ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ ಮಂಜುವಿನ ಡೇರಿ ಕಾರುಬಾರು

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

‘ಗೌರಿ ನಮಗೆಲ್ಲಾ ಪಾಠ ಕಲಿಸಿದ ಗುರು’  ಮಂಜುನಾಥ ನಾಯ್ಕರು ಗೌರಿಯ ಮೈದಡವುತ್ತಾ  ತಾವು ಹೇಗೆ ಹೈನುಗಾರಿಕೆಗೆ ಬಂದೆ ಎಂಬುದನ್ನು ಹೇಳುತ್ತಿದ್ದರು.  ಇವರು ಉತ್ತರ ಕನ್ನಡ ಜಲ್ಲೆಯ ಸಿದ್ದಾಪುರ ತಾಲ್ಲೂಕಿನ ಮನ್ಮನೆ ಗ್ರಾಮದ ಯುವಕ. ಹುಬ್ಬಳ್ಳಿಯ ಬಾರ್‌ವೊಂದರಲ್ಲಿ ಕ್ಯಾಶಿಯರ್ ಕಂ ಸಪ್ಲೇಯರ್ ಆಗಿದ್ದರು. ಮನಸ್ಸೆಲ್ಲಾ ಸದಾ ಮನೆಯ ಕಡೆ. ಬಾರ್‌ಗೆ ಬಂದವರು ಹಾಲಿನ ಬಗ್ಗೆ ಆಡುತ್ತಿದ್ದ ಮಾತುಗಳು ಕಿವಿಗೆ ಬಿದ್ದವು. ಹಾಗಂತ ಇವರ ಮಾತನ್ನು ನಂಬುವುದು ಹೇಗೆ? ಯಾಕೋ ಇಂಟರ್‌ನೆಟ್‌ನಲ್ಲಿ ಸರ್ಚಿಸಬೇಕೆನಿಸಿತು. ಅಲ್ಲೂ ಹೈನುಗಾರಿಕೆ ಲಾಭದಾಯಕ ಎಂದೇ ಇತ್ತು. ಬಾರ್‌ನ ಲೆಕ್ಕಾಚಾರ ಪೂರೈಸಿ ಕೈಯಲ್ಲಿ ಒಂದಿಷ್ಟು ಕಾಸು ಹಿಡಿದುಕೊಂಡು ನಾಯ್ಕರು ಮನೆಗೆ ಹಿಂದಿರುಗಿ ಬಂದೇ ಬಿಟ್ಟರು.

ಹೀಗೆ ಗೌರಿ ಮನೆಗೆ ಬಂದಳು. ಗೌರಿಯ ಜೊತೆ ಇನ್ನೆರಡು ಹಸುಗಳೂ ಬಂದವು. ಗೌರಿ ಬರುವಾಗಲೇ ಕೆಚ್ಚಲು ಬಾವಿಗೆ ತುತ್ತಾಗಿದ್ದಳು. ಒಂದು ಮೊಲೆ ಬೆಂಡಾಗಿತ್ತು. ಅದಕ್ಕೆ ದಿನಾಲು ಔಷಧಿ ಸೇರಿಸಬೇಕಿತ್ತು. ಇಂಜೆಕ್ಷನ್  ಮೂಲಕ ಸೇರಿಸುವುದನ್ನು ಕಲಿತರು. ಕೆಲವೇ ದಿನಗಳಲ್ಲಿ ಎಲ್ಲಾ ಸರಿಹೋಯಿತು. ಒಂದು ದಿನ ಗೌರಿಗೆ ಹೆರಿಗೆ ನೋವು ಪ್ರಾರಂಭ ಆಗಿತ್ತು. ಆಗಾಗ ಒದ್ದಾಡುತ್ತಿದ್ದಳು. ಮನೆಯವರೆಲ್ಲಾ ಹೊಸ ಸದಸ್ಯರ ನಿರೀಕ್ಷೆಯಲ್ಲಿ ಕುತೂಹಲದಿಂದಿದ್ದರು. ಸ್ವಲ್ಪ ಹೊತ್ತಿಗೆ ಕಾಲು ಕಾಣಿಸಿಕೊಂಡಿತು. ಎಷ್ಟು ಹೊತ್ತಾದರೂ ಕರು ಹೊರಗೆ ಬರುತ್ತಲೇ ಇಲ್ಲ. ಗೌರಿಗೂ ಅದನ್ನು ನೂಕಿ ನೂಕಿ ಸಾಕಾಗಿತ್ತು. ಪಶುವೈದ್ಯರು ಸಿಗದೆ ಆತಂಕ ಹೆಚ್ಚಿತು. ಹೊರಬಂದ ಕಾಲನ್ನು ಮಂಜುನಾಥ ಹಾಗೂ ಅವರಮ್ಮ ಎಳೆದು ನೋಡಿದರು. ಒಂದು ಇಂಚೂ ಕದಲಲಿಲ್ಲ. ಕೊನೆಯಲ್ಲಿ ಸೆಣಬಿನ ನಾರಿನ ಹಗ್ಗವನ್ನು ಕಾಲಿಗೆ ಕಟ್ಟಿ  ಗಟ್ಟಿಯಾಗಿ ಎಳೆದರು. ಕರು ಕೈಗೆ ಬಂತು. ಕರುವಿನ ಭಾರಕ್ಕೆ ಕರುಳ ಬಳ್ಳಿ ಕತ್ತರಿಸಿ ಬಿತ್ತು. ಗೌರಿ ಕರು ಹಾಕಿದ ಬಳಿಕ ಇನ್ನೆರಡು ಹಸುಗಳೂ ಹೋರಿ ಕರುವನ್ನೇ ಹಾಕಿದವು. ಹೀಗೆ ಹಸುಗಳ ಸಂಖ್ಯೆ ಹೆಚ್ಚಿವೆ.

ಪ್ರತಿದಿನ ಬೆಳಿಗ್ಗೆ ಆರು ಗಂಟೆಗೆ ಅಪ್ಪ ಮಗ ಇಬ್ಬರ ಕೊಟ್ಟಿಗೆ ಕೆಲಸ ಶುರು. ಸೆಗಣಿ, ಗಂಜಲ ತೆಗೆದು ಗೊಬ್ಬರದ ಗುಂಡಿಗೆ ಹಾಕಿ, ಹಾಲು ಹಿಂಡಿ, ಹುಲ್ಲು ಹಾಗೂ ದಾಣಿಯನ್ನು ನೀಡುವ ವೇಳೆಗೆ ಏಳು ಗಂಟೆ ದಾಟಿರುತ್ತದೆ. ಒಂದಿಷ್ಟು ಹಾಲನ್ನು ಮನೆಗೆ ಇಟ್ಟುಕೊಂಡು ಉಳಿದದ್ದನ್ನು ಡೇರಿಗೆ ನೀಡುತ್ತಾರೆ. ಪ್ರತಿದಿನ ಸುಮಾರು 30 ಲೀಟರ್ ಹಾಲನ್ನು, ಆರು ಕಿಲೋ ಮೀಟರ್ ದೂರದ ತಾಳಗುಪ್ಪದಲ್ಲಿರುವ ಡೇರಿಗೆ ಹಾಕುತ್ತಾರೆ.

ಈ ರೀತಿ ತಿಂಗಳ ಉಳಿತಾಯ13 ಸಾವಿರ ರೂಪಾಯಿಗಳು. ಇದರಿಂದ ಇನ್ನಷ್ಟು ಹಸುಗಳು ಬಂದಿವೆ. ಕೊಟ್ಟಿಗೆಯಲ್ಲೀಗ ಪಾರ್ವತಿ, ಗಂಗಮ್ಮ, ನೇತ್ರ, ಬೆಳ್ಳಿ ಅಮ್ಮಂದಿರಾದರೆ, ರೇಣುಕ, ರಾಧೆ, ಪ್ರೀತಿ, ಸುಪ್ರಿ ಇವೆಲ್ಲಾ ಕರುಗಳು. ಮುದ್ದಾಗಿ ದಷ್ಟ ಪುಷ್ಟವಾಗಿ ಬೆಳೆಯುತ್ತಿವೆ.
ಗದ್ದೆಯಲ್ಲಿ ಸಿಗುವ ಒಣಮೇವು, ಖುಷ್ಕಿಯಲ್ಲಿ ಬೆಳೆವ ಹಸಿಮೇವು ವರ್ಷಾವಧಿ ಸಾಕಾಗುತ್ತದೆ. ಕೆಎಂಎಫ್‌ನವರ ಹಿಂಡಿ ಹಾಗೂ ಹತ್ತಿಕಾಳು ಹಿಂಡಿಗಳು ದೇಹಕ್ಕೆ ಮತ್ತು ಹಾಲಿಗೆ ಸತ್ವ ನೀಡುತ್ತಿವೆ. ಇದಕ್ಕೆ ಗೋಧಿಬೂಸಾ ಹಾಗೂ ಜೋಳದಕಡಿಗಳನ್ನು ಬೆರೆಸಲಾಗುತ್ತದೆ. ಸೆಣಬಿನ ಬೀಜಗಳನ್ನು ಹುಬ್ಬಳ್ಳಿಯಿಂದ ನೇರವಾಗಿ ತರಿಸುತ್ತಾರೆ.   ಇದನ್ನು ಭತ್ತ ಕೊಯ್ಲು ಮಾಡಿದ ಗದ್ದೆಗೆ ಬಿತ್ತುತ್ತಾರೆ. ಸೆಂಬರ್‌ನಿಂದ ಮಾರ್ಚ್‌ವರೆಗೆ ಹಸುಗಳಿಗೆ ಸೆಣಬಿನ ಹಸಿರೆಲೆ ಊಟ. ಒಟ್ಟಾರೆ ಹಸುಗಳಿಗೆ ಮೇವು ನೀಡುವಿಕೆಯು ಇವರಿಗೆ ಹೊರೆಯಾಗಿಲ್ಲ.

ಹಸುಗಳ ಮಾರಾಟದಿಂದಲೂ ಲಾಭ: ‘ಅದೋ ಅಲ್ಲಿರುವಳಲ್ಲ, ಅವಳು ಸುಪ್ರಿ! ಆ ಮೂಲೆಯ ಜಾಗ ಮಾರುವ ಹಸುಗಳನ್ನು ಕಟ್ಟುವ ಸ್ಥಳ. ಈಗಿರುವವಳು ಐದನೇ ಸುಪ್ರಿ’ ಎಂದು ನಾಯ್ಕರು  ಮೂಲೆ ತೋರಿಸುತ್ತಾ ಹೇಳಿದರು. ಅಲ್ಲಿ ಐದು ತಿಂಗಳ ಹೆಣ್ಣು ಕರುವೊಂದು  ನಿಂತಿತ್ತು. ನಾಯ್ಕರು  ಕಡಿಮೆ ಬೆಲೆಗೆ ಅಕ್ಕಪಕ್ಕದ ಹಳ್ಳಿಗಳಿಂದ ಕರುಗಳು, ಮಣಕಗಳನ್ನು ತರುತ್ತಾರೆ. ಚೆನ್ನಾಗಿ ಮೇಯಿಸಿ ಆರೈಕೆ ಮಾಡುತ್ತಾರೆ. ಕರು ಹಾಕಿದ ಮೇಲೆ ಅಥವಾ ಕರು ಹಾಕುವ ಮೊದಲೇ ಕೊಂಡದ್ದಕ್ಕಿಂತ ಎರಡು ಪಟ್ಟು ಹೆಚ್ಚು ಬೆಲೆಗೆ ಮಾರುತ್ತಾರೆ. ಅಗತ್ಯವೆನಿಸಿದಾಗ ಮನೆಯಲ್ಲಿ ಹುಟ್ಟಿದ ಹೆಣ್ಣು ಕರುಗಳನ್ನು ಸಹ ಮಾರುವುದಿದೆ. ಅಂತಹ ಕರುಗಳನ್ನು ಆ ಮೂಲೆಯಲ್ಲಿ ಕಟ್ಟಿ ಸುಪ್ರಿ ಎಂದು ಕರೆಯುತ್ತಾರೆ. ಇಂತಹ ಹಸುಗಳ ಮಾರಾಟದಿಂದ ಈಗಾಗಲೇ 50 ಸಾವಿರ ರೂಪಾಯಿಗಳ ಆದಾಯ ಸಿಕ್ಕಿದೆ.

ವಾರ್ಷಿಕ ಗೊಬ್ಬರದ ಉತ್ಪಾದನೆ 10 ಲೋಡ್‌ ಆಗುತ್ತಿವೆ. ಅದರಲ್ಲಿ ಸ್ವಂತ ಜಮೀನಿಗೆ ಮೂರು ಲೋಡ್ ಗೊಬ್ಬರ ಬಳಸಿ ಉಳಿದದ್ದನ್ನು ಮಾರಾಟ ಮಾಡುತ್ತಾರೆ. ಊರಲ್ಲಿಲ್ಲದ ಜಮೀನುದಾರರ ತೋಟದ ಕೃಷಿ ಕೆಲಸಗಳನ್ನು ಗುತ್ತಿಗೆ ಪಡೆದು ಕೃಷಿ ಮಾಡುವುದೂ ಈ ಅಪ್ಪ ಮಗನ ಹವ್ಯಾಸ. ಪ್ರಾರಂಭದಲ್ಲಿ ಆರು ತಿಂಗಳು ಹಸುಗಳೆಲ್ಲಾ ಟಾರ್ಪಾಲಿನ್ ಚಪ್ಪರದಲ್ಲಿಯೇ ಇದ್ದವು. ಮಣ್ಣಿನ ನೆಲ, ಗಾಳಿ, ಮಳೆಗೆ ಹಾಲೇನು ಕಡಿಮೆ ಆಗಿರಲಿಲ್ಲ. ಆದರೂ ಧರ್ಮಸ್ಥಳ ಸಂಘ ಹಾಗೂ ಸರ್ವೋದಯ ಯೋಜನೆಯಿಂದ ಸಾಲ ಪಡೆದು ಕಲ್ಲಿನ ಕೊಟ್ಟಿಗೆ ಕಟ್ಟಿಸಿದರು. ನೆಲಕ್ಕೆ ಹಾಸುಗಲ್ಲನ್ನೂ ಹಾಕಿಸಿದರು. ಮನೆಗಿಂತಲೂ ಕೊಟ್ಟಿಗೆಯೇ ಸುಂದರವಾಗಿದೆ. ಕೊಟ್ಟಿಗೆಗಾಗಿ ಮಾಡಿದ ಸಾಲ ತೀರುವ ಹಂತದಲ್ಲಿದೆ.

ಮಂಜುನಾಥ ನಾಯ್ಕರು ಇನ್‌ಸೆಮಿನೇಷನ್ ಹೊರತುಪಡಿಸಿ ಇನ್ಯಾವುದಕ್ಕೂ ಪಶುವೈದ್ಯರನ್ನು ಅವಲಂಬಿಸಿಲ್ಲ. ಆಗಾಗ ಇಂಟರ್‌ನೆಟ್‌ನಲ್ಲಿರುವ ಮಾಹಿತಿಗಳನ್ನು ನೋಡುತ್ತಿರುತ್ತಾರೆ. ಪಶುವೈದ್ಯಕೀಯ ಪುಸ್ತಕಗಳನ್ನು  ಓದುತ್ತಾರೆ. ಹಸುವಿಗೆ ಕೆಚ್ಚಲುಬಾವಿನ ಸೂಚನೆ ಕಾಣಿಸಿಕೊಂಡಾಗ ನಾಟಿ ಔಷಧಿ ಮಾಡಿದ್ದರು. ಮೂರು ಲೋಳೆಸರದ ಎಲೆಗಳನ್ನು 50 ಗ್ರಾಂ ಸುಣ್ಣದೊಂದಿಗೆ ಚೆನ್ನಾಗಿ ಕಲೆಸಬೇಕು. ಮೂರು ದಿನಗಳ ಕಾಲ ಬಾವು ಬಂದ ಕೆಚ್ಚಲಿಗೆ ಹಚ್ಚಬೇಕು. ಇದು ಬಾವನ್ನು ನಿಯಂತ್ರಿಸುತ್ತದೆ. ಅದರಲ್ಲೂ 14–15 ಲೀಟರ್ ಹಾಲುಕೊಡುವ ಹಸುಗಳನ್ನು ಗಮನಿಸಿ ಹಚ್ಚಿದರೆ, ಮುಂದಾಗುವ ನಷ್ಟ ತಡೆಯಬಹುದು.

ಹಲವು ಬಹುಮಾನ : ಕಳೆದ ವರ್ಷ ತಾಳಗುಪ್ಪ ಡೇರಿಗೆ 6800 ಲೀಟರ್ ಹಾಲು ಹಾಕಿ ಪ್ರಥಮ ಬಹುಮಾನ ಪಡೆದಿದ್ದಾರೆ. ಆಗ ಇವರ ಬಳಿ ಮೂರು ಹಸುಗಳು ಮಾತ್ರ ಇದ್ದವು. ಈ ಸಾರಿ ಒಂಬತ್ತು ಸಾವಿರ ಲೀಟರ್ ಹಾಲು ಹಾಕುತ್ತೇನೆಂಬ ಗ್ಯಾರಂಟಿ ಅವರಿಗಿದೆ. ಹೀಗೆ ಮೊದಲ ಸ್ಥಾನಕ್ಕೆ ಇವರಿಗೆ ಇವರೇ ಪೈಪೋಟಿ. ಅಷ್ಟೇ ಅಲ್ಲ ಒಂದು ಹೊತ್ತಿಗೆ 15ರಿಂದ 20ಲೀಟರ್ ಹಾಲು ನೀಡುವ ಹಸುಗಳನ್ನು ತರಬೇಕೆಂಬ ಬಯಕೆಯೂ ಇದೆ.

ಇಷ್ಟಾಗಿ ಊರಲ್ಲಿ ಡೇರಿ ಇಲ್ಲದ ಕಾರಣ ಆರು ಕಿಲೋ ಮೀಟರ್ ದೂರದ ತಾಳಗುಪ್ಪಕ್ಕೆ ಹಾಲನ್ನು ಒಯ್ಯಬೇಕಾದ ಅನಿವಾರ್ಯತೆ. ಅದಕ್ಕಾಗಿ ಸಮಯ, ಪೆಟ್ರೋಲ್ ಖರ್ಚು ಕುರಿತು ಬೇಸರ ವ್ಯಕ್ತಪಡಿಸುತ್ತಾರೆ. ಊರಲ್ಲೇ ಡೇರಿ ಮಾಡಿ ಎಂದು ಕೆಎಂಎಫ್‌ನವರಿಗೆ ನೀಡಿದ ಮನವಿಗೆ ಸಿದ್ದಾಪುರ ವಿಭಾಗದವರು ಇನ್ನೂ ಉತ್ತರಿಸಿಲ್ಲ. ಸಂಪರ್ಕಕ್ಕೆ 8904538590. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT