ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯದ ನೆರಳೂ... ಬಡಬಡಿಕೆಯೂ...

ಚರ್ಚೆ
Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನರೇಂದ್ರ ಮೋದಿ ಆಗಮನದ ಅನಿವಾರ್ಯ­ವನ್ನು  ಮುನ್ನೋಡಿ ಸಹಜವಾಗಿಯೇ ಬೆದರಿರುವ ಪ್ರಗತಿಪರರೆಂದು ಹೇಳಲಾಗುವ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ದೇವನೂರ ಮಹಾದೇವ ಮುಂತಾದ ಬುದ್ಧಿಜೀವಿಗಳು ಈ ಅನಿವಾರ್ಯ­ವನ್ನು ತಡೆಯಲು ಹಿಡಿದಿರುವ ಹಾದಿ ಮಾತ್ರ ಕರುಣಾಜನಕ ಮಾತ್ರವಲ್ಲ, ಅನುಮಾನಾಸ್ಪದವೂ ಎನ್ನಿಸುತ್ತಿದೆ.

ಮೋದಿ, ಇವರೆಲ್ಲ ಹೇಳುವ ಕಾರಣ­ಗಳಿಂದಾಗಿಯೇ ಅಪಾಯಕಾರಿ ನಿಜ. ಆದರೆ ಇವರು ಬೇಷರತ್ತಾಗಿ ಬೆಂಬಲಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಇಂದು ಏಕವ್ಯಕ್ತಿ ಪಕ್ಷವಾಗು­ತ್ತಿದೆ­ಯಾದರೆ, ಕಾಂಗ್ರೆಸ್ ಇಂದು  ಏನಾಗಿದೆ ಎಂದು ಇವರು ವರ್ಣಿಸುವರೋ? ಏಕವ್ಯಕ್ತಿ ಪಕ್ಷ­ವಾಗಿ ಬಿಜೆಪಿ ಉಂಟು ಮಾಡುವ ಅಪಾಯ­ಗಳನ್ನು ನಾವಿನ್ನೂ ಕಾದು ನೋಡಬೇಕಾಗಿದೆ.

ಆದರೆ ಇಂದು ಒಂದು ಕುಟುಂಬದ ಪದತಲದಲ್ಲಿ ಬಿದ್ದು ಒದ್ದಾಡುತ್ತಿರುವ ಕಾಂಗ್ರೆಸ್ ಇವರ ಕಣ್ಣಿಗೆ ದೊಡ್ಡ ಪ್ರಜಾಪ್ರಭುತ್ವವಾದಿ ಪಕ್ಷವಾಗಿ ಕಾಣುತ್ತಿದೆಯೇ? ಈ ಪಕ್ಷದ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿ, ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ, ಅಣು ನೀತಿ, ಇವೆಲ್ಲವುಗಳ ಪರಿಣಾಮ­ವಾಗಿಯೇ ಅದು ಮುಳುಗಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಇವರು ಬೆಂಬಲಿಸುವರೇ?

ತಮ್ಮ ಈ ಎಲ್ಲ ವಿರೋಧಾ­ಭಾಸಗಳನ್ನು ಮರೆಮಾಚಿ­ಕೊಳ್ಳುವ ತಂತ್ರವಾಗಿ ಇವರೆಲ್ಲ, ಮೋದಿ ಪ್ರತ್ಯಕ್ಷವಾಗುವವರೆಗೆ ಫ್ಯಾಸಿಸ್ಟ್ ಪಕ್ಷ­ವೆಂದು ದೂಷಿ­ಸುತ್ತಿದ್ದ ಬಿಜೆಪಿಯ ಅಳಿವು ಉಳಿ­ವಿನ ಬಗ್ಗೆ ಕಣ್ಣೀರುಗರೆಯು­ತ್ತಿರುವುದನ್ನೂ ಮತ್ತು ಈವರೆಗೆ ಅನುಮಾನಾಸ್ಪದ ವ್ಯಕ್ತಿಗಳೆಂದು ಕರೆಯುತ್ತಿದ್ದ ವಾಜಪೇಯಿ ಮತ್ತು ಅಡ್ವಾಣಿ ಅವರ ಬಗ್ಗೆ ಉದಾರ ಮಾತುಗಳನ್ನು ಆಡುತ್ತಿ­ರುವುದನ್ನೂ ನೋಡಿದರೆ ಇವರ ವಾದದ ವಿಶ್ವಾ­ಸಾರ್ಹತೆಯ ಬಗ್ಗೆಯೇ ಜನತೆಗೆ ಅನುಮಾನ ಹುಟ್ಟಿದರೆ ಆಶ್ಚರ್ಯವಿಲ್ಲ.

ಇನ್ನು ಇವರ ಇಂತಹ ವಾದಗಳಿಂದ, ನಿರ್ದಿಷ್ಟವಾಗಿ ಬಿಜೆಪಿ ಮತ್ತು ಮೋದಿಯವರ ಬಗ್ಗೆ ಸತ್ಯಾಂಶಗಳನ್ನೇ ಒಳಗೊಂಡಿರುವ ದೇವ­ನೂರ ಮಹಾದೇವ ಅವರ ಬರಹದಿಂದ (ಪ್ರ.ವಾ., ಏ.೧೦) ಸಹಜವಾಗಿಯೇ ತಡಬಡಾಯಿಸಿ ಹೋಗಿರುವ ಬಿಜೆಪಿ ಪರ ವಕ್ತಾರರಂತೆ ಕಾಣುವ ವಾದಿರಾಜ ಮತ್ತು ಬಿ.ವಿ. ಅರುಣ್ ಕುಮಾರ್‌ರ ಪತ್ರಗಳಲ್ಲಿನ (ಸಂಗತ: ಏ. ೧೪) ಮಾತು ಕೇವಲ ಬಡಬಡಿಕೆಯಂತಿದ್ದು ಇವರ ವಿರೋಧಿ ವಾದ­ಕ್ಕಿಂತ ಹೆಚ್ಚು ಕರುಣಾಜನಕವಾಗಿದೆ. ದೇವನೂರರ ಮಾತುಗಳಿಗೆ ನೇರ ಉತ್ತರ ಕೊಡಲಾಗದ ಇವರು ಮುಖ್ಯ ವಿಷಯಕ್ಕೆ ಸಂಬಂಧಪಡದೇ ಇರುವ ಮಾಹಿತಿಯನ್ನೆಲ್ಲ ಒಟ್ಟಿ, ಯಾರಿಗೂ ಅರ್ಥ­ವಾಗದ ಗೊಣಗಾಟ ನಡೆಸಿದ್ದಾರೆ.

ಇವರ ಅಸಂಬದ್ಧತೆಗೆ, ಅಸಹಾಯಕತೆಗೆ ಒಂದು ನಿದರ್ಶನವೆಂದರೆ ಅರುಣ್‌ಕುಮಾರ್ ಅವರು, ೧೯೬೩ರಲ್ಲಿ ರಾಮ ಮನೋಹರ ಲೋಹಿಯಾ ಕೊನೆಗೂ ಜನಸಂಘದ ನೆರವಿ­ನೊಂದಿಗೆ ಸಂಸತ್ ಪ್ರವೇಶಿಸ­ಬೇಕಾಯಿತು ಎಂದು ಬರೆದಿರುವುದು. ಇದು, ಸತ್ಯವನ್ನು ತಿರುಚುವುದೇ ಆಗಿದೆ. ನೆಹರೂ ಆಡ­ಳಿತದ ಪ್ರಬಲ ವಿರೋಧಿ­ಯಾಗಿದ್ದ ಲೋಹಿಯಾ ೧೯೬೨ರ ಚೀನಾ ಯುದ್ಧದಲ್ಲಿ ಭಾರತಕ್ಕೆ ಆದ ಮುಖಭಂಗದಿಂದ ಎಷ್ಟು ವಿಚಲಿತರಾದರೆಂದರೆ, ಕಾಂಗ್ರೆಸ್ಸನ್ನು ಭಾರ­ತದ ರಾಜಕಾರಣದಿಂದ ಹಿಮ್ಮೆ­ಟ್ಟಿಸದ ಹೊರತು ಭಾರತಕ್ಕೆ ಮುಕ್ತಿ ಇಲ್ಲವೆಂದು ನಿಶ್ಚಯಿಸಿದರು.

ಅದರ ಭಾಗವಾಗಿ, ಆಗ ನಡೆಯಲಿದ್ದ ಮೂರು ಲೋಕ­ಸಭಾ ಉಪ­ಚುನಾವಣೆಗಳಲ್ಲಿ ಕಾಂಗ್ರೆ­­ಸ್ಸನ್ನು ಸೋಲಿಸಲು ಎಲ್ಲ ಕಾಂಗ್ರೆ­ಸ್ಸೇತರ ಪಕ್ಷಗಳ ಸಹಕಾರ ಕೋರಿ­­ದರು. ಏಕೆಂದರೆ ಅಂದು ಕಾಂಗ್ರೆ­ಸ್ಸನ್ನು ಪರಿಣಾಮ­ಕಾರಿ­ಯಾಗಿ ಸೋಲಿ­ಸಲು ಏಕಾಂಗಿ­ಯಾಗಿ ಯಾವೊಂದು ಪಕ್ಷಕ್ಕೂ ಸಾಧ್ಯ­ವಿರಲಿಲ್ಲ.

ಹಾಗಾಗಿ ಲೋಹಿಯಾ ಸ್ವತಃ ತಾವು, ಗಾಂಧಿವಾದಿ ಆಚಾರ್ಯ ಕೃಪಲಾನಿ ಮತ್ತು ಜನಸಂಘದ ದೀನದಯಾಳು ಉಪಾಧ್ಯಾಯ ಅವರು ಆ ಮೂರು ಉಪಚುನಾವಣೆಗಳಿಗೆ ಪರಸ್ಪರ ಹೊಂದಾಣಿಕೆಯ ಅಭ್ಯರ್ಥಿ­ಗಳಾಗಿ ನಿಂತು ಮೂರೂ ಸ್ಥಾನಗಳಲ್ಲಿ ಜಯ ಗಳಿಸಿದರು. ಈ ಪರಸ್ಪರ ಹೊಂದಾಣಿಕೆಯ ಉಪಚು­ನಾವಣೆಯಲ್ಲಿಯೂ ಜನಸಂಘ ಹೇಗೆ ತನಗೆ ಮೋಸ ಮಾಡಿತೆಂಬುದನ್ನೂ ಲೋಹಿಯಾ ಒಂದೆಡೆ ದಾಖಲಿಸಿ­ದ್ದಾರೆ. ಆದರೆ ಇದನ್ನು, ಕೊನೆಗೂ ಲೋಹಿಯಾ ಸಂಸತ್ತನ್ನು ಪ್ರವೇಶಿಸಿದ್ದು ಜನಸಂಘದ ಸಹಾಯದಿಂದ ಎಂದು ಹೇಳುವುದು ಸತ್ಯದ ವಿಕೃತಿಯಷ್ಟೆ.

ಈ ಎರಡೂ ಕಡೆಯವರ ವಾದಗಳು ಸೂಚಿ­ಸುವುದೇನೆಂದರೆ, ದೇಶವನ್ನು ಎರಡು ಶಾಶ್ವತ ರಾಜಕೀಯ ಶನಿಗಳಿಂದ ಮುಕ್ತಗೊಳಿಸಲು ನಮ್ಮ ಬುದ್ಧಿಜೀವಿಗಳು, ಅಭಿಪ್ರಾಯ ಮುಖಂಡರು ಸಿದ್ಧರಿಲ್ಲವೆಂಬುದು. ಅದಕ್ಕೆ ಅವಕಾಶವೊಂದು ಸೃಷ್ಟಿಯಾಗಿರುವಾಗಲೂ. ಖಾಲಿ ಸಮಯ­ಗಳಲ್ಲೆಲ್ಲಾ ಆಮ್‌ ಆದ್ಮಿ ಪಕ್ಷದ ಪರವಾಗಿ ಬರೆಯುವ, ಮಾತಾಡುವ ಮತ್ತು ಸಿಂಪಥಿ ಇದೆ ಎಂದು ಹೇಳುವ ಇವರು ನಿರ್ಣಾಯಕ ಸಂದರ್ಭ­ದಲ್ಲಿ ಅದನ್ನೇಕೆ ಉಳಿಸಿ ಬೆಳೆಸಲು ಮನಸ್ಸು ಮಾಡುತ್ತಿಲ್ಲ? ಅದು ಬೆಳೆದ ಮೇಲೆ ಅದನ್ನು ಬೆಂಬ­­ಲಿಸಲು ಇವರು ಮುಂದೆ ಬರುವರೋ?

ಬಿಜೆಪಿ ಇಂದು ಮೋದಿ ರೂಪದಲ್ಲಿ ಅಪಾಯ­ಕಾರಿಯಾಗಿ ಬೆಳೆದು ನಿಂತಿದೆ ಎಂದು ಹೇಳುವ ಈ ಬುದ್ಧಿಜೀವಿಗಳು ಅದಕ್ಕೆ ಮೂಲ ಕಾರಣ ಕಾಂಗ್ರೆಸ್ಸಿನ ನಿಲ್ಲದ ದುಷ್ಟ ಮತ್ತು ಭ್ರಷ್ಟ ರಾಜ­ಕಾರಣ ಎಂದು ಯೋಚಿಸ­ಲಾಗ­ದಿರುವಷ್ಟು ನಿಶ್ಚೇ­ಷ್ಟಿತರಾಗುವುದಕ್ಕೆ ಏನು ಕಾರಣ? ದೀರ್ಘ­ಕಾಲಿಕ­ವಾಗಿ ಯೋಚಿಸಲು ನಿರಾಕರಿಸುತ್ತಾ ಸದಾ ತತ್ಕಾಲೀನ ಭಯ­ಗಳ ನೆರಳಿನಲ್ಲೇ ತಮ್ಮ ವಾದ ಮಂಡಿಸುತ್ತಾ ಜನರನ್ನು ನಿಶ್ಚಲ­ಗೊಳಿ­ಸುವವರನ್ನು ನಿಜವಾಗಿ ಬುದ್ಧಿಜೀವಿಗಳೆಂದು ಕರೆಯಬಹುದೇ? ಜನ ಯೋಚಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT