ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಳು ಗಿಜಿಗುಡಲ್ಲ; ಆಟೊಗಳಿಗೆ ‘ಕಲೆಕ್ಷನ್‌’ ಇಲ್ಲ!

ಮೆಟ್ರೊ ಸಂಚಾರದಿಂದ ಬದಲಾಗಿದೆ ಮೈಸೂರು ರಸ್ತೆಯ ಸಾರಿಗೆ ವ್ಯವಸ್ಥೆ
Last Updated 3 ಮೇ 2016, 19:54 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ; ಆದರೆ, ಆಟೊಗಳ ಸಂಚಾರ ಮಾತ್ರ ಕಡಿಮೆಯಾಗಿದೆ!
ಪೂರ್ವ–ಪಶ್ಚಿಮ ಕಾರಿಡಾರ್‌ನಲ್ಲಿ (ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ) ಪೂರ್ಣಪ್ರಮಾಣದ ಮೆಟ್ರೊ ರೈಲು ಸಂಚಾರ ಸೇವೆ ಆರಂಭವಾದ ಮೇಲೆ ಮೈಸೂರು ರಸ್ತೆಯ ಅಕ್ಕ–ಪಕ್ಕದ ಪ್ರದೇಶಗಳಲ್ಲಿ ಕಂಡು ಬಂದಿರುವ ಬದಲಾವಣೆ ಇದು.

ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೊ ರೈಲು ಸೇವೆಯೂ ಲಭ್ಯವಾದ ಬಳಿಕ ಜನ ಸಂಚಾರದ ಸ್ವರೂಪ ಹೇಗಿದೆ ಎಂಬುದನ್ನು ‘ಪ್ರಜಾವಾಣಿ’ ಮಂಗಳವಾರ ಅರಿಯುವ ಯತ್ನ ಮಾಡಿತು. ಪ್ರಯಾಣಿಕರು ಸುಖ ಯಾನದ ಅನುಭವ ಹಂಚಿಕೊಂಡರೆ, ಆಟೊ ಚಾಲಕರು ‘ಕಲೆಕ್ಷನ್‌’ ಕಡಿಮೆ ಆಗಿದೆ ಎಂಬ ನೋವು ತೋಡಿಕೊಂಡರು.

ಮೆಜೆಸ್ಟಿಕ್‌ ಹಾಗೂ ಸಿಟಿ ರೈಲು ನಿಲ್ದಾಣ ದಾಟಿದ ಮೇಲೆ ಮಾಗಡಿ ರಸ್ತೆ ನಿಲ್ದಾಣ ಬರುತ್ತದೆ. ಅಲ್ಲಿಂದ ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿನಗರದ ಮೂಲಕ ಮೈಸೂರು ರಸ್ತೆ (ನಾಯಂಡಹಳ್ಳಿ ಜಂಕ್ಷನ್‌) ನಿಲ್ದಾಣವನ್ನು ತಲುಪುತ್ತದೆ.

ಈ ಭಾಗದ ಜನರಿಗೆ ಮೆಜೆಸ್ಟಿಕ್‌, ರೈಲು ನಿಲ್ದಾಣ, ಕೋರ್ಟ್‌, ವಿಧಾನಸೌಧ ಹಾಗೂ ಸುತ್ತಲಿನ ತಾಣಗಳಿಗೆ ಹೋಗಲು ಮೆಟ್ರೊ ತುಂಬಾ ಅನುಕೂಲಕರ ಸಾರಿಗೆಯಾಗಿದೆ. ಬಿಸಿಲಿನ ಧಗೆಯಿಂದ ಬಚಾವಾಗಿ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಓಡಾಡುವ ಖುಷಿ ಬೇರೆ.

ವಿಜಯನಗರ ಭಾಗದ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ಅವಧಿಯಲ್ಲಿ ಗಂಟೆಗೆ 10 ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ. ಈ ದಟ್ಟಣೆಯ ವ್ಯೂಹದಲ್ಲಿ ಸಿಕ್ಕಿಬೀಳುವ ಭಯವೀಗ ಜನರಲ್ಲಿ ಮಾಯವಾಗಿದೆ. ವಿಧಾನಸೌಧ ಹಾಗೂ ಅದರ ಸುತ್ತಲಿನ ಸರ್ಕಾರಿ ಕಚೇರಿಗಳಿಗೆ ಹೋಗುವ ನೌಕರರಿಗೆ ಈಗ ಮೆಟ್ರೊ ಮೊದಲ ಆಯ್ಕೆಯಾಗಿದೆ. ತುಂಬಿ ತುಳುಕುತ್ತಿದ್ದ ಬಸ್‌ನಲ್ಲಿ ಬಸವಳಿಯದೆ ಆಟೊದಲ್ಲಿ ಒಟ್ಟೊಟ್ಟಿಗೆ ಹೋಗುತ್ತಿದ್ದವರು ಸಹ ಈಗ ಮೆಟ್ರೊ ಏರುತ್ತಿದ್ದಾರೆ. ವಿಜಯನಗರ ಹಾಗೂ ಅತ್ತಿಗುಪ್ಪೆ ಭಾಗದ ವಕೀಲರಿಗೆ ಕೂಡ ಈ ಸಾರಿಗೆಯೇ ಪ್ರಿಯವಾಗಿದೆ.

‘ಮನೆಯಿಂದ ಕೋರ್ಟ್‌ ತಲುಪುವವರೆಗೆ ದಾರಿಯುದ್ದಕ್ಕೂ ಸಂಚಾರ ದಟ್ಟಣೆ ಬಿಸಿ. ಹೇಗೋ ಎಸಿಎಂಎಂ ಕೋರ್ಟ್‌ ತಲುಪಿದರೆ ಅಲ್ಲಿ ಪಾರ್ಕಿಂಗ್‌ಗೆ ಜಾಗ ಇಲ್ಲ. ಇದೆಲ್ಲ ಕಿರಿಕಿರಿ ಬೇಡವೆಂದು ನಾನೀಗ ಕಾರು ಬಿಟ್ಟು ಮೆಟ್ರೊದಲ್ಲಿ ಓಡಾಟ ಆರಂಭಿಸಿದ್ದೇನೆ’ ಎಂದು ಅತ್ತಿಗುಪ್ಪೆಯಲ್ಲಿ ವಾಸವಾಗಿರುವ ವಕೀಲ ಎನ್‌.ವಿಜಯಕುಮಾರ್‌ ಹೇಳಿದರು. ‘ನನ್ನಂತೆ ನೂರಾರು ವಕೀಲರು ಮೆಟ್ರೊ ಏರುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೆಟ್ರೊ ಮಾರ್ಗದ ದಾರಿಯುದ್ದಕ್ಕೂ ಸಂಚರಿಸಿದಾಗ ಆಟೊಗಳ ಸಂಖ್ಯೆ ಕಡಿಮೆ ಇದ್ದುದು ಎದ್ದುಕಂಡಿತು. ‘ಮೊದಲು ಈ ರಸ್ತೆಗಳಲ್ಲಿ ಆಟೊಗಳು ತೆರಪಿಲ್ಲದಂತೆ ಓಡಾಡುತ್ತಿದ್ದವು. ಈಗ ಸ್ಟ್ಯಾಂಡ್‌ಗಳಲ್ಲೂ ಆಟೊಗಳು ಕಾಣುತ್ತಿಲ್ಲ’ ಎಂದು ಹೇಳಿದರು ವಿಜಯನಗರದಲ್ಲಿ ಮಾತಿಗೆ ಸಿಕ್ಕ ಸ್ಥಳೀಯ ನಿವಾಸಿ ಎಂ.ಸೋಮೇಶ್ವರ್‌.

‘ಮೆಟ್ರೊದಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದು ನಿಜ’ ಎಂದು ಆಟೊ ಚಾಲಕರು ಸಹ ತಿಳಿಸಿದರು. ‘ಮುಂಚೆ ವಿಜಯನಗರದಿಂದ ಎಂ.ಜಿ.ರಸ್ತೆ, ಕೋರಮಂಗಲ ಹಾಗೂ ಸುತ್ತಲಿನ ಭಾಗಗಳಿಗೆ ದೂರದ ಬಾಡಿಗೆ ಸಿಗುತ್ತಿತ್ತು. ಈಗ ಏನಿದ್ದರೂ ಮೆಟ್ರೊ ನಿಲ್ದಾಣದಿಂದ ಹತ್ತಿರದ ಮನೆ ತಲುಪಿಸುವುದಷ್ಟೇ ನಮ್ಮ ಕೆಲಸವಾಗಿದೆ’ ಎಂದು ಆಟೊ ಚಾಲಕ ಮಹೇಶ ಕುಮಾರ್‌ ವಿವರಿಸಿದರು.

‘ಮೆಟ್ರೊ ನಿಲ್ದಾಣಗಳಿಂದ ಹತ್ತಿರದ ಮನೆಗಳಿಗೆ ಹೋಗಲು ಪ್ರಯಾಣಿಕರೇನೋ ಬರುತ್ತಾರೆ. ಆದರೆ, ಮೊದಲಿನಂತೆ ನಮಗೆ ‘ಕಲೆಕ್ಷನ್‌’ ಆಗುತ್ತಿಲ್ಲ’ ಎಂದು ಮತ್ತೊಬ್ಬ ಆಟೊ ಚಾಲಕ ಅನ್ವರ್‌ ಪಾಶಾ ನೋವು ತೋಡಿಕೊಂಡರು.

ಮೆಟ್ರೊ ಮೂಲಕ ಸಿಟಿ ರೈಲು ನಿಲ್ದಾಣದಲ್ಲಿ ನೇರವಾಗಿ ಇಳಿಯಲು ಅವಕಾಶ ಸಿಕ್ಕಿರುವುದು ದೂರದ ಪ್ರಯಾಣಿಕರಿಗೆ ಖುಷಿ ತಂದಿದೆ. ‘ಈಗ ರೈಲು ತಪ್ಪಿಸಿಕೊಳ್ಳುವ ಭಯವಿಲ್ಲ. ರಾತ್ರಿ 9.30ಕ್ಕೆ ನಮ್ಮ ಗಾಡಿ ಇದ್ದರೆ, ಅತ್ತಿಗುಪ್ಪೆಯ ನಮ್ಮ ಮನೆಯಿಂದ ಮುಂಚಿನಂತೆ 7.30ಕ್ಕೆ ಗಡಿಬಿಡಿಯಿಂದ ಓಡುವ ಅಗತ್ಯವಿಲ್ಲ. 9ರ ವೇಳೆಗೆ ಆರಾಮವಾಗಿ ಮೆಟ್ರೊ ಏರಬಹುದು’ ಎಂದು ಸಂಗಮೇಶ ದೇಸಾಯಿ ಸಂತಸ ಹಂಚಿಕೊಂಡರು.

‘ಬಸ್‌ಗಳು ಮೊದಲು ವಿಜಯನಗರ, ಚಂದ್ರಾ ಲೇಔಟ್‌, ದೀಪಾಂಜಲಿನಗರದಲ್ಲೇ ಕಿಕ್ಕಿರಿದು ತುಂಬಿಕೊಂಡು ಬರುತ್ತಿದ್ದವು. ಈಗ ಬಸ್‌ಗಳಲ್ಲೂ ದಟ್ಟಣೆ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

‘ಮೆಟ್ರೊ ಹಾಗೂ ಬಸ್‌ ಸೇವೆಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಎರಡಕ್ಕೂ ಒಂದೇ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆಯನ್ನು ಜಾರಿಗೆ ತಂದರೆ ಅನುಕೂಲ’ ಎಂದು ರಾಜಾಜಿನಗರದ ಎಚ್‌್.ಅಭಿಷೇಕ್‌ ಅಭಿಪ್ರಾಯಪಟ್ಟರು.

ಬಿಎಂಟಿಸಿ ಬಸ್‌ ಮೇಲೆ ಪರಿಣಾಮವಿಲ್ಲ
‘ಮೈಸೂರು ರಸ್ತೆಯಲ್ಲಿ ಮೆಟ್ರೊ ಸಂಚಾರ ಆರಂಭ ಆಗಿದ್ದರಿಂದ ನಮ್ಮ ಬಸ್‌ಗಳ ಸೇವೆ ಮೇಲೆ ಅಂತಹ ಪರಿಣಾಮ ಆಗಿಲ್ಲ. ದೈನಂದಿನ ವರಮಾನದಲ್ಲೂ ದೊಡ್ಡ ವ್ಯತ್ಯಾಸವಾಗಿಲ್ಲ’ ಎಂದು ಬಿಎಂಟಿಸಿಯ ನಗರ ಸಾರಿಗೆ ವ್ಯವಸ್ಥಾಪಕ ಬಿ.ಸಿ. ರೇಣುಕೇಶ್ವರ್‌ ತಿಳಿಸಿದರು.

‘ಮೆಟ್ರೊ ಸೇವೆ ಆರಂಭವಾಗಿ ಈಗಷ್ಟೇ 3–4 ದಿನ ಕಳೆದಿದೆ. ಈ ಅವಧಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಮೆಟ್ರೊದಲ್ಲಿ ಸಂಚರಿಸಿದವರಲ್ಲಿ ಕಾರು, ದ್ವಿಚಕ್ರವಾಹನ ಹಾಗೂ ಆಟೊಗಳ ಪ್ರಯಾಣಿಕರೇ ಹೆಚ್ಚಿರಬೇಕು. ಹೊಸ ವ್ಯವಸ್ಥೆಯಿಂದ ಏನೆಲ್ಲ ಬದಲಾವಣೆಯಾಗಿದೆ ಎನ್ನುವುದನ್ನು ಅರಿಯಲು ಕಾಲಾವಕಾಶ ಅಗತ್ಯ’ ಎಂದು ವಿಶ್ಲೇಷಿಸಿದರು.

‘ಯಾವ ನಿಲ್ದಾಣದಲ್ಲಿ ಎಷ್ಟು ಟಿಕೆಟ್‌ ಮಾರಾಟವಾಗಿದೆ, ಯಾವ, ಯಾವ ನಿಲ್ದಾಣಗಳ ಮಧ್ಯೆ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದಾರೆ ಎಂಬ ಮಾಹಿತಿಯನ್ನು ಮೆಟ್ರೊ ನಿಗಮದಿಂದ ಕೇಳಲಾಗಿದೆ. ಪ್ರಯಾ ಣದ ಸ್ವರೂಪ ಗೊತ್ತಾದ ಬಳಿಕ ಫೀಡರ್‌ ಬಸ್‌ಗಳ ಸೇವೆ ಎಲ್ಲೆಲ್ಲಿ ಆರಂಭಿಸಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ’ ಎಂದರು.

‘ಬಸ್‌ಗಳ ನಿಲುಗಡೆಗೆ ಯಾವ ಮೆಟ್ರೊ ನಿಲ್ದಾಣಗಳ ಬಳಿ ಸ್ಥಳಾವಕಾಶ ಕೊಡಲಾಗುವುದೋ ಅಲ್ಲಿ ಫೀಡರ್‌ ಸೇವೆ ಆರಂಭಿಸಲು ಬಿಎಂಟಿಸಿ ಸಿದ್ಧವಿದೆ’ ಎಂದು ಹೇಳಿದರು.

ಮೆಟ್ರೊ ರೈಲು ಟೆಕ್ಕಿಗಳಿಗೂ ಪ್ರಿಯ
ವೈಟ್‌ಫೀಲ್ಡ್‌ ಹಾಗೂ ಸುತ್ತಲಿನ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಟೆಕ್ಕಿಗಳು ಸಹ ಮೆಟ್ರೊ ರೈಲು ಬಳಕೆ ಯನ್ನು ಆರಂಭಿಸಿದ್ದಾರೆ. ಮೈಸೂರು ರಸ್ತೆಯ ಸುತ್ತಲಿನ ಪ್ರದೇಶದಲ್ಲಿ ವಾಸ ವಾಗಿರುವ ಟೆಕ್ಕಿಗಳು ಬೈಯಪ್ಪನ ಹಳ್ಳಿವರೆಗೆ ಮೆಟ್ರೊದಲ್ಲಿ ಪ್ರಯಾಣ ಮಾಡಿ, ಅಲ್ಲಿಂದ ಫೀಡರ್‌ ಬಸ್‌ಗಳ ಮೂಲಕ ವೈಟ್‌ಫೀಲ್ಡ್‌ಗೆ ತೆರಳುತ್ತಿದ್ದಾರೆ.

ಮನೆಯಿಂದ ನಿಲ್ದಾಣಗಳು 3–4 ಕಿ.ಮೀ. ದೂರದಲ್ಲಿದ್ದರೂ 18 ಕಿ.ಮೀ. ದೂರವನ್ನು ಅರ್ಧ ಗಂಟೆಯಲ್ಲಿ ಕ್ರಮಿಸಬಹುದು ಎಂಬ ಅಭಿಲಾಷೆಯಿಂದ ಮೈಸೂರು ರಸ್ತೆಯ ಮೆಟ್ರೊ ನಿಲ್ದಾಣಗಳಿಗೆ ಅವರು ದಾಂಗುಡಿ ಇಡುತ್ತಿದ್ದಾರೆ.

ಬೈಯಪ್ಪನಹಳ್ಳಿಯಲ್ಲಿ ಬಸ್‌ ನಿಲುಗಡೆಗೆ ಹೆಚ್ಚಿನ ಸ್ಥಳಾವಕಾಶ ಇಲ್ಲದ್ದರಿಂದ ಸ್ವಾಮಿ ವಿವೇಕಾನಂದ ರಸ್ತೆ ನಿಲ್ದಾಣದಿಂದಲೂ ಫೀಡರ್‌ ಬಸ್‌ಗಳ ಸೇವೆ ಒದಗಿಸಲಾಗಿದೆ. ಟೆಕ್ಕಿಗಳು ಅಲ್ಲಿಯೇ ಇಳಿದುಕೊಂಡು ವೈಟ್‌ಫೀಲ್ಡ್‌ನತ್ತ ಪ್ರಯಾಣ ಬೆಳೆಸ ಬಹುದು’ ಎಂದು ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಹೇಳಿದರು.

ನಾಯಂಡಹಳ್ಳಿ ಜಂಕ್ಷನ್‌ ಬಳಿಯೂ ಫೀಡರ್‌ ಸೇವೆ ಆರಂಭಿಸಲು ಸ್ಥಳಾವಕಾಶ ಒದಗಿಸುವಂತೆ ಮೆಟ್ರೊ ರೈಲು ನಿಗಮಕ್ಕೆ ಬಿಎಂಟಿಸಿ ಬೇಡಿಕೆ ಇಟ್ಟಿದೆ. ಮೆಟ್ರೊ ರೈಲು ನಿಗಮದಿಂದ ಇನ್ನೂ ಸ್ಪಂದಿಸಿಲ್ಲ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.

ಲಕ್ಷ ಜನ ಪ್ರಯಾಣ
‘ನಮ್ಮ ಮೆಟ್ರೊ’ ದಲ್ಲಿ ಮಂಗಳ ವಾರ   ಒಟ್ಟಾರೆ 1.09 ಲಕ್ಷ ಜನರು ಪ್ರಯಾಣಿಸಿದ್ದು, ಮೆಟ್ರೊಗೆ ₹ 39 ಲಕ್ಷ ಆದಾಯ ಸಂದಾಯವಾಗಿದೆ.

ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿಯವರೆಗಿನ ನೇರಳೆ ಮಾರ್ಗದಲ್ಲಿ ರಾತ್ರಿ 9 ಗಂಟೆಯ ವರೆಗೆ 80,116 ಮಂದಿ ಹಾಗೂ ಸಂಪಿಗೆ ರಸ್ತೆಯಿಂದ ನಾಗಸಂದ್ರ ವರೆಗಿನ ಮಾರ್ಗದಲ್ಲಿ 29,700 ಜನರು ಪ್ರಯಾಣ ಮಾಡಿದ್ದರು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT