ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಅನುಭವ

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ತಿಂಗಳನಿಗಾಗಿ ಅಂಗಳದಲ್ಲಿ
ಬನದ ಹುಣ್ಣಿಮೆ ದಿನಗಳಲ್ಲಿ ಚಂದ್ರನ ಬೆಳಕು ಪ್ರಖರವಾಗಿ ಬೀಳುತ್ತಿದ್ದರಿಂದ ಅಂಗಳದಲ್ಲಿ ಚಂದ್ರನ ಪೂಜೆ ನಡೆಸುವ ರೂಢಿ ಇತ್ತು. ಮೂರು ದಿನ, ಐದು ದಿನ, ಒಂಬತ್ತು ದಿನ ಹೀಗೆ ಪೂಜೆ ನಡೆಯುತ್ತಿತ್ತು. ಬಿಳಿ ಎಕ್ಕೆ ಹೂವು ತರೋರು, ಗರಿಕೆ ಕಿತ್ತು ತರೋರು, ಆಕಳ ಸೆಗಣಿ ತಂದು ಸಾರಿಸುವವರು, ಹಗ್ಗ ಜೋಡಿಸುವವರು, ಸುಣ್ಣ ಕಲೆಸಿ ತರುವವರು ಹೀಗೆ ಮಕ್ಕಳ ಸಂಭ್ರಮ ಓಣಿಯನ್ನು ತುಂಬುತ್ತಿತ್ತು.

ದೊಡ್ಡ ಮನೆಯಂಗಳವನ್ನು ಸಾರಿಸಿ ಸುಣ್ಣದ ಚುಕ್ಕೆಗಳಿಂದ ಅಂಗಳದ ಮಧ್ಯೆ ಹಗ್ಗದ ಸಹಾಯದಿಂದ ರಥದ ಚಿತ್ರ ರಚಿಸಿ ಮೇಲೆ ಮಣೆಯನ್ನಿಟ್ಟು ಅದರ ಮೇಲೆ ಚಂದಿರನ ಕಳಸವನ್ನಿಟ್ಟು ಪಕ್ಕದಲ್ಲಿ ಆಕಳ ಸೆಗಣಿಯ ಬೆನವಪ್ಪನನ್ನಿಟ್ಟು ಪೂಜಿಸುತ್ತಿದ್ದೆವು. ಪೂಜೆಯ ನಂತರ ಸಾರಿಸಿದ ಅಂಗಳದಲ್ಲಿ ಕುಳಿತು ಸುತ್ತ ಕುಳಿತು ಊಟ ಸಾಗುತ್ತಿತ್ತು.

ಮನೆಗಳಲ್ಲಿ ಮಾಡಿದ ಅಡುಗೆಯನ್ನೇ ತಟ್ಟೆಯಲ್ಲಿ ಹಾಕಿಸಿಕೊಂಡು ಬಂದು ಉಣ್ಣುತ್ತಿದ್ದೆವು. ಊಟಕ್ಕೆ ಮೊದಲು ಮೂಲೆಯಲ್ಲಿನ ನಾಯಿ ದೊಡ್ಡಿ ಬರೆದ ಜಾಗದಲ್ಲಿ ಎಲ್ಲರೂ ಒಂದೊಂದು ತುತ್ತು ಆಹಾರ ಹಾಕಬೇಕಾಗಿತ್ತು. ಊಟದ ನಂತರ ಹಾಡು, ಹಸೆ, ಒಗಟು, ಗಾದೆ ಹೀಗೆ ಸಮಯದ ಪರಿವೆಯೇ ಇರುತ್ತಿರಲಿಲ್ಲ. ನಂತರ ಕಳಸದ ನೀರನ್ನು ಭಕ್ತಿ ಶ್ರದ್ಧೆಯಿಂದ ಅಂಗೈಯಲ್ಲಿಟ್ಟು ಊರ ಅಗಸೆ ಬಾಗಿಲಿಗೆ ಸಡಿಲಿಸಿ ಬರಬೇಕಿತ್ತು.

ಬಾಲೆಯರ ದಂಡು ಚಂದಪ್ಪನ ಹಾಡು ಹೇಳುತ್ತಾ ‘ಅವರಿಯ ಸಾಲೆಲ್ಲಾ ಸರಮಾಲೆ ಗೊಂಡೇವೆ ಬಾರಪ್ಪ ಬೆಳದಿಂಗಳೇ’ ಎಂಬ ಸಮೂಹ ಗಾನದೊಂದಿಗೆ ಹೊರಡುತ್ತಿದ್ದೆವು. ಅಷ್ಟೊತ್ತಿಗಾಗಲೇ ಊರು ನಿಶ್ಶಬ್ದವಾಗಿರುತ್ತಿತ್ತು. ಮನೆಯವರಿಗೆ ನಮ್ಮ ಬಗ್ಗೆ ಯಾವ ಭಯ ಆತಂಕವೂ ಇರುತ್ತಿರಲಿಲ್ಲ. ಎಷ್ಟೊತ್ತಿಗಾದ್ರೂ ಬಂದು ಅಂಗಳದಲ್ಲೇ ಮಲಗಿರುವ ಅಮ್ಮ ಯಾ ಅಪ್ಪನ ಮಗ್ಗುಲು ಸೇರುತ್ತಿದ್ದೆವು. 

ಆ ದಿನಗಳನ್ನು ಮತ್ತೆ ತರಲು ನನ್ನಲ್ಲಿ ಆಸೆ ಚಿಗುರುತ್ತಿತ್ತು. ಆದರೆ ಅದಕ್ಕೆ ಸ್ಪಂದನೆ ಮಾತ್ರ ಸಿಗುವುದು ಸಾಧ್ಯವಿರಲಿಲ್ಲ. ಯಾರ ಹತ್ರ ಮಾತಾಡಿದ್ರೂ ನಿರುತ್ಸಾಹದ ಪ್ರತಿಕ್ರಿಯೆ.

ಮಕ್ಕಳಿಗೆ ಓದು, ಬರಹದ ಕಿರಿಕಿರಿ. ತಾಯಂದಿರು ಅವರನ್ನ ಹೊರಕ್ಕೆ ಬಿಟ್ಟಾರೆಯೆ? ಈಗ ರಜಾ ದಿನವಾದ್ದರಿಂದ ನಮ್ಮ ಮನೆಯವರೇ ಮಾಡೋಣವೆಂದು ತೀರ್ಮಾನಿಸಿದೆ.

ಮರೆತು ಹೋದ ಆ ದಿನಗಳ ಖುಷಿಯಲ್ಲಿ ಸ್ವಲ್ಪವಾದರೂ ನಡೆಸೋಣವೆಂದುಕೊಂಡೆ. ಶುಕ್ರವಾರ ಹಂಪಿ ಹುಣ್ಣಿಮೆಯಂದು ಮಾಡುವ ತೀರ್ಮಾನವಾಯಿತು. ನನ್ನ ನಾಲ್ಕು ಮೊಮ್ಮಕ್ಕಳು ಕೇಳಿ ಖುಷಿಪಟ್ಟರು. ಸೆಗಣಿ ತಂದು ಅಂಗಳ ಸಾರಿಸಿದೆ. ಮೊಮ್ಮಕ್ಕಳಿಬ್ಬರಿಗೆ ಸುಣ್ಣ ಕಲೆಸಿ ಕೊಟ್ಟೆ. ಅವರು ಇದ್ದುದರಲ್ಲೇ ಕೋರೆಯಾಗದ ಹಾಗೆ ರಥದ ಚಿತ್ರ ಬಿಡಿಸಿದರು. ಸುಣ್ಣದ ಚೆಕ್ಕೆಯ ಚಿತ್ರ ತಕ್ಕಮಟ್ಟಿಗೆ ಅಂದವಾಯಿತು.

ಚಂದ್ರ, ಸೂರ್ಯ, ಕುಡುಗೋಲು ಬಿಡಿಸಿದರು. ಮೂಲೆಯಲ್ಲಿ ನಾಯಿ ದೊಡ್ಡಿ ಬರೆಸಿದೆ. ಕೇರಿಯಲ್ಲಿ ಕಂಡವರಿಗೆ ಮಾತ್ರ ಹೇಳಿದೆ. ಮೊಮ್ಮಕ್ಕಳು ಖುಷಿಯಿಂದ ಪೂಜೆ ನೈವೇದ್ಯ ಮಾಡಿದರು. ಆಕಾಶದ ಚಂದಪ್ಪನನ್ನು ಪೂಜೆ ತೋರಿಸಿದರು. ಅವನಿಗೆ ನಮಸ್ಕರಿಸಿ ಕಳಸಕ್ಕೂ ಅಡ್ಡಬಿದ್ದರು. ಮಕ್ಕಳ ಕಾರ್ಯಕ್ರಮ ಶುರುವಾಯಿತು, ಹಾಡು, ಸಂಗೀತ, ನೃತ್ಯ ಪ್ರಾರಂಭವಾಗುತ್ತಿದ್ದ ಹಾಗೆ ಒಬ್ಬೊಬ್ಬರಾಗಿ ಗೃಹಿಣಿಯರು ಬಂದು ಸೇರತೊಡಗಿದರು.

ನನ್ನ ಗೆಳತಿ ಚಂದಪ್ಪನ ಹಾಡು ಹೇಳಿದಳು. ಬಂದವರಿಗೆಲ್ಲಾ ತಂದ ತಿಂಡಿ ಫಳಾರ ಹಂಚಿದರು. ರಾತ್ರಿ ಹತ್ತು ಗಂಟೆಯವರೆಗೂ ಕಾರ್ಯಕ್ರಮ ನಡೆಯಿತು. ಬಂದವರೆಲ್ಲಾ ಹೊಸದೇನನ್ನೋ ಅನುಭವಿಸಿದ ಖುಷಿಯಲ್ಲಿದ್ದರು.

‘ಬರ್‍ತಾ ಬರ್‍ತಾ ಸಣ್ಣ ಹುಡುಗಿ ಹಾಗೆ ಆಡ್ತಾಳೆ’ ಅಂತ ಯಜಮಾನರು ತಮಾಷೆ ಮಾಡಿದರೂ, ನನ್ನ ಸೊಸೆಯರು ಇದೇನು ವಿಚಿತ್ರ ಅಂದುಕೊಂಡರೂ ನಾನು ಬಿಡಲಿಲ್ಲ.

ದೂಳಲ್ಲಿ ಉಂಡು ಹಿಂಗಾತು ಅಂತ ಕೇರಿಯವರ ಭಯಕ್ಕೆ ಊಟದ ಏರ್ಪಾಟು ಮಾಡಲಿಲ್ಲ. ಮೂಲೆಯಲ್ಲಿ ಬರೆದ ನಾಯಿ ದೊಡ್ಡಿ ನನ್ನನ್ನು ಅಣಕಿಸಿದ ಹಾಗೆ ಭಾಸವಾಯ್ತು.

ಬಹುದಿನಗಳ ಆಸೆ ಈಡೇರಿದ ಖುಷಿಯಲ್ಲಿ ನಾನಿದ್ದೆ.  ಬಾಲೆಯರ ಕೈಗೆ ಕಳಸ ಕೊಟ್ಟು ಅದನ್ನ ಮಠದ ಅರಳಿ ಮರಕ್ಕೆ ವಿಸರ್ಜಿಸಿ ಬರಲು ಹೇಳಿದ. ಹಾಗೆ ಬಂದ ಮಕ್ಕಳಿಗೆ ಹಣ್ಣು ಕೊಟ್ಟೆ ಬಿಸಿಲ ತಾಪದ ಈ ದಿನಗಳಲ್ಲಿ ನನಗೆ ಈ ಗಳಿಗೆ ಸುಖಲೇಪನವನ್ನು ತಂದಿತು. ಕಳೆದು ಹೋದ ಒಂದು ಜಾನಪದ ಸಂಸ್ಕೃತಿಯನ್ನು ಮತ್ತೆ ನೆನಪಿಸಿದ ಸಮಾಧಾನ ನನ್ನದಾಗಿತ್ತು.
–ರುದ್ರಾಣಿ ರುದ್ರಯ್ಯ. ಗೊ.ಮ. ದಾವಣಗೆರೆ

***
ಸಾಥ್ ನೀಡಿತು ಬಿಸಿಲು

ನಾನು ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್‌ ತರಬೇತಿ ಪಡೆಯುವ ಪೊಲೀಸ್‌ ಕಾನ್‌ಸ್ಟೆಬಲ್‌. ನನ್ನೊಟ್ಟಿಗೆ ಇನ್ನೂ ನೂರಾ ಹದಿಮೂರು ಪೊಲೀಸ್‌ ಸಹೋದ್ಯೋಗಿಗಳು ಇದ್ದಾರೆ. ಇಲ್ಲಿ ಬಿಸಿಲಿಗೂ ಮತ್ತು ನಮಗೂ ಅದೇನೋ ಕಾಣಲರಿಯದ ಬಂಧನ.

ದಿನಾಲು ಬೆಳ್ಳಂಬೆಳಿಗ್ಗೆ ಗಂಧಗಾಳಿ ಸೂಸುವ ಹೊತ್ತಿನಲ್ಲಿ ನಾನು ಮತ್ತು ನನ್ನ ಸ್ನೇಹಿತರು ಚಿರತೆ ವೇಗಕೆ ಸರಿಸಮನಾಗಿ ಓಡುವ ಸಮಯದಲ್ಲಿ ಕಾವೇರಿರದ ಬಿಸಿಲು ತನು ಮನಕ್ಕೆ ಮುದ ನೀಡುತ್ತದೆ. ಮೊದ ಮೊದಲು ಸೂರ್ಯನ ಕಿರಣಕ್ಕೆ ಮುಖವೊಡ್ಡಿ ಕವಾಯತು ಆರಂಭಿಸುತ್ತಾ ಸಮಯ ಸರಿಯುತ್ತಿದ್ದಂತೆಬೆವರಿನ ಹನಿಗಳಿಂದ ಮೈಮೇಲಿನ ಬಟ್ಟೆಗಳೆಲ್ಲ ಒದ್ದೆಯಾಗಿ ತನುವೆಲ್ಲ ತಣ್ಣಗಾಗುವುದೂ ಚೆಂದ.

ಮಧ್ಯಾಹ್ನ ಮತ್ತೆ ಕವಾಯತು. ವ್ಯಾಯಾಮ ಪ್ರಾರಂಭವಾಗುವಾಗ ಬರೋಬ್ಬರಿ 3 ಗಂಟೆ ಸಮಯ. ಈ ಸಮಯದಲ್ಲಿ ಸೂರ್ಯ ಬೆಂಕಿ ಉಗುಳಿ ಪ್ರತಾಪ ತೋರುತ್ತಾನೆ. ಮಟ ಮಟ ಬಿಸಿಲಿನಲ್ಲಿ ಕಣ್ಣೆಲ್ಲ ಕೆಂಪಾಗಿ, ದೇಹವೆಲ್ಲಾ ಬಿಸಿಯಾಗಿ, ಬಟ್ಟೆಯೆಲ್ಲ ಒದ್ದೆಯಾಗುವ ಸ್ಥಿತಿ. ಹಲವು ಬಾರಿ ಅವನಿಂದ ತಪ್ಪಿಸಿಕೊಂಡು ಮರಗಳ ಕೆಳಗೆ ಓಡಿದ್ದುಂಟು.

ನಮಗೆಲ್ಲ ಕವಾಯತು ಮಾಡುವುದಕ್ಕೆ ಎಚ್ಚರಿಕೆಯ ಕರಗಂಟೆ ಅವನು. ಅವನ ಅತಿಯಾದ ಪ್ರೀತಿಯಿಂದಲೇ ನಾವೆಲ್ಲರು ಚುರುಕಾಗಿ ಮತ್ತು ಶಿಸ್ತಿನಿಂದ ತರಬೇತಿ ಮಾಡುತ್ತಿದ್ದೇವೆ ಎಂದರೆ ತಪ್ಪಿಲ್ಲ.
–ರಾಜಮಹ್ಮದ ಅಲಂದಾರ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT