ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕನೇರ್: ಅರಸು ಕುಡಿಗಳ ಹಣಾಹಣಿ

ಚುನಾವಣೆಯ ನಾಡಿನಿಂದ: ರಾಜಸ್ತಾನ
Last Updated 23 ನವೆಂಬರ್ 2013, 20:24 IST
ಅಕ್ಷರ ಗಾತ್ರ

ಬಿಕನೇರ್‌ (ರಾಜಸ್ತಾನ): ರಾಜಸ್ತಾನ ರಾಜಮನೆತ­ನ­ಗಳ ನಾಡು. ಜೈಪುರ, ಉದಯ­ಪುರ, ಜೋಧ್‌ಪುರ, ಬಿಕನೇರ್‌ ಕೋಟೆಕೊತ್ತಲ­ಗಳು, ಉದ್ಯಾನಗಳು, ಕಲ್ಯಾಣಿ­ಗಳು ಅಳಿದು­ಹೋದ ಸಾಮ್ರಾಜ್ಯಗಳ ಇತಿಹಾಸ, ಪರಂಪರೆಗೆ ಸಾಕ್ಷಿ. ಅರಮನೆಗಳ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ನಿಧಾನವಾಗಿ ಕಾವೇರುತ್ತಿದೆ. ರಾಜವಂಶದ ಅನೇಕ ಕುಡಿಗಳು ‘ಅಖಾಡ’ಕ್ಕೆ ಇಳಿದಿರುವುದರಿಂದ ಸ್ವಲ್ಪ ರಂಗೂ ಬಂದಿದೆ.

ಬಿಕನೇರ್‌ ರಾಜಕುಮಾರಿ ಸಿದ್ಧಿಕುಮಾರಿ ಬಿಕನೇರ್‌ ಪೂರ್ವ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಅವರಿಗಿದು ಎರಡನೇ ಚುನಾವಣೆ. 2008ರ ಚುನಾವಣೆ­ಯಲ್ಲಿ ಗೆದ್ದಿದ್ದಾರೆ. ಈಗ ಪು3ನಃ ಮತ­ದಾರರ ಮನೆ, ಮನಗಳ ಬಾಗಿಲು ಬಡಿ­ಯುತ್ತಿದ್ದಾರೆ. ಸ್ವಲ್ಪವೂ ಹಮ್ಮುಬಿಮ್ಮಿಲ್ಲದ ಅವರನ್ನು ಮತದಾರರು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಿದ್ದಾರೆ.

ಸಿದ್ಧಿಕುಮಾರಿ ಅವರು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಆಯ್ಕೆ. 2008  ಚುನಾವಣೆ­­ಯಲ್ಲಿ 37 ಸಾವಿರ ಅಧಿಕ ಮತಗಳ ಅಂತರದಿಂದ ಆಯ್ಕೆಯಾಗಿದ್ದರು.

ಕಾಂಗ್ರೆಸ್‌ ಪಕ್ಷ  ಬಿಕನೇರ್‌ ಪೂರ್ವ ಕ್ಷೇತ್ರವನ್ನು ಇದುವರೆಗೆ ಮುಸ್ಲಿಂ ಸಮುದಾಯಕ್ಕೆ ಬಿಡುತ್ತಿತ್ತು. ಆದರೆ, ಈ ಸಲ ಪರಂಪರೆ ಮುರಿದಿದೆ. ಹಿಂದುಳಿದ ಸೈನಿ (ಮಾಲಿ) ಸಮಾಜದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾದ  ಗೋಪಾಲ್‌ ಗೆಹ್ಲೋಟ್‌ ಕಾಂಗ್ರೆಸ್‌ ಅಭ್ಯರ್ಥಿ.

ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಖುದ್ದು ಗೋಪಾಲ್‌ ಅವರಿಗೆ ಟಿಕೆಟ್‌ ಕೊಡಿಸಿದ್ದಾರೆಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ಹೊರಗಿನ ವ್ಯಕ್ತಿಗೆ ಮಣೆ ಹಾಕಿರುವುದು ನಿಷ್ಠಾವಂತ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಕಾಂಗ್ರೆಸ್‌ ಕಾರ್ಯದರ್ಶಿ ಸಲೀಂ ಭಾಟಿ ಒಳ­ಗೊಂಡಂತೆ ಹಲವು ನಾಯಕರು ಇದೀಗ ಬಿಜೆಪಿ ಸೇರಿ­ದ್ದಾರೆ. ಇದುವರೆಗೆ ಮುಸ್ಲಿಮರಿಗೆ ಮೀಸಲಾಗಿದ್ದ ಕ್ಷೇತ್ರ­ವನ್ನು ಸೈನಿ ಸಮಾಜಕ್ಕೆ ಬಿಟ್ಟುಕೊಟ್ಟು ಮುಖ್ಯಮಂತ್ರಿ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಲಾಗುತ್ತಿದೆ.

ಬಿಕನೇರ್‌ ಮತದಾರರು ಸಿದ್ಧಿಕುಮಾರಿ ಅವರ ಸರಳ ವ್ಯಕ್ತಿತ್ವ, ನಡವಳಿಕೆ ಕುರಿತು ಮೆಚ್ಚುಗೆ ವ್ಯಕ್ತ­ಪಡಿಸುತ್ತಾರೆ. ‘ಮತದಾರರಿಗೆ ಸುಲಭವಾಗಿ ಸಿಗು­ತ್ತಾರೆ. ಸಮಸ್ಯೆ ಕೇಳುತ್ತಾರೆ. ಒಳ್ಳೆ ಕೆಲಸ ಮಾಡಿದ್ದಾರೆ’ ಎಂದು ಕರ್ಣಿನಗರ ವ್ಯಾಪಾರಿಗಳಾದ ಸಂಜಯ್‌ ಆರೋಡ, ಮದನ್‌ಸಿಂಗ್‌ ಹೇಳುತ್ತಾರೆ.

ಹಣಾಹಣಿ: ಬಿಕನೇರ್ ಪೂರ್ವ ವಿಧಾನಸಭೆ ಕ್ಷೇತ್ರ ಹಾಲಿ ಹಾಗೂ ಮಾಜಿ ಬಿಜೆಪಿ ನಾಯಕರ ಹಣಾ­ಹಣಿಗೆ ಸಾಕ್ಷಿಯಾಗಿ ಕುತೂಹಲ ಕೆರಳಿಸಿದೆ. ಬಿಕನೇರ್‌ ಜಿಲ್ಲೆ ಏಳು ಕ್ಷೇತ್ರಗಳನ್ನೊಳಗೊಂಡಿದೆ. ಪ್ರತಿ ಕ್ಷೇತ್ರ ಒಂದಿಲ್ಲೊಂದು ಕಾರಣಕ್ಕೆ ವಿಶೇಷ.

ಬಿಕನೇರ್‌ ಪಶ್ಚಿಮ ಕ್ಷೇತ್ರದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಡಾ. ಬಿ.ಡಿ. ಕಲ್ಲಾ ಮತ್ತು ಬಿಜೆಪಿಯ ಗೋಪಾಲ ಜೋಶಿ ಅವರ ನಡುವೆ ಪೈಪೋಟಿ ಇದೆ. ಜೋಶಿ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಈಗ ಮರು ಆಯ್ಕೆ ಬಯಸಿದ್ದಾರೆ. ಕಲ್ಲಾ 1980ರಿಂದ ಚುನಾವಣೆ ಎದುರಿಸುತ್ತಿದ್ದಾರೆ. ಒಟ್ಟು ಎಂಟು ಚುನಾವಣೆ ಕಂಡಿ­ರುವ ಅವರು, ಐದು ಸಲ ಗೆದ್ದಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಿಬ್ಬರೂ ಹತ್ತಿರದ ಸಂಬಂಧಿ­ಕರು ಎನ್ನುವುದು ಕುತೂಹಲದ ಸಂಗತಿ.

ಲೂನ್‌ಕರಣ್‌ಸರ್‌ ಕ್ಷೇತ್ರದಲ್ಲಿ ಗೃಹಸಚಿವ ವೀರೇಂದ್ರ ಬೇನಿವಾಲ್‌, ಬಿಜೆಪಿಯ ಸುಮಿತ್‌ ಗೋದರ ಮತ್ತು ಲೋಹಿಯಾವಾದಿ ಮಾಣಿಕ್‌ಚಂದ್‌ ಸುರಾನ ಅವರ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ.

82ವರ್ಷದ ಮಾಣಿಕ್‌ಚಂದ್ ಸುರಾನ ಸಮಾಜ­ವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರ ಶಿಷ್ಯ. 1967ರಿಂದ 12 ಚುನಾವಣೆ ಎದುರಿಸಿ­ದ್ದಾರೆ. 2008 ರಲ್ಲಿ ಅನಾರೋಗ್ಯದಿಂದ ಸ್ಪರ್ಧಿಸಿರ­ಲಿಲ್ಲ. ಕಾಂಗ್ರೆಸ್‌ ವಿರೋಧಿ ನಿಲುವಿನ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದರು. ಈಗ ಬಿಜೆಪಿ ಟಿಕೆಟ್‌ ಸಿಗದಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ಅವರಿ­ಗಿದು ಕೊನೆಯ ಚುನಾವಣೆ ಎಂದು ಮತದಾರರು ಭಾವಿಸಿರುವುದರಿಂದ ಸಹಜವಾಗಿ ಅನುಕಂಪ ಇದೆ.

ಚುನಾವಣೆ ನಿಲ್ಲಲಿ, ಬಿಡಲಿ ಅಥವಾ ಗೆಲ್ಲಲಿ, ಸೋಲಲಿ ಯಾವಾಗಲೂ ಸುರಾನ ಜನರ ಜತೆ ಇರುತ್ತಾರೆ. ಕಷ್ಟಸುಖಗಳಿಗೆ ಸ್ಪಂದಿಸುತ್ತಾರೆ. ಕೋರ್ಟ್‌ ಕಚೇರಿಗಳಿಗೆ ಅಲೆಯುತ್ತಾರೆ. ಕೃಷಿ, ನೀರು ಮತ್ತು ವಿದ್ಯುತ್ ಸಮಸ್ಯೆಗಳ ನಿವಾರಣೆಗೆ ಹೋರಾಟ   ಮಾಡು­ತ್ತಾರೆ. ಇದು ಲೋಹಿಯಾ­ವಾದಿಯ ಜನಪ್ರಿಯತೆ ಹೆಚ್ಚಿಸಿದೆ. 

ನೋಖಾದಲ್ಲಿ ಬಿಜೆಪಿಗೆ ಬಂಡಾಯ ಎದುರಾಗಿದೆ. 2008ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಕನ್ಹಯಲಾಲ್‌ ಈಗಲೂ ಪಕ್ಷೇತರ ಅಭ್ಯರ್ಥಿ. ಗೆಹ್ಲೋಟ್‌ ಸರ್ಕಾರವನ್ನು ಬೆಂಬಲಿಸಿದ್ದ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಲು ಆಸಕ್ತಿ ತೋರಿತ್ತು. ಅವರು ನಿರಾಕರಿಸಿದ್ದರಿಂದ ಮಾಜಿ ಸಂಸದ ರಾಮೇಶ್ವರಲಾಲ್‌ ದೂಡಿ ಅವರನ್ನು ಕಣಕ್ಕಿಳಿಸಿದೆ.

ದೂಡಿ 2008ರಲ್ಲಿ ಕನ್ಹಯಲಾಲ್‌ ವಿರುದ್ಧ ಎರಡು ಸಾವಿರ ಮತಗಳ ಅಂತರದಿಂದ ಸೋತಿ­ದ್ದರು. ಸಾಯಿರಾಂ ಬಿಷ್ಣೋಯ್‌ ಇಲ್ಲಿ ಬಿಜೆಪಿ ಅಭ್ಯರ್ಥಿ. ಇದೇ ಪಕ್ಷದ ಬಿಹಾರಿ ಲಾಲ್‌ ಬಂಡಾಯ ಸಾರಿದ್ದಾರೆ.

ದುಂಗರಗಡ, ಖಾಜುವಾಲ ಮತ್ತು ಕೋಲಾಯತ್‌ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಹಣಾಹಣಿ. ಬಿಕನೇರ್‌ನಲ್ಲೂ ಜಾತಿ ಮೇಲಾಟ ನಡೆದಿದೆ. ಅಭಿವೃದ್ಧಿ ಮತ್ತು ಹಗರಣಗಳ ಬಗ್ಗೆ ಮತದಾರರು ಆಲೋಚಿಸುವ ಗೋಜಿಗೆ ಹೋಗಿಲ್ಲ.

ಮ್ಯೂಸಿಯಂ ರಾಜಕುಮಾರಿ
ರಾಜಕುಮಾರಿ ಸಿದ್ಧಿಕುಮಾರಿ ಬಿಕನೇರ್‌ ‘ಸೆಲೆಬ್ರಿಟಿ’. ರಾಜಾ ಕರ್ಣಿಸಿಂಗ್‌ ಅವರ ಮೊಮ್ಮಗಳು. ಕರ್ಣಿಸಿಂಗ್‌ ಐದು ಸಲ ಲೋಕಸಭೆ ಸದಸ್ಯರಾಗಿದ್ದರು. ‘ಬಿಕನೇರ್‌ ಜನ­­ಸಾಮಾನ್ಯರ ಜತೆ ರಾಜಮನೆತನದ ಸಂಬಂಧ’ ಎಂಬ ಸಂಶೋಧನಾ ಗ್ರಂಥ ಬರೆದು ಡಾಕ್ಟರೇಟ್‌ ಪಡೆದಿದ್ದರು. ರಾಜ­ಕುಮಾರಿಯ ತಂದೆ ನರೇಂದ್ರ ಸಿಂಗ್‌ ರಾಜಕಾರಣ­ದಿಂದ ದೂರವೇ ಉಳಿದರೂ ಒಳ್ಳೆಯ ಹೆಸರು ಮಾಡಿದ್ದರು.

ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಿದ್ಧಿಕುಮಾರಿ, ಆಭರಣ­ಗಳ ವಿನ್ಯಾಸ­ಕರೂ ಹೌದು. ಕುಸುರಿ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ರಾಜಕುಮಾರಿ ಜುನಾಗಡ ಅರಮನೆಯಲ್ಲಿ ವಸ್ತು ಸಂಗ್ರಹಾಲಯ (ಮ್ಯೂಸಿಯಂ ಸ್ಥಾಪಿಸಿದ್ದಾರೆ. ಬಿಕನೇರ್‌ ಪ್ರವಾಸಕ್ಕೆ ಬರುವವರಿಗೆ ಇದು ಪ್ರಮುಖ ಆಕರ್ಷಣೆ.

ಬಿಕನೇರ್‌ ರಾಜವಂಶಸ್ಥರ ಉಡುಗೆ, ಬಳಕೆ ಮಾಡಿದ ವಸ್ತುಗಳು, ಆಯುಧಗಳು, ಆಭರಣಗಳು ಎಲ್ಲವನ್ನೂ ಸಂಗ್ರಹಿಸಿ ಇಡಲಾಗಿದೆ.
ನಲವತ್ತು ವರ್ಷದ ಅವಿವಾಹಿತೆ ರಾಜ­ಕುಮಾರಿ ನಿರಾಭರಣ ಸುಂದರಿ. ತೆಳುಕಾಯ ಶರೀರ, ಆಕರ್ಷಕ ಮೈಬಣ್ಣ. ರಾಜಮನೆತನಕ್ಕೆ ಸೇರಿದ್ದರೂ  ಸ್ವಲ್ಪವೂ ಗರ್ವವಿಲ್ಲ. ಸರಳ, ಸಾಧಾ­ರಣ ಮಹಿಳೆಯಂತೆ ನಡೆದುಕೊಳ್ಳುತ್ತಾರೆ. ಮಾರುತಿ ಆಲ್ಟೊ ಕಾರಿನಲ್ಲಿ ಓಡಾಡುತ್ತಾರೆ.

ಬಿಳಿ ಬಣ್ಣದ ಮೇಲೆ ಸಂಗನೇರ್‌ ಪ್ರಿಂಟ್‌ ಇರುವ ಕಾಟನ್‌ ಸಲ್ವಾರ್‌ ಕಮೀಜ್‌ ತೊಟ್ಟಿದ್ದ ರಾಜಕುಮಾರಿ ಕೃಷಿ ಮಾರುಕಟ್ಟೆಯಲ್ಲಿ ಅಂಗಡಿ­ಯಿಂದ ಅಂಗಡಿಗೆ ಪಾದಯಾತ್ರೆ ಮಾಡುತ್ತಾ ಮತ ಯಾಚಿಸುತ್ತಿದ್ದರು. ರೈತರು, ವರ್ತಕರು ಹೂ ಮಾಲೆ ಹಾಕಿ ಸಿದ್ಧಿಕುಮಾರಿಯನ್ನು ಸ್ವಾಗತಿಸಿದರು. ಹಿರಿಯರು ತಲೆ ಮುಟ್ಟಿ ಆಶೀರ್ವಾದ ಮಾಡಿದರು.

ಸಿದ್ಧಿಕುಮಾರಿ ಸುತ್ತಾಡಿದ್ದು ಶೇಂಗಾ ಮಾರು­ಕಟ್ಟೆ­ಯಲ್ಲಿ. ಇಲ್ಲಿ ಹರಾಜು ಪ್ರಕ್ರಿಯೆ ಹೇಗೆ ನಡೆ­ಯುತ್ತದೆ ಎಂದು ವರ್ತಕರು ತೋರಿಸಿದರು. ಇಬ್ಬರು ಆಪ್ತ ಗೆಳತಿಯರು, ಪಕ್ಷದ ನಾಯಕರ ಜತೆಗೂಡಿ ಪ್ರಚಾರ ಮಾಡುತ್ತಿದ್ದ ರಾಜಕುಮಾರಿ ನಡುವೆಯೇ ‘ಪ್ರಜಾವಾಣಿ’ ಜತೆ ಮಾತನಾಡಿದರು.

* ನಿಮ್ಮ ಕ್ಷೇತ್ರದಲ್ಲಿ ವಾತಾವರಣ ಹೇಗಿದೆ?
ಬಿಜೆಪಿ ಗೆಲುವಿಗೆ ಪೂರಕವಾಗಿದೆ. ಮನೆ, ಮನೆಗೂ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ದೊಡ್ಡ ಸಭೆಗಳಿಗಿಂತ ಇದು ಪರಿಣಾಮಕಾರಿ­ಯಾಗಿ ಕಂಡಿದೆ. ಅಲ್ಲಲ್ಲಿ ಬಡಾವಣೆಗಳಲ್ಲಿ ಸಣ್ಣಪುಟ್ಟ ಸಭೆಗಳನ್ನು ನಡೆಸಿದ್ದೇನೆ.

* ಹಿಂದಿನ ಚುನಾವಣೆಗಿಂತ ಇದು ಭಿನ್ನವೇ?
ಖಂಡಿತಾ ಹೌದು, 2008ರಲ್ಲಿ ಮೊದಲ ಸಲ ನಾನು ವಿಧಾನಸಭೆಗೆ ಸ್ಪರ್ಧಿಸಿದಾಗ ಆಗಿನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಸಾಧನೆ ಬೆನ್ನಿಗಿತ್ತು. ಈಗಿನ ಪರಿಸ್ಥಿತಿ ಸಂಪೂರ್ಣ ವಿಭಿನ್ನ. ನಾವು ವಿರೋಧ ಪಕ್ಷದಲ್ಲಿದ್ದೇವೆ.

* ಹಿಂದಿನ ಚುನಾವಣೆಯಲ್ಲಿ ಕೊಟ್ಟ ಭರವಸೆಗಳು ಈಡೇರಿದೆಯೇ?
ಶಾಸಕಿಯಾಗಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟು ಮಾಡಿದ್ದೇನೆ. ಶಾಸಕರ ಅನುದಾನ ಸಂಪೂರ್ಣವಾಗಿ ಬಳಕೆ ಮಾಡಿದ್ದೇನೆ.

* ಮತದಾರರಿಗೆ ನಿಮ್ಮ ಭರವಸೆಗಳೇನು?
ನಮ್ಮ ಮತದಾರರ ಬೇಡಿಕೆಗಳು ಹೆಚ್ಚೇನಿಲ್ಲ. ನಗರದ ಸ್ವಚ್ಛತೆ ಮಾತ್ರ ಕೇಳುತ್ತಾರೆ. ಆ ಕಡೆಗೆ ಗಮನ ಕೊಡುತ್ತಿದ್ದೇನೆ.

* ನೀವು ಮತದಾರರ ಕೈಗೆ ಸಿಗುವುದಿಲ್ಲ. ಮುಂಬೈ, ಲಂಡನ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತೀರಿ ಎನ್ನುವ ಟೀಕೆಗಳಿವೆ.
ಇದು ಸುಳ್ಳು. ರಾಜಕೀಯ ವಿರೋಧಿಗಳು ಹೆಣೆಯುತ್ತಿರುವ ಕಟ್ಟುಕಥೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ಮತದಾರರಿಗೆ ವಿಶ್ವಾಸವಿದೆ.

* ಅಧಿವೇಶನಗಳಲ್ಲಿ ಮಾತನಾಡುವುದಿಲ್ಲ ಎಂಬ ಆರೋಪವಿದೆ.
ಹೌದು, ಇದುವರೆಗೆ ಒಂದು ಸಲವೂ ಮಾತನಾಡಿಲ್ಲ. ಅದಕ್ಕೆ ಪೂರಕವಾದ ವಾತಾವರಣವೂ ಇಲ್ಲ.

* ಚುನಾವಣೆಯಲ್ಲಿ ನಿಮಗೆ ಅನುಕೂಲ­ವಾದ ಅಂಶಗಳೇನು?
ನನ್ನ ತಂದೆ ರಾಜಕೀಯದಲ್ಲಿ ಇರಬೇಕಿತ್ತು. ಆದರೆ, ಅವರು ದೂರ ಉಳಿದರು. ನಾನು ರಾಜಕಾರಣಕ್ಕೆ ಬಂದಿದ್ದೇನೆ. ತಂದೆಗಿರುವ ಒಳ್ಳೆ ಹೆಸರು, ಸದಭಿಪ್ರಾಯ ಬೆಂಬಲಕ್ಕಿದೆ.

* ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಿರಾ?
ಸದ್ಯ ವಿಧಾನಸಭೆ ಚುನಾವಣೆ ಅರಗಿಸಿಕೊಂಡರೆ ಸಾಕಾಗಿದೆ. ಮತ್ತೊಂದು ಚುನಾವಣೆಗೆ ನಿಲ್ಲಲು ಶಕ್ತಿ ಎಲ್ಲಿಂದ
ಬರಬೇಕು.

* ನಿಮ್ಮ ಹವ್ಯಾಸಗಳೇನು?
ನಾನು ಮ್ಯೂಸಿಯಂ ಕ್ಯುರೇಟರ್‌. ಬಿಡುವಿದ್ದಾಗ ಸಾಹಿತ್ಯ ಕೃತಿಗಳನ್ನು ಓದುತ್ತೇನೆ. ಆಭರಣ ವಿನ್ಯಾಸದ ಕಡೆ ಗಮನ ಕೊಡುತ್ತೇನೆ.

ಕೃಷಿ ಮಾರುಕಟ್ಟೆಯಲ್ಲಿ ಪ್ರಚಾರ ಮುಗಿಸಿ ಕಾರು ಹತ್ತಿದ ರಾಜಕುಮಾರಿ ರಸ್ತೆ ಬದಿ ಕಟ್ಟಿಸಿಕೊಂಡ ಪಕೋಡ ತಿನ್ನುತ್ತಾ ಮುಂದಿನ ಹಾದಿ ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT