ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗವತರು: ಹಳತರ ಪ್ರೀತಿ, ಪ್ರಯೋಗಮುಖಿ ರೀತಿ

ಅಂಕದ ಪರದೆ
Last Updated 22 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹದಿನಾಲ್ಕು ನಾಟಕೋತ್ಸವಗಳನ್ನು ಆಯೋಜಿಸಿರುವ ‘ಭಾಗವತರು’ ಸಾಂಸ್ಕೃತಿಕ ಪ್ರಯೋಗಗಳಿಗೆ ಒತ್ತಾಸೆಯಾಗಿ ನಿಲ್ಲುತ್ತಾ, ಈ ಕ್ಷೇತ್ರದ ದಿಗ್ಗಜರನ್ನು ಗೌರವಿಸುವಲ್ಲಿ ಮುಂಚೂಣಿಯಲ್ಲಿದೆ.

ರಂಗ ತಂಡ ಕಟ್ಟಿ ಆ ಮೂಲಕ ಪ್ರಯೋಗ ಮತ್ತು ಹೊಸ ಸಾಧ್ಯತೆಗಳಲ್ಲಿ  ತೊಡಗುವ ನಟರು–ರಂಗಾಸಕ್ತರು–ರಂಗಕರ್ಮಿಗಳು ಒಂದು ಕಡೆಯಾದರೆ, ತಮ್ಮ ಸಂಸ್ಥೆ ಮತ್ತು ಸಂಘಟನೆಗಳನ್ನು ಪ್ರಯೋಗಗಳಿಗೆ ವೇದಿಕೆಯಾಗಿಸುವುದು ಮತ್ತೊಂದು ಬಗೆ. ಈ ಎರಡನೇ ಹಾದಿಯಲ್ಲಿ ಗುರ್ತಿಸಬಹುದಾದುದು ‘ಭಾಗವತರು ಸಾಂಸ್ಕೃತಿಕ ಸಂಘಟನೆ’.

ಕಳೆದ 14 ವರುಷಗಳಿಂದ ವಿಭಿನ್ನವಾಗಿ ನಾಟಕೋತ್ಸವಗಳನ್ನು ಸಂಘಟಿಸುವ ಮೂಲಕ ಇದು ಗಮನ ಸೆಳೆಯುತ್ತಿದೆ.  ನಾಟಕೋತ್ಸವಗಳ ಆಯೋಜನೆ ಸವಾಲಿನದ್ದು. ಇಂಥ ಸವಾಲನ್ನು ಪ್ರತಿ ವರುಷ ಎದುರಿಸುತ್ತಾ, ರಂಗಭೂಮಿಗೆ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸುವ ಪರಂಪರೆಯನ್ನೂ ಉಳಿಸಿಕೊಂಡು ಬಂದಿರುವ ಸಂಘಟನೆ ಇದು.  1970 ಮತ್ತು 80ರ ದಶಕದಲ್ಲಿನ ಪ್ರಮುಖ ನಾಟಕಗಳನ್ನು ನಾಟಕೋತ್ಸವಗಳ ಮೂಲಕ ಇಂದಿನ ಯುವಜನತೆಗೆ ಪರಿಚಯಿಸುವುದು ಸಂಘಟನೆಯ ಧ್ಯೇಯ.

‘ಭಾಗವತರು ಸಾಂಸ್ಕೃತಿಕ ಸಂಘಟನೆ’ ಜನ್ಮತಾಳಿದ್ದು 2001ರಲ್ಲಿ. ರೇವಣ್ಣ ಇದರ ಪ್ರವರ್ತಕ ಮತ್ತು ಸಂಚಾಲಕ. ಈ ತಂಡದ ಹುಟ್ಟಿನಲ್ಲಿ ನೆನೆಯಬೇಕಾದ ಮತ್ತೊಂದು ಹೆಸರು ಎ.ಪಿ. ಕಾರಂತರು (ಸದ್ಯ ರವೀಂದ್ರ ಕಲಾಕ್ಷೇತ್ರದಲ್ಲಿ ಕ್ಯಾಂಟೀನ್ ನಡೆಸುತ್ತಿರುವವರು). ರಂಗಭೂಮಿ ಮೂಲದಿಂದ ಕಿರುತೆರೆ ಮತ್ತು ಸಿನಿಮಾಕ್ಕೆ ಜಿಗಿದವರನ್ನು ಒಂದು ವೇದಿಕೆಗೆ ತರಬೇಕೆಂಬ ಆಲೋಚನೆಯೇ ಸಂಘಟನೆ ಗಟ್ಟಿಗೊಳ್ಳಲು ಮೂಲ. ಸದ್ಯ ಸಂಘಟನೆಯಲ್ಲಿ ಹದಿನೈದು ಜನರು ಸಕ್ರಿಯರಾಗಿದ್ದಾರೆ.

‘ಕೃಷ್ಣ ರಾಯಚೂರು, ಶ್ರೀನಿವಾಸ ಕಪ್ಪಣ್ಣ, ಕಾರಂತರು ಮತ್ತಿತರರೆಲ್ಲ ಒಗ್ಗೂಡಿ ಮಾಯಾಮಂಜರಿ ಕಾರ್ಯಕ್ರಮವನ್ನು ಸಂಘಟಿಸಿದೆವು. ಇದು ನಮ್ಮ ಮೊದಲ ಕಾರ್ಯಕ್ರಮ. ‘ಅರಮನೆಯಿಂದ ಮನೆ ಮನೆಗೆ’ ಎನ್ನುವುದು ಇದರ ಪರಿಕಲ್ಪನೆ. ಅಂದರೆ ರಾಜಾಶ್ರಯದ ರಂಗಭೂಮಿಯಿಂದ ಟೀವಿ ಮೂಲಕ ಕಲಾವಿದರು ಮನೆ ಮನೆಗೂ ತಲುಪಿದರು ಎನ್ನುವುದೇ ಇದರ ದನಿ.

ಏಣಗಿ ಬಾಳಪ್ಪ, ಸುಭದ್ರಮ್ಮ ಮನ್ಸೂರ್, ಪಿ.ಬಿ. ಧುತ್ತರಗಿ, ಸಿಜಿಕೆ, ಸಿ. ಬಸವಲಿಂಗಯ್ಯ ಸೇರಿದಂತೆ 80ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮವನ್ನೇ ಮೂಲವನ್ನಾಗಿಸಿಕೊಂಡು ಭಾಗವತರನ್ನು ಹುಟ್ಟಿಹಾಕಿದೆ’ ಎಂದು ಸಂಘಟನೆ ರೂಪುಗೊಂಡ ಸಂದರ್ಭವನ್ನು ನೆನಪಿಸಿಕೊಳ್ಳುವರು ರೇವಣ್ಣ.

ಮರು ಪ್ರದರ್ಶನ
ಹದಿನಾಲ್ಕು ನಾಟಕೋತ್ಸವಗಳನ್ನು  ‘ಭಾಗವತರು ಸಾಂಸ್ಕೃತಿಕ ಸಂಘಟನೆ’ ಸಂಘಟಿಸಿದೆ. ಆಯಾ ವರುಷದ ಇಲ್ಲವೆ ಆಯಾ ಸಂದರ್ಭದಲ್ಲಿನ ಸಾಂಸ್ಕೃತಿಕ  ಕ್ಷೇತ್ರದಲ್ಲಿನ ಮಹತ್ವ ಘಟನೆ ಇಲ್ಲವೆ ಬೆಳವಣಿಗೆಗಳನ್ನು ಗಮನಿಸಿ ಉತ್ಸವ ರೂಪುಗೊಳ್ಳುತ್ತದೆ. ಮಾಸ್ಟರ್ ಹಿರಣ್ಣಯ್ಯ ಅವರು ರಂಗಭೂಮಿಗೆ ಬಂದು ಐವತ್ತು ವರುಷಗಳು ಸಂದ ನೆನಪಿನಲ್ಲಿ, ಬಿ.ವಿ. ಕಾರಂತರು ತೀರಿಕೊಂಡಾಗ ‘ಭಾರತೀಯ ರಂಗಭೂಮಿಗೆ ಕಾರಂತರ ಕೊಡುಗೆ’ ಎನ್ನುವ ವಿಷಯವನ್ನು ಮುಖ್ಯವಾಗಿಸಿಕೊಂಡು ಉತ್ಸವಗಳನ್ನು ಆಯೋಜಿಸಿತು.

ಬಿ. ಜಯಶ್ರೀ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದಾಗ, ಯು.ಆರ್. ಅನಂತರಮೂರ್ತಿ ಅವರು ತೀರಿಕೊಂಡಾಗ ಕೂಡ ನಾಟಕೋತ್ಸವಗಳನ್ನು ಸಂಘಟಿಸಲಾಗಿದೆ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ ಸಂದಾಗ, ನಾಲ್ಕು ದಿನಗಳ ನಾಟಕೋತ್ಸವ ಮತ್ತು ವಿಚಾರ ಸಂಕಿರಣ ಸಂಘಟಿಸಲಾಗಿತ್ತು.
‘ನಾನು ಜ್ಞಾನಪೀಠ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ನೂರು ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ಭಾಗವತರು ಸಂಘಟನೆ ನಾಟಕೋತ್ಸವ ಸಂಘಟಿಸುವ ಮೂಲಕ ವಿಶಿಷ್ಟವಾಗಿ ಗೌರವಿಸಿದೆ.

ಇದನ್ನು ಮರೆಯಲಾಗದು’ ಎಂದು ಕಂಬಾರರು ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ ರೇವಣ್ಣ.  ‘ಹಯವದನ’, ‘ಜೋಕುಮಾರಸ್ವಾಮಿ’ ಸೇರಿದಂತೆ 1970 ಮತ್ತು 80ರ ದಶಕದ ನಾಟಕಗಳನ್ನು ಮರು ಪ್ರದರ್ಶನಗೊಳ್ಳುವಂತೆ ಮಾಡಿದ್ದು ಇದರ ಮುಖ್ಯ ಹೆಜ್ಜೆಗುರುತು. ‘ಒಡಲಾಳ’, ‘ಹರಕೆಯ ಕುರಿ’, ‘ನಮ್ಮೊಳಗೊಬ್ಬ ನಾಜೂಕಯ್ಯ’, ಮುಖ್ಯಮಂತ್ರಿ ಚಂದ್ರು ಅವರ ‘ಮುಖ್ಯಮಂತ್ರಿ’, ‘ಟಿಪಿಕಲ್ ಕೈಲಾಸಂ’, ‘ತಬರನ ಕಥೆ’ ಸೇರಿದಂತೆ 20ಕ್ಕೂ ಹೆಚ್ಚು ನಾಟಕಗಳು ಮರು ಪ್ರದರ್ಶನಗೊಳ್ಳುವಂತೆ ಮಾಡಿದ್ದಾರೆ. ಸಂಘಟನೆಯ ಮೊದಲ 10 ವರುಷಗಳ ಮುಖ್ಯ ಗುರಿ ಇದೇ ಆಗಿತ್ತು.

ಪುಸ್ತಕ ಪ್ರಕಾಶನ
ಸಂಘಟನೆ ಪುಸ್ತಕ ಪ್ರಕಾಶನಕ್ಕೂ ಅಡಿ ಇಟ್ಟಿದೆ. ಮೂರು ವರುಷಗಳಿಂದ ವರುಷಕ್ಕೊಂದು ಪುಸ್ತಕ ಪ್ರಕಟಿಸುತ್ತಿದೆ. ನಾಡಿನ ಖ್ಯಾತ ಸಾಹಿತಿಗಳ ಸಾಹಿತ್ಯ ಕುರಿತು ಒಂದು ದಿನದ ಚಿಂತನ–ಮಂಥನಕ್ಕೂ ವೇದಿಕೆ ಇದೆ. ಈಗಾಗಲೇ ಬರಗೂರು ರಾಮಚಂದ್ರಪ್ಪ ಅವರ ಸಿನಿಮಾ, ಕಾವ್ಯ, ಲೇಖನ ಇತ್ಯಾದಿ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಚಿಂತನ ಮಂಥನವೂ ನಡೆದಿತ್ತು.

ಈ ಅವಧಿಯಲ್ಲಿ ಆರ್‌.ಜಿ.ಹಳ್ಳಿ ನಾಗರಾಜ್ ಸಂಪಾದಕತ್ವದಲ್ಲಿ ಬರಗೂರರ ಆಯ್ದ ಲೇಖನಗಳ ಸಂಗ್ರಹ ‘ಸೂರ್ಯ ಸಂಸ್ಕೃತಿ’ಯನ್ನು ಹೊರತರಲಾಗಿತ್ತು. ಕಳೆದ ವರುಷ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್‌ ಅವರಿಗೆ 80 ವರುಷ ಸಂದ ಹಿನ್ನೆಲೆಯಲ್ಲಿ ಅವರ ಕಾವ್ಯದ ಚಿಂತನ ಮಂಥನಕ್ಕೂ ಒಂದು ದಿನ ಮೀಸಲಿಡಲಾಗಿತ್ತು.  ಪಿ.ವಿ. ನಾರಾಯಣ ಅವರ ಸಂಪಾದಕತ್ವದಲ್ಲಿ ‘ನಿಸಾರ್ ಸಾರ ಬರಹ’ ಕೃತಿ ಪ್ರಕಟಿಸಲಾಗಿತ್ತು.

ಸಾಂಸ್ಕೃತಿಕ ಸಂಘಟನೆ
ಸಂಗೀತ, ನಾಟಕ ಹೀಗೆ ವಿವಿಧ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಯ ಹಾದಿಯಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಮುಖ್ಯವಾಗಿ ಗಮನಿಸುವುದಾದರೆ ಗಾಯಕ ವೈ.ಕೆ. ಮುದ್ದುಕೃಷ್ಣ ಸರ್ಕಾರಿ ಸೇವೆಯಿಂದ ನಿವೃತ್ತರಾದಾಗ ಅವರಿಗಾಗಿಯೇ ಕಾರ್ಯಕ್ರಮ ನಡೆಸಲಾಗಿತ್ತು. ಸಿ. ಅಶ್ವತ್ಥ್ ಅವರಿಗೆ 67 ವರುಷ ತುಂಬಿದಾಗ 12 ಗಂಟೆಗಳ ಕಾಲ ಅಶ್ವತ್ಥ್ ರಾಗ ಸಂಯೋಜಿಸಿದ್ದ ಹಾಡುಗಳ ಗಾಯನವನ್ನು ಆಯೋಜಿಸಲಾಗಿತ್ತು. ‘ವೈಶಾಖ ಸಂಜೆ ಹೆಸರಿನಲ್ಲಿ ಅಶ್ವತ್ಥ್ ಅವರನ್ನು ಗೌರವಿಸಲಾಯಿತು.

ಈ ನಮ್ಮ ಕಾರ್ಯಕ್ರಮವೇ ಕನ್ನಡವೇ ಸತ್ಯಕ್ಕೆ ಮೂಲವಾಗಿದ್ದು’ ಎಂದು ಅಶ್ವತ್ಥ್ ಅವರೇ ಹೇಳಿದ್ದರು. ನಾವು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ನಿಗದಿತ ಸಮಯಕ್ಕೆ ಆರಂಭಿಸುತ್ತೇವೆ. ಆ ಕಾರಣಕ್ಕೆ ಒಳ್ಳೆಯ ಹೆಸರಿದೆ. ಸನ್ಮಾನ ಮಾಡುವಾಗ ನೀಡುವುದು ಪುಸ್ತಕಗಳನ್ನು. ಎಂ.ಎಸ್‌. ಸತ್ಯು ನನಗೆ ತಿಳಿದಿರುವಂತೆ ಎಲ್ಲೂ ಸನ್ಮಾನಗಳನ್ನು ಸ್ವೀಕರಿಸುವುದಿಲ್ಲ. ಆದರೆ ನಮ್ಮ ಕಾರ್ಯಕ್ರಮವನ್ನು ಮೆಚ್ಚಿದ್ದರು, ಪುಸ್ತಕ ಸನ್ಮಾನವನ್ನು ಸ್ವೀಕರಿಸಿದ್ದರು’ ಎಂದು ನೆನೆಯುವರು ರೇವಣ್ಣ.

ಆರ್ಥಿಕ ಮೂಲ
‘ಆರಂಭದಲ್ಲಿ ನಾನೇ ದುಡ್ಡು ಹೊಂದಿಸಿ ಕಾರ್ಯಕ್ರಮ ಸಂಘಟಿಸುತ್ತಿದ್ದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾಟಕ ಅಕಾಡೆಮಿಯ ಸಹಾಯಧನ ಮತ್ತು ಪ್ರಾಯೋಜಕರು ನೆರವಿಗೆ ಬರುತ್ತಿದ್ದಾರೆ. ಇಂಥ ಗೋಷ್ಠಿಗೆ ನೀವು ನೆರವಾಗಬೇಕು ಅಂದರೆ ಆ ವೆಚ್ಚವನ್ನು ಪೂರ್ಣವಾಗಿ ಭರಿಸುವ ಪ್ರಾಯೋಜಕರು ಇದ್ದಾರೆ. ಹಾಗೆಂದು ನಾವು ಅವರನ್ನು ವೈಭವೀಕರಿಸುವುದಿಲ್ಲ.

ವರುಷಕ್ಕೆ ಮೂರ್‍್ನಾಲ್ಕು ಕಾರ್ಯಕ್ರಮಗಳನ್ನು ಸಂಘಟಿಸುವುದು ನಮ್ಮ ಆದ್ಯತೆ. ರಾಜಕಾರಣಿಗಳಿಗೆ ವೇದಿಕೆಯಲ್ಲಿ ಪ್ರಾಮುಖ್ಯ ಇಲ್ಲ. ಇಲ್ಲಿಯವರೆಗೂ ವೀರಪ್ಪ ಮೊಯಿಲಿ ಮತ್ತು ಕೆ. ಚಂದ್ರಶೇಖರ್  ಮಾತ್ರ ವೇದಿಕೆಗೆ ಬಂದಿರುವುದು. ಮೊಯಿಲಿ ಅವರು ರಾಜಕಾರಣಿಗಿಂತ ಹೆಚ್ಚಾಗಿ ಸಾಹಿತಿಯಾಗಿಯೇ ಕಾಣಿಸುತ್ತಾರೆ.

ಚಂದ್ರಶೇಖರ್ ನನ್ನ ಒಳ್ಳೆಯ ಸ್ನೇಹಿತರು. ಹಣದ ಅವಶ್ಯಕತೆಗಾಗಿ ಪುಸ್ತಕ ಪ್ರಕಟಿಸುವ ಇಲ್ಲವೇ ಕಾರ್ಯಕ್ರಮ ಸಂಘಟಿಸುವುದು ನಮ್ಮ ಉದ್ದೇಶವಲ್ಲ’ ಎಂದು ಹಣಕಾಸು ಮೂಲ ಮತ್ತು ತಂಡದ ರೀತಿ ರಿವಾಜುಗಳನ್ನು ವಿವರಿಸುವರು. ಭಾಗವತರು ಸಾಂಸ್ಕೃತಿಕ ಲೋಕಕ್ಕೆ ಬದ್ಧರಾಗಿದ್ದಾರೆ ಎನ್ನುವುದು ರೇವಣ್ಣ ಅವರ ಮಾತಿನಲ್ಲಿ ಅಡಕವಾಗಿದೆ.  
*
ಪ್ರಯೋಗಮುಖಿ ರೇವಣ್ಣ

ತುಮಕೂರು ಜಿಲ್ಲೆ ತುರುವೇಕೆರೆ ಮೂಲಕ ರೇವಣ್ಣ ಕಳೆದ ಮೂವತ್ತು ವರುಷಗಳಿಂದ ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ‘ಪ್ರಯೋಗ ರಂಗ’ದ ವಿದ್ಯಾರ್ಥಿ ಸಹ. ಆರಂಭದಲ್ಲಿ ನಟರಾಗಿದ್ದ ಅವರು ನಂತರ ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಂಡವರು. ಸದ್ಯ ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ‘ಭಾಗವತರು’ ಮೂಲಕ ಸಾಂಸ್ಕೃತಿಕ ಸಂಘಟಕರಾಗಿಯೂ ಹೆಸರು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT