ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿರುವುದು ನಿರ್ಬಂಧವಲ್ಲ; ನಿಯಂತ್ರಣ

ಟ್ಯಾಕ್ಸಿ ಸೇವೆ ಆತಂಕ ತರವೇ?
Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಟ್ಯಾಕ್ಸಿ ಹತ್ತಿದ ಯುವತಿಯೊಬ್ಬಳು ಚಾಲಕನಿಂದಲೇ ಅತ್ಯಾಚಾರಕ್ಕೆ ಒಳಗಾದ ಬಳಿಕ, ಟ್ಯಾಕ್ಸಿ ಸೇವೆಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಪೊಲೀಸ್‌ ಮತ್ತು ಸಾರಿಗೆ ಇಲಾಖೆಗಳು ನಿದ್ದೆಯಿಂದ ಎಚ್ಚೆತ್ತು, ಸೇವಾದಾರರ ವಿರುದ್ಧ ಬಿಗಿ ಕ್ರಮಕ್ಕೆ ಮುಂದಾಗಿವೆ. ‘ಪ್ರಯಾಣಿಕ ಸ್ನೇಹಿ’ ಸೌಲಭ್ಯಗಳಿಂದ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಟ್ಯಾಕ್ಸಿ ಸೇವೆಯ ಮೇಲಿನ ಇಂತಹ ನಿರ್ಬಂಧಗಳ ಸಾಧಕ -ಬಾಧಕದ ಒಳನೋಟ ಇಲ್ಲಿದೆ...

ಜಿಮ್ ಕಾರ್ಬೆಟ್ ಅವರ   ಕಥೆ­ಗಳಲ್ಲಿ ಸದ್ದಿಲ್ಲದೆ ಬರುವ ನರ­ಭಕ್ಷಕ ಹುಲಿಯಂತೆ ಮನೆ ಹೊರಗಿನ ಈ ಅಪಾಯ ಯಾವ ದಿಕ್ಕಿನಿಂದ, ಯಾವ ರೂಪದಲ್ಲಿ, ಹೇಗೆ  ಬಂದೆರಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಇಲ್ಲದಿ­ದ್ದರೆ ಕೆಲಸ ಮುಗಿಸಿ ಮನೆ ಸೇರಬೇಕಾದ ಮಹಿಳೆ ಬೀದಿ ಬದಿಯಲ್ಲಿ ಹೆಣವಾಗಿ ಸಿಗುತ್ತಿರಲಿಲ್ಲ. ಬಸ್ಸಿನಲ್ಲಿ ಹುಡುಗಿಯ ಮೇಲೆ ಸಾಮೂ­ಹಿಕ ಅತ್ಯಾಚಾರವೂ ನಡೆಯುತ್ತಿರಲಿಲ್ಲ. ಯುವತಿಯನ್ನು ಮನೆಗೆ ಕರೆದೊಯ್ಯಬೇಕಾದ ಟ್ಯಾಕ್ಸಿ ನಿರ್ಜನ ಕಸದ ಗುಂಡಿ ಪಕ್ಕ ಹೋಗಿ ನಿಲ್ಲುತ್ತಿರಲಿಲ್ಲ.

ದೇಶದಲ್ಲಿ ಉದಾರೀಕರಣ ನೀತಿ ಜಾರಿಗೆ ಬಂದು ಎರಡೂ­ವರೆ ದಶಕ ಉರುಳಿದ್ದು, ಈ ಅವಧಿಯಲ್ಲಿ ನಗರಗಳು ಕ್ಷಿಪ್ರವಾಗಿ ಬೆಳೆ­ದಿವೆ. ದುಡಿಯುವ ವರ್ಗಕ್ಕೆ ಹಗಲು–ರಾತ್ರಿಗಳ ನಡುವಿನ ವ್ಯತ್ಯಾ­ಸವೇ ಅಳಿಸಿಹೋಗಿದೆ. ಪುರುಷರಿಗೆ ಸರಿಸಮವಾಗಿ ಮಹಿಳೆಯರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪರಂಪರೆ ದೊಡ್ಡದಾಗಿ ಬೆಳೆದಿದೆ. ಅದರ ಜತೆಗೆ ಉದ್ಯೋಗಸ್ಥ ಮಹಿಳೆಯರು ನಡುರಾತ್ರಿ ಸುರಕ್ಷಿತವಾಗಿ ಮನೆ ಸೇರುವುದು ಹೇಗೆ ಎಂಬ ಪ್ರಶ್ನೆಯೂ ದೈತ್ಯಾಕಾರ ತಾಳಿ ನಿಂತಿದೆ.

ರೇಡಿಯೊ ಟ್ಯಾಕ್ಸಿ: ಹೇಳಿದ ಸಮಯಕ್ಕೆ, ಹೇಳಿದ ಜಾಗದಲ್ಲಿ ಸರಿಯಾಗಿ ಬಂದು ನಿಲ್ಲುವ ರೇಡಿಯೊ ಟ್ಯಾಕ್ಸಿ ಆರಾಮ, ಅನುಕೂಲ ಹಾಗೂ ಅಗ್ಗದ ದರದ ಪ್ರಯಾಣ ಸೌಲಭ್ಯಕ್ಕೆ ಹೆಸರಾಗಿದೆ. ಆದರೆ, ನವದೆಹಲಿಯಲ್ಲಿ ‘ಉಬರ್‌’ ಟ್ಯಾಕ್ಸಿ ಚಾಲಕನಿಂದ ನಡೆದ ಅತ್ಯಾ­ಚಾರ ಘಟನೆ ‘ಬಾಡಿಗೆ ಕಾರು ಎಷ್ಟು ಸುರಕ್ಷಿತ’ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಿದೆ.

ರೇಡಿಯೊ ಟ್ಯಾಕ್ಸಿ ಪರಿಕಲ್ಪನೆ ಬೆಳೆದು ಇನ್ನೂ ಹತ್ತು ವರ್ಷ ಕೂಡ ಆಗಿಲ್ಲ. ಗ್ರಾಹಕನೊಬ್ಬ ಟ್ಯಾಕ್ಸಿ ಸಹಾಯವಾಣಿಗೆ ಕರೆ ಮಾಡಿದ ತಕ್ಷಣ ಆತನ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿರುವ ಕ್ಯಾಬ್‌ ಯಾವುದು ಎಂಬುದನ್ನು ರೇಡಿಯೊ ಸಿಗ್ನಲ್‌ ನೆರವಿನಿಂದ ಪತ್ತೆ ಮಾಡಿ, ಅದರ ಚಾಲಕನಿಗೆ ಸಂದೇಶ ತಲುಪಿಸುವ ವ್ಯವಸ್ಥೆ ಇದು. ರೇಡಿಯೊ ಸಿಗ್ನಲ್‌ ನೆರವಿನಿಂದ ಈ ಟ್ಯಾಕ್ಸಿಗಳು ಮೂಲ ನೆಲೆಯೊಂದಿಗೆ ಸದಾ ಸಂಪರ್ಕದಲ್ಲಿರುತ್ತವೆ.

ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳುವ ‘ರೇಡಿಯೊ ಟ್ಯಾಕ್ಸಿ’ಗಳು ಎಲ್ಲ ಮಹಾನಗರಗಳಲ್ಲೂ ತುಂಬಾ ಜನಪ್ರಿಯ­ವಾಗಿವೆ. ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಉದ್ಯಮ ಇದಾ­ಗಿದ್ದು, ವಾರ್ಷಿಕ ಶೇ 30ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ. ಈ ಉದ್ಯಮದ ವಾರ್ಷಿಕ ಮಾರುಕಟ್ಟೆ ವಹಿವಾಟು ₨ 54 ಸಾವಿರ ಕೋಟಿಯಾಗಿದೆ.

‘ಸ್ವಂತ ಕಾರು ಹೊಂದುವುದಕ್ಕಿಂತ ಟ್ಯಾಕ್ಸಿ ಬಾಡಿಗೆ ಪಡೆ­ಯು­ವುದೇ ಆರ್ಥಿಕವಾಗಿ ಹೆಚ್ಚು ಅನುಕೂಲ ಹಾಗೂ ಆರಾಮ’ ಎನ್ನುವುದು ಬಹುತೇಕ ಸಾಫ್‌್ಟವೇರ್‌ ಉದ್ಯೋಗಿಗಳ ಅಭಿಪ್ರಾಯ­ವಾಗಿದೆ. ‘ತಿಂಗಳ ಕಂತು, ಚಾಲಕನ ಸಂಬಳ, ಇಂಧನ ವೆಚ್ಚ, ನಿಲುಗಡೆ ದರ ಎಲ್ಲವನ್ನೂ ಭರಿಸಿ, ಮೇಲೆ ಕಿರಿಕಿರಿಯನ್ನೂ ಅನುಭವಿ­ಸುವ ಬದಲು ಟ್ಯಾಕ್ಸಿ ಬುಕ್‌ ಮಾಡಿ, ಕಚೇರಿ ತಲುಪುವವರೆಗೆ ಐಪ್ಯಾಡ್‌ನಲ್ಲಿ ಸುದ್ದಿ ಓದುತ್ತಾ ಕಾಲ ಕಳೆಯ­ಬಹುದು’ ಎನ್ನುತ್ತಾರೆ ಸಾಫ್ಟ್‌ವೇರ್‌ ಕಂಪೆನಿಯೊಂದರ ಉದ್ಯೋಗಿ ರಿಚಾ ದುಬೆ.

‘ಕಳೆದ 5–6 ವರ್ಷದಿಂದ ನಾವು ಈ ಸೇವೆ ಪಡೆಯುತ್ತಿದ್ದೇವೆ. ಸ್ವಂತ ಕಾರು ಇಟ್ಟುಕೊಂಡರೂ ರೇಡಿಯೊ ಟ್ಯಾಕ್ಸಿಯಷ್ಟು ಸಮಯ ಪರಿಪಾಲನೆ ಮಾಡಲು ಸಾಧ್ಯವಿಲ್ಲ. ನಾವು ಹೊರಟಿದ್ದ ಟ್ಯಾಕ್ಸಿ ಕೆಟ್ಟು ನಿಂತರೆ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಧಾವಿಸುತ್ತದೆ’ ಎಂದು ವಿವರಿಸುತ್ತಾರೆ.  

‘ಕಾರು ಪೂಲಿಂಗ್‌ ಮಾಡುವುದರಿಂದ ನಾವು ಮೂವರು ಗೆಳತಿಯರು ಒಟ್ಟಾಗಿ ಕಚೇರಿಗೆ ಹೋಗುತ್ತೇವೆ. ಪ್ರತಿಯೊಬ್ಬರೂ ಮಾಸಿಕ ₨ 7ರಿಂದ 8 ಸಾವಿರದಷ್ಟು ಬಾಡಿಗೆ ತೆರಬೇಕಾಗುತ್ತದೆ. ಸ್ವಂತ ಕಾರಿನ ನಿರ್ವಹಣೆಗೆ ಇದಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಹಣ ಖರ್ಚಾಗುತ್ತದೆ. ಹಾಗಿದ್ದ ಮೇಲೆ ಸ್ವಂತ ಕಾರು ಏಕೆ ಬೇಕು’ ಎಂದು ಅವರು ಪ್ರಶ್ನಿಸುತ್ತಾರೆ. ‘ರಿಯಲ್‌ ಎಸ್ಟೇಟ್‌ನಲ್ಲಿ ಹಣ ತೊಡಗಿಸಿದರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಆದರೆ ಅದೇ ಹಣವನ್ನು ಕಾರು ಖರೀದಿಗೆ ಬಳಕೆ ಮಾಡಿದರೆ ದಿನಗಳು ಕಳೆದಂತೆ ಕಾರಿನ ಮೌಲ್ಯ ಕಡಿಮೆ ಆಗುತ್ತಾ ಹೋಗುತ್ತದೆ’ ಎಂಬ ಲೆಕ್ಕಾಚಾರ ಮುಂದಿಡುತ್ತಾರೆ ರಿಚಾ ಅವರೊಂದಿಗೆ ನಿತ್ಯ ಟ್ಯಾಕ್ಸಿಯಲ್ಲಿ ಓಡಾಡುವ ಸ್ವಪ್ನಿಲ್‌.
‘ಜೀನಿ’ಯಂತಹ ಟ್ಯಾಕ್ಸಿಯು, ಆಟೊ ರಿಕ್ಷಾಗಳಿಗೆ ಪೈಪೋಟಿ ಕೊಡುವಷ್ಟು ಕಡಿಮೆ ದರದಲ್ಲಿ ಸೇವೆ ನೀಡುತ್ತಿದೆ. ಡಿಜಿಟಲ್‌ ಮೀಟರ್‌ ಇರುವುದರಿಂದ ಯಾವುದೇ ಮೋಸಕ್ಕೆ ಅವಕಾಶ ಇಲ್ಲದಂತೆ ವ್ಯವಹಾರ ಪಾರದರ್ಶಕವಾಗಿ ನಡೆಯುತ್ತದೆ.

ಸುರಕ್ಷತೆ ಮುಖ್ಯ: ಏನೇ ಸೌಲಭ್ಯ ಹೊಂದಿದ್ದರೂ ಸಂಚಾರದ ಸಂದರ್ಭದಲ್ಲಿ ಸುರಕ್ಷತೆ ಇಲ್ಲದಿದ್ದರೆ ಹೇಗೆ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಕಾಲ್‌ ಸೆಂಟರ್‌ ಉದ್ಯೋಗಿಯಾಗಿದ್ದ ಪ್ರತಿಭಾ ಶ್ರೀಕಂಠಮೂರ್ತಿ, ಬೆಂಗಳೂರಿನಲ್ಲಿ 2005ರ ಡಿಸೆಂಬರ್‌ 13ರಂದು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದಾಗ ದೇಶದಾದ್ಯಂತ ಆಘಾತದ ಅಲೆಯೇ ಎದ್ದಿತ್ತು. ಮಹಿಳಾ ಸಿಬ್ಬಂದಿಗೆ ವ್ಯವಸ್ಥೆ ಮಾಡಲಾದ ಟ್ಯಾಕ್ಸಿಗಳಲ್ಲಿ ಕಾರ್ಪೊರೇಟ್‌ ಸಂಸ್ಥೆಗಳು ಜಿಪಿಎಸ್‌ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಅಳವಡಿಸಬೇಕು ಎಂಬ ಸುತ್ತೋಲೆ ಹೊರಡಿಸಿದ್ದನ್ನು ಬಿಟ್ಟರೆ ಸರ್ಕಾರ ಬೇರೆ ಯಾವ ನಿಯಂತ್ರಣ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಟ್ಯಾಕ್ಸಿಗಳಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬ ವಿಷಯವಾಗಿ ಈಗಲೂ ಕಾನೂನಿನಲ್ಲಿ ಸ್ಪಷ್ಟತೆ ಇಲ್ಲ. 

ಬಹುತೇಕ ಟ್ಯಾಕ್ಸಿ ಸಂಸ್ಥೆಗಳು ಕಿರು ತಂತ್ರಾಂಶದಿಂದ (ಆ್ಯಪ್‌) ಆನ್‌ಲೈನ್‌ ವೇದಿಕೆ ಕಲ್ಪಿಸಿಕೊಡುವ ಮೂಲಕ ಗ್ರಾಹಕರು ಮತ್ತು ಟ್ಯಾಕ್ಸಿ ಮಾಲೀಕ– ಚಾಲಕರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿವೆ. ಟ್ಯಾಕ್ಸಿ ಚಾಲಕನಿಗೆ ಒದಗಿಸಿ­ಕೊಡುವ ವಹಿವಾಟಿ­ನಲ್ಲಿ ಸಂಸ್ಥೆಗಳು ತಮ್ಮ ಪಾಲನ್ನು (ಕಮಿಷನ್‌) ಪಡೆಯುತ್ತಿವೆ. ‘ಮೇರು’ ಕ್ಯಾಬ್ಸ್‌ನಂತಹ ಸಂಸ್ಥೆಗಳು ಚಾಲಕ­ರಿಗೆ ಸುಲಭ ಕಂತುಗಳಲ್ಲಿ ಕಾರನ್ನು ಖರೀ­ದಿಸಿಕೊಡುತ್ತವೆ. ಈ ಮಾದರಿ ವಹಿವಾಟಿ­ನಲ್ಲೂ ಕಾರಿನ ಸಂಪೂರ್ಣ ಹೊಣೆ ಚಾಲಕರ ಮೇಲೆಯೇ ಇರುತ್ತದೆ.

ಕಮಿಷನ್‌ ಮಾದರಿ ವ್ಯವಹಾರ ಬಹುತೇಕ ಟ್ಯಾಕ್ಸಿ ಸಂಸ್ಥೆಗಳಿಗೆ ಸುಲಭ ಎನಿಸಿದೆ. ಈ ಮಾದರಿಯಲ್ಲಿ ಹೊಣೆ­ಗಾರಿಕೆ ತುಂಬಾ ಕಡಿಮೆ. ಬಂಡವಾಳ ಹೆಚ್ಚು ಹೂಡುವ ಅಗತ್ಯವೂ ಇಲ್ಲ. ಹೆಚ್ಚಿನ ವ್ಯವಹಾರದ ಧಾವಂತಕ್ಕೆ ಬೀಳುವ ಸಂಸ್ಥೆಗಳು ಚಾಲಕನ ಹಿನ್ನೆಲೆ­ಯನ್ನು ಪರಿಶೀಲಿಸುವ ಗೋಜಿಗೆ ಹೋಗದೆ ತಮ್ಮ ಜಾಲದೊಳಗೆ ಬಿಟ್ಟುಕೊಳ್ಳುತ್ತವೆ. ಹಾಗೆ ಮೈಮರೆತ ಪರಿಣಾಮವೇ ನವದೆಹಲಿ ಬೀದಿಯಲ್ಲಿ ನಡೆದ ಅತ್ಯಾಚಾರದ ಘಟನೆ.

ಟ್ಯಾಕ್ಸಿ ಸಂಸ್ಥೆ ಯಾವ ನಿಯಮಾವಳಿ ಅಡಿಯಲ್ಲಿ ನೋಂದಣಿ ಆಗಿದೆ ಎನ್ನುವುದು ಮುಖ್ಯ. ಸಾರಿಗೆ ಇಲಾಖೆ ಹೊರಡಿಸಿದ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸುವುದಾದರೆ ಆ ಸಂಸ್ಥೆ, ಕಂಪೆನಿ ಕಾಯ್ದೆ–1956 ಇಲ್ಲವೆ ಸೊಸೈಟಿ ನೋಂದಣಿ ಕಾಯ್ದೆ–1860 ಇವುಗಳಲ್ಲಿ ಯಾವುದಾದರೂ ಒಂದರ ಅಡಿಯಲ್ಲಿ ನೋಂದಣಿ ಆಗಬೇಕು. ಆಗ ಅಂತಹ ಸಂಸ್ಥೆಯಿಂದ ಪಡೆದ ಯಾವುದೇ ಟ್ಯಾಕ್ಸಿಯಲ್ಲಿ ಏನಾದರೂ ಅನಾಹುತವಾದರೆ ಸಂಪೂರ್ಣ ಜವಾಬ್ದಾರಿ ಸಂಸ್ಥೆಯದ್ದೇ ಆಗಿರುತ್ತದೆ.

ಒಂದು ವೇಳೆ ಈ ಟ್ಯಾಕ್ಸಿ ಸಂಸ್ಥೆ ಆನ್‌ಲೈನ್‌ ಸಂಸ್ಥೆಗಳಂತೆ ಕಾರ್ಯ ನಿರ್ವಹಿಸುವುದಾದರೆ ಫ್ಲಿಪ್‌ಕಾರ್ಟ್‌ ಅಥವಾ ಅಮೆಜಾನ್‌ನಂತೆ ಅವುಗಳ ಹೊಣೆ ಸೀಮಿತ. ಗ್ರಾಹಕರು ಹಾಗೂ ಸೇವೆ ನೀಡುವ ಚಾಲಕರ ನಡುವಿನ ಕೊಂಡಿಯಾಗಿ ಈ ಸಂಸ್ಥೆ ಕೆಲಸ ಮಾಡಲಿದ್ದು, ಸೇವೆಯಲ್ಲಿ ತೊಂದರೆಯಾದರೆ ಚಾಲಕರೇ ಹೊಣೆ ಹೊರ­ಬೇಕಾಗು­ತ್ತದೆ ಎನ್ನುತ್ತಾರೆ ಕಾನೂನು ತಜ್ಞರು. ಕಾನೂನಿನಲ್ಲಿರುವ ಗೊಂದಲ ದೂರ ಮಾಡಲು ವಾಣಿಜ್ಯ ಬಳಕೆಯ ಎಲ್ಲ ಟ್ಯಾಕ್ಸಿಗಳ ಮೇಲೆ ನಿಯಂತ್ರಣಕ್ಕೆ ಅವಕಾಶ ಕಲ್ಪಿಸುವಂತಹ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸುತ್ತಾರೆ.  ಟ್ಯಾಕ್ಸಿಗಳಿಗೆ ಪರವಾನಗಿ ನೀಡು­ವುದು ಸಾರಿಗೆ ಇಲಾಖೆ­ಯಾ­ದರೆ, ಚಾಲಕನ ಹಿನ್ನೆಲೆ ನೋಡ­ಬೇಕಿರು­ವುದು ಪೊಲೀಸ್‌ ಇಲಾಖೆ. ಆದರೆ, ಉಬರ್‌ ಘಟನೆ ವರದಿ ಆಗುವ-­ವರೆಗೆ ಎರಡೂ ಇಲಾಖೆಗಳು ಟ್ಯಾಕ್ಸಿ ಹಾಗೂ ಅವು­ಗಳ ಚಾಲಕರ ಹಿನ್ನೆಲೆ ನೋಡುವ ಕೆಲಸ­ವನ್ನು ಮಾಡಿರಲಿಲ್ಲ. 

‘ಪ್ರತಿಭಾ ಅವರ ಪ್ರಕರಣದ ಬಳಿಕ ಬಹುತೇಕ ಸಂಸ್ಥೆಗಳು ವಾಹನಗಳಲ್ಲಿ ಜಿಪಿಎಸ್‌ ಅಳವಡಿಸಿವೆ. ಸಾಧ್ಯವಾದಷ್ಟು ಎಚ್ಚರಿಕೆ­ಯನ್ನೂ ತೆಗೆದುಕೊಳ್ಳುತ್ತಿವೆ’ ಎಂದು ನಗರದ ಐ.ಟಿ ಕಂಪೆನಿಗಳ ಮಹಿಳಾ ಉದ್ಯೋಗಿಗಳು ಹೇಳುತ್ತಾರೆ.

‘ಸಾಲ ತೀರಿಸುವ, ಇನ್ನಷ್ಟು ಗಳಿಸುವ ಉಮೇದಿಯಲ್ಲಿ ಬಹುತೇಕ ಟ್ಯಾಕ್ಸಿ ಚಾಲಕರು ಹಗಲು–ರಾತ್ರಿ ಎನ್ನದೆ ಅಧಿಕ ಸಮಯ ಕೆಲಸ ಮಾಡುತ್ತಾರೆ. ಆ ಆಯಾಸದ ಜತೆಗೆ ಸಂಚಾರ ದಟ್ಟಣೆಯೂ ಅವರ ಮೇಲೆ ವಿಪರೀತ ಒತ್ತಡ ಹಾಕುತ್ತದೆ. ಅದನ್ನೆಲ್ಲ ಮರೆಯಲು ಕೆಲವರು ಮಾದಕ ವ್ಯಸನಕ್ಕೆ ತುತ್ತಾಗುತ್ತಾರೆ. ಮಾದಕ ವಸ್ತು ಸೇವನೆಯಿಂದ ವಿವೇಚನೆ ಕೈಕೊಡುತ್ತದೆ. ಅಂಥ ಸಂದರ್ಭದಲ್ಲೇ ಎಡವಟ್ಟುಗಳು ಆಗುವುದು ಹೆಚ್ಚು. ಹೀಗೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಅಂಶಗಳು ಒಂದರೊಳಗೊಂದು ಹಾಸುಹೊಕ್ಕಾಗಿದ್ದು ಸಮಸ್ಯೆ ಸಂಕೀರ್ಣವಾಗಿದೆ’ ಎನ್ನುತ್ತಾರೆ ನಿಮ್ಹಾನ್ಸ್‌ ವೈದ್ಯೆ ಡಾ. ಪ್ರತಿಮಾ ಮೂರ್ತಿ.

ಪ್ರಯಾಣಿಕರಿಗೆ ತುಂಬಾ ಅನುಕೂಲ ಎನಿಸಿರುವ ಟ್ಯಾಕ್ಸಿಗಳನ್ನು ನಿರಾಕರಿಸುವಷ್ಟು ಸಮೂಹ ಸಾರಿಗೆ ವ್ಯವಸ್ಥೆ ದೇಶದಲ್ಲಿ ಬೆಳೆದಿಲ್ಲ. ರೇಡಿಯೊ ಟ್ಯಾಕ್ಸಿಗಳ ಮೇಲೆ ಸದ್ಯ ಬೇಕಿರುವುದು ನಿಯಂತ್ರಣವೇ ಹೊರತು ನಿರ್ಬಂಧವಲ್ಲ ಎಂಬುದು ಸಾರಿಗೆ ತಜ್ಞರ ಸ್ಪಷ್ಟವಾದ ಅಭಿಪ್ರಾಯವಾಗಿದೆ. 

ಹೀಗಿದೆ ಸುರಕ್ಷಾ ಕ್ರಮ
ಸಿಟಿ ಟ್ಯಾಕ್ಸಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡವರು ಪಾಲಿಸಬೇಕಾದ ಪ್ರಯಾಣಿಕರ ಸುರಕ್ಷತಾ ಕ್ರಮಗಳು

* ನೋಂದಣಿ ಮಾಡಿಸಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಲಿಖಿತವಾಗಿ ತಿಳಿಸದೆ ವ್ಯವಹಾರದ ಪ್ರಧಾನ ಕೇಂದ್ರವನ್ನು ಬದಲಾವಣೆ ಮಾಡುವಂತಿಲ್ಲ.
* ಪರವಾನಗಿ ಪತ್ರದ ಅಸಲಿ ಪ್ರತಿಯನ್ನು ವಾಹನದಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು.
* ದಿನದ 24 ಗಂಟೆಯೂ ನಿರಂತರವಾಗಿ ಗ್ರಾಹಕರಿಗೆ ಸೇವೆ ಒದಗಿಸಬೇಕು.
* ಎಲ್ಲ ವಾಹನಗಳಿಗೂ ದೂರವಾಣಿ ಅಥವಾ ರೇಡಿಯೊ ಸಾಧನದ ಮೂಲಕ ಕಂಪೆನಿ ಜೊತೆ ಸಂಪರ್ಕ ಕಲ್ಪಿಸಬೇಕು. ವಾಹನಗಳ ಚಲನವಲನದ ಮೇಲೆ ನಿಗಾ ಇರಿಸಲು 24 ಗಂಟೆ ಕಾರ್ಯ ನಿರ್ವಹಿಸುವ ನಿಯಂತ್ರಣ ಕೊಠಡಿ ಹೊಂದಿರಬೇಕು.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಗಡಿಯಿಂದ 25 ಕಿ.ಮೀ. ದೂರದವರೆಗೆ ಮಾತ್ರ ಸೇವೆ ಒದಗಿಸಲು ಅವಕಾಶ.
* ಅಧಿಸೂಚಿತ ಅಧಿಕಾರಿಗಳು ನಿಗದಿಪಡಿಸುವ ಸ್ಥಳಗಳಲ್ಲೇ ವಾಹನ ನಿಲ್ದಾಣಗಳು ಇರಬೇಕು.
* ಎಲ್ಲ ವಾಹನಗಳಿಗೂ ಅನುಮೋದನೆ ಇರುವ ಡಿಜಿಟಲ್ ಮೀಟರ್ ಅಳವಡಿಕೆ ಕಡ್ಡಾಯ.
* ಪ್ರತಿ ವಾಹನದಲ್ಲಿ ಚಾಲಕ ಸೇರಿದಂತೆ ಗರಿಷ್ಠ ಐದು ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಬೇಕು.
* ವಾಹನದ ಮೇಲೆ ಸ್ಪಷ್ಟವಾಗಿ ಗೋಚರಿಸುವಂತೆ ‘ಸಿಟಿ ಟ್ಯಾಕ್ಸಿ’ ಎಂಬ ಫಲಕ ಅಳವಡಿಸಬೇಕು.
* ಆರು ವರ್ಷಗಳ ಅವಧಿ ಪೂರೈಸುವ ವಾಹನದ ‘ಸಿಟಿ ಟ್ಯಾಕ್ಸಿ’ ಪರವಾನಗಿ ತಾನಾಗಿಯೇ ರದ್ದಾಗುತ್ತದೆ.
* ‘ಸಿಟಿ ಟ್ಯಾಕ್ಸಿ’ ಪರವಾನಗಿಯನ್ನು ಒಂದು ವಾಹನದ ಬದಲಿಗೆ ಮತ್ತೊಂದು ವಾಹನಕ್ಕೆ ವರ್ಗಾವಣೆ ಮಾಡುವಾಗ, ಬದಲಾಗುವ ವಾಹನವು ಒಂದು ವರ್ಷಕ್ಕಿಂತ ಹೆಚ್ಚು ಹಳೆಯದಾಗಿರಬಾರದು.
* ಮುಂಗಡವಾಗಿ ವಾಹನ ಕಾಯ್ದಿರಿಸಲು ಅವಕಾಶವಾಗು­ವಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು.
* ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿ ಮಾಡಿದ ರೀತಿಯಲ್ಲಿ ವಾಹನಗಳು ಮತ್ತು ನಿಯಂತ್ರಣ ಕೊಠಡಿ ನಡುವೆ ಸಂಪರ್ಕ ಕಲ್ಪಿಸುವ ಸಂವಹನ ಸಾಧನಗಳನ್ನು ಅಳವಡಿಸಬೇಕು.
* ವಾಹನವು ವಿಳಂಬ ಇಲ್ಲದೆ ಗ್ರಾಹಕರನ್ನು ತಲುಪಬೇಕು.
* ಗ್ರಾಹಕರು ವಾಹನದಲ್ಲಿ ಕುಳಿತ ಬಳಿಕ ಮೀಟರ್‌ಗೆ ಚಾಲನೆ ನೀಡಬೇಕು.
* ಸಾರಿಗೆ ಪ್ರಾಧಿಕಾರ ನಿಗದಿಪಡಿಸಿದ ದರದ ಹೊರತಾಗಿ ಸೇವಾ ಶುಲ್ಕ ಸೇರಿದಂತೆ ಯಾವುದೇ ಹೆಚ್ಚುವರಿ ಮೊತ್ತ ವಸೂಲಿ ಮಾಡುವಂತಿಲ್ಲ.
* ಬಣ್ಣದ ಗಾಜು, ಟಿಂಟೆಡ್ ಗಾಜು ಅಳವಡಿಕೆ ನಿಷಿದ್ಧ.
* ಚಾಲಕರು ಸಾರಿಗೆ ಇಲಾಖೆ ನಿಗದಿಪಡಿಸಿದ ಬಣ್ಣದ ಸಮವಸ್ತ್ರ ಧರಿಸಬೇಕು.
* ಚಾಲನಾ ಪರವಾನಗಿ, ಗುರುತಿನ ವಿವರವನ್ನು ವಾಹನದಲ್ಲಿ ಪ್ರದರ್ಶಿಸಬೇಕು.
* ವಾಹನಕ್ಕೆ ಲಗೇಜು ಕ್ಯಾರಿಯರ್ ಅಳವಡಿಸಿರಬೇಕು.
* ಚಾಲಕರು ಗ್ರಾಹಕರ ಜೊತೆ ಸೌಜನ್ಯದಿಂದ ವರ್ತಿಸಬೇಕು.
* ಅಸಭ್ಯವಾಗಿ ವರ್ತಿಸುವ ಆರೋಪದ ಮೇಲೆ ದೂರು ಬಂದರೆ, ಮೊದಲ ಎರಡು ಬಾರಿ ಚಾಲನಾ ಪರವಾನಗಿ ಅಮಾನತು, ಮೂರನೇ ಬಾರಿ ಪರವಾನಗಿ ರದ್ದು.
* ಚಾಲಕರ ನೇಮಕಾತಿಯಲ್ಲಿ ಗಮನಿಸಬೇಕಾದ ಅಂಶಗಳು– ಚಾಲನಾ ಪರವಾನಗಿ, ಬ್ಯಾಡ್ಜ್ ಹೊಂದಿರಬೇಕು. ಲಘು ವಾಹನ ಚಾಲನೆಯಲ್ಲಿ ಕನಿಷ್ಠ ಎರಡು ವರ್ಷ ಅನುಭವ ಇರಬೇಕು. ಕನ್ನಡ, ಇಂಗ್ಲಿಷ್‌ನಲ್ಲಿ ವ್ಯವಹರಿಸಬೇಕು. ಹತ್ತು ವರ್ಷದಿಂದ ರಾಜ್ಯದ ನಿವಾಸಿ ಆಗಿರಬೇಕು. ಕನಿಷ್ಠ ಎಸ್ಸೆಸ್ಸೆಲ್ಸಿ ಪಾಸಾಗಿದ್ದು, ಕರ್ನಾಟಕ ಮೋಟಾರು ವಾಹನ ನಿಯಮಗಳ ಸೆಕ್ಷನ್ 13 ಮತ್ತು 16ರಲ್ಲಿನ ಅರ್ಹತೆ ಹೊಂದಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT