ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲವಾದ ಸಂದೇಶ

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮುಂಬೈನ ಶಕ್ತಿ ಮಿಲ್ಸ್ ಆವರಣದಲ್ಲಿ ನಡೆದ ಎರಡು ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಮೂವರು  ಆರೋಪಿ­ಗಳಿಗೆ ಮುಂಬೈನ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. 

ಕಳೆದ ವರ್ಷವಷ್ಟೇ ಕಾನೂನು ತಿದ್ದುಪಡಿಯಾಗಿ ಸೇರ್ಪಡೆಯಾಗಿರುವ ಐಪಿಸಿ  376 (ಇ) ಸೆಕ್ಷನ್ ಅನ್ವಯ ಗಲ್ಲು ಶಿಕ್ಷೆಯನ್ನು ಭಾರತದಲ್ಲಿ ಮೊದಲ ಬಾರಿಗೆ  ವಿಧಿಸಲಾದ ಪ್ರಕರಣ ಇದು.  2012ರ ಡಿಸೆಂಬರ್ 16ರಂದು ದೆಹಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕ­ರಣದ ನಂತರ, ನ್ಯಾಯಮೂರ್ತಿ ವರ್ಮಾ ಸಮಿತಿ ನೀಡಿದ್ದ  ಶಿಫಾರಸು­ಗಳ ಅನ್ವಯ ಈ ಕಾನೂನು ತಿದ್ದುಪಡಿ ಆಗಿತ್ತು. 

ಅತ್ಯಾಚಾರಿಗಳು ಒಂದಲ್ಲ ಎರಡು ಬಾರಿ ಮತ್ತದೇ ಅಪರಾಧ ಎಸಗಿದ್ದಲ್ಲಿ ಅಂತಹವರಿಗೆ ಗಲ್ಲು ಶಿಕ್ಷೆ ವಿಧಿ­ಸ­ಲು ಈ ಸೆಕ್ಷನ್ ಅವಕಾಶ ಒದಗಿಸುತ್ತದೆ. ಹೀಗಾಗಿ ಟೆಲಿಫೋನ್ ಆಪ­ರೇಟರ್ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗಳು ಮತ್ತೊಮ್ಮೆ ಪತ್ರಿಕಾ ಛಾಯಾ­ಗ್ರಾಹಕಿ ಮೇಲೆಯೂ ಅತ್ಯಾಚಾರ ಎಸಗಿರುವುದರಿಂದ ಗಲ್ಲು ಶಿಕ್ಷೆ­ಯನ್ನು ನ್ಯಾಯಾಲಯ ವಿಧಿಸಿದೆ. 

ಜೊತೆಗೆ ಅಂತಹ ಬರ್ಬರ ಕೃತ್ಯ ಎಸಗು­ವಾಗ ಸಂತ್ರಸ್ತೆಯರ ಅಸಹಾಯಕತೆಯನ್ನು ಲೇವಡಿ ಮಾಡಿ ಕ್ರೌರ್ಯ ಪ್ರದರ್ಶಿಸಿರುವುದನ್ನು ಕೋರ್ಟ್ ತೀವ್ರವಾಗಿ ಪರಿಗಣಿಸಿರುವುದು ಸರಿ­ಯಾ­ಗಿಯೇ ಇದೆ. ಅಪರಾಧ ನಡೆದ ಒಂದೇ ವರ್ಷದಲ್ಲಿ ತ್ವರಿತವಾಗಿ ವಿಚಾ­ರಣೆ ನಡೆದು ತೀರ್ಪು ಪ್ರಕಟವಾಗಿರುವುದು ಸಕಾರಾತ್ಮಕ ಬೆಳವಣಿಗೆ. ಹೊಸ ಕಾನೂನಿಗೆ ಪೂರ್ಣ ಬದ್ಧವಾಗಿರುವ ತೀರ್ಪು ಸಮಾಜಕ್ಕೆ ಬಲವಾದ ಸಂದೇಶವನ್ನೇ ರವಾನಿಸಿದೆ.

ಆದರೆ ಗಲ್ಲು ಶಿಕ್ಷೆ  ಎಂಬುದು ಅತ್ಯಾಚಾರದಂತಹ ಅಪರಾಧಗಳ ಅಂತ್ಯಕ್ಕೆ ಕಾರಣವಾಗಬಹುದೆ ಎಂಬ ಬಗ್ಗೆ  ವಿಭಿನ್ನ ವಾದಗಳಿವೆ. ಗಲ್ಲು ಶಿಕ್ಷೆಯ ಭಯ, ಅತ್ಯಾಚಾರ ಅಪರಾಧದ ತಡೆಗೆ ಪರಿಣಾಮ­ಕಾರಿ­ಯಾಗು­ವುದು ಸಾಧ್ಯವಿಲ್ಲ. ಬದಲಿಗೆ  ಸಾಕ್ಷ್ಯವನ್ನು ಪೂರ್ಣ ನಾಶ ಮಾಡುವುದಕ್ಕಾಗಿ ಅತ್ಯಾ­ಚಾರ ಎಸಗಿದ ನಂತರ ಮಹಿಳೆಯನ್ನು ಕೊಲೆ ಮಾಡುವ ಪ್ರಸಂಗಗಳು ಹೆಚ್ಚಾ­ಗುವ ಅಪಾಯಗಳೇ ಜಾಸ್ತಿ ಎಂಬಂತಹ ನಿಲುವನ್ನು ಮಹಿಳಾ ಹೋರಾಟ­ಗಾರರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಗಲ್ಲು ಶಿಕ್ಷೆ ಎಂಬುದು ನಾಗ­ರಿಕ ಸಮಾಜಕ್ಕೂ ಒಗ್ಗುವಂತಹದ್ದಲ್ಲ. ಜಗತ್ತಿನಲ್ಲಿ ಈಗಾಗಲೇ ಹಲವು ರಾಷ್ಟ್ರ­ಗಳು ಗಲ್ಲು ಶಿಕ್ಷೆ ರದ್ದುಪಡಿಸಿವೆ ಎಂಬುದನ್ನು ಗಮನಿಸಬೇಕು.

ಮಾಡಿದ ತಪ್ಪಿನಿಂದ ಪಾಠ ಕಲಿಯದೆ ಮತ್ತದೇ ಅಪರಾಧ ಎಸಗುವ ಅಪರಾಧಿ­ಗಳಿಗೆ  ಗಲ್ಲುಶಿಕ್ಷೆ ನೀಡಬೇಕು  ಎಂಬ ಮಾತನ್ನು ಬೇರೆ ರೀತಿಯೂ ವ್ಯಾಖ್ಯಾನಿಸ­ಬಹುದು. ಮೊದಲ ಅಪರಾಧಕ್ಕೆ ಶಿಕ್ಷೆಯನ್ನು ಪೂರ್ಣವಾಗಿ ಅನುಭವಿಸಿದ ನಂತರವೂ  ಪಾಠ ಕಲಿಯದೆ  ಎರಡನೇ ಅತ್ಯಾಚಾರ ಎಸಗಿ­ದಲ್ಲಿ ಅಂತಹವರನ್ನು ಪುನರಾವರ್ತಕ ಅಪರಾಧಿ ಎಂದು ಪರಿಗಣಿಸ­ಬೇಕೆಂಬ ವಾದ ಇದೆ. 

ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿಗಳ ವಿಚಾ­ರಣೆ  ಸಂದರ್ಭದಲ್ಲಿ ಈ ವಿಚಾರಗಳು ಹೆಚ್ಚು ಸ್ಪಷ್ಟತೆ ಪಡೆದು­ಕೊಳ್ಳ­ಬಹುದು. ಆದರೆ,  ತ್ವರಿತವಾಗಿ ಶಿಕ್ಷೆಯಾಗುವುದು ಅತ್ಯಾಚಾರ ಪ್ರಕ­ರಣಗಳ ನಿಯಂ­ತ್ರಣಕ್ಕೆ  ಒಂದು ಮಾರ್ಗ ಎಂಬುದು ಖಂಡಿತಾ ನಿಜ. ಈ ಪ್ರಕರಣ­ದಲ್ಲಿ ಅದು ಸಾಧ್ಯವಾಗಿರುವುದು ಸಮಾಧಾನಕರ. ಆದರೆ ದೀರ್ಘಾ­ವಧಿ­ಯಲ್ಲಿ,  ಲೈಂಗಿಕತೆ ಹಾಗೂ ಮಹಿಳೆ ಕುರಿತಾದ  ಮನೋಭಾವಗಳ ಬದ­ಲಾವಣೆ­ಗಳಷ್ಟೇ ಅತ್ಯಾಚಾರದಂತಹ ಅಪರಾಧಗಳ ತಡೆಗೆ ಅತ್ಯಂತ ಪರಿಣಾಮಕಾರಿಯಾದ ಅಸ್ತ್ರವಾಗಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT