ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬುಲ್ಸ್‌ ತಂಡದ ಶುಭಾರಂಭ

ಪ್ರೊ ಕಬಡ್ಡಿ ಲೀಗ್‌: ಮಿಂಚಿದ ರೋಹಿತ್‌ ಕುಮಾರ್‌ ; ಬೆಂಗಾಲ್‌ ವಾರಿಯರ್ಸ್‌ಗೆ ನಿರಾಸೆ
Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನ ನಾಲ್ಕನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಭಾನುವಾರ ನಡೆದ ರೋಚಕ ಪಂದ್ಯದ ಕೊನೆಯಲ್ಲಿ ಬೆಂಗಳೂರಿನ ಆಟಗಾರರು 24–23ರಿಂದ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಗೆಲುವು ಗಳಿಸಿತು.

ಆರಂಭದಿಂದಲೂ ಹೆಜ್ಜೆ ಹೆಜ್ಜೆಗೂ ಪೈಪೋಟಿ ಕಂಡು ಬಂದ ಈ ಪಂದ್ಯದ ಕೊನೆಯ ಮೂರು ನಿಮಿಷಗಳಲ್ಲಿ ಅತ್ಯು ತ್ತಮ ಸಾಮರ್ಥ್ಯ ತೋರಿದ ರೋಹಿತ್‌ ಕುಮಾರ್‌ ಅವರು ಬೆಂಗಳೂರು ಬುಲ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

38ನೇ ನಿಮಿಷದ ‘ಟೈಮ್‌ ಔಟ್‌’ ವೇಳೆ ಬೆಂಗಾಲ್‌ ತಂಡ 22–19ರಿಂದ ಮುಂದಿತ್ತು. ನಂತರ ಬೆಂಗಳೂರಿನ ರೋಹಿತ್‌ ರೈಡಿಂಗ್‌ನಲ್ಲಿ ಒಂದು ಪಾಯಿಂಟ್‌ ತಂದರು. ನಂತರದ ರೈಡಿಂಗ್‌ನಲ್ಲಿ ನಿತಿನ್ ಮದಾನೆ ಅವರು ಬೆಂಗಾಲ್‌ ತಂಡಕ್ಕೆ ನಿರಾಸೆ ಉಂಟು ಮಾಡಿದರು.

ಮತ್ತೆ ರೈಡಿಂಗ್‌ನಲ್ಲಿ ರೋಹಿತ್‌ ಕುಮಾರ್‌ ಇನ್ನೊಂದು ಪಾಯಿಂಟ್‌ ತರುವುದರ ಜತೆಗೆ ‘ಲೋನಾ’ ಪಾಯಿಂಟ್‌ಗಳೂ ಬಂದು ಬೆಂಗಳೂರು 24–23ರಿಂದ ಮುನ್ನಡೆ ಗಳಿಸಿತು. ಕೊನೆಯ ಕ್ಷಣದಲ್ಲಿ ರೋಹಿತ್‌ ಅತೀವ ಜಾಗರೂಕತೆಯ ಆಟವಾಡಿ ಪಾಯಿಂಟ್‌ ತರಲಿಲ್ಲವಾದರೂ, ಪಾಯಿಂಟ್ಸ್‌ ಹಂಚಿಕೊಳ್ಳಲು ಅವಕಾಶ ನೀಡಲಿಲ್ಲ. ಬೆಂಗಳೂರು ಪಾಳಯದಲ್ಲಿ ಹರ್ಷೋದ್ಗಾರದ ಅಲೆ ಎದ್ದಿತು.

ನಾಯಕನಿಗೆ ತಕ್ಕ ಆಟವಾಡಿದ ಸುರಿಂದರ್‌ ನಡಾ ಒಟ್ಟು 5 ಟ್ಯಾಕಲ್‌ ಪಾಯಿಂಟ್‌ಗಳೊಂದಿಗೆ ಬೆಂಗಳೂರು ತಂಡವನ್ನು ಗೆಲುವಿನ ಅಂಚಿಗೆ ಕೊಂಡೊಯ್ದರೆ, 7 ಪಾಯಿಂಟ್ಸ್‌ ಗಳಿಸಿದ ರೋಹಿತ್‌ ಕುಮಾರ್‌ ನಿರ್ಣಾಯಕ ಕ್ಷಣಗಳಲ್ಲಿ ಅನನ್ಯ ಸಾಮರ್ಥ್ಯ ತೋರಿ ತಂಡದ ಗೆಲುವಿನ ರೂವಾರಿ ಎನಿಸಿದರು. ಬುಲ್ಸ್‌ನ ಮೋಹಿತ್‌ ಚಿಲಾರ್‌ (3ಪಾಯಿಂಟ್ಸ್‌) ಮತ್ತು ದೀಪಕ್‌ ಕುಮಾರ್‌ ದಹಿಯಾ ಕೂಡಾ ಗಮನ ಸೆಳೆದರು.

ಆರಂಭದಿಂದಲೂ ಬೆಂಗಾಲ್‌ ತಂಡ ಮುನ್ನಡೆಯನ್ನು ಕಾಪಾಡಿಕೊಂಡಿತ್ತು. ವಿರಾಮದ ವೇಳೆಗೂ 11–10ರಿಂದ ಬೆಂಗಾಲ್‌ ಮುಂದಿತ್ತು. ಮೋನು ಗಯಾತ್‌ ಮತ್ತು ಜಂಗ್‌ ಕುನ್‌ಲಿ ತಲಾ 5 ಪಾಯಿಂಟ್ಸ್‌ ಗಳಿಸಿದರೆ, ನೀಲೇಶ್‌ ಶಿಂಧೆ ಮತ್ತು ಗಿರೀಶ್‌ ಮಾರುತಿ ತಲಾ 3 ಪಾಯಿಂಟ್ಸ್‌ ಗಳಿಸಿದರು.

ಕೊನೆಯ ಕ್ಷಣಗಳಲ್ಲಿ ಮಿಂಚಿದ ರೋಹಿತ್‌ ಕುಮಾರ್‌, ಮೊದಲಾರ್ಧದಲ್ಲಿ ಗಮನ ಸೆಳೆದಿರಲಿಲ್ಲ. ಮೊದಲ ಆರು ರೈಡಿಂಗ್‌ಗಳ ಕೊನೆಯಲ್ಲಿ ಅವರು ಕೇವಲ ಒಂದು ಪಾಯಿಂಟ್‌ ಗಳಿಸಿದ್ದರಷ್ಟೆ.

ಆದರೆ ಬೆಂಗಾಲ್‌ ಪರ ಬದಲಿ ಆಟಗಾರನಾಗಿ 17ನೇ ನಿಮಿಷದಲ್ಲಿ ಆಡಲಿಳಿದ ಕುಂಗ್‌ ಲೀ ಅತ್ಯುತ್ತಮ ಸೂಪರ್‌ ರೈಡ್‌ ಮೂಲಕ ಅಂಗಣದಲ್ಲಿ ಮಿಂಚು ಹರಿಸಿದರು. ಮೊದಲಾರ್ಧದಲ್ಲಿ ಉಭಯ ತಂಡಗಳಿಂದಲೂ ಸಮಬಲದ ಸಾಮರ್ಥ್ಯ ಮೂಡಿಬಂದಿತು. 

ಉತ್ತರಾರ್ಧದ 31ನೇ ನಿಮಿಷದಲ್ಲಿ ಪಾಯಿಂಟ್ಸ್‌ 15–15ರಿಂದ  ಸಮಗೊಂಡಿತ್ತು. ನಂತರದ ಐದು ನಿಮಿಷಗಳ ಕಾಲ ಬೆಂಗಾಲ್‌ ಆಟಗಾರರು ಗಮನಾರ್ಹ ಸಾಮರ್ಥ್ಯ ಪ್ರದರ್ಶಿಸಿದರು. 36ನೇ ನಿಮಿಷದಲ್ಲಿ ಬೆಂಗಾಲ್‌ ಆಟಗಾರರು 22–15ರಿಂದ ಮುಂದಿದ್ದರು. ಕೊನೆಯ 5 ನಿಮಿಷಗಳಲ್ಲಿ ಬೆಂಗಳೂರು ಅಮೂಲ್ಯ 9 ಪಾಯಿಂಟ್ಸ್‌ ಗಳಿಸಿದರೆ, ಬೆಂಗಾಲ್‌ ಕೇವಲ ಒಂದು ಪಾಯಿಂಟ್ಸ್‌ ಗಳಿಸಲು ಮಾತ್ರ ಶಕ್ತವಾಯಿತು.

ಬೆಂಗಳೂರು ತಂಡಕ್ಕೆ ರೈಡಿಂಗ್‌ನಲ್ಲಿ 11 ಪಾಯಿಂಟ್ಸ್‌ ಬಂದರೆ, ಬೆಂಗಾಲ್‌ 12 ಪಾಯಿಂಟ್ಸ್‌ ಗಳಿಸಿತು. ರೋಹಿತ್‌ ಕುಮಾರ್‌ ಪಂದ್ಯದ ಅತ್ಯುತ್ತಮ ರೈಡರ್‌ ಎನಿಸಿದರೆ, ಸುರೆಂದರ್‌ ನಡಾ ಅತ್ಯುತ್ತಮ ರಕ್ಷಣಾ ಆಟಗಾರ ಗೌರವಕ್ಕೆ ಪಾತ್ರರಾದರು.

ಪುಣೇರಿ ಪಲ್ಟನ್‌ಗೆ ಗೆಲುವು: ಪುಣೇರಿ ಪಲ್ಟನ್‌ ತಂಡದ ಆಟಗಾರರು ಇನ್ನೊಂದು ಪಂದ್ಯದಲ್ಲಿ ಯೂ ಮುಂಬಾ ತಂಡದ ವಿರುದ್ಧ 41–19ರಿಂದ ಗೆಲುವು ಗಳಿಸಿದರು. ರಕ್ಷಣಾ ತಂತ್ರ ಮತ್ತು ಆಕ್ರಮಣಕಾರಿ ಆಟಗಳೆರಡರಲ್ಲಿಯೂ ಮಿಂಚಿದ ಪುಣೇರಿ ಪಲ್ಟನ್‌ ತಂಡದ ಎದುರು ಮುಂಬಾ ತಂಡ ಕಳೆಗುಂದಿತ್ತು. ಕಳೆದ ಆವೃತ್ತಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿದ್ದ ಅನೂಪ್‌ ಕುಮಾರ್‌ ಅವರು ನಾಯಕನಿಗೆ ತಕ್ಕ ಆಟವಾಡಿ, ಮುಂಬಾ ತಂಡವನ್ನು ಮೇಲೆತ್ತಲು ಹರಸಾಹಸ ಮಾಡಿದರು.

ಆದರೆ ಅವರೊಬ್ಬರೇ ಹೋರಾಟ ನಡೆಸಬೇಕಾಯಿತು. ಮುಂಬಾ ಗಳಿಸಿದ 19 ಪಾಯಿಂಟ್ಸ್‌ ಗಳಲ್ಲಿ ಅನೂಪ್‌ ಗಳಿಸಿದ್ದು 9 ಪಾಯಿಂಟ್ಸ್‌. ಪುಣೇರಿ ಪರ ಅಜಯ ಕುಮಾರ್‌ 12 ಪಾಯಿಂಟ್ಸ್‌ ಗಳಿಸಿದರೆ, ತಂಡದ ನಾಯಕ ಮಂಜಿತ್‌ ಚಿಲಾರ್‌ ಮತ್ತು ಜೋಗಿಂದರ್‌ ನರ್ವಾಲ್‌ ಕ್ರಮವಾಗಿ 7 ಮತ್ತು 4 ಪಾಯಿಂಟ್ಸ್‌ ಗಳಿಸಿದರು.

ಇಂದಿನ ಪಂದ್ಯಗಳು
ಬೆಂಗಾಲ್ ವಾರಿಯರ್ಸ್‌– ದಬಂಗ್‌ ಡೆಲ್ಲಿ

ಆರಂಭ: ರಾತ್ರಿ 8

ಪುಣೇರಿ ಪಲ್ಟನ್‌–ಪಟ್ನಾ ಪೈರೇಟ್ಸ್‌
ಆರಂಭ: ರಾತ್ರಿ 9
ಸ್ಥಳ: ಮುಂಬೈ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT