ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲಿಯೇ ಎದ್ದು ಕೆರೆ ನುಂಗಿದಾಗ...

Last Updated 10 ನವೆಂಬರ್ 2014, 19:49 IST
ಅಕ್ಷರ ಗಾತ್ರ

ಬೆಂಗಳೂರು: ಇದು ಬೇಲಿಯೇ ಎದ್ದು ಕೆರೆಯನ್ನು ನುಂಗಿದ ಕಥೆ. ಸಾರ್ವಜನಿಕ ಕೆರೆಯನ್ನು ರಕ್ಷಿಸುವ ಹೊಣೆ ಹೊತ್ತಿರುವ ಕಂದಾಯ ಇಲಾಖೆಯು ಕೆರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಬರೆದುಕೊಟ್ಟರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅದೇ ಕೆರೆಯ ಭಾಗವನ್ನು ರಸ್ತೆ ನಿರ್ಮಿಸಲು ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್‌) ಮೂಲಕ ಸ್ವಾಧೀನ ಮಾಡಿಕೊಂಡ ಕಥೆ.
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಬಾಗಲಗುಂಟೆ ಗ್ರಾಮದ ಸರ್ವೆ ನಂ. 83ರಲ್ಲಿ ಇರುವುದು ಕೆರೆ ಎಂಬುದನ್ನು ಗ್ರಾಮದ ನಕ್ಷೆ ಯಾವ ಸಂಶಯಕ್ಕೂ ಎಡೆ ಇಲ್ಲದಂತೆ ಎತ್ತಿ ತೋರುತ್ತದೆ.

ಬಾಗಲಗುಂಟೆ ಗ್ರಾಮದಲ್ಲಿ ಕೆರೆಯಿತ್ತು ಎನ್ನುವುದಕ್ಕೆ ಅದರಲ್ಲೇ ಈಜು ಕಲಿತ ಮುನಿನಂಜಪ್ಪ, ಬಿ.ಕೆ. ರಾಜಣ್ಣ ಅವರಂತಹ ನೂರಾರು ಜನ ಸಾಕ್ಷಿಗಳು ಇದ್ದಾರೆ. ಈ ಕೆರೆಯ ಹುಲ್ಲುಗಾವಲಿನಲ್ಲಿ ದನ–ಕರುಗಳು ಮೇಯುತ್ತಿದ್ದವು. ಎಮ್ಮೆಗಳು ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಲು ಇಲ್ಲಿನ ನೀರನ್ನೇ ಬಳಸುತ್ತಿದ್ದವು. ನೀರಾವರಿ ಸೌಲಭ್ಯವನ್ನು ಸಹ ಈ ಕೆರೆ ಒದಗಿಸಿತ್ತು. ಆದರೆ, ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಕಂದಾಯ ಇಲಾಖೆ ಕೆರೆಯನ್ನೇ ಪರಭಾರೆ ಮಾಡಿಬಿಟ್ಟಿದೆ.

ಕೆರೆಯು ಒಟ್ಟು 11.04 ಎಕರೆ ಪ್ರದೇಶದಲ್ಲಿ ವಿಸ್ತರಿಸಿತ್ತು. ನಕಲಿ ದಾಖಲೆ ಸೃಷ್ಟಿಸಿ ಅದರ 8 ಎಕರೆ, 6 ಗುಂಟೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಲಪಟಾಯಿಸಿದ್ದಾರೆ ಎಂದು ಸ್ವತಃ ಕಂದಾಯ ಇಲಾಖೆ ಹತ್ತು ವರ್ಷಗಳಷ್ಟು ಹಿಂದೆಯೇ ಒಪ್ಪಿಕೊಂಡಿದೆ.
ವಿಧಾನಸಭೆ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗೆ ಆಗಿನ ಕೈಗಾರಿಕೆ ಸಚಿವ ಪಿಜಿಆರ್‌ ಸಿಂಧ್ಯ, ಭೂಗಳ್ಳರು ಈ ಕೆರೆಯನ್ನು ಲಪಟಾಯಿಸಿರುವುದು ನಿಜ. ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಲಿಖಿತ ಉತ್ತರ ನೀಡಿದ್ದರು. ವಿಧಾನಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದು ಹತ್ತು ವರ್ಷಗಳಾದರೂ ಕೆರೆ ಪ್ರದೇಶ ಮಾತ್ರ ಇದುವರೆಗೆ ಖಾಸಗಿಯವರ ಸ್ವಾಧೀನದಲ್ಲೇ ಇದೆ.

ಬಾಗಲಗುಂಟೆ ಕೆರೆ ಖಾಸಗಿಯವರ ಪಾಲಾದ ಘಟನೆಗೆ ಬರೊಬ್ಬರಿ 40 ವರ್ಷಗಳಷ್ಟು ಸುದೀರ್ಘ ಚರಿತ್ರೆ ಇದೆ.  ಇನಾಮ್‌ ನಿಷೇಧ ಕಾಯ್ದೆ ಅಡಿಯಲ್ಲಿ ಈ ಕೆರೆ ಭೂಮಿಯನ್ನು ಮಂಜೂರು ಮಾಡುವಂತೆ ಮೂವರು ಪ್ರತ್ಯೇಕ ಪ್ರಕರಣಗಳನ್ನು (ಸಂಖ್ಯೆ: 2/59–60, 5/59–60 ಮತ್ತು 6/59–60) ದಾಖಲಿಸಿದ್ದರು.

‘ಇನಾಮ್‌ ನಿಷೇಧ ಕಾಯ್ದೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಹೊರಡಿಸಿದೆ ಎನ್ನಲಾದ ನಕಲಿ ಆದೇಶದ ಪ್ರತಿಗಳನ್ನು 1974ರಲ್ಲಿ ದಾಖಲೆಯಾಗಿ ನೀಡಿ, ಆ ವ್ಯಕ್ತಿಗಳು ಕೆರೆ ಪ್ರದೇಶವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು’ ಎಂದು ಈ ಪ್ರಕರಣವನ್ನು ಹೈಕೋರ್ಟ್‌ಗೆ ಒಯ್ದಿರುವ ಬಾಗಲಗುಂಟೆ ಗ್ರಾಮ ನಾಗರಿಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಹೇಳುತ್ತಾರೆ.

‘ಅರ್ಜಿದಾರರು ವಾದಿಸುವಂತೆ ಅದು ಇನಾಮ್‌ ಭೂಮಿಯೋ, ಹಿಡುವಳಿ ಪ್ರದೇಶವೋ, ಸರ್ಕಾರಿ ಭೂಮಿಯೋ ಅಥವಾ ಕೆರೆಯೋ ಯಾವುದನ್ನೂ ಪರಿಶೀಲಿಸದೆ ಕಂದಾಯ ಅಧಿಕಾರಿಗಳು ಕೆರೆಯ ಪಾತ್ರವನ್ನೇ ಅವರ ಹೆಸರಿಗೆ ಬರೆದುಕೊಟ್ಟರು. ಸ್ಥಳ ಇಲ್ಲವೆ ದಾಖಲೆ ಪರಿಶೀಲಿಸುವ ಗೊಡವೆಗೂ ಹೋಗಲಿಲ್ಲ. ಕೆರೆಯನ್ನು ಪರಭಾರೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಆಗಿನ ವಿಶೇಷ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಈ ಲೋಪ ಎಸಗಿದರು’ ಎಂದು ಅವರು ದೂರುತ್ತಾರೆ.

ವಿಶೇಷ ಜಿಲ್ಲಾಧಿಕಾರಿಗಳು ಆ ಮೂವರು ವ್ಯಕ್ತಿಗಳಿಗೆ ಒಟ್ಟು 8 ಎಕರೆ 6 ಗುಂಟೆ   ಭೂಮಿಯನ್ನು ಮಂಜೂರು ಮಾಡಿದ್ದರು. ಹಿಂದಿದ್ದ ಸರ್ವೆ ಸಂಖ್ಯೆ 83ಕ್ಕೆ ಬದಲಾಗಿ 128, 129 ಹಾಗೂ 130 ಎಂಬ ಹೊಸ ಸರ್ವೆ ಸಂಖ್ಯೆಗಳನ್ನು ಅವುಗಳಿಗೆ ನೀಡಲಾಗಿತ್ತು. ಆ ಮೂವರೂ ತಮಗೆ ಮಂಜೂರಾಗಿದ್ದ ಭೂಮಿಯನ್ನು ಮತ್ತೊಬ್ಬ ವ್ಯಕ್ತಿಗೆ 1979ರಲ್ಲಿ ಮಾರಾಟ ಮಾಡಿದ್ದರು.

ಆ ಭೂಮಿಯನ್ನು ನಾಲ್ವರು ವ್ಯಕ್ತಿಗಳು ಮರು ಖರೀದಿ ಮಾಡಿದ್ದರು. ನಿಯಮಿತ ಅಂತರದಲ್ಲಿ ಈ ಭೂಮಿಯ ಮಾಲೀಕತ್ವ ಹತ್ತಾರು ಹೆಸರುಗಳಿಗೆ ಹೀಗೆ ವರ್ಗಾವಣೆ ಆಗುತ್ತಾ ಹೋಯಿತು. ಈಗ ಐವರು ವ್ಯಕ್ತಿಗಳ ಹೆಸರಿಗೆ ಕೆರೆ ಪ್ರದೇಶವನ್ನು ಬರೆದು ಕೊಡಲಾಗಿದೆ. ಅಲ್ಲಿನ 8 ಎಕರೆ, 6 ಗುಂಟೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸುತ್ತಿದ್ದು, ಈ ಪ್ರಕ್ರಿಯೆ ವಿರುದ್ಧ ಹೈಕೋರ್ಟ್‌ ಮೊರೆ ಹೋಗಲಾಗಿದೆ ಎಂದು ಕೆರೆ ಸಂರಕ್ಷಣೆ ಹೋರಾಟದಲ್ಲಿ ತೊಡಗಿದ ಕಾರ್ಯಕರ್ತರು ವಿವರಿಸುತ್ತಾರೆ.

‘ಈ ಭೂಮಿಯಲ್ಲಿ ಒಂದು ಭಾಗವನ್ನು ಸ್ಥಳೀಯ ವ್ಯಕ್ತಿಯೊಬ್ಬರು  ಖರೀದಿಸಿದ್ದು, ಬಡಾವಣೆ ನಿರ್ಮಾಣಕ್ಕಾಗಿ ಅಗತ್ಯ ಸಿದ್ಧತೆಗಳನ್ನು ನಡೆಸಿದ್ದಾರೆ’ ಎಂದು ಅವರು ಆರೋಪಿಸುತ್ತಾರೆ. ‘ಭೂ ಪರಿವರ್ತನೆಗೆ ಅರ್ಜಿ ಹಾಕಿದ್ದಲ್ಲದೆ, ಕೆರೆ ಪಾತ್ರದಲ್ಲಿ ಕಟ್ಟಡ ತ್ಯಾಜ್ಯವನ್ನು ಸುರಿಯುವ ಮೂಲಕ ನಿವೇಶನಗಳನ್ನು ಮಾಡಲು ತಯಾರಿ ನಡೆಸಲಾಗಿದೆ’ ಎಂದು ಅಕ್ರಮಗಳ ಮೇಲೆ ಬೆಳಕು ಚೆಲ್ಲುತ್ತಾರೆ.
‘ನೈಸರ್ಗಿಕ ಪರಿಸರ, ಅರಣ್ಯ, ಕೆರೆ, ನದಿ, ಜೀವ ವೈವಿಧ್ಯವನ್ನು ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಕೆರೆಯ ಕತ್ತು ಹಿಚುಕಲು ನಡೆದ ಪ್ರಯತ್ನಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಗಮನ ಸೆಳೆದರೂ ಯಾರೊಬ್ಬರೂ ಅಕ್ರಮ ತಡೆಗಟ್ಟಲು ಮುಂದಾಗಲಿಲ್ಲ’ ಎಂದು ದೂರುತ್ತಾರೆ.

‘ಬಾಗಲಗುಂಟೆ ಗ್ರಾಮದಲ್ಲಿ ಸದ್ಯ ಪ್ರತಿ ಎಕರೆಗೆ ಮಾರುಕಟ್ಟೆ ಬೆಲೆ ರೂ. 10 ಕೋಟಿಯಷ್ಟಿದೆ. ರೂ. 100 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂಮಿ ಕಣ್ಣ ಮುಂದೆಯೇ ಖಾಸಗಿಯವರ ಪಾಲಾಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸೋಜಿಗವಾಗಿದೆ’ ಎಂದು ಹೇಳುತ್ತಾರೆ.

ದಶಕಗಳ ಹಿಂದೆಯೇ ಭೂಮಿ ಪರಭಾರೆ ಆಗಿರುವ ಮೂರೂ ಪ್ರಕರಣಗಳಿಗೆ ಸಂಬಂಧಿಸಿದಂತೆ 2006ರಲ್ಲಿ ತನಿಖೆ ನಡೆಸಿದ್ದ ಆಗಿನ ವಿಶೇಷ ಜಿಲ್ಲಾಧಿಕಾರಿಗಳು ವರದಿ ನೀಡಿದ್ದರು. ನಕಲಿ ದಾಖಲೆ ಸೃಷ್ಟಿಸಿ ಇನಾಮ್‌ ನಿಷೇಧ ಕಾಯ್ದೆ ಅಡಿಯಲ್ಲಿ ಸರ್ಕಾರಿ ಭೂಮಿ ಮಂಜೂರು ಮಾಡಿಸಿಕೊಳ್ಳಲಾಗಿದ್ದು, ಅಲ್ಲಿ ಕೆರೆಯಿತ್ತು ಎನ್ನುವುದು ಗ್ರಾಮ ನಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ ಮಂಜೂರು ಮಾಡಿದ ಭೂಮಿಯನ್ನು ವಾಪಸ್‌ ಪಡೆಯಬೇಕು ಎಂದು ವಿವರಿಸಿದ್ದರು. ಕಂದಾಯ ಇಲಾಖೆಯು ಈ ವರದಿ ಕುರಿತಂತೆ ಜಾಣಮೌನ ವಹಿಸಿದೆ.
ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ ಸಂದರ್ಭದಲ್ಲಿ ಹೈಕೋರ್ಟ್‌ ಕೆರೆ ಇರುವ ಪ್ರದೇಶ ಇನಾಮ್‌ ಭೂಮಿಯಾಗಿದ್ದರೂ ಅದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.

ಬಿಬಿಎಂಪಿ ಸಹ ಈ ಅಕ್ರಮ ವ್ಯವಹಾರದಲ್ಲಿ ಪಾಲುದಾರನಾಗಿದೆ. ವಿಜಯಲಕ್ಷ್ಮಿ ಬಡಾವಣೆಯಿಂದ ಮಂಜುನಾಥನಗರಕ್ಕೆ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ವ್ಯಕ್ತಿಯೊಬ್ಬರಿಗೆ ಟಿಡಿಆರ್‌ ನೀಡುವ ಮೂಲಕ ಕೆರೆಯ ಪಾತ್ರವನ್ನೇ ಅದು ಖರೀದಿ ಮಾಡಿದೆ. 2012ರಲ್ಲೇ ಈ ಒಪ್ಪಂದವನ್ನು ಮಾಡಿಕೊಳ್ಳ­ಲಾಗಿದ್ದು, ರೂ. 49.85 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ­ಯನ್ನೂ ಮಾಡಲಾಗಿದೆ. ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಅಧಿಕಾರಿಗಳು ಇಲ್ಲಿ ಮನೆ ಕಟ್ಟಿಕೊಂಡಿರುವುದು ಕಾಮಗಾರಿ ಅಷ್ಟೊಂದು ಆತುರ­ದಿಂದ ನಡೆಯಲು ಕಾರಣವಾಗಿದೆ. ಹಗರಣದ ಹುತ್ತಕ್ಕೆ  ಕೈ ಹಾಕಿದಷ್ಟೂ ಇಂತಹ ಬಗೆ, ಬಗೆಯ ‘ಹಾವು’ಗಳು ಸಿಗುತ್ತಲೇ ಹೋಗುತ್ತವೆ.

ಕೆರೆಯ ಪಾತ್ರದಲ್ಲೇ ಹಲವು ಮನೆಗಳು ಎದ್ದಿವೆ. ಈಗ ಶಾಲೆಯೊಂದನ್ನು ಸಹ ನಿರ್ಮಿಸಲಾಗಿದೆ. ಅಲ್ಲೊಂದು, ಇಲ್ಲೊಂದು ಕಟ್ಟಡ ಏಳುತ್ತಲೇ ಇವೆ. ಮನೆಗಳ ನಿರ್ಮಾಣಕ್ಕೆ ಪಾಯವನ್ನೂ ತೋಡಲಾಗುತ್ತಿದೆ. ಕೆರೆಯಲ್ಲಿ ನೀರು ನಿಲ್ಲದಂತೆ ಈ ಹಿಂದೆಯೇ ಸಮತಟ್ಟು ಮಾಡಲಾಗಿದೆ. ಜಲಮೂಲವನ್ನು ಕಬಳಿಸುವ ಯತ್ನಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆ ಏಕೆ ಸುಮ್ಮನಿದೆ ಎಂಬುದು ಬಾಗಲಗುಂಟೆ ನಿವಾಸಿಗಳ ಪ್ರಶ್ನೆಯಾಗಿದೆ.

ಬಾಗಲಗುಂಟೆ ಭಗೀರಥರು
ಚಿಕ್ಕವರಿದ್ದಾಗ ಈಜಾಡಿದ ಕೆರೆ ಕಣ್ಣ ಮುಂದೆಯೇ ಭೂಗಳ್ಳರ ಪಾಲಾಗುತ್ತಿದೆ ಎನ್ನುವುದನ್ನು ಸಹಿಸಿಕೊಳ್ಳಲು ಆಗದ ಬಾಗಲಗುಂಟೆ ಗ್ರಾಮದ ಪ್ರಜ್ಞಾವಂತ ನಾಗ­ರಿಕರ ತಂಡ ಕೆರೆ ಉಳಿಸಲು ದಶಕಗಳಿಂದ ಹೋರಾಟ ನಡೆಸಿದೆ. ಈ ಹೋರಾಟದ ನೇತೃತ್ವ­ವನ್ನು ವಹಿಸಿದ್ದು ಬಾಗಲಗುಂಟೆ ಗ್ರಾಮ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಜಿ. ಅನಂತ್‌.

ಸ್ವತಃ ಕಾನೂನು ವಿದ್ಯಾರ್ಥಿ ಆಗಿರುವ ಅವರು, ಕೆರೆಯನ್ನು ಸಂರಕ್ಷಿಸಲು ವೇದಿಕೆ ಪರವಾಗಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರ ಕಚೇರಿಗಳಿಗೆ ಓಡಾಡಿ ಒತ್ತು­ವರಿ ತಡೆಯುವಂತೆ ಮನವಿ ಅರ್ಪಿಸಿದರು. ಮಾಹಿತಿ ಹಕ್ಕು ಕಾಯ್ದೆ ಮೂಲಕ ಕೆರೆಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆ ಸಂಗ್ರಹಿಸಿದರು. ಬಡಾವಣೆ ನಿರ್ಮಾಣದ ಯತ್ನಗಳು ನಡೆದಾಗಲೆಲ್ಲ ಅದನ್ನು ತಡೆಯಲು ಹೋರಾಟ ನಡೆಸಿದರು. ಕಂದಾಯ ಇಲಾಖೆಯಿಂದ ಸೂಕ್ತ ಸ್ಪಂದನೆ ಸಿಗದಿದ್ದಾಗ ಹೈಕೋರ್ಟ್‌ಗೆ ಸಾರ್ವ­ಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.

ಹೈಕೋರ್ಟ್‌ ಸಹ ಕೆರೆ ಉಳಿಸಲು ಕಳ­ಕಳಿ ವ್ಯಕ್ತ­ಪಡಿಸಿತು. ಅಷ್ಟರಮಟ್ಟಿಗೆ ಅನಂತ್‌ ಅವರ ಹೋರಾಟ ಯಶಸ್ವಿಯೂ ಆಯಿತು.
‘ಕೆರೆಯ ಪಾತ್ರ ನಮ್ಮದು ಎನ್ನುವ ಭ್ರಮೆಯಲ್ಲಿರುವ ಕೆಲವರು ನಿವೇಶನ ನಿರ್ಮಿಸಿ ಮಾರಾಟ ಮಾಡಲು ತವಕಿಸುತ್ತಿದ್ದಾರೆ. ಹಲವು ಜನ ಈಗಾಗಲೇ ದುಡ್ಡು ನೀಡಿ­ರುವ ಮಾಹಿತಿಯೂ ಇದೆ. ಹೈಕೋರ್ಟ್‌ನ ಅಂತಿಮ ಆದೇಶ ಹೊರಬಿದ್ದ ಮೇಲೆ ಇಂದಲ್ಲ ನಾಳೆ ಕೆರೆಯಲ್ಲಿ ತಲೆ ಎತ್ತಿದ ಕಟ್ಟಡಗಳು ನೆಲಸಮ ಆಗಲಿವೆ. ಹೀಗಾಗಿ ಸಾರ್ವಜನಿಕರು ಜಾಗೃತವಾಗಿರಬೇಕು’ ಎಂಬುದು ಅನಂತ್‌ ಸಲಹೆ.
* * *
ಕೆರೆಯ ಪೂರ್ವಾಪರ
ಹೆಸರು: ಬಾಗಲಗುಂಟೆ ಹೊಸ ಕೆರೆ
ವಿಸ್ತೀರ್ಣ: 11 ಎಕರೆ, 4 ಗುಂಟೆ
ಗ್ರಾಮ ಸರ್ವೆ ಸಂಖ್ಯೆ: 83
ಅತಿಕ್ರಮಿತ ಪ್ರದೇಶ: 8 ಎಕರೆ, 6 ಗುಂಟೆ
ಅತಿಕ್ರಮಿತ ಪ್ರದೇಶದ ಮಾರುಕಟ್ಟೆ ಮೌಲ್ಯ: ರೂ.100 ಕೋಟಿ
* * *

ಇಲ್ಲಿವೆ ಬಿಬಿಎಂಪಿ ಅಧಿಕಾರಿಗಳ ಮನೆ

ನಾನು ಶೇಷಾದ್ರಿಪುರ ಕಾಲೇಜಿನ ಕಾನೂನು ವಿದ್ಯಾರ್ಥಿ. ನನ್ನ ಹೋರಾಟಕ್ಕೆ ಸ್ಫೂರ್ತಿ ನಮ್ಮ ತಂದೆ ಗುರುಸಿದ್ದಪ್ಪ. ಅವರು ಸರ್ಕಾರಿ ಜಮೀನು ಒತ್ತುವರಿ ಮಾಡಿದವರ ವಿರುದ್ಧ ಹೋರಾಟ ನಡೆಸಿದ್ದರು. ಆ ಹೋರಾಟವನ್ನು ನಾನು ಮುಂದುವರೆಸಿಕೊಂಡು ಹೋಗುತ್ತಿರುವೆ. ಬಾಗಲಗುಂಟೆಯಲ್ಲಿ ಒಟ್ಟು ಎರಡು ಕೆರೆಗಳಿವೆ. ಒಂದು ಸರ್ವೆ ನಂ. ೧೧೩ ರಲ್ಲಿರುವ (೧೩ ಎಕರೆ ೩೧ ಗುಂಟೆ) ಹಳೇಕೆರೆ; ಇನ್ನೊಂದು ಸರ್ವೆ ನಂ ೮೩ ರಲ್ಲಿರುವ ಹೊಸಕೆರೆ.

ಏನಿಲ್ಲ ಅಂದರೂ ಸುಮಾರು ರೂ. ೧೦೦ ಕೋಟಿ ಆಸ್ತಿ. ನಾವೆಲ್ಲ ಚಿಕ್ಕವರಿದ್ದಾಗ ಇದೇ ಹೊಸಕೆರೆಯಲ್ಲಿ ಈಜುವುದನ್ನು ಕಲಿತಿದ್ದು. ಬೇಸಿಗೆ ರಜೆಯಲ್ಲೂ ಈ ಕೆರೆಯ ಈಶಾನ್ಯ ಭಾಗದಲ್ಲಿ ನೀರು ಇರುತ್ತಿತ್ತು. ಕೆರೆ ಬತ್ತಿಹೋದ ಜಾಗದಲ್ಲಿ ಕ್ರಿಕೆಟ್ ಆಡಿ ನೀರಿದ್ದ ಕಡೆ ಈಜಾಡಿ ಮನೆಗೆ ಹೋಗುತ್ತಿದ್ದೆವು. ಕೆರೆಯನ್ನು ವ್ಯವಸ್ಥಿತವಾಗಿ ನಿರ್ನಾಮ ಮಾಡುತ್ತಾ ಬರಲಾಗಿದೆ. ಮೊದಲು ಕೆರೆಯ ಏರಿ ಒಡೆದರು. ರಾತ್ರೋ ರಾತ್ರಿ ಕೆರೆಯನ್ನು ಮುಚ್ಚಿ ಹಾಕಿದರು. ಸೈಟು ಮಾಡಿ ಮಾರಿದರು. ಇಲ್ಲಿ ಸೈಟು ಖರೀದಿಸಿ ಮನೆ ಕಟ್ಟಿರುವವರಲ್ಲಿ ಬಿಬಿಎಂಪಿ ಅಧಿಕಾರಿಗಳೇ ಹೆಚ್ಚಿದ್ದು, ಬಿಬಿಎಂಪಿಯಿಂದ ರಸ್ತೆ, ಚರಂಡಿಗಳು ಶರವೇಗದಲ್ಲಿ ಆದವು.

ನಮ್ಮೂರಿನ ಹಳೇಕೆರೆ ಉಳಿಸಲು ಹೋರಾಡಿದಂತಹ ವ್ಯಕ್ತಿಗಳೇ ಒತ್ತುವರಿದಾರರ ಜೊತೆ ಶಾಮೀಲಾಗಿ ಒಂದೂವರೆ ಎಕರೆ ಜಮೀನು ಖರೀದಿಸಿದರು. ಕೆರೆ ಪ್ರದೇಶಕ್ಕೆ ಬಿಬಿಎಂಪಿ ಅಧಿಕಾರಿಗಳು ಟಿಡಿಆರ್ ನೀಡಿದರು. ಈ ಟಿಡಿಆರ್ ಅನ್ನು ರೂ. ೧ ಕೋಟಿಗೆ ಮಾರಾಟ ಮಾಡಲಾಯಿತು. ಇತ್ತೀಚೆಗೆ ಭೂ ಪರಿವರ್ತನೆಗೆ ಪ್ರಯತ್ನಗಳು ನಡೆದವು. ಅದನ್ನೂ ವಿಫಲಗೊಳಿಸಿದೆವು.

ನಮ್ಮೂರಿನ ಕೆಲ ಉತ್ಸಾಹಿ ಯುವಕರ ಜೊತೆಗೂಡಿ ಸ್ವಂತ ಖರ್ಚಿನಿಂದ ಹೈಕೋರ್ಟ್ ಮೊರೆ ಹೊಕ್ಕಾಗ ೨೦೧೧ಮಾರ್ಚ್‌ 9ರಂದು ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಮಾಡಿದ ಆದೇಶ ನಮಗೆ ಸ್ಫೂರ್ತಿ ತುಂಬಿತು. ಬಾಗಲಗುಂಟೆ ಸರ್ವೆ ನಂ. ೮೫ರಲ್ಲಿ ಗೋಮಾಳ ಜಾಗ ಅತಿಕ್ರಮಣ ಮಾಡಿದವರ ವಿರುದ್ಧವೂ ಹೋರಾಟ ಕೈಗೆತ್ತಿಕೊಂಡಿದ್ದು, ಒತ್ತುವರಿದಾರರಿಗೆ ಬುದ್ಧಿ ಕಲಿಸದೇ ಬಿಡಲ್ಲ.
– ಬಿ.ಜಿ.ಅನಂತ್,
ಅಧ್ಯಕ್ಷರು, ಬಾಗಲಗುಂಟೆ ಗ್ರಾಮ ನಾಗರಿಕರ ಹಿತರಕ್ಷಣಾ ವೇದಿಕೆ

* * *

ರಾತ್ರಿಯಲ್ಲಿ ನಡೆದ ಕಾರ್ಯಾಚರಣೆ


ನಮ್ಮೂರಿನ ಹೊಸಕೆರೆಯಲ್ಲಿ ನಾವುಗಳು ದನ, ಕುರಿ, ಮೇಕೆಗಳಿಗೆ ನೀರು ಕುಡಿಸುತ್ತಿದ್ದೆವು. ಅವುಗಳ ಮೈ ಕೂಡ ತೊಳೆದಿದ್ದೇವೆ. ಸುಮಾರು 8–10 ವರ್ಷಗಳ ಹಿಂದೆ ಒಂದೊಂದೇ ಮನೆ ಕಟ್ಟಲು ಶುರು ಮಾಡಿದರು.  ನಾವು ಅರಣ್ಯ ಅಧಿಕಾರಿಗಳಿಗೆ ದೂರು ಕೊಟ್ಟಾಗ, ನಮ್ಮ ಮುಂದೆ ಕೆಲಸ ನಿಲ್ಲಿಸುತ್ತಿದ್ದರು. ರಾತ್ರೋ ರಾತ್ರಿ ಮನೆ ಕಟ್ಟುತ್ತಿದ್ದರು. ನೋಡಿ, ಅಧಿಕಾರಿಗಳು ಕೆರೆಯ ಕುರುಹು ಇಲ್ಲದಂತೆ ಮಾಡಿದ್ದು, ಒತ್ತುವರಿದಾರರ ದುರಾಸೆಗೆ ನಮ್ಮೂರಿನ ಕೆರೆ ಬಲಿಯಾಗಿದೆ.
– ಬಾ.ನಾ.ಶಿವಣ್ಣ,
ಮಾಜಿ ಅಧ್ಯಕ್ಷರು, ಬಾಗಲಗುಂಟೆ ಕನ್ನಡ ಯುವಕರ ಸಂಘ

* * *

ಜೋಡಿದಾರರು ಕಟ್ಟಿದ ಕೆರೆ
ನಮ್ಮೂರಿನ ದೊಡ್ಡ ಜೋಡಿದಾರರು ಕಟ್ಟಿಸಿದ ಕೆರೆ ಇದು. ಹಳೇ ಕೆರೆ ನೀರು ತುಂಬಿದರೆ ಕೋಡಿ ಬಿದ್ದು ಹೊಸಕೆರೆಗೆ ನೀರು ಬರುವಂತೆ ಮಾಡಿದ್ದರು. ಅಂತಹ ಕೆರೆಯನ್ನೇ ನುಂಗಿ ಹಾಕಿದ್ದಾರೆ. ಇಂಥವರನ್ನು ಸುಮ್ಮನೆ ಬಿಡಬಾರದು.
– ಮುನಿನಂಜಪ್ಪ, ಹಿರಿಯ ನಾಗರಿಕ
* * *

ನೀರಾವರಿಗೂ ಆಸರೆಯಾಗಿತ್ತು


ಹೊಸಕೆರೆ ನುಂಗಿ ನೀರು ಕುಡಿದ್ಮೇಲೆ ಒತ್ತುವರಿದಾರರ ಕಣ್ಣು ಹಳೇಕೆರೆ ಮೇಲೆ ಬಿದ್ದಿದೆ. ನಾವುಗಳೆಲ್ಲ ಈ ಕೆರೆ ನೀರಿನಿಂದ ವರ್ಷಕ್ಕೆ 2–3 ಫಸಲು ತೆಗೆದಿದ್ದೇವೆ. ನಮ್ಮು ಕಣ್ಮುಂದೆಯೇ ಕೆರೆ ಮಂಗಮಾಯ ಮಾಡಿದ್ದಾರೆ. ಈ ದೊಡ್ಡ ಅನ್ಯಾಯಕ್ಕೆ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಮತ್ತು ಬಿಬಿಎಂಪಿ ಅಧಿಕಾರಿಗಳೇ ಕಾರಣ.
–ಬಿ.ಕೆ.ರಾಜಣ್ಣ, ಗ್ರಾಮದ ಹಿರಿಯರು
* * *

ಕೆರೆಗಳ ಕುರಿತು ಮಾಹಿತಿ ನೀಡಿ
ಮಳೆ ನೀರಿನ ಪ್ರವಾಹ ತಡೆಯುವ ಜತೆಗೆ ಬೇಸಿಗೆಗೆ ಅಗತ್ಯವಾದ ನೀರಿನ ಸಂಗ್ರಹವನ್ನೂ  ಮಾಡಿಕೊಡುವ ಮೂಲಕ ನಾಗರಿಕತೆ ಬೆಳವಣಿ­ಗೆಗೆ ಕೊಡುಗೆ ನೀಡುತ್ತ ಬಂದಿವೆ ಕೆರೆಗಳು. ಕೆರೆಗಳಿಂದ ಸಮಾಜಕ್ಕೆ ಎಷ್ಟೆಲ್ಲ ಪ್ರಯೋಜನ ಇದ್ದರೂ ಅವುಗಳ ಕತ್ತು ಹಿಚುಕುತ್ತಿದ್ದಾರೆ ಭೂಗಳ್ಳರೆಂಬ ಕೃತಘ್ನರು.

ಬೆಂಗಳೂರಿನ ಕೆರೆಗಳು ಭರದಿಂದ ಕಣ್ಮರೆ ಆಗುತ್ತಿವೆ. ಅದರ ವಿರುದ್ಧ ಹೋರಾಡುವವರಿಗೆ ‘ಪ್ರಜಾವಾಣಿ’ ವೇದಿಕೆ ಕಲ್ಪಿಸುತ್ತಿದೆ.
ಸಾರ್ವಜನಿಕರು ಕೆರೆಗಳ ಅತಿಕ್ರಮಣಕ್ಕೆ ಸಂಬಂ­ಧಿಸಿ­ದಂತೆ ತಮ್ಮಲ್ಲಿರುವ ಮಾಹಿತಿ, ದಾಖಲೆ­ಯನ್ನು ಪ್ರಜಾವಾಣಿ ಜತೆ ಹಂಚಿ­ಕೊಳ್ಳುವ ಜತೆಗೆ ಕೆರೆ ಉಳಿ­ಸುವ ಅಭಿಯಾನಕ್ಕೆ ತಮ್ಮ ನೆರವು ನೀಡಬಹುದು

ಇಮೇಲ್‌ ವಿಳಾಸ: banglore@prajavani.co.in
ದೂರವಾಣಿ: 080-255880607
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT