ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೈರಪ್ಪಗೆ ರಾಷ್ಟ್ರೀಯ ಪ್ರೊಫೆಸರ್‌ ಗೌರವ

Last Updated 10 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ:  ಹಿರಿಯ ಸಾಹಿತಿ ಎಸ್‌. ಎಲ್‌. ಭೈರಪ್ಪ ಅವರನ್ನು ‘ರಾಷ್ಟ್ರೀಯ ಸಂಶೋ­ಧನಾ ಪ್ರೊಫೆಸರ್‌’ ಎಂದು ನೇಮಕ ಮಾಡ­ಲಾಗುವು­ದೆಂದು  ಮಾನವ ಸಂಪ­ನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಅಳಿ­ವಿನ ಅಂಚಿನಲ್ಲಿರುವ  ಉಪಭಾಷೆಗಳ ರಕ್ಷಣೆ  ಹಾಗೂ ಸಾಹಿತ್ಯದಲ್ಲಿ ಅನು­ವಾದ ಕಾರ್ಯದ ಕುರಿತು ಹೇಳಿಕೆ ನೀಡಿದ ಸಚಿವೆ ಇರಾನಿ, ಭೈರಪ್ಪ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನದಲ್ಲಿ­ಟ್ಟುಕೊಂಡು ಗೌರವ ಸಲ್ಲಿಸಲಾಗುತ್ತಿದೆ ಎಂದರು. ಮುಂಬೈ ಉತ್ತರ ಕ್ಷೇತ್ರದ ಸಂಸದೆ ಪೂನಂ ಮಹಾಜನ್‌ ಅವರು ಎತ್ತಿದ ಪ್ರಶ್ನೆಗೆ ಇರಾನಿ ಉತ್ತರಿಸುತ್ತಿದ್ದರು.

ಸಾಹಿತ್ಯದಲ್ಲಿನ ಅನುವಾದದ ಉತ್ತೇ­ಜನಕ್ಕೆ ಸರ್ಕಾರ ಯಾವ ಕ್ರಮ ಕೈಗೊಂ­ಡಿದೆ ಎಂದು ಕೇಳಿದ ಪೂನಂ ಮಹಾ­ಜನ್‌, ಭೈರಪ್ಪ ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿ ಮೆಚ್ಚುಗೆ ಗಳಿಸಿದ್ದನ್ನು ಉಲ್ಲೇಖಿಸಿದರು.

ಮೇಧಾವಿಗಳು, ವಿದ್ವಾಂಸರನ್ನು ಗುರು­ತಿಸಲು ಕೇಂದ್ರ ಸರ್ಕಾರ 1949­ರಲ್ಲಿಯೇ ‘ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್‌’ ಎಂಬ ಗೌರವ ಪದವಿ ನೀಡಿ ಮನ್ನಣೆ ನೀಡುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ, 65 ವರ್ಷ ತುಂಬಿ­ರುವ ಹಾಗೂ ಇನ್ನೂ ಸಂಶೋ­ಧನೆ ಮಾಡಬಲ್ಲ ಸಾಮರ್ಥ್ಯ ಹೊಂದಿ­ರುವ ವ್ಯಕ್ತಿಗಳಿಗೆ ಈ ಗೌರವ ನೀಡಲಾಗುತ್ತದೆ.

ಈ ಗೌರವ ಪಡೆಯುವ ವ್ಯಕ್ತಿಗಳಿಗೆ ತಿಂಗಳಿಗೆ ₨ 75,000 ಗೌರವಧನ ನೀಡಲಾಗುತ್ತದೆ.  ಈ ಮನ್ನಣೆಗೆ ಪಾತ್ರ­ರಾದ ವ್ಯಕ್ತಿಗಳು ಸಂಶೋಧನೆಗಾಗಿ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಅನು­ದಾನವನ್ನೂ ಪಡೆಯಬಹುದಾಗಿದೆ.

ಐದು ವರ್ಷಗಳ ಅವಧಿಗೆ ಈ ನೇಮಕ ಮಾಡಲಾಗುತ್ತಿದ್ದು, ಸರ್ಕಾರ ಬಯಸಿದಲ್ಲಿ ಮತ್ತೂ ಐದು ವರ್ಷ­ಗಳಿಗೆ ಅದನ್ನು ವಿಸ್ತರಿಸಬಹುದಾಗಿದೆ.

‘ಅಧಿಕೃತ ಮಾಹಿತಿ ಬಂದ ಬಳಿಕ ಪ್ರತಿಕ್ರಿಯೆ’
ಮೈಸೂರು: ‘ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರೊಫೆಸರ್‌ ಎಂದು ಘೋಷಿ­ಸಿರುವ ಕುರಿತು ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಬಂದ ಮೇಲೆ ಪ್ರತಿಕ್ರಿಯಿಸುವೆ’ ಎಂದು ಹಿರಿಯ ಕಾದಂಬರಿಕಾರಿ ಎಸ್‌.ಎಲ್‌. ಭೈರಪ್ಪ ಬುಧವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT