ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ ತುಂಬಿ

Last Updated 24 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಭಾರತ 1992ರ ವಿಶ್ವ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿದೆ. ಅದರ ಪ್ರಕಾರ, ಮಕ್ಕಳ ಮೇಲೆ ಆರ್ಥಿಕ ಶೋಷಣೆ/ ಅವರನ್ನು ಬಾಲಕಾರ್ಮಿಕರಾಗಿ ದುಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಆದರೆ ಸಹಿ ಹಾಕಿ 25 ವರ್ಷಗಳಾದರೂ ನಮ್ಮ ಮಕ್ಕಳು ಇನ್ನೂ ಕೆಲಸ ಮಾಡುತ್ತಿದ್ದಾರೆ, ಎಲ್ಲರಿಗೂ ಕಡ್ಡಾಯ ಮೌಲ್ಯಾಧಾರಿತ ಶಿಕ್ಷಣ ಮರೀಚಿಕೆಯಾಗಿದೆ. ಇನ್ನು ಈ ಮಕ್ಕಳನ್ನು ಕೆಲಸದಿಂದ ಬಿಡಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಕೂಡಾ ಅಷ್ಟೇ ಸವಾಲಿನದು.

ಹೋಟೆಲ್‌, ಗ್ಯಾರೇಜ್‌, ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಕರೆತಂದು ಪುನರ್ವಸತಿ ಕೇಂದ್ರಗಳಲ್ಲಿ ಬಿಟ್ಟ ಮಾತ್ರಕ್ಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಾಗದು. ಈ ಕೇಂದ್ರಗಳಲ್ಲಿ ಮಕ್ಕಳಿಗೆ ಬೇಕಾದ ಆಟ, ಪಾಠ, ಊಟ, ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಭಾಗವಹಿಸುವಿಕೆ, ಮಾನಸಿಕ ಸ್ಥೈರ್ಯ ಇವೆಲ್ಲವುಗಳ ಬಗ್ಗೆ ಗಮನಹರಿಸಿದಾಗಷ್ಟೇ ಮಕ್ಕಳ ಪರಿಪೂರ್ಣ ಬೆಳವಣಿಗೆ ಸಾಧ್ಯ. ಆದರೆ ಈ ಕೇಂದ್ರಗಳಲ್ಲಿ ಮಕ್ಕಳಿಗೆ ಬೇಕಾಗುವ ಪೌಷ್ಟಿಕ ಆಹಾರ, ಅಗತ್ಯ ಶಿಕ್ಷಣ, ಮನರಂಜನೆ ಮರೀಚಿಕೆಯಾಗಿದೆ.

ಇಂತಹ ಸ್ಥಿತಿಗೆ ಕಾರಣ ಹುಡುಕುತ್ತಾ ಹೋದರೆ ನಮಗೆ ಕಾಣುವುದು ಅಧಿಕಾರಿಗಳ ತೀವ್ರ ನಿರ್ಲಕ್ಷ್ಯ. ಕಾರ್ಮಿಕ ಇಲಾಖೆ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಕ್ಕಳು ಕಂಡರೂ ಕಾಣದಂತಿದೆ. ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದಿಂದ ನಡೆಯುತ್ತಿರುವ ಕೇಂದ್ರಗಳಂತೂ ಬಾಲಕಾರ್ಮಿಕರೇ ಇಲ್ಲವೆಂದು ಹೇಳುತ್ತಿವೆ.

ಏಕ ಪಾಲಕ/ ಅನಾಥ, ವಿಶೇಷವಾಗಿ ತಾಯಿ ಮಾತ್ರ ಇರುವ ಸಾವಿರಾರು ಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರದ ಅಂಕಿಅಂಶದ ಪ್ರಕಾರವೇ ಸಾಕಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಹಾಗೂ ಸಮಾಜ ಅದಕ್ಕೆ ಕೈ ಜೋಡಿಸಿದರೆ ಮಾತ್ರ ಈ ಎಲ್ಲ ಮಕ್ಕಳೂ ತಮ್ಮ ಬಾಲ್ಯದ ಸವಿರುಚಿ ಪಡೆಯುವಂತೆ ಆಗುತ್ತದೆ. ಆದರೆ ಪೊಲೀಸ್‌ ಇಲಾಖೆ, ಮಕ್ಕಳಿಗಾಗಿ ಇರುವ ವಿಶೇಷ ಪೊಲೀಸ್‌ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಕ್ಕಳ ರಕ್ಷಣೆ, ಪಾಲನೆಯಲ್ಲಿ ಜಾಣ ಕುರುಡುತನ.

ಅವರೆಲ್ಲರಿಗೂ ಮಕ್ಕಳ ಮನೋವಿಜ್ಞಾನದ ಬಗ್ಗೆ ಇನ್ನಷ್ಟು ಅರಿವು ಮೂಡಿಸಬೇಕಾಗಿದೆ. ಸರ್ಕಾರಿ/ ಅರೆ ಸರ್ಕಾರಿ/ ಸ್ವಯಂಸೇವಾ ಸಂಸ್ಥೆಗಳು/ ಕಸ್ತೂರಬಾ/ ಮೊರಾರ್ಜಿ ದೇಸಾಯಿಯಂತಹ ಎಲ್ಲ ಕೇಂದ್ರಗಳ ಬಗ್ಗೆ ಒಂದು ಸಮಗ್ರ ಸಮೀಕ್ಷೆಯೇ ಆಗಬೇಕಾಗಿದೆ. ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಇಂತಹ ಕೇಂದ್ರಗಳ ಪುನಶ್ಚೇತನ ಮಾಡಬೇಕಾಗಿದೆ. ಇದೆಲ್ಲ ಸಾಧ್ಯವಾದರೆ, ಮಕ್ಕಳು ಕೆಲಸ ಮಾಡುವುದನ್ನು ಬಿಟ್ಟು ಶಿಕ್ಷಣದ ಕಡೆ ಒಲವು ತೋರಿಸಬಹುದು. ಆಗಲಾದರೂ ಮಕ್ಕಳಿಗಾಗಿ ಒಂದು ಸ್ವಸ್ಥ ಸಮಾಜ ನಿರ್ಮಾಣ ಆಗಬಹುದೇನೋ? 
(ಲೇಖಕಿ ಧಾರವಾಡದ ‘ಕಿಡ್‌್ಸ’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT