ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕಾರಿಣಿ ಸಜ್ಜಾದ ಬೆಂಗಳೂರು

ನಾಳೆ, ನಾಡಿದ್ದು ಸಭೆ * ಪ್ರಧಾನಿ ನರೇಂದ್ರ ಮೋದಿ ಸೇರಿ 330 ಸದಸ್ಯರು ಭಾಗಿ
Last Updated 1 ಏಪ್ರಿಲ್ 2015, 20:38 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನಂತರ ಬಿಜೆಪಿ ನಡೆಸುತ್ತಿರುವ ಮೊದಲ ಪೂರ್ಣ ಪ್ರಮಾಣದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಉದ್ಯಾನನಗರಿ ಬೆಂಗಳೂರು ಸಜ್ಜುಗೊಂಡಿದೆ.

ಸಭೆ ನಡೆಯುವ ಲಲಿತ್‌ ಅಶೋಕ ಪಂಚತಾರಾ ಹೋಟೆಲ್‌, ಬಿಜೆಪಿ ಬಾವುಟಗಳಿಂದ ಸಿಂಗಾರಗೊಂಡಿದೆ. ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಕಮಲ ಚಿಹ್ನೆಯ  ಬ್ಯಾನರ್‌ಗಳ ತೋರಣವನ್ನೇ ಕಟ್ಟಲಾಗಿದೆ.

ಏ.3 ಮತ್ತು 4ರಂದು ನಡೆಯುವ ಕಾರ್ಯಕಾರಿಣಿಯಲ್ಲಿ ದೇಶದ ವಿವಿಧೆಡೆಯ 330 ಸದಸ್ಯರು  ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಗುರುವಾರ (ಏ.2) ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ, ಕಾರ್ಯಕಾರಿಣಿಯಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ.

ಪಕ್ಷದ ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರು, ಸಂಘಟನಾ ಕಾರ್ಯದರ್ಶಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದು,  ತಂತಮ್ಮ ರಾಜ್ಯಗಳಲ್ಲಿ

ನಗರಕ್ಕೆ ಇಂದು ಮೋದಿ
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಧ್ಯಾಹ್ನ ನಗರಕ್ಕೆ ಬರಲಿದ್ದಾರೆ.
ಸಂಜೆ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ.  ಬಳಿಕ ರಾಜ್ಯದ ಸಂಸದರು, ಶಾಸಕರು, ಕಾರ್ಯಕಾರಿಣಿಗೆ ಬರುವ ಎಲ್ಲ ಮುಖಂಡರ ಜತೆ ಸೌಹಾರ್ದ ಸಭೆ ನಡೆಸಲಿದ್ದಾರೆ.  ನಂತರ ಅವರೊಟ್ಟಿಗೆ  ಭೋಜನ ಸವಿಯಲಿದ್ದಾರೆ.

ಕೈಗೆತ್ತಿಕೊಂಡಿರುವ ಪಕ್ಷದ ಸಂಘಟನೆ ಮತ್ತು ಸದಸ್ಯತ್ವ ನೋಂದಣಿ ಕುರಿತು ವರದಿ ಮಂಡಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಮಿತ್‌ ಷಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ ಇದಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ  ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳು ಮತ್ತು ಬಿಜೆಪಿ  ಆಡಳಿತ ಇರುವ ರಾಜ್ಯ ಸರ್ಕಾರಗಳ ಕಾರ್ಯವೈಖರಿ ಕುರಿತು  ಚರ್ಚೆಯಾಗಲಿದೆ. ವಿವಾದಕ್ಕೆ ಕಾರಣವಾಗಿರುವ ಭೂಸ್ವಾಧೀನ ತಿದ್ದುಪಡಿ ಮಸೂದೆ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ ಎನ್ನುತ್ತವೆ ಮೂಲಗಳು.

ಕಾರ್ಯತಂತ್ರ: ಸಭೆ ಕುರಿತು ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ‘ಕೇರಳ,  ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿದಂತೆ ಏಳು ರಾಜ್ಯಗಳಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಕಾರ್ಯತಂತ್ರದ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಗುವುದು’ ಎಂದರು.

‘ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ   ಕಾರ್ಯಕಾರಿಣಿ ಮಹತ್ವದ ನಿರ್ಣಯ ಕೈಗೊಳ್ಳಲಿದೆ’ ಎಂದು ವಿವರಿಸಿದರು.

ಬುಧವಾರ ರಾತ್ರಿ ಅಮಿತ್‌ ಷಾ ನಗರಕ್ಕೆ ಬಂದರು. ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಗೃಹ ಸಚಿವ ರಾಜನಾಥ್‌ ಸಿಂಗ್‌, ಹಣಕಾಸು ಸಚಿವ ಅರುಣ್‌ ಜೇಟ್ಲಿ ಸೇರಿದಂತೆ ಇತರ ಪ್ರಮುಖರು ಸಹ ನಗರಕ್ಕೆ ಬರಲಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT