ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿನ್ಸರ್‌! ಬೆಡಗು ನವನವೀನ...

Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಹಿಮಾಲಯ ಪರಿಸರದಲ್ಲಿನ ಬಿನ್ಸರ್‌ ತನ್ನ ಅಪೂರ್ವ ಚೆಲುವಿನಿಂದ ಆಕರ್ಷಿಸುವ ಪ್ರವಾಸಿ ತಾಣ. ಮಂಜು–ಮೋಡಗಳ ಕಣ್ಣಾಮುಚ್ಚಾಲೆ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

‘ದೇವಭೂಮಿ’ ಎಂದು ಕರೆಸಿಕೊಳ್ಳುವ ಉತ್ತರಾಖಂಡದ (ಉತ್ತರಾಂಚಲ) ನೂರಕ್ಕೆ ತೊಂಬತ್ತರಷ್ಟು ಭಾಗ ಹಿಮಾಲಯದ ಗಿರಿ ಶಿಖರಗಳಲ್ಲಿಯೇ ಪಸರಿಸಿದೆ. ರಾಜ್ಯದ ಉತ್ತರ ಭಾಗದ ಘಡವಾಲ ಮತ್ತು ದಕ್ಷಿಣದ ಕುಮಾಂವ ಭಾಗಗಳು ಅನೇಕ ಭೌಗೋಳಿಕ ವಿಶಿಷ್ಟತೆಯಿಂದ ಕೂಡಿವೆ. ಉತ್ತರ ಭಾಗದಲ್ಲಿ ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮುನೋತ್ರಿ, ಹರಿದ್ವಾರ, ಹೃಷಿಕೇಶದಂಥ ಪವಿತ್ರ ಯಾತ್ರಾ ಸ್ಥಳಗಳಿದ್ದರೆ, ದಕ್ಷಿಣದಲ್ಲಿ ಕುಮಾಂವ ಪ್ರದೇಶ, ನೈನಿತಾಲ, ರಾಣಿಖೇತ, ಸತ್ತಲ್, ಭೀಮತಲ್, ಬಿನ್ಸರ್, ಜಾಗೇಶ್ವರ, ಅಲ್ಮೋಡಾ ಮೊದಲಾದ ಮನಮೋಹಕ ಗಿರಿಧಾಮಗಳಿವೆ. ಈ ಪರಿಸರದಲ್ಲಿನ ಸೂಚಿಪರ್ಣಿ, ದೇವದಾರ, ಓಕ್ ಮರಗಳು ಹಿಮಾಲಯಕ್ಕೆ ಅಪೂರ್ವ ಶೋಭೆಯನ್ನು ತಂದುಕೊಟ್ಟಿವೆ.

ನೈನಿತಾಲದಿಂದ ಸುಮಾರು 130 ಕಿ.ಮೀ. ದೂರದಲ್ಲಿರುವ ಬಿನ್ಸರ್ ನಿಸರ್ಗ ಪ್ರಿಯರಿಗೆ ಸ್ವರ್ಗ ಸಮಾನ. ಕೋಶಿ ನದಿಯ ಅಂಚಿನಲ್ಲಿ ಓಡುವ ರಸ್ತೆಗುಂಟ ಹಿಮಾಲಯದ ರುದ್ರ ರಮ್ಯ ನೋಟವನ್ನು ಆನಂದಿಸುತ್ತ ಮುಂದೆ ಸಾಗಿಬೇಕು; ಆಲ್ಮೋಡ ಪಟ್ಟಣವನ್ನು ಹಿಂದಿಕ್ಕಿ, ಅಲ್ಲಿಂದ 30 ಕಿ.ಮೀ.ನ ಬಳಸು ದಾರಿಯಲ್ಲಿ ಹಿಮಾಲಯವನ್ನು ಏರುತ್ತ ಸಾಗಿದರೆ ಬಿನ್ಸರ್‌ ಸಿಗುತ್ತದೆ. ಬಿನ್ಸರ್‌ ತಲುಪಿದಾಗ ಮಾಯದ ಲೋಕಕ್ಕೆ ಬಂದ ಅನುಭವ. ಈ ರಸ್ತೆಯ ಏರುಮುಖ ಪ್ರಯಾಣವೇ ರೋಮಾಂಚಕಾರಿ. ಅಲ್ಲಿಂದ ಕೆಳಗಡೆ ನೋಡಿದರೆ, ಅಲ್ಲೆಲ್ಲೋ ಪಾತಾಳದಲ್ಲಿ ಹರಿಯುವ ನದಿ, ಎದುರು ಬೆಟ್ಟಗಳ ಮೇಲೆ ಅಲ್ಲಲ್ಲಿ ಒಂಟಿ ಮನೆಗಳು, ಬೆಟ್ಟದ ಇಳಿಜಾರಿನಲ್ಲಿ ಸೋಪಾನಗಳ ರೂಪದಲ್ಲಿ ಕಾಣಿಸುವ ಕೃಷಿ ಗದ್ದೆಗಳು, ಮುಸುಕಿದ ಮಂಜು, ಓಕ್ ಮರಗಳಿಂದ ಆವೃತ್ತವಾದ ಬೆಟ್ಟಗಳು, ತೀಡುವ ಕುಳಿರ್ಗಾಳಿ ಬೇರೇ ಲೋಕವನ್ನೇ ಸೃಷ್ಟಿಸುತ್ತವೆ.

ನಲವತ್ತೈದು ಚ.ಕಿ.ಮೀ. ವ್ಯಾಪ್ತಿಯ ಬಿನ್ಸರ್ ವನ್ಯಧಾಮ ಹಲವು ಕಾಡು ಮೃಗಗಳಿಗೂ, ಇನ್ನೂರು ಬಗೆಯ ಅಪರೂಪದ ಪಕ್ಷಿಗಳಿಗೂ ಆಶ್ರಯ ತಾಣವಾಗಿದೆ. ಪಕ್ಷಿಪ್ರಿಯರು ಕ್ಯಾಮೆರಾದ ಕಣ್ಣಿನೊಂದಿಗೆ ತಮ್ಮ ಕಣ್ಣು ಕೂಡಿಸಿ ಬಿನ್ಸರ್‌ನಲ್ಲಿ ಎಲ್ಲೆಡೆ ಕಾದು ಕುಳಿತಿರುತ್ತಾರೆ. ದೇಶ ವಿದೇಶಗಳ ಪಕ್ಷಿಪ್ರಿಯರು ಹಿಮಾಲಯದ ಒಂದೊಂದು ಭಾಗದಲ್ಲಿ ಒಂದೊಂದು ಪ್ರಭೇದದ ಪಕ್ಷಿಗಳ ವೀಕ್ಷಣೆಗಾಗಿ ಹೊಂಚು ಹಾಕಿ ಕಾಯುತ್ತಿರುತ್ತಾರೆ. ಅಪರೂಪದ ಹಿಮಾಲಯನ್ ಮೊನಾಲ, ವೃಡೀಟರ್, ಪೆರಡಾಯ್ಜ ಫ್ಲೈ ಕ್ಯಾಚರ್‌ಗಳು, ಬ್ಯಾಕ್ ಹೆಡೆಡ್ ಗೇ, ಬಾರ್ ಟೇಲ್ಡ ಟ್ರಿ ಕ್ರಿಪರ್, ರೂಪತ್ ನಪೆಡ್ ಟಿಟ್ ಇತ್ಯಾದಿ ಪಕ್ಷಿಗಳ ಬೆಡಗು ಬಿನ್ನಾಣ ನೋಡುವುದೇ ಒಂದು ಚಂದ. ಹಸಿರು ಕಾಡಿನ ಮಧ್ಯ ಅಲ್ಲಲ್ಲಿ ಕಡುಗೆಂಪು ಹೂಗಳ ಆಭರಣ ಧರಿಸಿ ಶೋಭಿಸುತ್ತ ನಿಂತ ರೋಡೊಡೆಂಡ್ರಾನ ವೃಕ್ಷಗಳ ಚೆಲುವು ಮತ್ತೊಂದು ಆಕರ್ಷಣೆ.

ಬಿನ್ಸರ್‌ನ ಅತಿ ಮುಖ್ಯ ಆಕರ್ಷಣೆ, ಅಲ್ಲಿಂದ ಕಂಡುಬರುವ ಭಾರತದ ಅತಿ ಎತ್ತರದ ನಂದಾದೇವಿ ಪರ್ವತದ ಗಿರಿಶಿಖರಗಳ ಸಾಲು. 20,850 ಅಡಿ ಎತ್ತರದ ಪಂಚುಲಿ ಪರ್ವತ ಗುಂಪುಗಳು, 22,510 ಅಡಿ ಎತ್ತರದ ನಂದಕೋಟ, 23,360 ಅಡಿ ಎತ್ತರದ ತ್ರಿಶೂಲ, 25,642 ಅಡಿ ಅತಿ ಎತ್ತರದ ನಂದಾದೇವಿ ಶಿಖರ ಸಹೃದಯರ ಕಣ್ಮನ ತಣಿಸುತ್ತವೆ. ಮಂಜು – ಮೋಡಗಳ ಸೆರಗು ಸರಿಸಿ ನಂದಾದೇವಿ ನೋಡುಗರಿಗೆ ದರ್ಶನ ನೀಡುತ್ತಲೇ ಇರುತ್ತಾಳೆ. ನಂದಾದೇವಿ ಒಂದು ಗಳಿಗೆ ಬಿಸಿಲಿನಲ್ಲಿ ಹೊಳೆದರೆ, ಮತ್ತೊಂದು ಗಳಿಗೆ ಮಂಜು–ಮೋಡಗಳ ಮುಸುಕು ಹಾಕಿರುತ್ತಾಳೆ.

ಕಣ್ಣಳತೆಯಲ್ಲಿ ಬಿನ್ಸರ್‌ಗೆ ಸಮೀಪ ಇರುವಂತೆ ಕಾಣಿಸುವ ನಂದಪರ್ವತ ಅಲ್ಲಿಂದ 35 ರಿಂದ 40 ಕಿ.ಮೀ. ದೂರದಲ್ಲಿದೆಯಂತೆ. ಭೂಮಾರ್ಗದಲ್ಲಿ ಹೊರಟರೆ, 250 ಕಿ.ಮೀ. ನಷ್ಟು ಹಿಮಾಲಯದ ಗಿರಿ-ಕಂದರಗಳನ್ನು ಬಳಸಿ ಸಾಗಿ ಅದರ ತಳ ತಲುಪಬಹುದಂತೆ.
ಅತಿಯಾದ ಚಳಿ ಮತ್ತು ವಿದ್ಯುತ್ ಸಂಪರ್ಕ ಇಲ್ಲದ ‘ಕುವಾಂವ ವಿಕಾಸ ನಿಗಮದ ಅತಿಥಿಗೃಹ’ ನಮ್ಮ ಪ್ರವಾಸಿಗರ ಮನದಲ್ಲಿ ಉಳಿಯುವ ಬಿನ್ಸರ್‌ ಭೇಟಿಯ ಇನ್ನೆರಡು ನೆನಪುಗಳು.

ಚಿತ್ರ: ಅಶೋಕ ಮನ್ಸೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT