿಂತು ರಥೋತ್ಸವವನ್ನು ಕಣ್ತುಂಬಿಕೊಂಡರು.

ಜಾತ್ರೆ ಅಂಗವಾಗಿ ಕಾಡಸಿದ್ಧೇಶ್ವರ ದೇವರಿಗೆ ಅಲಂಕಾರ ಮಾಡಲಾಗಿತ್ತು. ಭಕ್ತರು ಸೋಮವಾರ ಮಧ್ಯ ರಾತ್ರಿ ಯಿಂದಲೇ ದೀಡ ನಮಸ್ಕಾರ ಮತ್ತು ಉರುಳು ಸೇವೆಮಾಡಿ ಹರಕೆ ತೀರಿಸಿದರು.

ಪಟಾಕಿ ಅಬ್ಬರ:  ಪಟಾಕಿ ಸುಡುವುದು ಕಾಡಸಿದ್ಧೇಶ್ವರ ಜಾತ್ರೆಯ ವಿಶೇಷ. ಉತ್ತರ ಕರ್ನಾಟಕದಲ್ಲಿ ಇದು ಪಟಾಕಿ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ಇಲ್ಲಿಗೆ ಬರುವ ಭಕ್ತರು ಹರಕೆಯ ರೂಪದಲ್ಲಿ ರಥದ ಮುಂದೆ ಪಟಾಕಿಗಳನ್ನು ಸಿಡಿಸುತ್ತಾರೆ. ಮಧ್ಯಾಹ್ನ 4 ಗಂಟೆಗೆ ಆರಂಭಗೊಂಡ ಪಟಾಕಿ ಸುಡುವ ಕಾರ್ಯಕ್ರಮ ರಾತ್ರಿ 10 ಗಂಟೆ ವರೆಗೆ ನಡೆಯಿತು. ಈ ಬಾರಿ ಸುಮಾರು ₹ 25 ಲಕ್ಷದ ವರೆಗೆ ಪಟಾಕಿ ವ್ಯಾಪಾರ ನಡೆದಿದೆ ಎಂದು ವ್ಯಾಪಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಭರ್ಜರಿ ವ್ಯಾಪಾರ:  ಈ ಬಾರಿ ಜಾತ್ರೆಗೆ ನಾನಾ ಕಡೆಗಳಿಂದ ಹೂ ತರಿಸಲಾಗಿತ್ತು. ಜಾತ್ರೆಯಲ್ಲಿ ಸುಮಾರು ಐದು ಲಕ್ಷದ ವರೆಗೆ ಹೂವಿನ ವ್ಯಾಪಾರ ನಡೆದಿದೆ ಎಂದು ಹೂವಿನ ವ್ಯಾಪಾರಿ ಮಹಾಂತೇಶ ಹೂಗಾರ ತಿಳಿಸಿದರು.

ಪ್ರಸಾದ ವಿತರಣೆ: ಜಾತ್ರೆಯ ಅಂಗವಾಗಿ ಬಂಡಿಗಣಿಯ ನೀಲಮಾಣಿಕ ಮಠದ ಬಸವಗೋಪಾಲ ಸ್ವಾಮೀಜಿ ಭಕ್ತರಿಗೆ ಮಠದ ವತಿಯಿಂದ ಪ್ರಸಾದ ವಿತರಣೆ ಮಾಡಿದರು.

ಮಸಾಲೆ ಅನ್ನ, ಬೂಂದಿ ಮತ್ತು ಹುಗ್ಗಿಯನ್ನು ದೇವಸ್ಥಾನದ ಆವರಣದ ನಾಲ್ಕು ಸ್ಥಳಗಳಲ್ಲಿ ವಿತರಣೆ ಮಾಡ ಲಾಯಿತು. ಎನ್‌.ಬಿ.ಕಾಡದೇವರ, ಪರಪ್ಪ ಪಾಲಭಾವಿ, ರಾಜು ದಿನ್ನಿಮನಿ. ದೀಪಕ ಮಹಾಂತನವರ, ಮುರಿಗೆಪ್ಪ ಮಾಲಗಾರ ಹಾಜರಿದ್ದರು.

ಭಕ್ತರಿಗೆ ಭೂರಿ ಭೋಜನ
ಸ್ಥಳೀಯರ ಆರಾಧ್ಯ ದೈವ ಕಾಡಸಿದ್ಧೇಶ್ವರ ಜಾತ್ರೆಯ ಸಂದರ್ಭದಲ್ಲಿ ಭಕ್ತರಿಗೆ ವೈವಿಧ್ಯಮಯ ಪ್ರಸಾದ ವಿತರಿಸಲಾಯಿತು. ಮಧ್ಯರಾತ್ರಿ ದೀಡ ನಮಸ್ಕಾರ ಹಾಕಿದ ಭಕ್ತರಿಗೆ ದೇವಸ್ಥಾನದಲ್ಲಿ ಅಂದಾಜು ಮೂರು ಕ್ವಿಂಟಲ್‌ ಇಡ್ಲಿ ಮತ್ತು ಚಟ್ನಿ ವಿತರಿಸಲಾಯಿತು.

ಸುಮಾರು ಇಪ್ಪತ್ತೈದು ಕ್ವಿಂಟಲ್‌ನಷ್ಟು ಮಸಾಲೆ ಅನ್ನ, ಎರಡು ಕ್ವಿಂಟಲ್‌ನಷ್ಟು ಶಿರಾ, ಅಂದಾಜು ಹತ್ತು ಕ್ವಿಂಟಲ್‌ಗೂ ಹೆಚ್ಚು ಬೂಂದಿಯನ್ನು ಭಕ್ತರಿಗೆ ಹಂಚಲಾಯಿತು.

ಇದರ ಜೊತೆಗೆ 50 ಕೆ.ಜಿ. ಜಿಲೇಬಿ, 10 ಕೆ.ಜಿ. ಬಾದುಷಾ, 25 ಕೆ.ಜಿ. ಸೋನ್‌ ಪಾಪಡ್‌, ಬೇಸನ್‌ ಉಂಡಿ ಹಾಗೂ ಬಾದಾಮಿ ಹಾಲನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT