ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಗುಡಿ ಪರಿಷೆಯಲ್ಲಿ 10 ಲಕ್ಷ ಪುಸ್ತಕ

ಪುಸ್ತಕದಿಂದ ಹೃದಯ ವೈಶಾಲ್ಯ: ಅನಂತಮೂರ್ತಿ * ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಪುಸ್ತಕ ಪ್ರಿಯರ ದಂಡು
Last Updated 27 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮನುಷ್ಯನಲ್ಲಿ ಹೃದಯ ವೈಶಾಲ್ಯ ಸಾಧ್ಯವಾಗುವುದು ಪುಸ್ತಕದಿಂದ. ದೇಶದ ರಾಜಕೀಯ ಮತ್ಸರ ದಾಟಿ ಹೋಗುವುದು ಪುಸ್ತಕದಿಂದ. ಓದಿನಿಂದ ನಮ್ಮ ವ್ಯಕ್ತಿತ್ವ ವಿಸ್ತಾರಗೊಳ್ಳುತ್ತದೆ’ ಎಂದು ಹಿರಿಯ ಸಾಹಿತಿ ಡಾ.ಯು.ಆರ್‌. ಅನಂತಮೂರ್ತಿ ಪ್ರತಿ­ಪಾದಿಸಿದರು. 

ಸೃಷ್ಟಿ ವೆಂಚರ್‍ಸ್ ಆಶ್ರಯದಲ್ಲಿ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ‘ಆರನೇ ಪುಸ್ತಕ ಪರಿಷೆ’­ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಾಕಿಸ್ತಾನದ ಲೇಖಕನ ಕೃತಿಯನ್ನು ಪಾಕಿಸ್ತಾನಿಯರು ಮಾತ್ರ ಓದುವುದಿಲ್ಲ. ಭಾರತೀಯರೂ ಓದುತ್ತಾರೆ. ರೆಡ್‌ ಇಂಡಿಯನ್‌ ಕೃತಿಗಳನ್ನು ಸಹ ವಿಶ್ವದ ನಾನಾ ಭಾಗದ ಜನರು ಓದುತ್ತಾರೆ. ಎರಡನೇ ಮಹಾಯುದ್ಧದ ವೇಳೆ ಜರ್ಮನಿಯನ್ನು ಎಲ್ಲರೂ ದ್ವೇಷಿಸಿದರು. ಆದರೆ, ಅಲ್ಲಿನ ಲೇಖಕರ ಕೃತಿಗಳನ್ನು ವಿಶ್ವದ ನಾನಾ ಭಾಗದ ಜನರು ಇಷ್ಟ ಪಟ್ಟರು. ಈಗಲೂ ಇಷ್ಟಪಡುತ್ತಿದ್ದಾರೆ’ ಎಂದರು.

‘ಮನುಷ್ಯನಿಗೆ ಇಡೀ ಜಗತ್ತಿನ ಜ್ಞಾನ ಪಡೆಯಲು ಸಾಧ್ಯವಾಗುವುದು ಪುಸ್ತಕದ ಮೂಲಕ. ಸಂಸಾರದಲ್ಲಿ ನಿತ್ಯ ನಾನಾ ತಾಪತ್ರಯ­ಗಳು ಇರುತ್ತವೆ. ಜಗಳಗಳು ನಡೆಯುತ್ತವೆ. ಆದರೆ, ವ್ಯಕ್ತಿ  ಪುಸ್ತಕ ಹಿಡಿದು ಕುಳಿತ ಕೂಡಲೇ ಎಲ್ಲ ಸಮಸ್ಯೆಗಳನ್ನು ಮರೆತು ಸಂಸಾರದಿಂದ ನಿವೃತ್ತನಾಗುತ್ತಾನೆ. ಜಗತ್ತಿನ ಜೊತೆಗೆ ಆಳವಾದ ಸಂಪರ್ಕ ಪಡೆಯುವುದು ಹಾಗೂ ಸಂಸಾರ­ದಿಂದ ನಿವೃತ್ತಿಯಾಗುವಂತೆ ಮಾಡುವುದು ಪುಸ್ತಕದ ಗುಣ’ ಎಂದು ಅವರು ವಿಶ್ಲೇಷಿಸಿದರು. 

‘ಪಕ್ಕದ ಮನೆಯ ಹುಡುಗಿ ತಪ್ಪು ಮಾಡಿ­ದಾಗ ನಾವು ಆಕೆಯ ಮೇಲೆ ದೋಷಾರೋಪ ಮಾಡುತ್ತೇವೆ. ಕಾದಂಬರಿಯಲ್ಲಿ ಇಂತಹ ಹುಡುಗಿ ಇದ್ದರೆ ಆಕೆಯ ಬಗ್ಗೆ ಸಹಾನುಭೂತಿ ತೋರುತ್ತೇವೆ. ಪುಸ್ತಕ ಓದುವಾಗ ನಾವು ನಿತ್ಯ ಜೀವನಕ್ಕಿಂತ ಹೆಚ್ಚು ಉದಾರವಾಗಿ ವರ್ತಿಸುತ್ತೇವೆ’ ಎಂದು ಅನಂತಮೂರ್ತಿ ಅವರು ಗಮನ ಸೆಳೆದರು.

‘ಪುಸ್ತಕದಿಂದ ಯಾವುದೇ ಅಪಾಯ ಇಲ್ಲ. ಯಾವ ಪುಸ್ತಕ ಒಳ್ಳೆಯದು ಅಥವಾ ಕೆಟ್ಟದು ಎಂಬುದನ್ನು ಓದುಗ ತೀರ್ಮಾನ ಮಾಡುತ್ತಾನೆ. ಸರ್ಕಾರ ಯಾವುದೇ ಪುಸ್ತಕಕ್ಕೆ ನಿಷೇಧ ಹೇರುವುದು ಸರಿಯಲ್ಲ. ಅದನ್ನು ಓದುಗನ ವಿವೇಚನೆಗೆ ಬಿಡಬೇಕು’ ಎಂದು ಅವರು ಸಲಹೆ ನೀಡಿದರು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ‘ಪ್ರಪಂಚದಲ್ಲಿ ಈವರೆಗೆ  ಎಲ್ಲ ಬದಲಾವಣೆ ಸಾಹಿತ್ಯದ ಮೂಲಕವೇ ಆಗಿದೆ. ರಾಮಾಯಣ, ಮಹಾಭಾರತ ಓದಿ ಎಂದು ಯಾರೂ ಜಾಹೀರಾತು ಕೊಟ್ಟಿಲ್ಲ. ಸಾವಿರಾರು ವರ್ಷಗಳ ಬಳಿಕವೂ ಜನರು ಆ ಕೃತಿಗಳನ್ನು ಓದುತ್ತಿದ್ದಾರೆ. ಒಳ್ಳೆಯ ಕೃತಿಗಳನ್ನು ಜನರು ಹುಡುಕಿ ಓದುತ್ತಾರೆ’ ಎಂದರು.

ಸಂಸದ ಅನಂತಕುಮಾರ್‌, ‘ಟಿ.ವಿ. ಪ್ರಭಾವದಿಂದಾಗಿ ಜನರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಅದರಲ್ಲೂ ಯುವಜನರು ಕನ್ನಡ ಪುಸ್ತಕಗಳನ್ನು ಓದುತ್ತಿಲ್ಲ. ಮಾತೃಭಾಷೆಯಲ್ಲೇ ಶಿಕ್ಷಣ ನೀಡಿದರೆ ಓದುಗರ ಸಂಖ್ಯೆ ಹೆಚ್ಚಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕವಿ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.

ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಶಾಸಕರಾದ ಎಲ್‌.ಎ.ರವಿಸುಬ್ರಹ್ಮಣ್ಯ, ಆರ್‌.ವಿ. ದೇವರಾಜ್‌, ಜಾನಪದ ತಜ್ಞೆ ಸಂಧ್ಯಾ ರೆಡ್ಡಿ, ಮಾಜಿ ಉಪಮೇಯರ್‌ ಲಕ್ಷ್ಮಿನಾರಾ­ಯಣ್‌, ಬಿಬಿಎಂಪಿ ಸದಸ್ಯ ಗಂಗಭೈರಯ್ಯ, ವಾಗೀಶ್‌, ಸೃಷ್ಟಿ ವೆಂಚರ್‍ಸ್‌ನ ನಾಗರಾಜ್‌ ನಾವುಂದ ಉಪಸ್ಥಿತರಿದ್ದರು.

ಪರಿಷೆಯಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಪುಸ್ತಕಗಳು ಇದ್ದವು. ಸಂಘಟಕರು ಪ್ರತಿವರ್ಷ ಜನರಿಂದ ಹಳೆ ಪುಸ್ತಕಗಳನ್ನು ಸಂಗ್ರಹಿಸಿ ಪುಸ್ತಕ ಪ್ರಿಯರಿಗೆ ಉಚಿತವಾಗಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT