ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಂತವಾಗಿ ಚಂದಾ ಪಡೆದರೆ ಶಿಸ್ತು ಕ್ರಮ

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ: ಕಮಿಷನರ್‌ ರೆಡ್ಡಿ
Last Updated 20 ಆಗಸ್ಟ್ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಸಾರ್ವ­ಜನಿ­ಕರಿಂದ ಬಲವಂತವಾಗಿ ಚಂದಾ ವಸೂಲಿ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿ­ಸ­ಲಾಗುತ್ತದೆ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಅಥವಾ ಇತರೆ ಕಾರ್ಯಕ್ರಮಗಳ ಆಯೋಜನೆಗೆ ಬಲ­ವಂತ­ವಾಗಿ ವಂತಿಗೆ ಸಂಗ್ರಹಿಸುವಂತಿಲ್ಲ. ವಂತಿಗೆ ನೀಡು­ವಂತೆ ಒತ್ತಾಯಿಸುವವರ ಬಗ್ಗೆ ಸಾರ್ವಜನಿಕರು ಪೊಲೀ­­ಸರಿಗೆ ಮಾಹಿತಿ ನೀಡಬಹುದು ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿ­ಷ್ಠಾ­ಪಿಸುವವರು ಸ್ಥಳೀಯ ಪೊಲೀಸರಿಂದ ಅನು­ಮತಿ ಪಡೆಯಬೇಕು. ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಗೆ ಸೂಚನೆಗಳು
ಗಣೇಶ ಮೂರ್ತಿ ಪ್ರತಿಷ್ಠಾಪನಾ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆಯ ವಿವರ­ವನ್ನು ಸ್ಥಳೀಯ ಪೊಲೀಸರಿಗೆ ನೀಡಬೇಕು.

ಪೆಂಡಾಲ್‌, ಬ್ಯಾರಿಕೇಡ್‌ ಮತ್ತು ಶಾಮಿಯಾನಗಳನ್ನು ವ್ಯವಸ್ಥಿತ­ವಾಗಿ ಹಾಕಬೇಕು. ಅದಕ್ಕೆ ಬಿಬಿಎಂಪಿಯಿಂದ ಅಥವಾ ಜಾಗದ ಮಾಲೀ­­­ಕ­ರಿಂದ ಅನುಮತಿ ಪಡೆಯಬೇಕು. ವಿವಾದಿತ ಸ್ಥಳಗಳು, ಹೆಚ್ಚು ವಾಹನ ಸಂಚಾರವಿರುವ ರಸ್ತೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ.

ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ  ನಡೆ­­ಯದಂತೆ ಮತ್ತು ಸಮರ್ಪಕ ಬೆಳಕಿನ ವ್ಯವಸ್ಥೆ ಇರುವಂತೆ ಕ್ರಮ ಕೈ­­ಗೊ­­ಳ್ಳಬೇಕು. ಸಿ.ಸಿ ಕ್ಯಾಮೆರಾ ಮತ್ತು ಅಗ್ನಿನಂದಕ ಸಲಕರಣೆ­ಗಳನ್ನು ಅಳವಡಿಸಬೇಕು.

ಆ ಸ್ಥಳದಲ್ಲಿ ದಹನಶೀಲ ವಸ್ತುಗಳನ್ನು ಇಡಬಾರದು ಮತ್ತು ಅಡುಗೆ ಮಾಡಬಾರದು. ವಿದ್ಯುತ್ ದೀಪಾಲಂಕಾರಕ್ಕೆ ಬೆಸ್ಕಾಂ, ಅಗ್ನಿ­ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು.

ಭಕ್ತರ ಆಗಮನ, ನಿರ್ಗಮನಕ್ಕೆ ಸೂಕ್ತ ಪ್ರವೇಶದ್ವಾರಗಳ ವ್ಯವಸ್ಥೆ ಮಾಡ­ಬೇಕು. ಸ್ವಯಂ ಸೇವಕರನ್ನು ನಿಯೋಜಿಸಿ ಜನ­ಜಂಗುಳಿ­ ನಿಯಂತ್ರಿಸಬೇಕು.

ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ, ಪೊಲೀಸ್‌ ಭದ್ರತೆ ಪಡೆದುಕೊಳ್ಳಬೇಕು. ಹಿರಿಯ ನಾಗರಿಕರು, ಶಾಲಾ ಮಕ್ಕಳು ಮತ್ತು  ಸ್ಥಳೀಯರಿಗೆ ತೊಂದ­­ರೆ­ಯಾಗದಂತೆ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತರ­ವ­ರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು.

ಗಣೇಶ ಮೂರ್ತಿಗಳ ಮೆರವಣಿಗೆ, ವಿಸರ್ಜನೆ, ಮನರಂಜನಾ ಕಾರ್ಯಕ್ರಮಗಳ  ವೇಳೆ ಹೆಣ್ಣು ಮಕ್ಕಳನ್ನು ಚುಡಾಯಿಸದಂತೆ ಮತ್ತು ಯಾವುದೇ ಅಪರಾಧ ಚಟುವಟಿಕೆಗಳು ನಡೆಯದಂತೆ ಆಯೋ­ಜಕರು ಎಚ್ಚರ ವಹಿಸಬೇಕು. ಸ್ವಯಂ ಸೇವಕರನ್ನು ಗುರುತಿ­ಸಲು ಅನುಕೂಲವಾಗು­ವಂತೆ ಅವರಿಗೆ ಗುರುತಿನ ಚೀಟಿ, ಬ್ಯಾಡ್ಜ್‌, ಸಮವಸ್ತ್ರ ನೀಡಬೇಕು.

ಮೆರವಣಿಗೆಯು ರಾತ್ರಿ 10 ಗಂಟೆಯೊಳಗೆ ಮುಗಿಯಬೇಕು. ಮೆರ­ವಣಿಗೆ ಸಾಗುವ ಮಾರ್ಗದಲ್ಲಿನ ವಿದ್ಯುತ್‌ ತಂತಿಗಳು, ಮರದ ಕೊಂಬೆಗಳ ಬಗ್ಗೆ ಗಮನಹರಿಸಿ ಯಾವುದೇ ಅವಘಡ ನಡೆಯದಂತೆ ನೋಡಿಕೊಳ್ಳಬೇಕು. ಸೂಕ್ಷ್ಮ, ಅತಿ ಸೂಕ್ಷ್ಮ ಮತ್ತು ಪ್ರಾರ್ಥನಾ ಸ್ಥಳಗಳ ಬಳಿ ಮೆರವಣಿಗೆ ಸಾಗುವಾಗ ಪಟಾಕಿ ಸಿಡಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT