ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರೂಪಿ ಶೇಕ್ಸ್‌ಪಿಯರ್‌!

Last Updated 10 ಜನವರಿ 2015, 19:30 IST
ಅಕ್ಷರ ಗಾತ್ರ

ವಿಲಿಯಂ ಶೇಕ್ಸ್‌ಪಿಯರ್‌ ಜಗತ್ತು ಕಂಡ ಅತ್ಯುತ್ತಮ ನಾಟಕಕಾರ. ತಾನು ರಚಿಸಿದ ನಾಟಕಗಳನ್ನು ತಾನೇ ರಂಗದ ಮೇಲೆ ಪ್ರಯೋಗಿಸಿದ ಅಪ್ರತಿಮ ನಟ. ಇಂಗ್ಲೆಂಡ್‌ನ ರಾಷ್ಟ್ರಕವಿಯಾಗಿದ್ದ ಶೇಕ್ಸ್‌ಪಿಯರ್‌ ಅವರ 450ನೇ ಜನ್ಮ ವರ್ಷಾಚರಣೆ ಈಗ ಜಗತ್ತಿನಾದ್ಯಂತ ವಿವಿಧ ರೂಪಗಳಲ್ಲಿ ನಡೆಯುತ್ತಿದೆ.

ಹುಟ್ಟೂರು ಸ್ಟ್ರಾಟ್ಫೊರ್ಡ್‌–ಅಪಾನ್‌–ಏವನ್‌ನಲ್ಲಿ ಗೌರವಾನ್ವಿತ ವ್ಯಾಪಾರಿ ಹಾಗೂ ಜಮೀನುದಾರನಾಗಿದ್ದ ಶೇಕ್ಸ್‌ಪಿಯರ್‌ ಲಂಡನ್‌ನಲ್ಲಿ ವಿಖ್ಯಾತ ನಾಟಕಕಾರ ಎನ್ನಿಸಿಕೊಂಡಿದ್ದರು. ನಟ, ನಾಟಕಕಾರ ಹಾಗೂ ಕವಿಯಾಗಿದ್ದ ಅವರು ರಚಿಸಿದ ಎಲ್ಲಾ ಸಾಹಿತ್ಯ ಪೂರ್ಣವಾಗಿ ಇಂದು ಲಭ್ಯವಿಲ್ಲ. ಬರೆದ ನಾಟಕಗಳ ಪೈಕಿ ಸಿಕ್ಕಿರುವುದು 37 ಮಾತ್ರ. ಶೇಕ್ಸ್‌ಪಿಯರ್‌ ಹಸ್ತಪ್ರತಿಗಳೂ ದೊರಕಿಲ್ಲ. ಕರಪತ್ರಗಳು ಮುದ್ರಣವಾಗುವ ಕಳಪೆ ದರ್ಜೆ ಕಾಗದದಲ್ಲಿ ಮುದ್ರಣವಾದ ಕೆಲವು ನಾಟಕಗಳು ಪತ್ತೆಯಾಗಿವೆ. 1564ರಲ್ಲಿ ಹುಟ್ಟಿ, 1592ರ ವೇಳೆಗೆ ಯಶಸ್ವಿ ನಾಟಕಕಾರನೆಂದು ಹೆಸರು ಮಾಡಿದ ಶೇಕ್ಸ್‌ಪಿಯರ್‌ 1613ರಲ್ಲಿ ರಂಗಭೂಮಿ ಚಟುವಟಿಕೆಗಳಿಂದ ನಿವೃತ್ತಿ ಪಡೆದು ಹುಟ್ಟೂರಿಗೆ ವಾಪಸ್ಸಾದ.

ಆಂಗ್ಲ ಭಾಷೆಗೆ ಹೊಸ ಹಾದಿ ತೋರಿದ ಶೇಕ್ಸ್‌ಪಿಯರ್‌ ಆ ಭಾಷೆಗೆ ಒದಗಿಸಿದ ಹೊಸ ಪದಗಳು 3000ಕ್ಕೂ ಹೆಚ್ಚು. ಚೆಲ್ಲಾಪಿಲ್ಲಿಯಾಗಿದ್ದ ಆತನ ನಾಟಕ ಬರಹಗಳನ್ನು ಒಟ್ಟುಗೂಡಿಸಿ ಮೊದಲ ಮುದ್ರಣ ಮಾಡುವ ವೇಳೆಗೆ ನಾಟಕಾಸಕ್ತರಿಗೆ ಸಾಕು ಸಾಕಾಗಿತ್ತು. ಮೊದಲಿಗೆ ಪ್ರಿಂಟಾಗಿದ್ದು ಒಂದೇ ಒಂದು ನಾಟಕ ‘ಟಿಟೋಸ್‌ ಆಂಡ್ರೊವಿಕೋಸ್‌’ (1594). ಎಷ್ಟೋ ಹಸ್ತಪ್ರತಿಗಳು ಕಳೆದುಹೋಗಿದ್ದವು.

1616ರಲ್ಲಿ ಶೇಕ್ಸ್‌ಪಿಯರ್‌ ನಿಧನರಾಗುವ ವೇಳೆಗೆ ಅವರ 36 ನಾಟಕಗಳ ಸಂಪುಟವೊಂದು ಹೊರಬಂತು. ಶೇಕ್ಸ್‌ಪಿಯರ್‌ ಬರಹಗಳನ್ನು ಅಧ್ಯಯನ ಮಾಡಿರುವ ಅನೇಕರ ಅಭಿಪ್ರಾಯದಂತೆ– ಇವು ಕೂಡ ಅವರ ಒಟ್ಟು ಕೃತಿಗಳಲ್ಲ. ನಾಟಕಗಳಂತೆ ಶೇಕ್ಸ್‌ಪಿಯರ್‌ ಪುಟ್ಟ ಪದ್ಯಗಳನ್ನೂ ರಚಿಸಿದರು. ‘ಸಾನೆಟ್‌’ಗಳೆಂದು ಹೆಸರಾಗಿರುವ ಈ ಕವನಗಳಲ್ಲಿ ಈಗ ಲಭ್ಯವಿರುವುದು 154 ಸಾನೆಟ್‌ಗಳು. ಇವು ಪ್ರಥಮವಾಗಿ ಪ್ರಕಟವಾಗಿದ್ದು 1609ರಲ್ಲಿ.

ಶೇಕ್ಸ್‌ಪಿಯರ್‌ ಇಂದು ಜಗತ್ತಿನಾದ್ಯಂತ ಜೀವಂತವಾಗಿರುವುದು ನಾಟಕಗಳಿಂದ. ಅವರು ಬರೆದಿದ್ದು ಮೂರು ಬಗೆಯ– ಚಾರಿತ್ರಿಕ, ದುರಂತ ಮತ್ತು ಹಾಸ್ಯ ನಾಟಕಗಳನ್ನು. ‘ಮಿಡ್‌ಸಮ್ಮರ್‌ ನೈಟ್‌’, ‘ದಿ ಮೇರಿ ವೈಪ್‌್ಸ ಆಫ್‌ ವಿಂಡ್ಸರ್‌’, ‘ಹ್ಯಾಮ್ಲೆಟ್‌’, ‘ಒಥೆಲೊ’, ‘ಕಿಂಗ್‌ಲಿಯರ್‌’– ಹೀಗೆ ಪ್ರಸಿದ್ಧ ನಾಟಕಗಳ ಪಟ್ಟಿ ಬೆಳೆಯುತ್ತದೆ. ಹವ್ಯಾಸಿಗಳಾಗಲಿ, ವೃತ್ತಿ ನಾಟಕ ಕಂಪೆನಿಗಳಾಗಲಿ ಒಂದಾದರೂ ಶೇಕ್ಸ್‌ಪಿಯರ್‌ ನಾಟಕಗಳನ್ನು ಆಡಿಯೇ ಆಡಿರುತ್ತಾರೆ ಎನ್ನುವುದು ‘ವಿಶ್ವ ನಾಟಕಕಾರ’ನ ಜನಪ್ರಿಯತೆಗೆ ಸಾಕ್ಷಿ.

ಪ್ರಪಂಚದ ನೂರಕ್ಕೂ ಹೆಚ್ಚು ಭಾಷೆಗಳಲ್ಲಿ ಶೇಕ್ಸ್‌ಪಿಯರ್‌ ನಾಟಕಗಳು ಅನುವಾದಗೊಂಡಿವೆ ಎಂಬ ಅಂದಾಜಿದೆ. ಈತನ ನಾಟಕಗಳನ್ನು ಆಧರಿಸಿದ, ಪ್ರೇರಣೆ ಪಡೆದು ಪ್ರಕಟವಾದ, ಪ್ರದರ್ಶನವಾದ ನಾಟಕಗಳಿಗೆ ಲೆಕ್ಕವಿಲ್ಲ. ಜಾಗತಿಕ ಸಾಹಿತ್ಯ, ಸಂಸ್ಕೃತಿಗೆ ಅನುಪಮ ಕೊಡುಗೆ ನೀಡಿರುವ ಶೇಕ್ಸ್‌ಪಿಯರ್‌ ಕೃತಿಗಳು ನಾಟಕಗಳಾಗಿ, ಚಲನಚಿತ್ರಗಳಾಗಿ, ಟೀವಿ ಧಾರಾವಾಹಿಗಳಾಗಿ ಪ್ರೇಕ್ಷಕರನ್ನು ಸೆಳೆಯುತ್ತಲೇ ಇವೆ. ರಂಗಪ್ರಯೋಗಗಳಂತೂ ನಡೆಯದ ದಿನಗಳೇ ಇಲ್ಲ.

ಮಾನವರ ಸಹಜ ಸ್ವಭಾವಗಳನ್ನು ಸಮಾಜದ ಸ್ಥಿತಿಗತಿಗಳನ್ನು ತಮ್ಮ ನಾಟಕಗಳಲ್ಲಿ ಸಮರ್ಥವಾಗಿ ಹಿಡಿದಿಟ್ಟು ಸಹಜವಾದ ಸಂಭಾಷಣೆಗಳನ್ನು ರಚಿಸಿರುವ ವಿಲಿಯಂ ಶೇಕ್ಸ್‌ಪಿಯರ್‌ ಸಂದೇಶ ವಾಹಕಗಳೆಂದು ಹೆಸರಾಗಿರುವ ಅಂಚೆ ಚೀಟಿಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಆತನ 400ನೇ ಜನ್ಮ ವರ್ಷಾಚರಣೆ ಸಂದರ್ಭಕ್ಕೆ (1964) ಆತನ ತಾಯ್ನಾಡಿನಲ್ಲಿ ಶುರುವಾದ ಅಂಚೆಚೀಟಿ ಪ್ರಸರಣ ಯುರೋಪಿನೆಲ್ಲೆಡೆ ಹರಡಿತು, ಸಾಂದರ್ಭಿಕವಾಗಿ ವಿಲಿಯಂ ಬಗೆಗಿನ ಅಂಚೆ ಚೀಟಿಗಳು ಈಗಲೂ ಬರುತ್ತಲೇ ಇವೆ.

ಹ್ಯಾಮ್ಲೆಟ್‌, ರೋಮಿಯೋ ಜೂಲಿಯಟ್‌, ಮ್ಯಾಕ್‌ಬೆತ್‌– ಹೀಗೆ ಶೇಕ್ಸ್‌ಪಿಯರ್‌ ನಾಟಕಗಳೆಲ್ಲವೂ ಅಂಚೆಚೀಟಿಗಳಲ್ಲಿ ಮೂಡಿಬಂದಿವೆ. ಒಂದು ಅಂದಾಜಿನಂತೆ ಅವರ ಎಲ್ಲಾ ನಾಟಕಗಳ ಬಗ್ಗೆಯೂ ಅಂಚೆಚೀಟಿ ಪ್ರಕಟವಾಗಿದೆ. ಲಂಡನ್‌ನ ನ್ಯೂಗ್ಲೋಬ್‌ ಥಿಯೇಟರ್‌ನಲ್ಲಿ ಶೇಕ್ಸ್‌ಪಿಯರ್‌ ನಾಟಕಗಳ ತಜ್ಞರಾದ ಸಿ. ವಾಲ್ಟರ್‌ ಹುಡ್ಗೇಸ್‌ ಅವರ ಪ್ರಕಾರ, ನಾಟಕಗಳ ಒಳಹೊರಗು ತಿಳಿಯದಿದ್ದರೆ ಅಂಚೆಚೀಟಿ ಮೇಲಿನ ಚಿತ್ರ ಏನೆಂದು ಅರ್ಥವಾಗುವುದು ಕಷ್ಟ.

ಇಂಗ್ಲೆಂಡ್‌, ರಷ್ಯಾ, ಸ್ವೀಡನ್‌, ಸೈಪ್ರಸ್‌, ಲಿಬಿಯಾ, ಅಮೆರಿಕ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಶೇಕ್ಸ್‌ಪಿಯರ್‌ ಕುರಿತ ಅಂಚೆಚೀಟಿಗಳನ್ನು ಹೊರತಂದಿವೆ. ಆತನ 450ನೇ ವರ್ಷಾಚರಣೆಗಂತೂ ಅಂಚೆಚೀಟಿಗಳ ಮಹಾಪೂರವೇ ಹರಿದುಬಂದಿದೆ.

ಈಗ ಮುದ್ರಣವಾಗಿರುವ ಅಂಚೆಚೀಟಿಗಳಲ್ಲಿ ‘ಹ್ಯಾಮ್ಲೆಟ್‌’ ನಾಟಕದ ಚಿತ್ರಗಳೇ ಹೆಚ್ಚು. ವಿನ್ಯಾಸಕಾರರು ಆ ನಾಟಕದ ದೃಶ್ಯಾವಳಿಗಳನ್ನೂ ಅಂಚೆಚೀಟಿಗಳಲ್ಲಿ ಅನಾವರಣಗೊಳಿಸಿದ್ದಾರೆ. ಕೆಲವೆಡೆ ಯಥಾವತ್ತಾಗಿ ನಾಟಕಗಳ ಸನ್ನಿವೇಶಗಳೇ ಕಲಾಕಾರರಿಂದ ಚೀಟಿಗಳಲ್ಲಿ ಮೂಡಿಬಂದಿದ್ದರೆ, ಇನ್ನೂ ಕೆಲವು ಅಂಚೆಚೀಟಿಗಳಲ್ಲಿ ಚಿತ್ರಿಕೆಗಳು ಬಳಕೆಯಾಗಿವೆ.

ಶೇಕ್ಸ್‌ಪಿಯರ್‌ ಭಾವನೆಗಳನ್ನು ರಂಗದ ಮೇಲೆ, ಚಿತ್ರಪರದೆ ಮೇಲೆ ಹಿಡಿದಿಡುವ ಕಲಾವಿದರನ್ನು ಅಂಚೆಚೀಟಿಗಳಲ್ಲಿ ಚಿತ್ರಿಸುವುದು ಸವಾಲಿನ ಕೆಲಸ, ಅದನ್ನು ಚಾಚೂ ತಪ್ಪದಂತೆ ಚೀಟಿಗಳಲ್ಲಿ ಪಡಿಮೂಡಿಸುವುದೂ ಕಷ್ಟ ಎನ್ನುವ ವಾಲ್ಟರ್‌, ಇಂತಹ ಚೀಟಿಗಳಲ್ಲಿ ದುಃಖ, ಸಂತಸಗಳೂ ಪ್ರತಿಬಿಂಬಿತವಾಗಿರುವುದು ವಿಶೇಷವೆನ್ನುತ್ತಾರೆ.

‘ರೋಮಿಯೋ ಜೂಲಿಯಟ್‌’ ಬ್ಯಾಲೆಯಾಗಿ ಹಲವು ದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ. ಅಂತಹ ದೇಶಗಳ ಅಂಚೆಚೀಟಿಗಳಲ್ಲಿ ಬ್ಯಾಲೆ ದೃಶ್ಯಗಳೇ ಚಿತ್ರಣವಾಗಿವೆ. ಆಯಾ ದೇಶಗಳ ಭೌಗೋಳಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳಿಗೆ ತಕ್ಕಂತೆ ಶೇಕ್ಸ್‌ಪಿಯರ್‌ ಕೃತಿಗಳ ಅಂಚೆ ಚೀಟಿಗಳು ಪ್ರಕಟವಾಗಿವೆ.
ನಾಟಕಗಳಲ್ಲಿ ಖ್ಯಾತಿ ಪಡೆದ– ಚಲನಚಿತ್ರಗಳಲ್ಲಿ ಜನಪ್ರಿಯತೆ ಗಳಿಸಿದ ನಟನಟಿಯರ ಚಿತ್ರಗಳನ್ನೂ ಶೇಕ್ಸ್‌ಪಿಯರ್‌ ಅಂಚೆಚೀಟಿಗಳು ಹೊತ್ತು ತಂದಿರುವುದುಂಟು. ಇವರ ಕೃತಿಗಳು ಕಾಮಿಕ್‌್ಸಗಳಲ್ಲಿ ಟೀವಿಗಳಲ್ಲಿ ಹೆಸರಾಗಿದ್ದು ಅದನ್ನು ನೆನಪಿಸಿಕೊಳ್ಳುವ ಅಂಚೆಚೀಟಿಗಳೂ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT