ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಮಂದಿರ: 18 ಬಾಲಕರು ಪರಾರಿ

Last Updated 14 ಸೆಪ್ಟೆಂಬರ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊಸೂರು ರಸ್ತೆಯಲ್ಲಿರುವ ಸರ್ಕಾರಿ ಬಾಲ ಮಂದಿರದಿಂದ 18 ಬಾಲಕರು ಶನಿವಾರ ರಾತ್ರಿ ಪರಾರಿಯಾಗಿದ್ದಾರೆ.

ಬಾಲಕರು, ಬಾಲಮಂದಿರ ಕಟ್ಟಡ­ದೊಳಗೆ ಮಳೆ ನೀರು ಸಂಗ್ರಹಕ್ಕೆ ಅಳವ­ಡಿಸಿರುವ ಕಬ್ಬಿಣದ ಪೈಪ್‌ಗೆ ಟವೆಲ್‌ ಕಟ್ಟಿ ಅದರ ಮೂಲಕ ಕಟ್ಟಡದ ಮಹಡಿಗೆ ಹತ್ತಿ ಹೋಗಿದ್ದಾರೆ.

ನಂತರ ಕಟ್ಟಡದ ಹೊರ ಭಾಗದ ಗೋಡೆಗೆ ಅಳವಡಿಸಿರುವ ಕುಡಿಯುವ ನೀರು ಸರಬರಾಜು ಪೈಪ್‌ನ ಮೂಲಕ ಕೆಳಗೆ ಇಳಿದಿದ್ದಾರೆ. ಬಳಿಕ ಕಟ್ಟಡದ ಸುತ್ತಲಿನ ಸುಮಾರು ಆರು ಅಡಿ ಎತ್ತರದ ತಡೆಗೋಡೆಯನ್ನು (ಕಾಂಪೌಂಡ್‌) ಜಿಗಿದು ಓಡಿ ಹೋಗಿದ್ದಾರೆ.

ಬಾಲಮಂದಿರದಲ್ಲಿ 255 ಬಾಲಕ­ರಿದ್ದು, ಐದು ಮಂದಿ ಭದ್ರತಾ ಸಿಬ್ಬಂದಿ­ಯನ್ನು ಕಟ್ಟಡದ ಭದ್ರತೆಗೆ ನಿಯೋಜಿಸ­ಲಾಗಿದೆ. ಅವರಲ್ಲಿ ಮೂವರು ಬೆಳಗಿನ ಪಾಳಿ ಹಾಗೂ ಇಬ್ಬರು ರಾತ್ರಿ ಪಾಳಿ­ಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಅದೇ ರೀತಿ ಶನಿವಾರ ರಾತ್ರಿ ಸಹ ಇಬ್ಬರು ಭದ್ರತಾ ಸಿಬ್ಬಂದಿ ಕಟ್ಟಡದಲ್ಲಿ ಇದ್ದರು.

ರಾತ್ರಿ ಊಟ ಮಾಡಿದ ನಂತರ ತಮ್ಮ ಕೊಠಡಿಗಳಿಗೆ ಹೋಗಿದ್ದ ಬಾಲ­ಕರು 12.30ರವರೆಗೂ ಎಚ್ಚರ­ವಾ­ಗಿದ್ದು, ಭದ್ರತಾ ಸಿಬ್ಬಂದಿ ನಿದ್ರೆ ಮಾಡಿದ ಬಳಿಕ ಪರಾರಿಯಾ­ಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಡುಗೊಂಡನಹಳ್ಳಿ ಪೊಲೀಸರು ಆಗಸ್ಟ್‌ನಲ್ಲಿ 10 ಮಂದಿ ಬಾಲ­ಕಾರ್ಮಿಕ­ರನ್ನು ಹಾಗೂ ಬಾಸ್ಕೊ ಸಂಸ್ಥೆ­ಯವರು ನಗರದ ವಿವಿಧೆಡೆ ಭಿಕ್ಷಾಟನೆ­ಯಲ್ಲಿ ತೊಡಗಿದ್ದ ಎಂಟು ಬಾಲಕರನ್ನು ಇತ್ತೀಚೆಗೆ ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಿದ್ದರು.

ಆ ಬಾಲಕರೇ ಪರಾರಿಯಾ­ಗಿರುವುದು. ಬಿಹಾರ, ಒಡಿಶಾ, ಉತ್ತರಪ್ರದೇಶ ಮತ್ತು ನೇಪಾಳ ಮೂಲದ ಅವರು 14ರಿಂದ 17 ವರ್ಷದೊಳಗಿನವರು.

ಭದ್ರತಾ ಸಿಬ್ಬಂದಿಯೇ ಬಾಲಕರಿಗೆ ಬಾಲಮಂದಿರದಿಂದ ಓಡಿ ಹೋಗಲು ನೆರವು ನೀಡಿರುವ ಶಂಕೆ ಇದೆ. ಈ ಸಂಬಂಧ ಭದ್ರತಾ ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣ ಸಂಬಂಧ ಬಾಲಮಂದಿರದ ಸೂಪರಿಂಟೆಂಡೆಂಟ್‌ ಲಕ್ಷ್ಮಿನರಸಿಂಹಯ್ಯ ಅವರು ವಿಲ್ಸನ್‌ಗಾರ್ಡನ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶೋಧ ನಡೆಸಲಾಗುತ್ತಿದೆ

‘ಪರಾರಿಯಾಗಿರುವ ಬಾಲಕರ ಭಾವಚಿತ್ರಗಳನ್ನು ನಗರದ ಎಲ್ಲಾ ಪೊಲೀಸ್‌ ಠಾಣೆಗಳಿಗೂ ಕಳುಹಿಸಿ, ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ನಗರದ ರೈಲು ಮತ್ತು ಬಸ್‌ ನಿಲ್ದಾಣಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಬಾಲಕ­ರಿಗಾಗಿ ಶೋಧ ನಡೆಸಲಾಗುತ್ತಿದೆ’
ಸಂದೀಪ್‌ ಪಾಟೀಲ್‌, ಕೇಂದ್ರ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT