ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಕ್ಲಬ್‌ ಪ್ರಪಂಚ

Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬ್ರಿಟಿಷರು ಬಿಟ್ಟುಹೋದ ಕೆಲವು ಅಪರೂಪದ ಬಳುವಳಿಗಳ ಪಟ್ಟಿಗೆ ಬೆಂಗಳೂರಿನ ಕ್ಲಬ್‌ಗಳನ್ನೂ ಸೇರಿಸಬಹುದು. ಆಂಗ್ಲರ ಮೋಜಿನ ಚಟುವಟಿಕೆಗಳಿಗೆ, ಹವ್ಯಾಸ ಪ್ರೀತಿಗೆ ಹುಟ್ಟಿಕೊಂಡ ಎಷ್ಟೋ ಕ್ಲಬ್‌ಗಳು ಇಂದಿಗೂ ಬೆಂಗಳೂರಿನ ಮಹತ್ವವನ್ನು ಎತ್ತಿಹಿಡಿದು ನಿಂತಿವೆ.

ಸಮಾನ ಆಸಕ್ತಿಗಳನ್ನು ಇಟ್ಟುಕೊಂಡು, ಒಂದು ತಾಣದಲ್ಲಿ ಒಗ್ಗೂಡಿ, ಬಿಡುವಿನ ವೇಳೆಯಲ್ಲಿ ಪರಸ್ಪರ ಸಹಕಾರ, ಮನೋಲ್ಲಾಸ, ವಿನೋದ, ಬುದ್ಧಿಮತ್ತೆಗೆ ಪೂರಕವಾಗುವಂತಹ ಕ್ರೀಡೆ, ಚಟುವಟಿಕೆ, ವಿಶ್ರಾಂತಿ, ಊಟ ಸೇರಿದಂತೆ ಸಕಲ ಸೌಲಭ್ಯಗಳನ್ನು ಹೊಂದಿರುವ ಕೂಟವೇ ಕ್ಲಬ್‌. ವಿದೇಶಿಗರ ಈ ಕ್ಲಬ್‌ ಸಂಸ್ಕೃತಿ ಮೊತ್ತ ಮೊದಲ ಬಾರಿಗೆ ಭಾರತಕ್ಕೆ ಅಡಿ ಇಟ್ಟಿದ್ದು  1867–68ರ ಸಮಯದಲ್ಲಿ. ಮೊದಲು ಕೊಲ್ಕತ್ತದಲ್ಲಿ ಇಳಿದ ನಂತರ ಎರಡನೇ ಹೆಜ್ಜೆಯನ್ನು ಬೆಂಗಳೂರಿನಲ್ಲಿ ಊರಿತ್ತು ಕ್ಲಬ್‌ ಸಂಸ್ಕೃತಿ.

1868ರಲ್ಲಿ ಬ್ರಿಟಿಷ್ ಸೈನ್ಯದ ಮೋಜಿಗಾಗಿ ‘ಬೆಂಗಳೂರು ಯುನೈಟೆಟ್ ಸರ್ವಿಸ್ ಕ್ಲಬ್’ ಸ್ಥಾಪನೆಯಾಯಿತು. ಅದುವೇ ಇಂದಿನ ‘ಬೆಂಗಳೂರು ಕ್ಲಬ್’. ನಂತರ ಬೌರಿಂಗ್, ಜಿಮ್ಖಾನ, ಆಂಗ್ಲೋ ಸರ್ವಿಸ್ ಕ್ಲಬ್... ಹೀಗೆ ಅನೇಕ ಕ್ಲಬ್‌ಗಳು ಆರಂಭವಾದವು. ಆದರೆ ಈ ಕ್ಲಬ್‌ಗಳಲ್ಲಿ ಭಾರತೀಯರಿಗೆ ಪ್ರವೇಶವೇ ಇರಲಿಲ್ಲ. ಇದರಿಂದ ಉತ್ತೇಜನಗೊಂಡ ಭಾರತೀಯರೂ ತಮಗಾಗಿ ಕ್ಲಬ್‌ಗಳು ಬೇಕು ಎಂದು ಮಲ್ಲೇಶ್ವರ ಕ್ಲಬ್, ಸೋಷಿಯಲ್ ಕ್ಲಬ್ ಹಾಗೂ ಸೆಂಚುರಿ ಕ್ಲಬ್‌ಗಳನ್ನು ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪನೆ ಮಾಡಿದರು.

ರೆಸಿಡೆನ್ಸಿ ರಸ್ತೆಯಲ್ಲಿರುವ ರಾಷ್ಟ್ರದ 2ನೇ ಅತ್ಯಂತ ಹಳೆಯ ಇಂಗ್ಲಿಷ್ ಕಂಟ್ರಿ ಕ್ಲಬ್ ಎಂದರೆ ಬೆಂಗಳೂರು ಕ್ಲಬ್. ಪ್ರಾರಂಭದಲ್ಲಿ ಇದನ್ನು ಬಸ್ (BUS)  ಕ್ಲಬ್ ಎಂದೇ ಕರೆಯಲಾಗುತ್ತಿತ್ತು. ಮೊದಲು ಕೇವಲ ಬ್ರಿಟಿಷ್ ಸೈನ್ಯಕ್ಕೆ ಸೀಮಿತವಾಗಿದ್ದು, ನಂತರ ಬ್ರಿಟಿಷ್ ಅಧಿಕಾರಿಗಳು ಹಾಗೂ ಅವರ ಕುಟುಂಬಕ್ಕೂ ಅವಕಾಶ ಒದಗಿಸಲಾಯಿತು. ಅಲ್ಲದೇ, ಅಲ್ಲಿ ವೇಷ–ಭೂಷಣ, ನಡವಳಿಕೆಗಳ ಬಗ್ಗೆ ಸ್ಪಷ್ಟ ನಿಯಮಗಳಿದ್ದವು. 2ನೇ ಮಹಾಯುದ್ಧದ ನಂತರ 1946ರಲ್ಲಿ ಇದು ಸಾರ್ವಜನಿಕರಿಗೆ ಮುಕ್ತವಾಯಿತು.

ದಿ ಬೌರಿಂಗ್ ಇನ್‌ಸ್ಟಿಟ್ಯೂಟ್‌
20ನೇ ಶತಮಾನದ ಆರಂಭದಲ್ಲಿ ರಾಷ್ಟ್ರದ ಅತ್ಯುತ್ತಮ, ಸುಂದರ ಕ್ಲಬ್‌ಗಳಲ್ಲಿ ಒಂದು ಎನ್ನುವ ಮಟ್ಟಿಗೆ ಖ್ಯಾತಿ ಪಡೆದಿದ್ದು ದಿ ಬೌರಿಂಗ್ ಇನ್‌ಸ್ಟಿಟ್ಯೂಟ್‌. ಶಿಕ್ಷಣ ಇಲಾಖೆಯ ಅಂದಿನ ನಿರ್ದೇಶಕರಾಗಿದ್ದ ಬಿ.ಎಲ್.ರೈಸ್ ಈ ಕ್ಲಬ್‌ಗಾಗಿ ಸಾಕಷ್ಟು ಕೆಲಸ ಮಾಡಿದರು. ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದ ಈ ಕ್ಲಬ್, ದೇಶದಲ್ಲಿಯೇ ಇಸ್ಪೀಟ್‌ ಆಟದ ದೊಡ್ಡ ತಾಣವೆನಿಸಿತ್ತು.

ಸ್ವಾತಂತ್ರ್ಯ ಪೂರ್ವದ ಕ್ಲಬ್‌ಗಳು 
ಸ್ವಾತಂತ್ರ್ಯ ಪೂರ್ವದ ಕ್ಲಬ್‌ಗಳಲ್ಲಿ ಬೆಂಗಳೂರು, ಕ್ರೀಡಾ ಚಟುವಟಿಕೆಗಳಿಗಾಗಿಯೇ ಇದ್ದ ಜಿಮ್ಖಾನಾ ಕ್ಲಬ್, ಮಹಿಳೆಯರಿಗಾಗಿ ಬೆಂಗಳೂರು ಲೇಡೀಸ್ ಅಸೋಸಿಯೇಷನ್‌, ವಕೀಲರಿಗಾಗಿ ಬೆಂಗಳೂರು ಲಾ ಅಸೋಸಿಯೇಷನ್‌, ವ್ಯಾಪಾರಿ ಸಮುದಾಯದ ಹಿತಾಸಕ್ತಿಗಾಗಿ ಹುಟ್ಟಿಕೊಂಡ ಟ್ರೇಡರ್ಸ್ ಅಸೋಸಿಯೇಷನ್‌ (1899), ದಿ ಕ್ರಿಶ್ಚಿಯನ್ ಇನ್‌ಸ್ಟಿಟ್ಯೂಟ್‌ (1900), ಹಿಮಾಲಯನ್ ಕ್ಲಬ್ (1928) ಸೇರಿದಂತೆ ಅನೇಕ ಕ್ಲಬ್‌ಗಳ ಹೆಸರು ಕಾಣಿಸಿಕೊಳ್ಳುತ್ತವೆ.

ಸೆಂಚುರಿ ಕ್ಲಬ್
ದಂಡು ಪ್ರದೇಶದಲ್ಲಿದ್ದ ಕ್ಲಬ್‌ಗಳಲ್ಲಿ ಭಾರತೀಯರಿಗೆ ಅವಕಾಶ ಇರಲಿಲ್ಲ. ಅಲ್ಲದೇ, ಅಲ್ಲಿನ ಉಡುಗೆ–ತೊಡುಗೆ, ಆಹಾರ, ಆಚಾರ–ವಿಚಾರಗಳೆಲ್ಲ ಪಾಶ್ಚಾತ್ಯ  ಸಂಪ್ರದಾಯದ್ದೇ ಆಗಿರುತ್ತಿದ್ದವು. ಇದಕ್ಕೆ ಪ್ರತಿಯಾಗಿ ದಿವಾನ್‌ ವಿಶ್ವೇಶ್ವರಯ್ಯ ಅವರ ಪ್ರೋತ್ಸಾಹದೊಂದಿಗೆ ಭಾರತೀಯ ವಾತಾವರಣವನ್ನು ಬಿಂಬಿಸುವ ಕ್ಲಬ್‌ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಲಾಯಿತು. ಇದರ ಫಲವಾಗಿ 1916ರಲ್ಲಿ ಸೆಂಚುರಿ ಕ್ಲಬ್‌ ಅನಾವರಣಗೊಂಡಿತು. ದಕ್ಷಿಣ ಭಾರತದ ಊಟ–ತಿನಿಸುಗಳಿಗೆ ಇಲ್ಲಿ ಹೆಚ್ಚಿನ ಮನ್ನಣೆ ದೊರಕಿತು.

ಸಚಿವಾಲಯ ಕ್ಲಬ್
1905ರಲ್ಲಿ ಒಂದು ತಗಡಿನ ಶೆಡ್‌ನಲ್ಲಿ ಕಾಫಿ ಹೌಸ್‌ ಮತ್ತು ವಾಚನಾಲಯದೊಂದಿಗೆ ಸೆಕ್ರಟೇರಿಯೇಟ್‌ (ಸಚಿವಾಲಯ) ಕ್ಲಬ್‌ ಆರಂಭವಾಯಿತು. ಸರ್ಕಾರಿ ನೌಕರರು ಕೆಲಸ ಮುಗಿದ ನಂತರ ಆಟವಾಡಲು, ಪತ್ರಿಕೆ–ಪುಸ್ತಕಗಳನ್ನು ಓದಲು, ಕೂಡಿ ಕಾಲ ಕಳೆಯಲು ಈ ಕ್ಲಬ್‌  ಸಹಕಾರಿಯಾಯಿತು. ಕ್ಲಬ್‌ನಲ್ಲಿ ಮೂರು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ, ಎರಡು ಟೇಬಲ್‌ ಟೆನ್ನಿಸ್, ಬಿಲಿಯರ್ಡ್ಸ್, ಟೆನಿಸ್ ಪ್ರಾಂಗಣಗಳಿವೆ.

ಬಸವನಗುಡಿ ಕ್ಲಬ್
ದಂಡು ಪ್ರದೇಶದಲ್ಲಿ ಆರಂಭವಾದ ಬ್ರಿಟಿಷ್ ಪರಂಪರೆಯ ಕ್ಲಬ್‌ಗಳ ಮಾದರಿಯಲ್ಲಿಯೇ ನಗರದ ಕೆಲವು ಬಡಾವಣೆಗಳಲ್ಲಿ ಭಾರತೀಯ ಪರಂಪರೆಗೆ ಅನುಗುಣವಾಗಿ ಕೆಲವು ಕ್ಲಬ್‌ಗಳು ಆರಂಭವಾದವು. 1901ರಲ್ಲಿ ಕೆಲವು ಹಿರಿಯ ನಾಗರಿಕರು ಸಂಜೆ ಸಮಯ ಕಳೆಯಲು ‘ಪಿಂಜ್ರಾಪೋಲ್‌ ಕ್ಲಬ್’ ಸ್ಥಾಪಿಸಿದರು.

ನಿವೃತ್ತ ಪ್ರಾಧ್ಯಾಪಕ ಬೆಳ್ಳಾವೆ ವೆಂಕಟನಾರಣಪ್ಪ ಅವರು ಬಾಡಿಗೆ ಕಟ್ಟಡದಲ್ಲಿ ಈ ಕ್ಲಬ್‌ ಅನ್ನು ಆರಂಭಿಸಿದ್ದರು. 1906ರಲ್ಲಿ ಇದು ಬಸವನಗುಡಿ ಕ್ಲಬ್‌ ಆಯಿತು. ಬೆಂಗಳೂರು ಕ್ಲಬ್‌ಗಳಲ್ಲಿ ಪುರುಷ ಪ್ರಾಧಾನ್ಯ ಧೋರಣೆಯ ವಿರುದ್ಧ ಮಹಿಳೆಯರು ದನಿ ಎತ್ತಿದ ಸಂದರ್ಭದಲ್ಲಿ, ಅಂದರೆ 1933ರ ಹೊತ್ತಿಗೆ ಬಸವನಗುಡಿ ಕ್ಲಬ್‌ನ ಆವರಣದಲ್ಲಿಯೇ ಮಹಿಳಾ ವಿಭಾಗ ಆರಂಭವಾಯಿತು.

ಇದೇ ಸಮಯದಲ್ಲಿ ಸಿಟಿ ಇನ್‌ಸ್ಟಿಟ್ಯೂಟ್‌ ಸಹ ಗುರತಿಸಿಕೊಂಡಿತು. 60ರ ದಶಕದಲ್ಲಿಯೇ ಮಹಿಳೆಯರಿಗೂ ಸದಸ್ಯತ್ವ ನೀಡುವ ಮೂಲಕ ಮಹತ್ವದ ಹೆಜ್ಜೆಯನ್ನಿಟ್ಟಿದ್ದು ಸಿಟಿ ಇನ್‌ಸ್ಟಿಟ್ಯೂಟ್‌. ಇದೇ ಮಾದರಿಯಲ್ಲಿ 1929ರಲ್ಲಿ ಮಲ್ಲೇಶ್ವರ ಕ್ಲಬ್‌ ಉದಯವಾಯಿತು. ಇದರ ಸ್ಥಾಪಕ ಅಧ್ಯಕ್ಷರು ಜಸ್ಟಿಸ್ ಚಂದ್ರಶೇಖರ ಅಯ್ಯರ್.

ಅಂದಿನ ಕಾಲಕ್ಕೇ ಇದು ಸುಸಜ್ಜಿತವಾದ ಒಳಾಂಗಣವನ್ನು ಹೊಂದಿತ್ತು. ಆದರೆ ಇವೆಲ್ಲವುಗಳಿಗಿಂತ ಮೊದಲೇ ಅಂದರೆ 1803ರಲ್ಲಿಯೇ ‘ಬೆಂಗಳೂರು ಕುದುರೆ ಜೂಜಿನ ಕೂಟ’ ಗಾಲ್ಫ್‌ ಕ್ಲಬ್‌ಗಳೂ ಅಸ್ತಿತ್ವದಲ್ಲಿದ್ದವು ಎನ್ನುವುದು ತಿಳಿದು ಬರುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT