ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರಾಗಿಯ ಜಡೆ

ಕವಿತೆ
Last Updated 12 ಜುಲೈ 2014, 19:30 IST
ಅಕ್ಷರ ಗಾತ್ರ

1
ಹೊತ್ತು ಕಂತುವ ಮೊದಲೇ
ನಿನಗೆ ಜಡೆ ಹೆಣೆದು
ಮುಗಿಸಲೇಬೇಕೆಂಬುದಿವರ
ಉಗ್ರ ಆದೇಶ.
ನೀನೋ ಅಂಡಲೆವ ಬೈರಾಗಿ!

ನಿಂತಲ್ಲಿ ನಿಲ್ಲುವವನಲ್ಲ
ಕೂತಲ್ಲಿ ಕೂರುವವನಲ್ಲ
ಕ್ಷಣಕ್ಕೊಮ್ಮೆ ಧಿಗ್ಗನೆದ್ದು
ಗರಗರ ದಿಕ್ಕುತಪ್ಪಿ ತಿರುಗುವ
ವಾಚಾಳಿ ಪಾದದವನು!
ನನ್ನ ಯಾವ ಮಿಕ್ಕುಳಿದ ಋಣವೋ
ನನಗೆ ಮೆಟ್ಟಿದ ಪ್ರಿಯ ಪಿಶಾಚಿ ನೀನು!

2
ಪುಸಲಾಯಿಸಿ ಗೋಗರೆದು
‘ಬಾರಪ್ಪ ಬಾ ಜಾಣ
ಸುಮ್ಮನೆ ಕೂರೋ ನನ ದೇವಾ
ದಮ್ಮಯ್ಯ ಅತ್ತಿತ್ತ ಅಲುಗಬೇಡ’
ಕಾಡಿಬೇಡಿ ಎಳೆತಂದು
ಕುಕ್ಕರ ಬಡಿಸಿದರೂ
ಕತ್ತು ಆಕಾಶಕ್ಕೊಮ್ಮೆ
ಇನ್ನೊಮ್ಮೆ ಭೂಮಿಗೆ
ನನ್ನ ಸಹನೆ ಬೆಂಕಿಗೆ!
ಅದೆಷ್ಟೋ ಕಾಲದಿಂದ
ಎಣ್ಣೆ ಬಾಚಣಿಗೆ ಸೋಕದೇ
ಸೊಕ್ಕಿ ಜಡೆಗಟ್ಟಿದ
ನಿನ್ನ ಕೂದಲೋ ದಂಡಕಾರಣ್ಯ
ಎಲ್ಲಿ ಹೊಕ್ಕು ಹೇಗೆ ಬಿಡಿಸುವುದೋ
ಪರಮ ಸಿಕ್ಕು
ಮಹಾ ಗೋಜಲು.
3
ಇವರದೋ ಒಂದೇ ಆಗ್ರಹ
ಹೊತ್ತು ಮುಳುಗುತ್ತಿದೆ
ಬೇಗ ಮುಗಿಸು
ಬೇಗ ಮುಗಿಸು.

ಅದೇನು ಅಂತಿಂಥಾ ಜಡೆಯೇ
ಬರೀ ಜಡೆಯೇ
ಹೆಣೆದು ಬಿಸಾಡಲು?
ಹೆಣೆಯ ಬೇಕಿಗ
ಸಹಸ್ರ ಕಾಲಿನ ಜಡೆಯೇ 
ಸಹಸ್ರ ನಡೆಯ ಪಾದದೆಜಮಾನನಿಗೆ!

ತಲೆ ಅಲುಗಿಸದೇ
ಸುಮ್ಮನೆ ಕೂರೋ ಮಹಾರಾಯ
ಈಗಿನ್ನೂ ಪುಂಡ ಕೂದಲಿಗೆ
ಎಣ್ಣೆ ಮಿದಿಯುತ್ತಿದ್ದೇನೆ.
ಉಂಡೆಗಟ್ಟಿದ ಸುರುಳಿ
ಗುಂಗುರು ಕೂದಲನ್ನಿನ್ನು
ಮೆದುವಾಗಿ ಬಾಚಿ
ಎಳೆ ಎಳೆ ಬಿಡಿಸಿ
ಹುಡಿ ಮಾಡಿ
ನಯಗೊಳಿಸಬೇಕಿದೆ.
ಇನ್ನಾಮೇಲೆ ತಾನೇ
ಜಡೆ ಹೆಣಿಗೆ?

4
ಛೆ! ಕೊಂಚ ತಾಳಿಕೊಳ್ಳಿ
ಬೈರಾಗಿಯೇನೋ ಸರಿಯೇ ಸರಿ
ನಿಮ್ಮದೂ ವರಾತವೇ?
ಕಾಣುತ್ತಿಲ್ಲವೇ ನನ್ನ
ಸಮರ ತಯಾರಿ!
ಕೈ ಕಾಲು ಹರಿಯುತ್ತಲೇ ಇಲ್ಲ.
ಅಯ್ಯೋ ಹೊತ್ತು ಮೀರುತ್ತಿದೆ.
ಗಡುವು ತಪ್ಪದೇ
ಜಡೆ ಹೆಣೆದು ಮುಗಿಸುವ ಕಟ್ಟಪ್ಪಣೆ
ಕೊರಳಿಗೇ ಉರುಳಾಗಿದೆಯಲ್ಲ?

5
ಅದೇನು ಶುಭಲಗ್ನವೋ
ಈಗ ನೀನೂ ಸುಮ್ಮನೆ ಕುಳಿತಿದ್ದೀಯ
ಹಠಮಾರಿ ಕೂದಲೂ ನೋಡು
ಮೆತ್ತಗಾಗಿ ಹೇಳಿದಂತೆ ಬಾಗಿ ಬಳುಕುತ್ತಿದೆ.
ಕೂದಲ ಜೊಂಪೆ ಇಷ್ಟಿಷ್ಟೇ ವಿಂಗಡಿಸಿ
ಒಂದು ಪಾದ ಎರಡು ಪಾದ
ಮೂರು ಪಾದ ನಾಲ್ಕನೆಯದು...
ನೂರು ಇನ್ನೂರು
ಸಹಸ್ರವೋ ಮತ್ತೂ ಮೇಲಿಷ್ಟೋ...

ಜಡೆ ಹೆಣೆಯುತ್ತಾ ಹೆಣೆಯುತ್ತಾ
ಎಚ್ಚರದಲಿ ಮುಳುಗಿಹೋಗಿದ್ದೇನೆ.
ಬೈರಾಗಿಗೇ ಮೈಮರೆವ ಜೊಂಪು!
ಯಾವ ಮಂಕುಬೂದಿಯೋ
ಇವರೋ ಮೂರ್ಚೆಹೋಗಿದ್ದಾರೆ
ಸೂರ್ಯ ಜ್ವಲಿಸುತ್ತಲೇ ಇದ್ದಾನೆ
ಹೊತ್ತಿಗೆ ಮುಳುಗುವುದೇ
ಮರೆತು ಹೋಗಿದೆ!

ನಾನು ಬೈರಾಗಿಗೆ
ಜಡೆ ಹೆಣೆಯುತ್ತಲೇ ಇದ್ದೇನೆ
ಹೆಣೆಯುತ್ತಲೇ ಇದ್ದೇನೆ...
ಅಂತಿಂಥ ಜಡೆಯಲ್ಲ
ಹೆಣೆದು ಮುಗಿಸುವುದೂ ಅಲ್ಲ
ಸಹಸ್ರ ಕಾಲಿನ ಜಡೆ!

ಸ್ತಬ್ಧದೊಳಗೆ ನಿಶ್ಶಬ್ದವಾಗಿ
ಜಡೆಯೆಂಬೋ ಜೀವ ಆಡತೊಡಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT