ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಇದ್ದರೆ ಅವಧಿ ವಿಸ್ತರಣೆ

Last Updated 6 ಮೇ 2016, 9:34 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಯಾಣಿಕರ ಮನವಿ ಮತ್ತು ಬೇಡಿಕೆ ಆಧರಿಸಿ ಮೆಟ್ರೊ ರೈಲಿನ ಸಂಚಾರದ ಅವಧಿಯನ್ನು ವಿಸ್ತರಿಸಲು ಸಿದ್ಧ ಇರುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿದೆ.

ಕಳೆದ ಏಪ್ರಿಲ್ 30ರಂದು ಸಂಚಾರಕ್ಕೆ ಮುಕ್ತವಾಗಿರುವ ಪೂರ್ವ– ಪಶ್ಚಿಮ ಕಾರಿಡಾರ್‌ (ಬೈಯಪ್ಪನಹಳ್ಳಿ–ನಾಯಂಡಹಳ್ಳಿ) ಮಾರ್ಗದಲ್ಲಿ ನಿತ್ಯ ಅಂದಾಜು 88 ಸಾವಿರ ಜನರು ಪ್ರಯಾಣ ಬೆಳೆಸುತ್ತಿದ್ದಾರೆ.

ಬೈಯಪ್ಪನಹಳ್ಳಿ ಬಳಿಯ ವೈಟ್‌ಫೀಲ್ಡ್‌ ನಲ್ಲಿ ಹಲವು ಸಾಫ್ಟ್‌ವೇರ್‌ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿರುವ ಕಾರಣ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಮೆಟ್ರೊದಲ್ಲಿ ಹೆಚ್ಚಾಗಿ ಸಂಚರಿಸುತ್ತಿದ್ದಾರೆ. ಈ ಕಂಪೆನಿಗಳಿಂದ ಅಥವಾ ಅಲ್ಲಿನ ಸಿಬ್ಬಂದಿಯಿಂದ ಅಧಿಕೃತವಾಗಿ ಮೆಟ್ರೊ ಅವಧಿ ವಿಸ್ತರಿಸಲು ಮನವಿ ಬಂದರೆ ಪರಿಶೀಲಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಮುಖ್ಯ ವಕ್ತಾರ ಯು.ಎ. ವಸಂತರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸ್ತುತ ಈ ಮಾರ್ಗದಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರ ವರೆಗೆ ಮೆಟ್ರೊ ಸಂಚಾರ ನಡೆಸುತ್ತಿದೆ. ಹೆಚ್ಚಿನ ಜನರಿಂದ ಬೇಡಿಕೆ ಬಂದರೆ ರಾತ್ರಿ 11 ಗಂಟೆಯವರೆಗೆ ಅವಧಿ ವಿಸ್ತರಿಸಲಾಗು­ವುದು’ ಎಂದರು.

ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ಒಕ್ಕೂಟದಿಂದ ಅಧಿಕೃತವಾಗಿ  ಮನವಿ ಬಂದಿದ್ದರಿಂದ ಅಲ್ಲಿ, ರಾತ್ರಿ 11ರ ವರೆಗೆ ಮೆಟ್ರೊ ರೈಲು ಸಂಚಾರಿಸುತ್ತಿದೆ. ಇದರಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಗಾರ್ಮೆಂಟ್ಸ್‌ ನೌಕರರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಸಂಚಾರದ ಅವಧಿ ವಿಸ್ತರಣೆ ಆಗಬೇಕು ಎಂದರೆ ಮೆಟ್ರೊದ ಪ್ರತಿ ಬೋಗಿಯಲ್ಲಿ ಕನಿಷ್ಠ 150ರಿಂದ 175 ಮಂದಿ ಪ್ರಯಾಣಿಸಬೇಕು ಎಂಬ ಷರತ್ತು ಇದೆ. ಸಾಮಾನ್ಯವಾಗಿ ಪ್ರತಿ ಬೋಗಿಯಲ್ಲಿ 300ರಿಂದ 350 ಜನರು ಪ್ರಯಾಣಿಸಬಹುದು. ಅದರಲ್ಲಿ ಅರ್ಧದಷ್ಟಾದರೂ ಪ್ರಯಾಣಿಸುವು­ದಾದರೆ ಮೆಟ್ರೊ ಸಂಚಾರದ ಅವಧಿಯನ್ನು ವಿಸ್ತರಿಸಬಹುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT