ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಕ್ಕೆ ಚ್ಯುತಿ ಇಲ್ಲ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನಾಡಗೀತೆಯನ್ನು ಸಂಕ್ಷಿಪ್ತಗೊಳಿಸುವ ಶಿಫಾರಸಿನಲ್ಲಿ ಕವಿಯ ಆಶಯಕ್ಕೆ ಎಲ್ಲಿಯೂ ಧಕ್ಕೆ ಬಾರದಂತೆ ಎಚ್ಚರ ವಹಿಸಲಾಗಿದೆ. ನಾಡಗೀತೆಯ ಅರ್ಥದಲ್ಲಿ, ಭಾವ­ದಲ್ಲಿ ಚ್ಯುತಿ ಉಂಟಾಗದೆ ಕೆಲವು ಸಣ್ಣಪುಟ್ಟ ಬದಲಾ­ವಣೆ­ಗಳನ್ನು ಮಾಡಲಾಗಿದೆಯಷ್ಟೇ.
ನಾಡಗೀತೆ ಸುದೀರ್ಘವಾಗಿರುವುದರಿಂದ ಬಹಳಷ್ಟು ಜನರಿಗೆ ಅಷ್ಟು ಸಮಯ ನಿಂತುಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೆ ಬೇರೆ ಬೇರೆ ಧಾಟಿಯಲ್ಲಿ ಅದನ್ನು ಹಾಡುತ್ತಿದ್ದಾರೆ.

ಅದಕ್ಕೊಂದು ನಿರ್ದಿಷ್ಟ ಧಾಟಿ ರೂಪಿಸಬೇಕು. ಈ ಕಾರಣಗಳಿಂದಲೇ ನಾಡಗೀತೆಯನ್ನು ಮೊಟಕುಗೊಳಿಸುವ, ಕೆಲ ಬದಲಾವಣೆಗಳನ್ನು ಮಾಡುವ ಅಭಿಪ್ರಾಯ ವ್ಯಕ್ತವಾಗಿದ್ದು. ಈ ಕುರಿತು ಸಂಸ್ಕೃತಿ ಇಲಾಖೆಗೆ ದೂರುಗಳು ಬಂದ ಕಾರಣದಿಂದಲೇ ಅದು ಸಮಿತಿ ರಚಿಸಿದ್ದು. ಪುನರಾವರ್ತನೆಯಾಗುವ ಕೆಲವು ಪದಗಳು ಗೀತೆಯಲ್ಲಿವೆ. ಆ ಪದಗಳನ್ನು ತೆಗೆಯಲಾಗಿದೆ. ನಾಡನ್ನು ಆಳಿದ ತೈಲಪ, ಹೊಯ್ಸಳರ ಹೆಸರಿವೆ, ಆದರೆ ಕನ್ನಡಿಗರ ಮೊದಲ ಸಾಮ್ರಾಜ್ಯವಾದ ಕದಂಬರು, ಗಂಗರು, ವಿಜಯನಗರದ ಉಲ್ಲೇಖಗಳೇ ಇಲ್ಲ. ಹೀಗಾಗಿ ನಮ್ಮ ಇತಿಹಾಸ ಅಪೂರ್ಣ ಎನಿಸುವ ಇಂತಹ ಸಾಲುಗಳನ್ನು ಕೈಬಿಡಲು ಶಿಫಾರಸು ಮಾಡಿದ್ದೇವೆ.

ಕುವೆಂಪು ಇದನ್ನು ನಾಡಗೀತೆಗೆಂದು ಬರೆದಿದ್ದಲ್ಲ. ‘ಕೊಳಲು’ ಕವನ ಸಂಕಲನದ ಗೀತೆ ಇದು. ಇದನ್ನು ರಚಿಸುವಾಗ ಮೈಸೂರು ಸಂಸ್ಥಾನದಲ್ಲಿ ಇದ್ದದ್ದು 9 ಜಿಲ್ಲೆಗಳು. ಈಗ ಅವುಗಳ ಸಂಖ್ಯೆ 30 ಆಗಿದೆ. ಹೀಗಾಗಿ ಈಗಿನ ಕರ್ನಾಟಕಕ್ಕೆ ಅದು ಹೊಂದಿ­ಕೊಳ್ಳಬೇಕು. ನಿರ್ದಿಷ್ಟ ಧಾಟಿ ನೀಡಿ ವಾದ್ಯ ರಹಿತವಾಗಿ ಒಂದೂವರೆ ನಿಮಿಷ ಮತ್ತು ವಾದ್ಯ ಸಹಿತ ಎರಡು ನಿಮಿಷದಲ್ಲಿ ಮುಗಿಯುವ ಹಾಗೆ ತಯಾರಿಸಿ ಅದನ್ನು ಸಿ.ಡಿ. ರೂಪದಲ್ಲಿ ವರದಿಯೊಂದಿಗೆ ನೀಡಿದ್ದೇವೆ. ಮೈಸೂರು ಅನಂತಸ್ವಾಮಿ ಮತ್ತು ಅಶ್ವಥ್‌ ಅವರು ಸಂಯೋಜಿಸಿರುವ ರಾಗಗಳು ಪ್ರಚಲಿತದಲ್ಲಿವೆ. ಅವು ಈಗ ಕಲಸು ಮೇಲೋ­ಗರ­ದಂತೆ ಆಗಿರುವುದೂ ಸತ್ಯ.

ಈಗ ಹೆಚ್ಚಾಗಿ ಬಳಕೆಯಲ್ಲಿರುವಂತೆ ಆಲಾಪ, ಸಂಗೀತ ವಾದ್ಯಗಳಿದ್ದರೂ ಹಾಡಿನ ಸತ್ವ ಕಳೆದುಹೋಗುತ್ತದೆ. ಸಾಹಿತ್ಯಕ್ಕಿಂತ ಸಂಗೀತವೇ ಪ್ರಧಾನವಾಗುತ್ತದೆ. ಕೆಲವರು ಇಡೀ ಹಾಡನ್ನು ಎರಡು ನಿಮಿಷದಲ್ಲಿ ಹಾಡಿದ್ದೂ ಇದೆ. ಆದರೆ ಅದು ಅವಸರದಲ್ಲಿ ಹಾಡಿದಂತೆ ಆಗುತ್ತದೆ. ನಾಡಗೀತೆ ಮಾತ್ರವಲ್ಲ, ಜನಗಣಮನ, ವಂದೇ ಮಾತರಂ ಗೀತೆಗಳೂ ದೀರ್ಘ­ವಾಗಿವೆ. ಅವನ್ನು ನಮಗೆ ಎಷ್ಟು ಬೇಕೋ ಅಷ್ಟನ್ನು ಆಯ್ದುಕೊಂಡು ಹಾಡುತ್ತಿದ್ದೇ­ವಲ್ಲ? ಅದರರ್ಥ ರವೀಂದ್ರನಾಥ ಟ್ಯಾಗೋರ್‌ ಅವರಿಗಾಗಲೀ, ಬಂಕಿಮಚಂದ್ರ­ರಿಗಾಗಲೀ ಅವಮಾನ ಮಾಡಬೇಕೆಂದಲ್ಲ. ಅವನ್ನು ನಮ್ಮ ಅನುಕೂಲಕ್ಕೆ ಒಗ್ಗಿಸುವು­ದಷ್ಟೇ.

ನಾಡಗೀತೆಯಲ್ಲಿಯೂ ಕುವೆಂಪು ಅವರ ಮೂಲ ಆಶಯಕ್ಕೆ ಎಲ್ಲಿಯೂ ಚ್ಯುತಿ ಬಾರದಂತೆ ನೋಡಿಕೊಂಡಿದ್ದೇವೆ. ನಾಡಗೀತೆಯನ್ನು ಸಂಕ್ಷಿಪ್ತಗೊಳಿಸುತ್ತೇವೆ ಎಂದಾಗ ಸಂತಸಪಟ್ಟವರೂ ಅನೇಕರಿದ್ದಾರೆ. ಸಮಿತಿ ಸೂಕ್ಷ್ಮವಾಗಿ ಚರ್ಚಿಸಿ, ರಾಷ್ಟ್ರ­ಗೀತೆ, ವಂದೇ ಮಾತರಂ, ತಮಿಳು, ಮಹಾರಾಷ್ಟ್ರಗಳ ನಾಡಗೀತೆಗಳನ್ನು ಸಹ ಪರಿ­ಶೀಲಿಸಿದೆ. ಆಸ್ಥೆಯಿಂದ ಅದನ್ನು ಸಿದ್ಧಪಡಿಸಿದ್ದೇವೆ. ಇದು ಒಣ ನಿರ್ಣಯವಲ್ಲ. ಅಂತಿಮ ತೀರ್ಮಾನ ಎಂದೂ ಭಾವಿಸಬೇಕಿಲ್ಲ. ಸರ್ಕಾರ ಅದರ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಯಾರೂ ಮೂರ್ಖರಿಲ್ಲ
ನಾಡಗೀತೆಯಿಂದ ‘ಸರ್ವಜನಾಂಗದ ಶಾಂತಿಯ ತೋಟ’ ಸಾಲನ್ನು ತೆಗೆಯ­ಲಾಗಿದೆ ಎಂಬ ಸುದ್ದಿ ಹಬ್ಬಿದೆ. ಅದನ್ನು ಹಬ್ಬಿಸಿದವರು ಯಾರೋ ತಿಳಿದಿಲ್ಲ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಶತಮಾನ ಕಂಡ ದೊಡ್ಡ ಸಂಸ್ಥೆಯ ಅಧ್ಯಕ್ಷರು ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳದೇ ಹೇಳಿಕೆ ನೀಡಿದ್ದು ಓದಿ ನಗು ಬಂದಿತು. ನಾವು ಸಂಸ್ಕೃತಿ ಇಲಾಖೆಗೆ ನೀಡಿದ ವರದಿಯ ಪ್ರತಿಯನ್ನು, ಸಿ.ಡಿ.ಯನ್ನು ತರಿಸಿಕೊಂಡು ವಿಶ್ಲೇಷಿಸುವುದು ಪರಿಷತ್‌ ಅಧ್ಯಕ್ಷರ ಹಕ್ಕು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿ­ತವರು ಅದನ್ನು ಮಾಡದೆಯೇ ‘ಸರ್ವಜನಾಂಗದ ಶಾಂತಿಯ ತೋಟ’ ಸಾಲನ್ನು ತೆಗೆದಿದ್ದಾರೆ ಎಂದು ಹೇಳಿಕೆ ನೀಡಿದರೆ ಅದನ್ನು ನಂಬಲು ಆಗುವುದಿಲ್ಲ.

ಆ ಸಾಲು­ಗಳನ್ನು ತೆಗೆಯುವಂಥ ಮೂರ್ಖರಾರೂ ನಮ್ಮ ಸಮಿತಿಯಲ್ಲಿ ಇಲ್ಲ. ಅದು ಬಹಳ ಸಾರವತ್ತಾದ ಸಾಲು.
ನಾಡಗೀತೆಯ ಇಡೀ ಆಶಯಕ್ಕೆ ಕೊಂಚವೂ ಧಕ್ಕೆಯಾಗದಂತೆ, ಅದರ ಭಾವ ಮತ್ತು ಅರ್ಥಕ್ಕೆ ಹಾನಿಯಾಗದಂತೆ ಬದಲಾವಣೆಗಳಿಗೆ ಸೂಚಿಸಿದ್ದೇವೆ. ಅದರ ಸ್ವರೂಪವನ್ನೂ ಹಾಡಿನ ಮಾದರಿಯಲ್ಲಿ ನೀಡಿದ್ದೇವೆ.

(ನಾಡಗೀತೆ ಪರಿಷ್ಕರಣ ಸಮಿತಿಯ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT