ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ ಕಾಯ್ದೆ: ತಿದ್ದುಪಡಿ ಆಜೂಬಾಜು

ಅಭಿಪ್ರಾಯಗಳು
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ
ADVERTISEMENT

ಕಾಯ್ದೆ ಇಲ್ಲದೆಯೂ ಪ್ರಗತಿ ಸಾಧ್ಯ
ಮೊದಲನೆಯದಾಗಿ, ಸುಗ್ರೀವಾಜ್ಞೆಯ ಮೂಲಕ ಕಾನೂನನ್ನು ಜಾರಿಗೆ ತರುವುದು ತಪ್ಪು. ಅದು ಭೂಸ್ವಾಧೀನ ತಿದ್ದುಪಡಿ ಕಾಯ್ದೆ ಇರಲಿ ಅಥವಾ ಇನ್ಯಾವುದೇ ಆಗಿರಲಿ, ಸಂಸತ್ತಿನೊಳಗೆ ಚರ್ಚಿಸದೇ  ಈ ರೀತಿ ಕಾನೂನು ಜಾರಿಗೆ ತರುವುದು ಪ್ರಜಾಪ್ರಭುತ್ವ ವಿರೋಧಿ ನೀತಿ. ಇದು ಸಂಸತ್ತನ್ನೇ ಮೀರಿ ನಡೆಯುವ ಕ್ರಮ.

‘ಸುಗ್ರೀವಾಜ್ಞೆ ಮೂಲಕ ಕಾನೂನು ಮಾಡುವುದು ಜನರು ತೋರಿರುವ ವಿಶ್ವಾಸಕ್ಕೆ  ದ್ರೋಹ ಬಗೆದಂತೆ’ ಎಂದು ರಾಷ್ಟ್ರಪತಿಯವರೇ ಹೇಳಿರುವುದನ್ನು ಗಮನಿಸಬೇಕು. ಒಂದು ವೇಳೆ ಕಾಯ್ದೆಯನ್ನು ಜಾರಿಗೆ ತರಲು ಅಷ್ಟೊಂದು ತುರ್ತು ಅಗತ್ಯ ಇದ್ದರೆ, ಅಂತಹ ಅಗತ್ಯವೇನು, ಉದ್ದೇಶವೇನು ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾದ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನೂ ಸಾರ್ವಜನಿಕ ಹಿತಾಸಕ್ತಿ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಭೂಸ್ವಾಧೀನ ಕಾಯ್ದೆಯ ಮೂಲಕ ಕೈಗಾರಿಕೆ ಮತ್ತು ಆರ್ಥಿಕ ಅಭಿವೃದ್ಧಿ ಎಂದು   ಸರ್ಕಾರ ಏನೆಲ್ಲಾ ಹೇಳುತ್ತಿದೆಯೋ ಅವೆಲ್ಲವನ್ನೂ ಇಂಥದೊಂದು ಕಾಯ್ದೆ ಇಲ್ಲದೆಯೇ ಮಾಡಬಹುದು. ಕೈಗಾರಿಕಾ ಉದ್ದೇಶಕ್ಕಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ‘ಭೂ ಬ್ಯಾಂಕ್‌’  ಆಗಿ ಮಾಡಿಡುವುದು ಸರಿಯಲ್ಲ. ಭೂಮಿ ಒಡೆತನ ರೈತರ ಬಳಿಯೇ ಇರಲಿ. ಕೈಗಾರಿಕೆ ಸ್ಥಾಪಿಸಬೇಕಿದ್ದರೆ ಅಥವಾ ಉದ್ಯಮ ಉದ್ದೇಶಕ್ಕಾಗಿ ಭೂಮಿ ಬೇಕಿದ್ದರೆ ಕಂಪೆನಿಗಳೇ ನೇರವಾಗಿ ಭೂ ಮಾಲೀಕರಿಂದ  ಖರೀದಿಸಲಿ ಅಥವಾ ರೈತರನ್ನೇ ಪಾಲುದಾರರನ್ನಾಗಿ  ಮಾಡಿ­ಕೊಂಡು ಉದ್ಯಮ ಆರಂಭಿಸಲಿ. ಭೂಸ್ವಾಧೀನ ಕಾಯ್ದೆ ಬಳಸಿಕೊಂಡು ರೈತರು ಮತ್ತು ಉದ್ಯಮಿಗಳ ನಡುವಿನ ‘ಮಧ್ಯವರ್ತಿ’ ಕೆಲಸವನ್ನು ಸರ್ಕಾರ ಮಾಡುವುದು ಬೇಡ.

ಪುಣೆಯ ಮಗರಪಟ್ಟ ಎಂಬಲ್ಲಿ ರೈತರೇ ಸ್ವಸಹಾಯ ಸಂಘ ರಚಿಸಿಕೊಂಡು 400 ಎಕರೆಯಷ್ಟು  ವಿಶಾಲವಾದ ಬೃಹತ್‌  ಉಪನಗರವನ್ನು ಅಭಿವೃದ್ಧಿಪಡಿಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯನ್ನು ಹೋಲುವಂತಿರುವ ಈ ಉಪನಗರದಲ್ಲಿ  ಸಾಕಷ್ಟು ಉದ್ಯಮ ಸಂಸ್ಥೆಗಳಿವೆ. ಅವುಗಳಿಗೆ ಬೇಕಿರುವ ಜಾಗವನ್ನು ರೈತರು ಬಾಡಿಗೆ ನೀಡಿದ್ದಾರೆ. ಭೂಮಿಯ ಹಕ್ಕು ರೈತರ ಹೆಸರಿನಲ್ಲೇ ಇದೆ. ಇದರಿಂದ ಉದ್ಯಮಿಗಳಿಗೂ ಲಾಭ, ಭೂ ಮಾಲೀಕರಿಗೂ ಲಾಭವಿದೆ. ಭೂಸ್ವಾಧೀನ ಕಾಯ್ದೆ ಇಲ್ಲದೆಯೇ ಕೈಗಾರಿಕಾ ಪ್ರಗತಿ ಸಾಧ್ಯ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.
-ಅಶ್ವಿನ್‌ ಮಹೇಶ್‌, ನಗರ ಯೋಜನೆ ತಜ್ಞರು

ತಿದ್ದುಪಡಿಯಲ್ಲಿ ದೋಷವಿಲ್ಲ
ಹಿಂದಿನ ಕಾಯ್ದೆಯ ಪ್ರಕಾರವೇ ಹೋದರೆ ಖಂಡಿತವಾಗಿಯೂ ಕೈಗಾರಿಕಾ ಹಿನ್ನಡೆ ಆಗುತ್ತಿತ್ತು. ಏಕೆಂದರೆ ಆ ಸ್ಥಿತಿಯಲ್ಲಿ ಹೊಸದಾಗಿ ಕೈಗಾರಿಕೆಗಳನ್ನು ಆರಂಭಿಸುವುದು ಬಹಳ ಕಷ್ಟ. ಭೂಮಿಯ ಬೆಲೆಯೂ ಕೈಗೆಟುಕಲಾರದಷ್ಟು ಏರಿದೆ. ಕಾಯ್ದೆ ತಿದ್ದುಪಡಿಯಿಂದ ಭೂಮಿಯ ಬೆಲೆ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರುತ್ತದೆ. ಸರ್ಕಾರ ತಿದ್ದುಪಡಿ ತರದಿದ್ದರೆ ಉದ್ದಿಮೆ ಆರಂಭಿಸುವ ಹೊಸಬರ ಕನಸು ಕನಸಾಗಿಯೇ ಉಳಿಯುತ್ತಿತ್ತು ಅಷ್ಟೆ.

ಉದ್ಯಮಿಗಳು ನಮಗೆ ಕೃಷಿ ಭೂಮಿ ಅಥವಾ ನೀರಾವರಿ ಭೂಮಿಯನ್ನೇ ಕೊಡಿ ಎಂದು ಕೇಳುವುದಿಲ್ಲ. ಕೃಷಿಗೆ ಉಪಯೋಗವಾಗದ ಭೂಮಿಯನ್ನು ಬಳಸುವುದ­ರಲ್ಲಿ ತಪ್ಪೇನೂ ಇಲ್ಲ. ಎಲ್ಲ ಕಡೆಯೂ ಕೆಲಸಕ್ಕೆ ಬಾರದ ಭೂಮಿಯಲ್ಲೇ ಕೈಗಾರಿಕಾ ಪ್ರದೇಶಗಳು ಇರುವುದೇ ಇದಕ್ಕೆ ನಿದರ್ಶನ. ಎಲ್ಲೋ ಕೆಲವು ಕಡೆ ಕೆಲವರ ಸ್ವಾರ್ಥದಿಂದಾಗಿ ತಪ್ಪುಗಳು ಆಗಿರಬಹುದು. ಆದರೆ ಸೈದ್ಧಾಂತಿಕವಾಗಿ ಎಲ್ಲೂ ತಪ್ಪುಗಳಾಗಿಲ್ಲ. ಹೀಗಾಗಿ ಕಾಯ್ದೆ ತಿದ್ದುಪಡಿಯಲ್ಲಿ ಯಾವ ದೋಷವೂ ಇಲ್ಲ.
-ಪ್ರಕಾಶ್‌ ಎನ್‌ ರಾಯ್ಕರ್‌, ‘ಕಾಸಿಯಾ’ ಮಾಜಿ ಅಧ್ಯಕ್ಷರು

ರೈತನ ಅಸ್ತಿತ್ವ ನಿರ್ನಾಮ
ಕೇಂದ್ರ ಸರ್ಕಾರ ರೈತನಿಂದ ಎಲ್ಲವನ್ನೂ ಕಿತ್ತು­ಕೊಂಡು ಬಂಡವಾಳಶಾಹಿಗಳಿಗೆ ಮಾರುವ ಮೂಲಕ ಅವನ ಅಸ್ತಿತ್ವವೇ ಇಲ್ಲದಂತೆ ಮಾಡಲು ಹೊರಟಿದೆ.       ಸುಗ್ರೀವಾಜ್ಞೆಯ ಮೂಲಕ ಕಾನೂನು ಜಾರಿಗೊಳಿಸಿ  ಕಾರ್ಪೊರೇಟ್‌ ಉದ್ಯಮಿಗಳಿಗೆ ರತ್ನಗಂಬಳಿ ಹಾಸಲು ಮುಂದಾಗಿದೆ. ಇದನ್ನು ವಿರೋಧಿಸಿ ಮಾರ್ಚ್‌ 18ಕ್ಕೆ ‘ದೆಹಲಿ ಮುತ್ತಿಗೆ’ ಚಳವಳಿ ಹಮ್ಮಿಕೊಂಡಿದ್ದೇವೆ.
-ಚುಕ್ಕಿ ನಂಜುಂಡಸ್ವಾಮಿ, ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ

ತಪ್ಪು ತಿಳಿವಳಿಕೆ
ರೈತರೇ ಒಪ್ಪಿ ಖುದ್ದಾಗಿ ಭೂಮಿಯನ್ನು ಕೊಟ್ಟಾಗ ಅದನ್ನು ತೆಗೆದುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಅಲ್ಲದೆ ಕೃಷಿ ವಲಯದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವುದಿಲ್ಲ. ನಿರ್ದಿಷ್ಟವಾದ ವಲಯದಲ್ಲೇ ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಹೀಗಾಗಿ ಕೃಷಿ ವಲಯಕ್ಕೆ ತೊಂದರೆಯಾಗುತ್ತದೆ ಎಂಬುದು ತಪ್ಪು ತಿಳಿವಳಿಕೆ.
-ಬಿ.ಪಿ.ಶಶಿಧರ್‌, ಉದ್ಯಮಿ

ಕಂಪೆನಿಗಳ ಹಿತಾಸಕ್ತಿ
ಬಜೆಟ್‌ ಅಧಿವೇಶನಕ್ಕೆ ಒಂದೂವರೆ ತಿಂಗಳು ಬಾಕಿ ಇರುವಾಗ, ಸಂಸತ್ತಿನಲ್ಲಿ ಚರ್ಚಿಸದೇ ಸರ್ಕಾರ ತರಾ­­ತುರಿಯಲ್ಲಿ ಕಾಯ್ದೆ ಜಾರಿಗೆ ತಂದಿರುವ ಉದ್ದೇಶ­ದ ಬಗ್ಗೆ ಅನುಮಾನ ಮೂಡುತ್ತಿದೆ. ಇದರಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿ ಅಡಗಿದೆ.  
-ಕೆ.ಟಿ.ಗಂಗಾಧರ್‌, ರೈತ ಮುಖಂಡ
 

ಸಮತೋಲನ ಇಲ್ಲ
ದೇಶದ  ಜಿಡಿಪಿ ಪ್ರಗತಿ ಆಗಬೇಕು, ಉದ್ಯೋಗಾ­ವಕಾಶ ಸೃಷ್ಟಿಯಾಗಬೇಕು ಎನ್ನುವುದೆಲ್ಲ ಸರಿ. ಆದರೆ, ಉದ್ಯಮಕ್ಕೆ ಉತ್ತೇಜನ ನೀಡುವ ಭರದಲ್ಲಿ ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡು­ತ್ತಿರುವ ಕೃಷಿಯನ್ನು ಮತ್ತು ಅದನ್ನು  ಅವಲಂಬಿ­ಸಿರುವ ರೈತರನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆರ್ಥಿಕ ಅಭಿವೃದ್ಧಿ ಯಾವಾಗಲೂ ಸಮತೋಲನದಿಂದ ಕೂಡಿರಬೇಕು.
-ವಿ.ಬಾಲಕೃಷ್ಣನ್‌, ಇನ್ಫೊಸಿಸ್‌ನ ಮಾಜಿ ಸಿಎಫ್‌ಒ

ಸಹಮತ ಇರಲಿ
ಕೃಷಿ ಉತ್ಪನ್ನಗಳೂ ಬೇಕು, ಕೈಗಾರಿಕೆಗಳೂ ಬರಬೇಕು. ಅಗತ್ಯ ಪ್ರಮಾಣದಲ್ಲಿ ಭೂಮಿ ಲಭ್ಯವಾ­ದರೆ ಮಾತ್ರ ಕೈಗಾರಿಕಾ ವಲಯ ಅಭಿವೃದ್ಧಿ– ವಿಸ್ತರಣೆ ಸಾಧ್ಯ. ಹಾಗೆಂದು ರೈತರ ಭೂಮಿ ವಶಪಡಿಸಿಕೊಂಡು ತಮಗೆ ಬೇಕಿದ್ದವರಿಗೆ ಹಂಚಿಕೆ ಮಾಡಲು ಅನುಕೂಲವಾಗುವಂತೆ ಸುಗ್ರೀವಾಜ್ಞೆ ಹೊರಡಿಸು­ವುದು ಸರಿ­ಯಲ್ಲ. ನಮ್ಮಲ್ಲಿ ಬೇಕಾದಷ್ಟು ಒಣಭೂಮಿ ಇದೆ. ಅಂಥದ್ದನ್ನು ಗುರುತಿಸಿ ರೈತರ ಸಹಮತದೊಂದಿಗೆ ವಶಪಡಿಸಿಕೊಳ್ಳುವುದು ಒಳ್ಳೆಯದು.
-ವಸಂತ ಲದ್ವಾ, ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT