ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಹೋಲುವ ದೈತ್ಯ ಗ್ರಹದ ಪತ್ತೆ

Last Updated 3 ಜೂನ್ 2014, 20:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಭೂಮಿಯನ್ನೇ ಹೋಲುವಂತಹ, ಭೂಮಿಗಿಂತಲೂ ಹಿರಿದಾದ ದೈತ್ಯ ಗ್ರಹವೊಂದನ್ನು ಖಗೋಳ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಶಿಲಾ ಪದರ ಮತ್ತು ಇನ್ನಿತರ ಘನ ದ್ರವ್ಯಗಳಿಂದ ಕೂಡಿರುವ ಈ ಗ್ರಹವು ಭೂಮಿಗಿಂತ 17 ಪಟ್ಟು ಹೆಚ್ಚು ತೂಕವಿದ್ದು, ಗಾತ್ರದಲ್ಲಿ ಇಮ್ಮಡಿ­ಯಷ್ಟಿದೆ.  ಆಶ್ಚರ್ಯ­ಕರ ರೀತಿಯಲ್ಲಿ ಪತ್ತೆಯಾಗಿರುವ ಈ ಗ್ರಹವು ಬ್ರಹ್ಮಾಂಡದ ಸೃಷ್ಟಿ ಕುರಿತ ವಿಜ್ಞಾನಿಗಳ  ಗ್ರಹಿಕೆಯನ್ನೇ ಬದಲಾಯಿಸುವ ಸಾಧ್ಯತೆ ಇದೆ.

ಹೊಸದಾಗಿ ಪತ್ತೆಯಾಗಿರುವ  ಈ ಕಾಯಕ್ಕೆ ‘ಕೆಪ್ಲರ್‌ 10ಸಿ’ ಎಂದು ಹೆಸರಿಸಲಾಗಿದೆ. ಈ ಗ್ರಹವನ್ನು ಮೊದಲು ಪತ್ತೆ ಮಾಡಿದ್ದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ಕೆಪ್ಲರ್‌’ ದೂರದರ್ಶಕ (ಟೆಲಿಸ್ಕೋಪ್‌) ಗಗನನೌಕೆ. ಆದ್ದರಿಂದ ಈ ಹೆಸರನ್ನು ಇರಿಸಲಾಗಿದೆ. ಈ ಗ್ರಹಕ್ಕೆ ‘ಗಾಡ್ಜಿಲ್ಲಾ ಆಫ್‌ ಅರ್ಥ್‌’, ‘ಮೆಗಾ ಅರ್ಥ್‌’ ಎಂಬ ಉಪಾಧಿಗಳು ಅಂಟಿಕೊಂಡಿವೆ.

ಜಲಜನಕ ಅನಿಲದ ಅತಿಯಾದ ಹೀರಿಕೆಯಿಂದಾಗಿ ಈ ಗ್ರಹ ದೈತ್ಯಾಕಾರವಾಗಿದೆ. ಗುರು ಮತ್ತು ನೆಪ್ಚೂನ್‌ ಗ್ರಹಗಳು ಸಹ ಈ ಅನಿಲದ ಕಾರಣದಿಂದಾಗಿಯೇ ಬೃಹತ್‌ ಗಾತ್ರ ಹೊಂದಿವೆ.

‘ಕೆಪ್ಲರ್‌ 10ಸಿ’ 18 ಸಾವಿರ ಮೈಲು ದೂರದ ವ್ಯಾಸವನ್ನು ಹೊಂದಿದ್ದು, ಭೂಮಿಗಿಂತ 2.3 ಪಟ್ಟು ಹೆಚ್ಚು ಹಿರಿದಾಗಿದೆ. ಇಂತಹ ಲಕ್ಷಣಗಳಿರುವ ಕಾಯಗಳನ್ನು ‘ಕಿರು ನೆಪ್ಚೂನ್‌’ಗಳೆಂದೂ ಕರೆಯುತ್ತಾರೆ.

ಭೂಮಿಯಿಂದ ಸುಮಾರು 560 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಈ ಗ್ರಹವು, ತಾರಾಪುಂಜದಲ್ಲಿ ಇರುವ ಸೂರ್ಯನನ್ನು ಹೋಲುವ ನಕ್ಷತ್ರವನ್ನು  ಒಂದು ಸುತ್ತು ಹಾಕಲು 45 ದಿನಗಳನ್ನು ತೆಗೆದುಕೊಳ್ಳುತ್ತದೆ.

‘ಇಂತಹದೊಂದು ದೈತ್ಯ ಗ್ರಹ ಪತ್ತೆಯಾಗಿರುವುದು ಆಶ್ಚರ್ಯಕರ’ ಎಂದು ಹಾರ್ವರ್ಡ್‌ ಸ್ಮಿತ್‌ಸೋನಿಯನ್‌ ಖಭೌತವಿಜ್ಞಾನ ಕೇಂದ್ರ (ಸಿಎಫ್‌ಎ)  ವಿಜ್ಞಾನಿ ಕ್ಸೇವಿಯರ್‌ ಡಮಾಸ್ಕ್‌ ಹೇಳಿದ್ದಾರೆ.

‘ಈ ಗ್ರಹದಲ್ಲಿ ಜೀವಿಗಳು ಇರುವ ಸಾಧ್ಯತೆಯ ಸಕಾರಾತ್ಮಕ ಅಂಶಗಳು ಕಂಡು ಬಂದಿವೆ. ಈ ಕಾಯದಲ್ಲಿ ಅಧಿಕ ಪ್ರಮಾಣದಲ್ಲಿ ಶಿಲಾದ್ರವಗಳು ಇದ್ದಿರುವ ಸಂಭವವೂ ಇದೆ’ ಎಂದು ಈ ಗ್ರಹವನ್ನು ಪತ್ತೆ ಮಾಡಿದ ಸಿಎಫ್‌ಎ ತಂಡ ಸಂಶೋಧಕ ಡಿಮಿಟರ್‌ ಸಸ್ಸೆಲ್ವೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT