ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚಕ್ಕೆ ₹ 1 ಸಾವಿರ ದಂಡ!

ಹಿಡಿದು ಕೊಟ್ಟವರಿಗೆ ₹ 500 ಬಹುಮಾನ ಘೋಷಣೆ
Last Updated 6 ಅಕ್ಟೋಬರ್ 2015, 19:47 IST
ಅಕ್ಷರ ಗಾತ್ರ

ಬೆಳಗಾವಿ: ಊರವರ ‘ಬಯಲು ಶೌಚ’ ರೂಢಿಯನ್ನು ತಪ್ಪಿಸಲು ಜಿಲ್ಲೆಯ ಅಥಣಿ ತಾಲ್ಲೂಕಿನ ಜಂಬಗಿ ಗ್ರಾಮ ಪಂಚಾಯಿತಿಯು ವಿಶಿಷ್ಟ ಕ್ರಮಕ್ಕೆ ಮುಂದಾಗಿದೆ.

ರಸ್ತೆ ಅಕ್ಕಪಕ್ಕದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶೌಚಕ್ಕೆ ಕುಳಿತವರಿಗೆ ₹ 1,000 ದಂಡ ವಿಧಿಸುವುದಲ್ಲದೆ,  ಹೀಗೆ ಕುಳಿತವರ ಬಗ್ಗೆ ಮಾಹಿತಿ ನೀಡಿದವರಿಗೆ ₹ 500 ನಗದು ಬಹುಮಾನ ನೀಡುವ ಮಹತ್ವದ ನಿರ್ಧಾರವನ್ನು ಗಾಂಧಿ ಜಯಂತಿಯಂದು ನಡೆದ ಪಂಚಾಯಿತಿಯ ವಿಶೇಷ ಸಭೆ ಕೈಗೊಂಡಿದೆ.

ಅಥಣಿ– ಖಿಳೇಗಾಂವ್‌ ರಸ್ತೆಯಲ್ಲಿರುವ ಜಂಬಗಿ ಗ್ರಾಮದ ಶೇ 50ರಷ್ಟು ಜನ ಬಯಲು ಶೌಚವನ್ನೇ ರೂಢಿಸಿಕೊಂಡಿದ್ದು, ಗ್ರಾಮದ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಎಗ್ಗಿಲ್ಲದೆ, ಎಲ್ಲೆಂದರಲ್ಲಿ ತಂಬಿಗೆ ಹಿಡಿದು ಕುಳಿತುಕೊಳ್ಳುತ್ತಿದ್ದರು. ಇದರಿಂದ ಈ ಮಾರ್ಗದಲ್ಲಿ ತೆರಳುವ ಮಹಿಳೆಯರಿಗೆ ಸಾಕಷ್ಟು ಮುಜುಗರವೂ ಆಗುತ್ತಿತ್ತು. ಅಲ್ಲದೆ, ಈ ಗ್ರಾಮ ಮಾರ್ಗವಾಗಿ ಪ್ರಯಾಣಿಸುವವರಿಗೆ ‘ಸಹಿಸಲು ಅಸಾಧ್ಯ’ ಎಂಬಂತಹ ದುರ್ವಾಸನೆ ಬಂತೆಂದರೆ ‘ಜಂಬಗಿ ಬಂತು’ ಎಂಬುದು ಮನವರಿಕೆಯಾಗುತ್ತಿತ್ತು. ಅದಕ್ಕೆಂದೇ ಪಂಚಾಯಿತಿ ಈ ನಿರ್ಧಾರಕ್ಕೆ ಮುಂದಾಗಿದೆ.

‘ವೈಯಕ್ತಿಕ ಶೌಚಾಲಯಕ್ಕೆ ನೆರವಾಗುವ ‘ಸ್ವಚ್ಛ ಭಾರತ’ ಯೋಜನೆ ಕುರಿತು ಜಾಗೃತಿ ಮೂಡಿಸಿ, ಸಹಾಯಧನ ನೀಡುವುದಾಗಿ ತಿಳಿಸಿದರೂ ಅನೇಕರು ಶೌಚಾಲಯ ನಿರ್ಮಿಸಿಕೊಳ್ಳದೆ, ಬೆಳಿಗ್ಗೆ ಮತ್ತು ಸಂಜೆ ತಂಬಿಗೆ ಹಿಡಿದು ಮುಖ್ಯ ರಸ್ತೆಯತ್ತಲೇ ‘ಧಾವಿಸಿ’ ಬರುತ್ತಿದ್ದರು. ಇದರಿಂದ ಊರಿನ ಪರಿಸರವೂ ಮಲಿನವಾಗುತ್ತಿರುವುದಲ್ಲದೇ ಗ್ರಾಮದ ಹೆಸರು ಕೆಡುತ್ತಿದೆ. ಇದನ್ನು ಮನಗಂಡು ಈ ಠರಾವ್‌ ಪಾಸ್‌ ಮಾಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾದೇವ ಸದಾಶಿವ ಮಂಡಲೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರ್ಧಾರ ಕೈಗೊಂಡ ಮರುದಿನವೇ ಮುಖ್ಯರಸ್ತೆಯಲ್ಲಿ ಜಾಗೃತಿ ಮೂಡಿಸುವ ಮತ್ತು ಎಚ್ಚರಿಕೆ ನೀಡುವ ಬ್ಯಾನರ್‌ ಅಳವಡಿಸಲಾಗಿದೆ. ಆಗಿನಿಂದ ಆ ರಸ್ತೆಯಲ್ಲಿ ಶೌಚಕ್ಕೆ ಕುಳಿತವರು ಕಂಡಿಲ್ಲ. ಅವರೆಲ್ಲ ಈಗ ಅಕ್ಕಪಕ್ಕದ ಜಮೀನು ಆಶ್ರಯಿಸುತ್ತಿದ್ದಾರೆ. ಅದನ್ನೂ ಬಿಡಿಸಿ, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವುದು ನಮ್ಮ ಗುರಿಯಾಗಿದೆ’ ಎಂದು ಅವರು ಹೇಳಿದರು.

‘ಈ ಹಿಂದೆ ಕೊಪ್ಪಳದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಖುದ್ದಾಗಿ ಶಿಳ್ಳೆ ಅಭಿಯಾನ ನಡೆಸಿ ಜಾಗೃತಿ ಮೂಡಿಸಿದಂತೆ ನಾವೂ ವಿಶಿಷ್ಟ ವಿಧಾನದ ಮೂಲಕ ಈ ಅನಿಷ್ಟವನ್ನು ದೂರ ಮಾಡಲು ನಿರ್ಧರಿಸಿದ್ದೇವೆ’ ಎಂದರು.

ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಿದ ಕೂಡಲೇ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ತಲಾ ₹ 12 ಸಾವಿರ ಸಾಲ ನೀಡಲಿದೆ. ಬಡವರು ಈ ಸೌಲಭ್ಯ ಪಡೆದು ಶೌಚಾಲಯ ನಿರ್ಮಿಸಿಕೊಂಡರೆ, ಪಂಚಾಯಿತಿ ವತಿಯಿಂದ ಬ್ಯಾಂಕ್‌ ಖಾತೆಗೆ ಹಣ ಸಂದಾಯ ಮಾಡಿ, ಸಾಲ ಮರು ಪಾವತಿಸಲಾಗುವುದು ಎಂದೂ ಅವರು ತಿಳಿಸಿದರು.

ಗ್ರಾಮದಲ್ಲಿರುವ 368 ಕುಟುಂಬಗಳ ಪೈಕಿ 125 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿವೆ. ಇದೀಗ 45 ಜನ ಶೌಚಾಲಯ ನಿರ್ಮಿಸಿಕೊಳ್ಳುತ್ತಿದ್ದಾರೆ. ಮಿಕ್ಕ 198 ಕುಟುಂಬಗಳಿಗೆ ಆದಷ್ಟು ಬೇಗ ಶೌಚಾಲಯ ಕಟ್ಟಿಸಿಕೊಟ್ಟು ಗ್ರಾಮವನ್ನು ಬಯಲು ಬಹಿರ್ದೆಸೆಯಿಂದ ಮುಕ್ತಗೊಳಿಸಲಾಗುವುದು ಎಂದು ಅವರು ಭರವಸೆ ವ್ಯಕ್ತಪಡಿಸಿದರು.

* ಜಂಬಗಿ ಪಂಚಾಯಿತಿ ವ್ಯಾಪ್ತಿಯ ಶಿವನೂರು, ಕಲೂತಿ ಮತ್ತು ಹನುಮಾಪುರ ಗ್ರಾಮಗಳಲ್ಲೂ ಹಂತಹಂತವಾಗಿ ಈ ಆದೇಶ ಜಾರಿಗೊಳಿಸಲು ಚಿಂತನೆ ನಡೆದಿದೆ

-ಸುರೇಶ ಮುಂಜೆ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT